ಬೆಂಗಳೂರು: ಮೇಕೆದಾಟು ಯೋಜನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಯೋಜನೆಗೆ ಎಲ್ಲವೂ ಅನುಕೂಲಕರವಾಗಿದೆ. ಪತ್ರವನ್ನು ಬರೆದು ಸೌಹಾರ್ದತೆಯಿಂದ ಬಗೆಹರಿಸಲು ಮುಂದಾಗಿದ್ದೆ. ಆದರೆ ಯಾಕೋ ತಮಿಳುನಾಡಿನವರು ಸರಿಯಾಗಿ ಸ್ಪಂದಿಸಲಿಲ್ಲ. ಆದರೆ ನಾವು ಮೇಕೆದಾಟು ಯೋಜನೆಯನ್ನು ಮುಂದುವರೆಸುತ್ತೇವೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಮೇಕೆದಾಟು ಯೋಜನೆಯ ಕುರಿತು ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರದ ಪತ್ರ ವಿವಾದದ ಹಿನ್ನೆಲೆ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ಗೆ ಪತ್ರ ಬರೆದಿದ್ದರು. ವಿದ್ಯುತ್ ಉತ್ಪಾದನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದ ಕಾರಣ ‘ಸುಪ್ರೀಂ’ ಆದೇಶದನ್ವಯ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ಈ ಯೋಜನೆ ಎರಡೂ ರಾಜ್ಯಕ್ಕೆ ಉಪಯುಕ್ತವಾಗಲಿದೆ. ಜತೆಗೆ ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಬರೆದಿದ್ದರು.
ಇದಕ್ಕೆ ಪ್ರತಿಯಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬೆಂಗಳೂರಿನ 4.75 ಟಿಎಂಸಿ ಕುಡಿಯುವ ನೀರಿನ ಬಳಕೆಗೆ 67.16 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಾಣ ಒಪ್ಪುವಂಥದ್ದಲ್ಲ. ಮೇಕೆದಾಟು ಯೋಜನೆಯನ್ನು ಮುಂದುವರೆಸಬೇಡಿ ಎಂದು ಪ್ರತ್ಯುತ್ತರ ಬರೆದಿದ್ದರು.
ಯಡಿಯೂರಪ್ಪ ಪತ್ರ ಬರೆದ ವಿಚಾರಕ್ಕೆ ರಾಜ್ಯದಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಗೂ ರಾಜ್ಯದ ಯೋಜನೆಗಳಿಗೆ ತಮಿಳುನಾಡಿನ ಅನುಮತಿಯ ಅಗತ್ಯವೇನಿದೆ ಎಂದು ಆಡಳಿತ ಪಕ್ಷದ ಸಚಿವರೂ ಸೇರಿದಂತೆ ಹಲವರು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ನಿಲುವನ್ನು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಏನಿದು ಮೇಕೆದಾಟು ಯೋಜನೆ:
ಕೆ.ಆರ್.ಎಸ್ ಜಲಾಶಯದಿಂದ ತಮಿಳುನಾಡಿನ ಗಡಿಯವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶ 23,231 ಚದರ ಕಿ.ಮೀ ಇದೆ. ಕೆ.ಆರ್.ಎಸ್ ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಬೀಳುವ ಮಳೆ ನೀರು ಸಹ ಕಾವೇರಿ ನದಿಗೆ ಸೇರುತ್ತದೆ. ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಪ್ರತಿವರ್ಷ ಬಿಡುಗಡೆಯಾಗುತ್ತದೆ.
ಹೀಗಾಗಿ ಇಂತಹ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮೇಕೆದಾಟು ಬಳಿ ಶೇಖರಣಾ ಜಲಾಶಯ ನಿರ್ಮಿಸಲು ಕರ್ನಾಟಕ ಚಿಂತಿಸುತ್ತಿದೆ. ಇದರಿಂದ ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯದ ಕೆಳಭಾಗದ ಅನಿಯಂತ್ರಿತ ಜಲಾನಯನ ಪ್ರದೇಶದಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗುತ್ತದೆ. ಆಗ ಮೇಲ್ಭಾಗದ ಜಲಾಶಯಗಳಾದ ಕೆ.ಆರ್.ಎಸ್, ಕಬಿನಿ, ಹೇಮಾವತಿ, ಹಾರಂಗಿಯಿಂದ ಬಿಡಬೇಕಾದ ನೀರನ್ನು ನಿಯಂತ್ರಿಸುವಲ್ಲಿ ಇರುವ ಒತ್ತಡವನ್ನು ಸಹ ಕಡಿಮೆ ಮಾಡಬಹುದಾಗಿದೆ.
ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿ ಮೇಕೆದಾಟು ಇದೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಇದರಿಂದ ಕೊಳವೆ ಬಾವಿಗಳು ಒಣಗಿಹೋಗಿವೆ. ಸಾವಿರ ಅಡಿ ಆಳದವರೆಗೆ ಕೊರೆದಿರುವ ಕೊಳವೆ ಬಾವಿಗಳಲ್ಲಿನ ನೀರು ಫ್ಲೋರೈಡ್ ಮತ್ತು ನೈಟ್ರೇಟ್‌ಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಬೆಂಗಳೂರು ನಗರದ ಜನಸಂಖ್ಯೆಯೂ ಬಹಳ ವೇಗವಾಗಿ ಏರುತ್ತಿದ್ದು, ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಮೇಕೆದಾಟುವಿನ ಬಳಿ ಸುಮಾರು 45 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ. ಇದರಿಂದ ಹೆಚ್ಚಾಗಿ ತಮಿಳುನಾಡಿಗೆ ಬಿಡುವ ನೀರನ್ನೇ ಬಳಸಿಕೊಂಡು ಬೆಂಗಳೂರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಮಾಡಬಹುದಾಗಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಲಾಗುವುದು; ಪತ್ರದ ವಿಚಾರಕ್ಕೆ ರಾಜ್ಯ ಸರ್ಕಾರ ಸ್ಪಷ್ಟೀಕರಣ
(Karnataka CM BS Yadiyurappa clarifies on Mekedaatu project in Bengaluru)