
ಬೆಂಗಳೂರು, ಅಕ್ಟೋಬರ್ 6: ಸೆಪ್ಟೆಂಬರ್ 22 ರಿಂದ ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿ (Karnataka Caste Census) ಮುಗಿಸಲು ಸರ್ಕಾರ ನೀಡಿದ್ದ ಡೆಡ್ ಲೈನ್ ಅಕ್ಟೋಬರ್ 7ಕ್ಕೆ ಮುಗಿಯುತ್ತದೆ. ಅಂದರೆ, ಜಾತಿ ಗಣತಿಗೆ ಇನ್ನೊಂದೇ ದಿನ ಬಾಕಿ ಇದೆ. ಹೀಗಾಗಿ ಸಮೀಕ್ಷೆ ಮಂಗಳವಾರಕ್ಕೆ ಅಂತ್ಯವಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಆದರೆ, ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಅಕ್ಟೋಬರ್ 7ರಂದೇ ಸಮೀಕ್ಷೆ ಮುಗಿಯುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಸಮೀಕ್ಷೆಯ ವೇಗ ನೋಡಿದರೆ ಅಂದುಕೊಂಡ ಸಮಯದೊಳಗೆ ಮುಗಿಯುವುದು ಅನುಮಾನ ಎನ್ನಲಾಗಿದೆ.
ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆಗೆ ನಿಗದಿಪಡಿಸಿರುವ ಒಟ್ಟು ಕುಟುಂಬ ಅಥವಾ ಮನೆಗಳ ಸಂಖ್ಯೆ 1,43,77,978 ಆಗಿದೆ. ಭಾನುವಾರದ ಮಾಹಿತಿ ಇನ್ನು ಲಭ್ಯವಾಗದೇ ಇರುವುದರಿಂದ, ಸದ್ಯ ಬಿಡುಗಡೆ ಆಗಿರುವ ಮಾಹಿತಿ ಪ್ರಕಾರ ಅಕ್ಟೋಬರ್ 4ರವರೆಗೆ ರಾಜ್ಯದಲ್ಲಿ ಒಟ್ಟು 1,2,83,172 ಮನೆಗಳ ಸಮೀಕ್ಷೆ ನಡೆಸಲಾಗಿದೆ. ಇನ್ನೂ ಸಮೀಕ್ಷೆ ನಡೆಸಬೇಕಾದ ಮನೆಗಳ ಸಂಖ್ಯೆ 40,94,806 ಇದೆ.
ಸದ್ಯದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಶೇಕಡಾ 65 ರಷ್ಟು ಸಮೀಕ್ಷಾ ಗುರಿಯನ್ನ ಸಾಧಿಸಲಾಗಿದೆ. ಹೀಗಾಗಿ ಇಂದು ಮತ್ತೆ ನಾಳೆಯೊಳಗೆ ಸಮೀಕ್ಷೆ ಪೂರ್ಣವಾಗುವುದು ಅನುಮಾನ ಎನ್ನಲಾಗಿದೆ. ಇತ್ತ ಸಮೀಕ್ಷಕರಿಗೆ ಸಾಲು ಸಾಲು ಸವಾಲು ಸಹ ಎದುರಾಗಿದೆ.
ಗಣತಿದಾರರಿಗೆ ತಲಾ 250 ಮನೆಗಳ ಸಮೀಕ್ಷೆ ನಡೆಸಬೇಕೆಂದು ಟಾಸ್ಕ್ ನೀಡಲಾಗಿದ್ದು, ಇದು ಕಷ್ಟವಾಗಿದೆ. ಯಾಕೆಂದರೆ, ಸಮೀಕ್ಷಾದಾರರಿಗೆ ತಮ್ಮ ಮನೆಯಿಂದ ದೂರದ ಪ್ರದೇಶದಲ್ಲಿ, ಅಥವಾ ದೂರದ ವಾರ್ಡ್ಗಳಿಗೆ ಸರ್ವೆ ಕೆಲಸಕ್ಕೆ ನೇಮಕಮಾಡಲಾಗಿದೆ. ಹೀಗಾಗಿ ಗಣತಿದಾರರು ಪ್ರಯಾಣಕ್ಕಾಗಿ ಹೆಚ್ಚಿನ ಸಮಯ ಮೀಸಲಿಡಬೇಕಾದ ಸ್ಥಿತಿ ಬಂದಿದೆ. ಇನ್ನು ಸಮೀಕ್ಷೆ ವೇಳೆ UHID ನಂಬರ್ ಹಾಕಿದರೂ ಲೊಕೇಷನ್ ಓಪನ್ ಆಗ್ತಿಲ್ಲ. ಹೀಗಾಗಿ ಕೆಲವೆಡೆ ಒಂದು ಮನೆ ಸಮೀಕ್ಷೆಗೆ ಕನಿಷ್ಠ 30-45 ನಿಮಿಷ ಸಮಯ ತೆಗೆದುಕೊಳ್ಳುತ್ತಿದೆ.
ಇತ್ತ ದಸರಾ ರಜೆ ಮುಗಿಯುತ್ತಾ ಬರುತ್ತಿದ್ದು, ಸಮೀಕ್ಷೆಗೆ ನೇಮಕವಾಗಿರುವ ಶಿಕ್ಷಕರಿಗೆ ಮತ್ತೊಂದು ತಲೆಬಿಸಿ ಶುರುವಾಗುವ ಸೂಚನೆ ಸಿಕ್ಕಿದೆ. ಶಾಲೆಗಳು ಆರಂಭವಾದರೆ ಬೆಳಗ್ಗೆಯಿಂದ ಸಂಜೆ ತನಕ ತರಗತಿಗಳನ್ನು ನಡೆಸಿ, ಸಂಜೆ ಬಳಿಕ ಸಮೀಕ್ಷೆ ನಡೆಸುವ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಜಾತಿ ಗಣತಿಯಿಂದ ಸಾಕಷ್ಟು ಗೊಂದಲಗಳಾಗುತ್ತಿವೆ. ಸಮೀಕ್ಷೆ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೋಡಿದರೇ ಇದು ಗೊತ್ತಾಗುತ್ತದೆ. ಪೂರ್ವ ತಯಾರಿ ಇಲ್ಲದೇ ಆತುರದ ನಿರ್ಣಯ ತೆಗೆದುಕೊಂಡಿದ್ದೇಕೆ ಎಂದು ಬಿಜೆಪಿ ರಾಜ್ಯಾಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಸಿಎಂ-ಡಿಸಿಎಂ ನಡುವೆ ಹೊಂದಾಣಿಕೆ ಇಲ್ಲ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಟೀಕಿಸಿದ್ದಾರೆ. ಹಿಂದೂ ಸಮಾಜ ಒಡೆಯಲಾಗುತ್ತಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ಮತ್ತೊಂದೆಡೆ, ಯತ್ನಾಳ್ ದಾಟಿಯಲ್ಲೇ ಮಾತ್ನಾಡಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಚಿವ ಸಂತೋಷ್ ಲಾಡ್ ತಿರುಗೇಟು ಕೊಟ್ಟಿದ್ದಾರೆ.
ಗಣತಿದಾರರ ಪ್ರಶ್ನೆಗೆ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಕೇಂದ್ರ ಸಚಿವ ವಿ.ಸೋಮಣ್ಣ ಕೂಡ ಸರ್ವೇ ಮಾಡಲು ಬಂದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಡಿ.ಕೆ.ಶಿವಕುಮಾರ್, ಸಮೀಕ್ಷೆ ವಿರೋಧಿಸುತ್ತಿರುವ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ದಾರೆ. ಅತ್ತ ಜೆಡಿಎಸ್ ಕೂಡ ಡಿಕೆಶಿ ಹೆಸರು ಉಲ್ಲೇಖಿಸಿ ಎಕ್ಸ್ ಸಂದೇಶದ ಮೂಲಕ ವ್ಯಂಗ್ಯವಾಡಿದೆ. ಸಮೀಕ್ಷೆಯಿಂದ ಯಾರಿಗೆ ಲಾಭ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಯಾರು ಎಷ್ಟೇ ಆಕ್ಷೇಪಣೆ ಮಾಡಿದರೂ ಸಮೀಕ್ಷೆ ನಡೆಯುತ್ತೆ: ಡಿಸಿಎಂ ಡಿ.ಕೆ. ಶಿವಕುಮಾರ್
ಈ ಮಧ್ಯೆ, ಹಾಸನದ ಬೇಲೂರಿನಲ್ಲಿ ಗಣತಿಗೆ ತೆರಳಿದ್ದ ಶಿಕ್ಷಕಿ ಚಿಕ್ಕಮ್ಮ ಎಂಬುವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಮೈಸೂರಿನಲ್ಲಿ ಸಮೀಕ್ಷೆಗೆ ವಿದ್ಯಾರ್ಥಿಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಎಲ್ಲ ಅವಾಂತರಗಳ ಮಧ್ಯೆ, ನಿಗದಿತ ಅವಧಿಯೋಳಗೆಯೇ ಗಣತಿ ಮುಗಿಯಲಿದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.