ಜಾತಿಗಣತಿ ವೇಳೆ ಮಾಹಿತಿ ನೀಡೋದು ಕಡ್ಡಾಯವಲ್ಲ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರ ಸ್ಪಷ್ಟನೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವೇಳೆ ಮಾಹಿತಿ ನೀಡುವುದು ಕಡ್ಡಾಯವೆಂದಿದ್ದ ಸರ್ಕಾರ ಈಗ ಹೈಕೋರ್ಟ್ ಮಧ್ಯಂತರ ಆದೇಶದ ಬೆನ್ನಲ್ಲೇ ನಿಲುವು ಬದಲಿದೆ. ಈ ಬಗ್ಗೆ ಆಯೋಗವು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಮೀಕ್ಷೆಯಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಸ್ವಯಂಪ್ರೇರಿತ ಎಂದು ಸ್ಪಷ್ಟಪಡಿಸಿದೆ.

ಜಾತಿಗಣತಿ ವೇಳೆ ಮಾಹಿತಿ ನೀಡೋದು ಕಡ್ಡಾಯವಲ್ಲ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರ ಸ್ಪಷ್ಟನೆ
ಜಾತಿಗಣತಿ ವೇಳೆ ಮಾಹಿತಿ ನೀಡೋದು ಕಡ್ಡಾಯವಲ್ಲ: ಸರ್ಕಾರ ಸ್ಪಷ್ಟನೆ

Updated on: Sep 27, 2025 | 5:33 PM

ಬೆಂಗಳೂರು, ಸೆಪ್ಟೆಂಬರ್ 27: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Karnataka Caste Census) ಸೆಪ್ಟೆಂಬರ್ 22ರಿಂದ ರಾಜ್ಯಾದ್ಯಂತ ಪ್ರಾರಂಭಗೊಂಡಿದ್ದು, ಪ್ರಸ್ತುತ ಗಣತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಸಮೀಕ್ಷೆ ರಾಜ್ಯದ ಎಲ್ಲಾ ಜನಸಂಖ್ಯೆಯನ್ನು ಒಳಗೊಳ್ಳುವುದೆಂದು ಸರ್ಕಾರ ಹೇಳಿದ್ದರೂ, ಇದರಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಸ್ವಯಂಪ್ರೇರಿತವೆಂದು ಆಯೋಗ ಸ್ಪಷ್ಟಪಡಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದ ನೀಡಿದ ಬೆನ್ನಲ್ಲೇ ಹಿಂದುಳಿದ ವರ್ಗಗಳ ಆಯೋಗ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಹಿಂದುಳಿದ ವರ್ಗಗಳ ಆಯೋಗದ ಪತ್ರಿಕಾ ಪ್ರಕಟಣೆಯಲ್ಲೇನಿದೆ?

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಹಾಗೂ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ 22-09-2025 ರಿಂದ ಪ್ರಾರಂಭಿಸಿದ್ದು, ಪ್ರಗತಿಯಲ್ಲಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಸಂಪೂಣ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದರೂ, ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ/ಕುಟುಂಬಗಳ ಸ್ವಯಂ ಇಚ್ಛೆಗೆ ಬಿಡಲಾಗಿದೆಯೆಂದೂ ಹಾಗೂ ಮಾಹಿತಿಯನ್ನು ನೀಡುವ ಬಗ್ಗೆ ಆಯೋಗ ಒತ್ತಾಯ ಮಾಡುತ್ತಿಲ್ಲವೆಂದು ಸ್ಪಷ್ಟಿಕರಿಸಲಾಗಿದೆಯೆಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಸಮೀಕ್ಷೆಯ ಸಮಯದಲ್ಲಿ ಜನರು, ಕುಟುಂಬಗಳು ಯಾವುದೇ ಮಾಹಿತಿಯನ್ನು ನೀಡಲು ಸಿಬ್ಬಂದಿ ಬಲವಂತಪಡಿಸುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರದಿಂದ ಹಮ್ಮಿಕೊಳ್ಳಲಾಗಿರುವ ಈ ಸಮೀಕ್ಷೆಯ ಉದ್ದೇಶ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಂಶಗಳ ನಿಖರ ಮಾಹಿತಿಯನ್ನು ಸಂಗ್ರಹಿಸುವುದಾಗಿದೆ. ಆದರೆ ಭಾಗವಹಿಸುವಿಕೆ ಐಚ್ಛಿಕವಾಗಿದ್ದು, ಯಾರ ಮೇಲೂ ಒತ್ತಡವಿಲ್ಲ ಎಂಬ ಸಂದೇಶವನ್ನು ಸರ್ಕಾರ ಇದೀಗ ರವಾನಿಸಿದೆ.

ಮಧ್ಯಂತರ ಆದೇಶದಲ್ಲಿ ಏನು ಹೇಳಿತ್ತು ಕರ್ನಾಟಕ ಹೈಕೋರ್ಟ್?

ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಮಧ್ಯಂತರ ಆದೇಶದಲ್ಲಿ, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿತ್ತು. ಸಮೀಕ್ಷಕರಿಗೆ ಮಾಹಿತಿಯನ್ನು ಪಡೆಯಲು ಬಲವಂತ ಮಾಡುವಂತಿಲ್ಲ ಹಾಗೂ ಸಂಗ್ರಹಿಸಲಾದ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.

ಇದನ್ನೂ ಓದಿ: ಸಿಎಂ ಜಾತಿಗಣತಿ ಸಭೆ:ಈವರೆಗೆ ಎಷ್ಟು ಸಮೀಕ್ಷೆಯಾಗಿದೆ? ಒಟ್ಟು ಎಷ್ಟು ಆಗ್ಬೇಕು? ಇಲ್ಲಿದೆ ವಿವರ

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಈ ಆದೇಶದ ಅನುಸರಣೆಯ ಕುರಿತು ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ. ಸಮೀಕ್ಷೆ ಕುರಿತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಹಾಗೂ ಹೈಕೋರ್ಟ್ ಮಧ್ಯಂತರ ಆದೇಶದ ಪಾಲನೆ ದೃಷ್ಟಿಯಿಂದ ಆಯೋಗದಿಂದ ಈ ಪ್ರಕಟಣೆ ಹೊರಬಿದ್ದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Sat, 27 September 25