
ಬೆಂಗಳೂರು, ನವೆಂಬರ್ 17: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ (Karnataka Caste Census) ಸುಳ್ಳು ಅಂಕಿಅಂಶಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ (Criminal case) ದಾಖಲಿಸುವಂತೆ ಕೋರಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ ದಯಾನಂದ್ ಅವರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಸೆಪ್ಟೆಂಬರ್ 22ರಿಂದ ಪ್ರಾರಂಭಿಸಿ ಅಕ್ಟೋಬರ್ 31ರವರೆಗೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಸಾರ್ವಜನಿಕರಿಗೆ ಆನ್ಲೈನ್ ಮೂಲಕ ಪಾಲ್ಗೊಳ್ಳಲು ನವೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ. ಅದರಂತೆ ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.
ಇದನ್ನೂ ಓದಿ: ಜಾತಿ ಸಮೀಕ್ಷೆ ಅವಧಿ ವಿಸ್ತರಣೆ: ಕರ್ನಾಟಕದಾದ್ಯಂತ ಶಾಲಾ ಸಮಯವೂ ಬದಲಾವಣೆ
ಇನ್ನು ಈ ಸಂಬಂಧ ಹೈಕೋರ್ಟ್ನಲ್ಲಿ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಆಯೋಗವು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಯಾವುದೇ ವ್ಯಕ್ತಿಗೆ ಮಾಹಿತಿಯನ್ನು ಸೋರಿಕೆಯಾಗದಂತೆ ಅಫಿಡವಿಟ್ ಗೌಪ್ಯತೆಯನ್ನು ಕಾಪಾಡಲಾಗುವುದೆಂದು ಸೆಪ್ಟೆಂಬರ್ 26 ರಂದು ಸಲ್ಲಿಸಲಾಗಿದೆ. ಅದರಂತೆ ಆಯೋಗದ ವತಿಯಿಂದ ಗೌಪ್ಯತೆಯನ್ನು ಕಾಪಾಡಲಾಗಿದೆ.
ಆದಾಗ್ಯೂ ಕೆಲ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂಬ ಶೀರ್ಷಿಕೆಯಡಿ ಲಿಂಗಾಯಿತರು-65 ಲಕ್ಷ, ಒಕ್ಕಲಿಗರು-60 ಲಕ್ಷ, ಕುರುಬರು-45 ಲಕ್ಷ, ಈಡಿಗರು-15 ಲಕ್ಷ, ಪರಿಶಿಷ್ಟ ಪಂಗಡ-40.45 ಲಕ್ಷ, ವಿಶ್ವಕರ್ಮ-15 ಲಕ್ಷ, ಬೆಸ್ತರು 15 ಲಕ್ಷ, ಬ್ರಾಹ್ಮಣರು-14 ಲಕ್ಷ, ಗೊಲ್ಲರು-10 ಲಕ್ಷ, ಮುಸ್ಲಿಮರು-60 ಲಕ್ಷ, ಕ್ರೈಸ್ತರು-12 ಲಕ್ಷ, ಸವಿತಾ ಸಮಾ -5 ಲಕ್ಷ, ಗೊಲ್ಲರು – 10 ಲಕ್ಷ, ಕುಂಬಾರ -5 ಲಕ್ಷ ಮತ್ತು ಮಡಿವಾಳ -6 ಲಕ್ಷ ಇತರ ಎಂದು ಗ್ರೂಪ್ಗೆ ಶೇರ್ ಮಾಡಲಾಗಿದೆ.
ಶಿವ ಎನ್ನುವವರನ್ನು ಅವರ ಮೊಬೈಲ್ ನಂಬರ್ ಮೂಲಕ ಸಂಪರ್ಕಿಸಿದಾಗ ಅವರು ಚಿಕ್ಕಮಗಳೂರಿನವರು ಎಂದು ಹೇಳಿದ್ದು ಅವರಿಗೆ ಇತರೆ ಮೊಬೈಲ್ ನಂಬರ್ನಿಂದ ವಿಷಯವು ವಾಟ್ಸ್ಆ್ಯಪ್ ಮೂಲಕ ಬಂದಿರುತ್ತದೆ ಎಂದು ತಿಳಿಸಿರುತ್ತಾರೆ.
ಇದನ್ನೂ ಓದಿ: ಜಾತಿ ಗಣತಿ ಡೆಡ್ಲೈನ್ ಅ.7ಕ್ಕೆ ಅಂತ್ಯ: ಅವಧಿ ಮುಂದೂಡುತ್ತಾ ಸರ್ಕಾರ? ಎಲ್ಲೆಲ್ಲಿ ಎಷ್ಟಾಯ್ತು ಸಮೀಕ್ಷೆ? ಮಾಹಿತಿ ಇಲ್ಲಿದೆ
ಹೈಕೋರ್ಟ್ ಆದೇಶದಂತೆ ಆಯೋಗದ ವತಿಯಿಂದ ಸಂಗ್ರಹಿಸಲಾಗುತ್ತಿರುವ ಮಾಹಿತಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಆಯೋಗದ ವಿಶ್ವಾಸಾರ್ಹತೆ ಹಾಗೂ ನಂಬಿಕೆಯನ್ನು ನಿರ್ವಹಿಸುವುದು ಅತಿ ಮುಖ್ಯವಾಗಿದೆ. ಸಮೀಕ್ಷಾ ದತ್ತಾಂಶಗಳನ್ನು ಸಂಗ್ರಹಿಸುವ ಹಂತದಲ್ಲಿರುವಾಗ ಈ ರೀತಿ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿಯನ್ನು ನೀಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿರುವುದರ ಬಗ್ಗೆ ಹಾಗೂ ವಿಷಯದ ಸತ್ಯತೆಯ ಬಗ್ಗೆ ಪರಿಶೀಲಿಸುವುದು ಅವಶ್ಯವಾಗಿದೆ. ಹಾಗಾಗಿ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡು ನಿಯಮಾನುಸಾರ ಅಗತ್ಯ ಕ್ರಮಕೈಗೊಳ್ಳುವಂತೆ ಕೋರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.