ಸಿಎಂ ಜಾತಿಗಣತಿ ಸಭೆ:ಈವರೆಗೆ ಎಷ್ಟು ಸಮೀಕ್ಷೆಯಾಗಿದೆ? ಒಟ್ಟು ಎಷ್ಟು ಆಗ್ಬೇಕು? ಇಲ್ಲಿದೆ ವಿವರ
ನೂರೆಂಟು ವಿಘ್ನ, ನೂರಾರು ಸವಾಲು, ಹತ್ತು ಹಲವು ಗೊಂದಲ, ಹತ್ತಾರು ಎಡವಟ್ಟುಗಳೊಂದಿಗೆ ಕರ್ನಾಟಕದಲ್ಲಿ ಜಾತಿಗಣತಿ ಶುರುವಾಗಿದೆ. ಐದನೇ ದಿನವಾದ ಇಂದು (ಸೆಪ್ಟೆಂಬರ್ 26) ಜಾತಿಗಣತಿ ಕಾರ್ಯ ಸಾಗಿದೆ. ಆದ್ರೆ, ರಾಜ್ಯದ ಹಲವೆಡೆ ಒಟಿಪಿ ಸಮಸ್ಯೆ, ಸರ್ವರ್ ಪ್ರಾಬ್ಲಂ, ಮೊಬೈಲ್ ಆ್ಯಪ್ ಓಪನ್ ಆಗದೇ ಶಿಕ್ಷಕರು ಪರದಾಡಿದ್ದಾರೆ. ಅಷ್ಟೇ ಅಲ್ಲ, ದಿವ್ಯಾಂಗ ಶಿಕ್ಷಕರು, ವಯಸ್ಸಾದ ಶಿಕ್ಷಕರನ್ನೂ ಗಮತಿ ಕಾರ್ಯಕ್ಕೆ ನೇಮಕ ಮಾಡಿದ್ದರಿಂದ ಗಣತಿ ಮಾಡಲು ಸಂಕಷ್ಟ ಅನುಭವಿಸ್ತಿದ್ದಾರೆ. ಇನ್ನು ಈ ಬಗ್ಗೆ ಸಿಎಂ ಡಿಸಿಎಗಳ ಜತೆ ಸಭೆ ಮಾಡಿದ್ದು, ಸಭೆಯಲ್ಲಿ ಏನೇನಾಯ್ತು? ಈವರೆಗೆ ಎಷ್ಟು ಪರ್ಸೆಂಟ್ ಸಮೀಕ್ಷೆಯಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 26): ಹಲವು ಗೊಂದಗಳ ನಡುವೆಯೂ ಕರ್ನಾಟಕದಲ್ಲಿ (Karnataka) ಜಾತಿಗಣತಿ (Caste survey )ಐದನೇ ದಿನಕ್ಕೆ ಕಾಲಿಟ್ಟಿದೆ. ನಿಯೋಜನೆಗೊಂಡಿರುವ ಶಿಕ್ಷಕರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ಕೆಲವೆಡೆ ಇಂಟರ್ ನೆಟ್, ಸರ್ವರ್ ಸಮಸ್ಯೆಗಳ ನಡೆಯೂ ಶಿಕ್ಷಕರು ನಾನಾ ಕಸರತ್ತು ಮಾಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಇಂದು (ಸೆಪ್ಟೆಂಬರ್ 26) ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಕೆಲ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇನ್ನು ಈವರೆಗೆ ರಾಜ್ಯಾದ್ಯಂತ ಕೇವಲ ಶೇ.4ರಷ್ಟು ಮಾತ್ರ ಸರ್ವೇ ಆಗಿದೆ ಎಂದು ಸ್ವತಃ ಸಿಎಂ ಸ್ಪಷ್ಟಪಡಿಸಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಇವತ್ತು ಡಿಸಿಗಳು, ಸಿಇಒಗಳ ಜೊತೆ ವಿಡಿಯೋ ಸಂವಾದ ಮಾಡಿದ್ದೇವೆ. ಸರ್ವೇ ಕಾರ್ಯ ಕುಂಠಿತ ಆಗಿತ್ತು. ತಾಂತ್ರಿಕ ಸಮಸ್ಯೆ ಗಳು ಎಲ್ಲಾ ಡಿಸಿ ಹೇಳೋ ಪ್ರಕಾರ 90ರಷ್ಟು ರಷ್ಟು ಪರಿಹಾರ ಆಗಿದ್ದಾವೆ. ಉಳಿದಿರೋ ಸಮಸ್ಯೆ ಇಂದೇ ಪರಿಹಾರ ಆಗುತ್ತದೆ. ನಾನು ಕಮಿಷನರ್ ಅವರಿಗೂ ಹೇಳಿದ್ದೇನೆ, ಕಾರ್ಯದರ್ಶಿ ಗೂ ಹೇಳಿದ್ದೇನೆ. ಏನೇನು ತೊಡಕು ಇದ್ದಾವೆ ಅದನ್ನ ನಿವಾರಣೆ ಮಾಡಬೇಕು. ನಿವಾರಣೆ ಆಗುತ್ತದೆ ಎಂದ ಹೇಳಿದ್ದಾರೆ. ಸಮಸ್ಯೆ ಬಗೆ ಹರಿಯುತ್ತದೆ. ಇಂದಿನಿಂದ ಸರ್ವೇ ಕೆಲಸ ಚುರುಕಾಗಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೀದರ್: ಜಾತಿಗಣತಿಗೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ; ನೀರಿನ ಟ್ಯಾಂಕ್, ಮರವೇರಿದ ಶಿಕ್ಷಕರು
ದಿನಕ್ಕೆ 10 ಪರ್ಸೆಂಟ್ ಸರ್ವೆ ಟಾಸ್ಕ್
ಸೆ 22ರಿಂದ ಅಕ್ಟೋಬರ್ ವರೆಗೆ ಸರ್ವೇ ಕೆಲಸ ಮುಗೀಬೇಕು ಅಂತ ತೀರ್ಮಾನ ಮಾಡಿದ್ವಿ. ಆಯೋಗ ಕೂಡ ತೀರ್ಮಾನ ಮಾಡಿತ್ತು. ಆದ್ರೆ ನಾಲ್ಕು ದಿನ ಸರ್ವೇ ಸರಿಯಾಗಿ ನಡೆದಿಲ್ಲ. ಉಳಿದಿರೋ ದಿನಗಳಲ್ಲಿ ಅದನ್ನ ಕವರ್ ಮಾಡಬೇಕು. ಪ್ರತೀ ದಿನ ಶೇ.10ರಷ್ಟು ಹೌಸ್ ಹೋಲ್ಡ್ ಸರ್ವೇ ಅಗಬೇಕು.ನಾವು ಮಾಡುತ್ತೇವೆ ಎಂದು ಎಲ್ಲಾ ಡಿಸಿ ಒಪ್ಪಿಕೊಂಡಿದ್ದಾರೆ. ಶಿಕ್ಷಕರು ಕೆಲ ತಪ್ಪು ಕಲ್ಪನೆಗಳಿಂದ ಸಮಸ್ಯೆ ಆಗಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಇದ್ದಾರೆ. ಎಲ್ಲರೂ ಕೂಡ ಒಪ್ಪಿಕೊಂಡು ಸರ್ವೇ ಕೆಲಸ ಶುರು ಮಾಡಿದ್ದಾರೆ ಎಂದು ತಿಳಿಸಿದರು.
ಇಲ್ಲಿಯವರೆಗೆ ಶೇ.4ರಷ್ಟು ಸರ್ವೇ
ಎಲ್ಲರೂ ಕೂಡ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಸೂಚನೆ ಕೊಟ್ಟಿದ್ದೇನೆ. ಇಲ್ಲಿಯವರೆಗೆ ಶೇ.4ರಷ್ಟು ಸರ್ವೇ ಆಗಿದೆ. ಪ್ರತೀ ದಿನ ಕನಿಷ್ಠ 10 ಪರ್ಸೆಂಟ್ ಸರ್ವೇ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಹಿಂದಿನ ಸರ್ವೇ ಗೌರವ ಧನ ಬಿಡುಗಡೆ ಮಾಡಿದ್ದೇವೆ. ಯಾರಿಗೂ ಅನುಮಾನ ಆಗದಂತೆ ಸರ್ವೇ ಆಗುವ ಗೌರವ ಧನ ಕೊಡುತ್ತೇವೆ, ರಿಲೀಸ್ ಮಾಡಿದ್ದೇವೆ. ಒಟ್ಟಾರೆಯಾಗಿ ಸುಮಾರು 2 ಕೋಟಿ ಹೌಸ್ ಹೋಲ್ಡ್ ಇದ್ದಾವೆ. ಬೆಂಗಳೂರು ಸೇರಿ ಎಲ್ಲಾ ಮನೆ ಗಳಲ್ಲೂ ಸರ್ವೇ ಮಾಡಬೇಕು. ಎಲ್ಲಾ ಮಾಹಿತಿಗಳನ್ನ ತಿಳಿದುಕೊಳ್ಳಬೇಕು. ನಿಗದಿತ ಅವಧಿ ಒಳಗೆ ಸರ್ವೇ ಕೆಲಸ ಮುಗೀಬೇಕು. ಆನ್ ಲೈನ್ ನಲ್ಲೂ ಮಾಹಿತಿ ಕೊಡಬೇಕು. ಯಾರಾದರೂ ಮನೇಯಲ್ಲಿ ಇಲ್ಲದಿದ್ರೂ ನಾವು ಸ್ಟಿಕ್ಕರ್ ಅಂಟಿಸುತ್ತೇವೆ ಎಂದು ಹೇಳಿದರು.
7 ಕೋಟಿ ಜನರ ಸಮೀಕ್ಷೆ ಗುರಿ
ನ್ಯಾಯಾಲಯ ಹೇಳಿದಂತೆ ಸಮೀಕ್ಷೆ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲೂ ಸುಸೂತ್ರವಾಗಿ ಸಮೀಕ್ಷೆ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೂ ಕ್ಯಾಬಿನೆಟ್ನಲ್ಲಿ ಹೇಳಿದ್ದೇನೆ. ಸಮೀಕ್ಷೆ ಕಾರ್ಯಕ್ಕೆ ಎಲ್ಲಾ ಸಚಿವರು ಸಹಕಾರ ನೀಡಬೇಕು. 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸರ್ವೆ ಮಾಡುತ್ತಿದ್ದೇವೆ. ದೂರದ ಗುಡ್ಡದಲ್ಲಿ ವಾಸಿಸುವವರು ಸಮೀಪದ ಶಾಲೆಯಲ್ಲಿ ಸರ್ವೇ ಮಾಹಿತಿ ನೀಡಬೇಕು. ಎಲ್ಲಾ ಸೌಕರ್ಯ ಒದಗಿಸೋ ಕೆಲಸ ಮಾಡುತ್ತೇವೆ. ಶಿಕ್ಷಕರ ಸಮಸ್ಯೆ ಇದೆ ಅಂತ ಕೇಳಿ ಬರ್ತಿದೆ, ಆದ್ರೆ ಅದು ತಪ್ಪು ಕಲ್ಫನೆ ಇತ್ತು. ಯಾರಾದರೂ ಶಿಕ್ಷಕರು ಸಹಕರಿಸದಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಡಿಸಿ, ಸಿಇಒ ಜೊತೆಗಿನ ಸಿಎಂ ಸಭೆಯ ಮುಖ್ಯಾಂಶಗಳು
- ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದ್ದು, ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳ ಕಾರಣ ಸಮೀಕ್ಷೆ ನಿಧಾನವಾಗಿತ್ತು. ಈಗ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.
- ಇಂದಿನಿಂದ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
- ಸಮೀಕ್ಷೆ ಕಾರ್ಯಕ್ಕೆ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು.ಸಮೀಕ್ಷೆ ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.
- ರಾಜ್ಯದಲ್ಲಿ ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ನಡೆಸಬೇಕಾಗಿದೆ. ಇದುವರೆಗೆ 2,76,016 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ.
- ಸಮೀಕ್ಷೆ ಕಾರ್ಯಕ್ಕೆ ಒಟ್ಟು 1,20,728 ಗಣತಿದಾರರನ್ನು ನಿಯೋಜಿಸಲಾಗಿದೆ. ಒಟ್ಟು 1,22,085 ಗಣತಿ ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಅಕ್ಟೋಬರ್ 7ರ ಒಳಗಾಗಿ ಗಣತಿ ಕಾರ್ಯ ಪೂರ್ಣಗೊಳ್ಳಬೇಕು.
- ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಶಿಕ್ಷಕರು ತಮಗೆ ವಹಿಸಲಾಗಿರುವ ಕಾರ್ಯವನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು.ಯಾವುದೇ ಶಿಕ್ಷಕರು ಗಣತಿ ಕಾರ್ಯಕ್ಕೆ ಅಸಹಕಾರ ತೋರಿಸಬಾರದು.
- ಇದು ಸರ್ಕಾರಿ ಕೆಲಸವಾಗಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಬಾರದು.ನಿರ್ಲಕ್ಷ್ಯ ವಹಿಸುವ ಗಣತಿದಾರರ ಮೇಲೆ ಕ್ರಮ ಕೈಗೊಳ್ಳಬೇಕು.
- ಶಿಕ್ಷಕರಿಗೆ ಗೌರವಧನದ ಬಗ್ಗೆ ಯಾವುದೇ ಅನುಮಾನ ಬೇಡ. ಈಗಾಗಲೇ ಗೌರವಧನವನ್ನು ಬಿಡುಗಡೆ ಮಾಡಿದ್ದೇವೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.
- ಇದು ಕೇವಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮೀಕ್ಷೆಯಲ್ಲ.ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿಗದಿತ ಗುರಿಯ ಪ್ರಗತಿ ಬಗ್ಗೆ ಪ್ರತಿ ದಿನ ಪರಿಶೀಲನೆ ನಡೆಸಬೇಕು.
- ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು.
- ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಿಧಾನಗತಿಯಲ್ಲಿದ್ದು, ಚುರುಕುಗೊಳಿಸಬೇಕು.ಅಗತ್ಯವಿರುವ ಕಡೆ ಅನುದಾನಿತ ಶಾಲೆಗಳ ಶಿಕ್ಷಕರ ಸೇವೆಯನ್ನು ಪಡೆದುಕೊಳ್ಳಬೇಕು.ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಈ ಕುರಿತು ಸಂಪರ್ಕದಲ್ಲಿರಬೇಕು.
- ಸಮೀಕ್ಷೆ ಕಾರ್ಯದ ಮೇಲ್ವಿಚಾರಣೆ ನಡೆಸಲು ಪ್ರತಿ ತಾಲೂಕಿಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ. ಜಿಲ್ಲಾ ಮಟ್ಟದಲ್ಲಿ ಯಾವುದೇ ತಾಂತ್ರಿಕ ತೊಂದರೆಗಳು ಎದುರಾದರೆ ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಲು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿರುವ ಐಟಿ ತಂತ್ರಜ್ಞರ ನೆರವನ್ನು ಪಡೆದುಕೊಳ್ಳಬೇಕು.
- ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯ ಇಂದಿನಿಂದ ಆರಂಭವಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 50ಲಕ್ಷ ಮನೆಗಳಿವೆ, ಆದಷ್ಟು ಬೇಗನೆ ಗಣತಿ ಕಾರ್ಯವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು.
- ರಾಜ್ಯದ ಪ್ರತಿಯೊಂದು ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬೇಕು. ಯಾವುದೇ ಕುಟುಂಬ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು. ಗುಡ್ಡಗಾಡು ಪ್ರದೇಶಗಳ ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ಸಮೀಕ್ಷೆ ಕೇಂದ್ರಗಳನ್ನು ಆರಂಭಿಸಲು ಅವಕಾಶ ನೀಡಲಾಗಿದೆ.
- ಜನರು ಕೇಂದ್ರಕ್ಕೆ ಬಂದು ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬಹುದಾಗಿದೆ. ಆನ್‌ಲೈನ್ ಮೂಲಕ ಸಹ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ ಇದರ ಪ್ರಯೋಜನ ಪಡೆದುಕೊಳ್ಳಬೇಕು.
- ಸಮೀಕ್ಷೆ ಸಂದರ್ಭದಲ್ಲಿ ಮನೆಗಳಿಗೆ ಬೀಗ ಹಾಕಿದ್ದರೆ, ಅಂತಹ ಮನೆಗಳಲ್ಲೂ ಗಣತಿ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು.




