Karnataka Bus Strike: ಪ್ರಧಾನಿ ಮೋದಿ ಜತೆ ಸಿಎಂ ಯಡಿಯೂರಪ್ಪ ಕೊರೊನಾ ಸಭೆ; ಸಾರಿಗೆ ಸಿಬ್ಬಂದಿ ಜತೆ ನಡೆಯಲಿಲ್ಲ ಮಾತುಕತೆ
KSRTC BMTC Workers Strike Live: ರಾಜ್ಯ ಸರ್ಕಾರ ಖಾಸಗಿ ಬಸ್ಗಳ ಓಡಾಟಕ್ಕೆ ಅನುಮತಿ ಕೊಟ್ಟು, ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿಕೆ ನೀಡುತ್ತಿದೆ. ಆದರೆ, ವಾಸ್ತವದಲ್ಲಿ ಖಾಸಗಿ ಬಸ್‌ಗಳು ಹಾಗೂ ಆಟೋ ಚಾಲಕರು ಸಮಯದ ಲಾಭ ಪಡೆದುಕೊಂಡು ಜನಸಾಮಾನ್ಯರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಅನೇಕ ದೂರುಗಳು ಕೇಳಿಬಂದಿವೆ.
ಬೆಂಗಳೂರು: ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರದ ನಡುವಿನ ಮನಸ್ತಾಪದ ತಾಪ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರಿ ಬಸ್ಗಳನ್ನೇ ನೆಚ್ಚಿಕೊಂಡು ಪ್ರತಿನಿತ್ಯ ಪ್ರಯಾಣಿಸುತ್ತಿದ್ದ ಲಕ್ಷಾಂತರ ಮಂದಿ ಸಾರಿಗೆ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಬೇಡಿಕೆ ಈಡೇರುವ ತನಕ ಕರ್ತವ್ಯಕ್ಕೆ ಮರಳುವುದಿಲ್ಲವೆಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆನೀಡಿರುವ ಸಾರಿಗೆ ನೌಕರರು ಯಾವುದೇ ಮಾತುಕತೆಗೆ ಜಗ್ಗುತ್ತಿಲ್ಲ. ಇತ್ತ ರಾಜ್ಯ ಸರ್ಕಾರ ಖಾಸಗಿ ಬಸ್ಗಳ ಓಡಾಟಕ್ಕೆ ಅನುಮತಿ ಕೊಟ್ಟು, ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿಕೆ ನೀಡುತ್ತಿದೆ. ಆದರೆ, ವಾಸ್ತವದಲ್ಲಿ ಖಾಸಗಿ ಬಸ್‌ಗಳು ಹಾಗೂ ಆಟೋ ಚಾಲಕರು ಸಮಯದ ಲಾಭ ಪಡೆದುಕೊಂಡು ಜನಸಾಮಾನ್ಯರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಅನೇಕ ದೂರುಗಳು ಕೇಳಿಬಂದಿವೆ. ಒಟ್ಟಿನಲ್ಲಿ ಸರ್ಕಾರ ಹಾಗೂ ಸಾರಿಗೆ ನೌಕರರ ಕಿತ್ತಾಟದಲ್ಲಿ ಜನಸಾಮಾನ್ಯ ಏಟು ತಿನ್ನುವಂತಾಗಿದೆ.
LIVE NEWS & UPDATES
-
398 ಸರ್ಕಾರಿ ಬಸ್ಗಳ ಸಂಚಾರ
6ನೇ ವೇತನ ಆಯೋಗ ಜಾರಿಗಾಗಿ ಸಾರಿಗೆ ನಿಗಮಗಳ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದ ನಡುವೆಯೂ ಇಂದು 398 ಸಾರಿಗೆ ಬಸ್‌ಗಳು ಸಂಚರಿಸಿದವು. ಕೆಎಸ್ಆರ್ಟಿಸಿಯ 167, ಬಿಎಂಟಿಸಿಯ 66, ಈಶಾನ್ಯ ಸಾರಿಗೆ ಸಂಸ್ಥೆಯ 126 ಮತ್ತು ವಾಯವ್ಯ ಸಾರಿಗೆ ಸಂಸ್ಥೆಯ 39 ಬಸ್ಗಳ ಸಂಚರಿಸಿದವು.
-
ವಸತಿ ಗೃಹದಲ್ಲಿದ್ದು ಕರ್ತವ್ಯಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮ; ಸಾರಿಗೆ ಸಿಬ್ಬಂದಿಗೆ ನೋಟಿಸ್
ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಕುರಿತು ಸರ್ಕಾರ ಖಡಕ್ ಧೋರಣೆ ತಳೆದಿದೆ. ವಸತಿ ಗೃಹಗಳಲ್ಲಿರುವ ಬಿಎಂಟಿಸಿ, ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ತಿಳಿವಳಿಕೆ ಪತ್ರ ನೀಡಲಾಗಿದೆ. ವಸತಿ ಗೃಹದಲ್ಲಿದ್ದು ಕರ್ತವ್ಯಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕೆಲಸಕ್ಕೆ ಹಾಜರಾಗದಿದ್ದರೆ ವಸತಿ ಗೃಹ ತೆರವುಗೊಳಿಸಿ ಎಂದು ನೋಟಿಸ್ ನೀಡಲಾಗಿದೆ.
-
ನಿವೃತ್ತ ಚಾಲಕರಿಗೆ ಕರೆ ನೀಡಿದ ಸರ್ಕಾರ
ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರ ಸೆಡ್ಡು ಹೊಡೆದಿದೆ. ನಿವೃತ್ತ ಸಿಬ್ಬಂದಿಗಳನ್ನು ಕರೆಸಿ ಬಸ್ಗಳ ಚಾಲನೆಗೆ ನಿರ್ಧಾರ ಮಾಡಲಾಗಿದೆ. ನಿವೃತ್ತ ಚಾಲಕ, ನಿರ್ವಾಹಕರಿಗೆ 4 ನಿಗಮಗಳಿಂದ ಕರೆ ನೀಡಲಾಗಿದ್ದು, ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ. 62 ವರ್ಷ ಮೀರದ ನಿವೃತ್ತಿ ಸಿಬ್ಬಂದಿಗೆ ಆಹ್ವಾನ ನೀಡಲಾಗಿದ್ದು, ಚಾಲಕರಿಗೆ ₹800, ನಿರ್ವಾಹಕರಿಗೆ ₹700 ಗೌರವಧನ ನಿಗದಿಮಾಡಲಾಗಿದೆ. ಈ ಕುರಿತು KSRTC ಎಂಡಿ ಶಿವಯೋಗಿ ಕಳಸದ್ ಅಧಿಸೂಚನೆ ಹೊರಡಿಸಿದ್ದಾರೆ.
ಸರ್ಕಾರ ಎಷ್ಟು ದಿನ ಖಾಸಗಿ ಬಸ್‌ಗಳನ್ನು ಓಡಿಸುತ್ತೆ? ; ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ
ಮುಷ್ಕರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.ಗಂಭೀರವಾಗಿ ಪರಿಗಣಿಸದಿದ್ದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಕೂಡಲೇ ಸಾರಿಗೆ ನೌಕರರನ್ನು ಕರೆದು ಚರ್ಚೆ ನಡೆಸಬೇಕು. ಸರ್ಕಾರ ಎಷ್ಟು ದಿನ ಖಾಸಗಿ ಬಸ್‌ಗಳನ್ನು ಓಡಿಸುತ್ತೆ? ಸಾರಿಗೆ ನೌಕರರನ್ನ ಸರ್ಕಾರ ಬೀದಿಪಾಲು ಮಾಡಬೇಕಾ? ಎಸ್ಮಾ ಜಾರಿ, ಖಾಸಗಿ ಬಸ್ ಓಡಿಸೋದು ಪರಿಹಾರವಲ್ಲ. ಸರ್ಕಾರದ ಬೆದರಿಕೆಗಳಿಂದ ಯಾವುದೇ ಪರಿಹಾರ ಸಿಗಲ್ಲ. ಸಮಸ್ಯೆ ಬಗೆಹರಿಯಬೇಕು, ಜನರಿಗೆ ಅನುಕೂಲವಾಗಬೇಕು. ಹೀಗಾಗಿ ಸಾರಿಗೆ ನೌಕರರ ಜತೆ ಚರ್ಚಿಸಿ ಪರಿಹಾರ ನೀಡಲಿ ಎಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಮುಷ್ಕರದ ನಡುವೆಯೂ ಅಲ್ಲಲ್ಲಿ ಬಸ್ ಸಂಚಾರ
ಸಾರಿಗೆ ನೌಕರರ ಮುಷ್ಕರದ ಮಧ್ಯೆ ಕೆಲವೆಡೆ ಬಸ್ ಸಂಚಾರ ನಡೆಯುತ್ತಿದೆ ಎಂದು ಸಾರಿಗೆ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಮಧ್ಯಾಹ್ನ 12 ಗಂಟೆಯವರೆಗೆ 46 ಬಿಎಂಟಿಸಿ, 90 ಕೆಎಸ್ಆರ್‌ಟಿಸಿ, 91 ಎನ್ಇಕೆಆರ್‌ಟಿಸಿ, 15 ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ಗಳು ಸಂಚರಿಸಿವೆ ಎಂದು ಪ್ರಕಟಣೆ ತಿಳಿಸಿದೆ.
ಕೇವಲ ₹11 ಸಾವಿರ ಸಂಬಳದಲ್ಲಿ ಜೀವನ ಮಾಡ್ತಿದ್ದೇವೆ: ನೌಕರರ ಅಳಲು
ಮುಷಕರದ ಬಗ್ಗೆ ಮಾತನಾಡಿರುವ ಸಾರಿಗೆ ನೌಕರರೊಬ್ಬರು ನಾವು ಕೇವಲ ₹11 ಸಾವಿರ ಸಂಬಳದಲ್ಲಿ ಜೀವನ ಮಾಡ್ತಿದ್ದೇವೆ. ₹11 ಸಾವಿರ ಸಂಬಳ ನಮಗೆ ಸಾಕಾಗುವುದಿಲ್ಲ. ಅಷ್ಟರಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ನಮ್ಮ ಬೇಡಿಕೆ ಈಡೇರಿಸಬೇಕೆಂದು ಒತ್ತಾಯ ಮಾಡಿದ್ದಾರೆ.
ಅಗತ್ಯಬಿದ್ದರೆ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ: ಅಂಜುಂ ಪರ್ವೇಜ್
ರಾಜ್ಯದಲ್ಲಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆ ಪ್ರಧಾನಕಾರ್ಯದರ್ಶಿ ಅಂಜುಂ ಪರ್ವೇಜ್, ಅಗತ್ಯಬಿದ್ದರೆ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ ಎಂದು ಹೇಳಿದ್ದಾರೆ. 2 ವರ್ಷಗಳ ಹಿಂದೆ ನಿವೃತ್ತಿಯಾಗಿರುವ ನೌಕರರ ಪಟ್ಟಿ ತರಿಸಿಕೊಳ್ಳಲಾಗಿದ್ದು, ಸಾರಿಗೆ ನೌಕರರು ಕೆಲಸಕ್ಕೆ ಬರದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕೊರೊನಾ ನಿಯಮ ಉಲ್ಲಂಘಿಸಿ ಜನರನ್ನು ತುಂಬಿಸುತ್ತಿವೆ ಖಾಸಗಿ ಬಸ್‌ಗಳು
ಸಾರಿಗೆ ನೌಕರರ ಮುಷ್ಕರದ ಪ್ರಯುಕ್ತ ರಾಜ್ಯದಲ್ಲಿ ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿವೆ. ಆದರೆ, ಬಾಗಲಕೋಟೆಯಲ್ಲಿ ಖಾಸಗಿ ಬಸ್ನವರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಬಸ್ಗೆ ಜನರನ್ನು ತುಂಬಿಕೊಳ್ಳುತ್ತಿದ್ದಾರೆ. ಮನಸೋಯಿಚ್ಛೆ ಜನರನ್ನು ತುಂಬಿಸುತ್ತಿರುವ ಖಾಸಗಿ ಬಸ್ ಸಿಬ್ಬಂದಿ, ಬಸ್ ಟಾಪ್ನಲ್ಲೂ ಜನರನ್ನು ಕೂರಿಸಿಕೊಂಡು ಹೋಗುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಬೇಡಿಕೆ ಈಡೇರಿಸದೇ ಇದ್ದರೆ ಮುಂದಾಗುವ ಎಲ್ಲದಕ್ಕೂ ರಾಜ್ಯ ಸರ್ಕಾರವೇ ಕಾರಣ: ಕೋಡಿಹಳ್ಳಿ ಚಂದ್ರಶೇಖರ್
ಸಾರಿಗೆ ನೌಕರರ ಬೇಡಿಕೆ ಈಡೇರಿಸದೇ ಇದ್ದರೆ ಮುಂದಾಗುವ ಎಲ್ಲದಕ್ಕೂ ರಾಜ್ಯ ಸರ್ಕಾರವೇ ಕಾರಣ. ನಾವು ಯಾವುದೇ ನೀತಿಸಂಹಿತೆ ಉಲ್ಲಂಘನೆ ಮಾಡಿಲ್ಲ. ನಮ್ಮ ಮನೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರತಿಭಟಿಸಲು ಹೊರಗಡೆ ಬಂದಿಲ್ಲ. ಇಷ್ಟಾದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲವೆಂದರೆ ಮುಂದಾಗುವ ಎಲ್ಲಾ ಘಟನೆಗೂ ಹೊಣೆ ಹೊರಬೇಕಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ಜಲಮಂಡಳಿ ನೌಕರರಿಗೆ ಬೋನಸ್ ನೀಡಲಾಗುತ್ತಿದೆ, ಸಾರಿಗೆ ನೌಕರರಿಗೆ ಮಾತ್ರ ಇಲ್ಲ: ಕೋಡಿಹಳ್ಳಿ ಚಂದ್ರಶೇಖರ್
ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ತಿ್ಕ್ಕಾಟದ ಬಗ್ಗೆ ಮಾತನಾಡಿರುವ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಸರ್ಕಾರ ಸಂಬಳದ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಜಲಮಂಡಳಿ ನೌಕರರಿಗೆ ಬೋನಸ್ ನೀಡಲಾಗುತ್ತಿದೆ. ಆದರೆ ಸಾರಿಗೆ ನೌಕರರಿಗೆ ಸಂಬಳ ಹೆಚ್ಚಿಸುತ್ತಿಲ್ಲ. ಒಂದೊಂದು ನಿಗಮಕ್ಕೆ ಒಂದೊಂದು ನೀತಿ ಜಾರಿ ಮಾಡಿದ್ದಾರೆ. ಹೀಗಾಗಿಯೇ ಸೂಕ್ತ ವೇತನ ನೀಡಬೇಕೆಂಬುದು ನಮ್ಮ ಬೇಡಿಕೆ ಎಂದು ಬೆಂಗಳೂರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.
ಸರಿಯಾಗಿ ಸ್ಪಂದಿಸದಿದ್ದರೆ ಕಠಿಣ ಕ್ರಮ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾನು ಬೆಂಗಳೂರಿಗೆ ಹೋಗ್ತಿದ್ದೀನಿ ಸರಿಯಾಗಿ ಸ್ಪಂದಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ. ಅಂತೆಯೇ ನೌಕರರ ಮುಷ್ಕರಕ್ಕೆ ಡಿ.ಕೆ.ಶಿವಕುಮಾರ್ ಬೆಂಬಲವಿದೆ ಎಂಬ ವಿಚಾರದ ಕುರಿತು ಮಾತನಾಡಿ, ಅವರ ಮಾತಿಗೆ ನಾನೇನು ಹೇಳಲಿ? ಒಂಬತ್ತು ಬೇಡಿಕೆ ಪೈಕಿ ಎಂಟು ಬೇಡಿಕೆಯನ್ನ ಬಗೆಹರಿಸಿದ್ದೇವೆ. ರಾಜಕೀಯವಾಗಿ ಮಾತಾನಾಡಿದರೆ ಅದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.
ವಯಸ್ಕರು, ಮಕ್ಕಳು, ವಯಸ್ಸಾದವರಿಗೆ ಬೇರೆ ಬೇರೆ ದರ ನಿಗದಿ; ಮಧ್ಯಾಹ್ನ 12.30ಕ್ಕೆ ಜಯನಗರ RTO ಕಚೇರಿಯಲ್ಲಿ ಸಭೆ
ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ. ಜಯನಗರ RTO ಕಚೇರಿಯಲ್ಲಿ ಮಧ್ಯಾಹ್ನ 12.30ಕ್ಕೆ ಸಭೆ ನಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಯಸ್ಕರು, ಮಕ್ಕಳು, ವಯಸ್ಸಾದವರಿಗೆ ಬೇರೆ ಬೇರೆ ದರ ನಿಗದಿ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎನ್ನಲಾಗುತ್ತಿದ್ದು, ಬೇಕಾಬಿಟ್ಟಿ ದರ ವಿಧಿಸುವುದಕ್ಕೆ ಕಡಿವಾಣ ಹಾಕಲು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ನಿನ್ನೆ ಒಂದೇ ದಿನ ದಾವಣಗೆರೆ ವಿಭಾಗಕ್ಕೆ ₹35 ಲಕ್ಷ ನಷ್ಟ
ಬಸ್ ಮುಷ್ಕರದಿಂದ ನಿನ್ನೆ ಒಂದೇ ದಿನ ದಾವಣಗೆರೆ ಕೆಎಸ್ಆರ್‌ಟಿಸಿ ವಿಭಾಗಕ್ಕೆ ₹35 ಲಕ್ಷ ನಷ್ಟವಾಗಿರುವುದಾಗಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಹೆಬ್ಬಾಳ್ ಮಾಹಿತಿ ನೀಡಿದ್ದಾರೆ. ಒಟ್ಟು 350 ಬಸ್ಸುಗಳು ಸಂಚರಿಸಬೇಕಿತ್ತು. ಆದರೆ, ಮುಷ್ಕರದಿಂದ ಬಸ್ ಓಡಾಟ ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ 1,132 ಚಾಲಕರು, ನಿರ್ವಾಹಕರು ಸೇವೆಗೆ ಹಾಜರಾಗಿಲ್ಲ. ಇದರಿಂದಾಗಿ ನಿನ್ನೆ ಒಂದೇ ದಿನ ₹35 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಎರಡನೇ ದಿನವೂ ಬಸ್ ಇಲ್ಲ; ಕೆಲವೆಡೆ ತರಬೇತಿ ಸಿಬ್ಬಂದಿ ಬಳಸಿ ಬಸ್ ಚಾಲನೆ
ಮುಷ್ಕರದ ನಡುವೆಯೂ ಇಂದಿನಿಂದ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದ್ದು, ತರಬೇತಿ ನಿರತ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ತರಬೇತಿ ನಿರತ ಚಾಲಕ, ಕಂಡಕ್ಟರ್, ಮೆಕ್ಯಾನಿಕ್‌ಗಳಿಗೆ ಇಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಲಾಗಿದ್ದು, ಗೈರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ. ಹೀಗಾಗಿ ಕೆಲವೆಡೆ ತರಬೇತಿ ಸಿಬ್ಬಂದಿ ಬಸ್ ಓಡಿಸುತ್ತಿದ್ದಾರೆ.
Published On - Apr 08,2021 7:43 PM