ಬೆಂಗಳೂರು: ಕೊವಿಡ್ 19 ರ ಮೊದಲನೇ ಅಲೆಗಿಂತಲೂ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಸಂದಿಗ್ದತೆಯನ್ನು ಹುಟ್ಟುಹಾಕಿದೆ. ಅಲ್ಲದದೇ, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚಿನ ಒತ್ತಡ ಹೇರಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು. ಕೊವಿಡ್ ಚಿಕಿತ್ಸಾ ಕಾರ್ಯದಲ್ಲಿ ತೊಡಗಿರುವ ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ವೈದ್ಯರೊಂದಿಗೆ ವೀಡಿಯೋ ಸಂವಾದ ನಡೆಸಿ ವೈದ್ಯರ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದರಲ್ಲದೇ, ವೈದ್ಯರು ಸೇವೆಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪ್ರಶ್ನಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೈದ್ಯರಲ್ಲಿ ಆತ್ಮವಿಶ್ವಾಸ ತುಬುವ ಪ್ರಯತ್ನ ನಡೆಸಿದರು.
ಕೊವಿಡ್ ತಂದೊಡ್ಡಿರುವ ಸವಾಲುಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಸಮರ್ಥವಾಗಿ ಎದುರಿಸಿ. ಲಭ್ಯವಿರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕತೆಯಿಂದ ಬಳಸಿ ಎಂದ ಅವರು, ಇತರರ ಜೀವ ಉಳಿಸಲು ತಮಗೆ ಬಂದೊದಗಬಹುದಾದ ಅಪಾಯ ಲೆಕ್ಕಿಸದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತ ಸಮೂಹವನ್ನು ರಾಜ್ಯದ ಅಮೂಲ್ಯ ಆಸ್ತಿ ಎಂದು ಬಣ್ಣಿಸಿದರು. ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ವೃಂದಕ್ಕೆ ರಾಜ್ಯದ ಜನತೆಯ ಪರವಾಗಿ ಹಾಗೂ ವೈಯಕ್ತಿಕವಾಗಿಯೂ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಈಗಾಗಲೇ ಸ್ವತಃ ಕೊವಿಡ್ ಸೋಕಿಗೆ ತುತ್ತಾಗಿ, ಗುಣಮುಖರಾಗಿ ತಮ್ಮ ಸೇವೆಗೆ ಹಿಂದಿರುಗಿರುವ ವೈದ್ಯರ ಆರೋಗ್ಯ ಮತ್ತು ಅವರ ಮನೆಯವರ ಆರೋಗ್ಯವನ್ನು ವಿಚಾರಿಸಿದ ಮುಖ್ಯಮಂತ್ರಿಗಳ ನಡೆಗೆ ವೈದ್ಯರು ಸಹ ತಮ್ಮ ಕೃತಜ್ಞತೆ ಸಲ್ಲಿಸಿದರು.
ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ಡಾ.ಲಕ್ಷ್ಮೀಪತಿ ಮಾತನಾಡಿ ಕೊವಿಡ್ ಪ್ರಾರಂಭವಾದ ದಿನದಿಂದಲೂ ಮನೆಗೆ ತೆರಳದೇ ಆಸ್ಪತ್ರೆಯಲ್ಲೇ ವಾಸ್ಯವ್ಯ ಹೂಡಿರುವ ತಮ್ಮ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸೇವೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಉಡುಪಿ ಜಿಲ್ಲೆಯ ಮಣಿಪಾಲದ ಡಾ. ಶಶಿಕಿರಣ್ ಉಮಾಕಾಂತ್ ಅವರು ಕಿರಿಯ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುತ್ತಿರುವುದನ್ನು ಶ್ಲಾಘಿಸಿ, ಮುಖ್ಯಮಂತ್ರಿಗಳಿಗೆ ಹೊಸದಾಗಿ ಸರ್ಕಾರ ನಿರ್ಧರಿಸಿರುವ ಅಂತಿಮ ವರ್ಷದ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಹ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.
ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆಯ ಡಾ. ಶ್ರೀನಿವಾಸುಲು ಜನಜಾಗೃತಿ ಮೂಡಿಸುತ್ತಿರುವುದಾಗಿ ತಿಳಿಸಿದರು. ಆಮ್ಲಜನಕ ಕೊರತೆ ಇಲ್ಲ. ಜಿಂದಾಲ್ ಅವರು 1,000 ಹಾಸಿಗೆಯ ಆಸ್ಪತ್ರೆ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುತ್ತಾರೆ ಅದನ್ನು ಸರ್ಕಾರ ನಿರ್ವಹಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಿಜಯಪುರದ ಡಾ. ಮೀನಾಕ್ಷಿ ಡಿ ಮುತ್ತಪ್ಪನವರ್ ಅವರ ಬಳಿ ಲಸಿಕೆ ಪಡೆದಿದ್ದೀರಾ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಿಮ್ಮ ಆರೋಗ್ಯ ರಕ್ಷಣೆಯೂ ಮುಖ್ಯ ಎಂದು ಭರವಸೆಯ ಮಾತನಾಡಿದರು. ಇದಕ್ಕೆ ಸ್ಪಂದಿಸಿ ಮಾತನಾಡಿದ ಅವರು ಮನಃಪೂರ್ವಕವಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಡಾ. ಶರತ್ ಬಾಬು ಅವರು ಪಿಪಿಇ ಕಿಟ್ ಎಲ್ಲರಿಗೂ ದೊರೆತಿದೆ. ಬಳ್ಳಾರಿಯಿಂದ ಎರಡು ದಿನಕ್ಕೊಮ್ಮೆ 6000 ಕೆ ಎಲ್ ಆಮ್ಲಜನಕರ ಸರಬರಾಜು ಆಗುತ್ತಿದೆ. ಜಿಲ್ಲೆಯಲ್ಲಿ ಇತ್ತೀಚಿಗೆ ಒತ್ತಡ ಕಡಿಮೆಯಾಗಿದ್ದು, ಇರುವ ಹಾಸಿಗೆಗಳು ಹಾಗೂ ಸೋಂಕಿತರಿಗೆ ಸಮಸ್ಯೆ ಇಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಬೆಳಗಾವಿ ಜಿಲ್ಲೆಯ ಗೋಕಾಕದ ಅರವಳಿಕೆ ತಜ್ಞ ಡಾ.ಮಹಾಂತೇಶ ಶೆಟ್ಟಪ್ಪನವರ್ ಅವರು ಮಾತಾನಾಡಿ ಗ್ರಾಮೀಣ ಮಟ್ಟದಲ್ಲಿ ಹೋಮ್ ಐಸೋಲೇಷನ್ ಹೆಚ್ಚಿಸುವ ಅಗತ್ಯವಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ಡಾ ದೀಪಕ್ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಶೇಕಡಾ 32 ರಷ್ಟು ಇದ್ದು, ಶೀಘ್ರದಘ್ರಿದನ್ನು ಶೇಕಡ 10ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿನ ಸೋಂಕಿತರ ಪ್ರಮಾಣವನ್ನು ತಗ್ಗಿಸುವಲ್ಲಿ ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನ ಡಾ ತ್ರಿವೇಣಿ ಅವರು ಕಂಡುಬಂದರೂ ವೈದ್ಯರನ್ನು ಸಂಪರ್ಕಿಸಿದೆಯೇ ಸ್ವಯಂ ಚಿಕಿತ್ಸೆ ಪಡೆಯುವ ಪರಿಪಾಠ ಇದೆ. ಇದು ಬದಲಾಗಬೇಕಿದೆ. ಸೋಂಕಿತರು ವೈದ್ಯರ ಸಲಹೆ ಮೇರೆಗೆ ಹೋಮ್ ಐಸೋಲೇಷನ್ ಆಗುವುದು ಒಳ್ಳೆಯದು. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗುರಿಯ ಶೇಕಡಾ 68 ಲಸಿಕೆ ಹಾಕಿರುವುದಾಗಿ ತಿಳಿಸಿದರು. ತಮಗೆ ಹಾಗೂ ತಮ್ಮ ಮಗಳಿಗೆ ಸೋಂಕು ತಗುಲಿ ಇತ್ತೀಚಿಗೆ ಗುಣಮುಖರಾಗಿದ್ದನ್ನು ಮುಖ್ಯಮಂತ್ರಿಗಳು ವಿಚಾರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾ ಆಸ್ಪತ್ರೆಯ ಡಾ ಭಾನುಪ್ರಕಾಶ್ ಅವರು ಜಿಲ್ಲೆಯಲ್ಲಿ ಸೋಂಕು ಹೆಚ್ಚಲು ಹೋಮ್ ಐಸೊಲೇಷನ್ ಸರಿಯಾಗಿ ನಡೆಯುತ್ತಿಲ್ಲ. ಮೊದಲನೆಯ ಅಲೆಗಿಂತ ಎರಡನೇ ಅಲೆ ಹಿರಿಯರು ಮಾತ್ರವಲ್ಲ, ಮಧ್ಯ ವಯಸ್ಕರು ಹಾಗೂ ಕಿರಿಯರೂ ಹೆಚ್ಚು ಬಾಧಿತರಾಗುತ್ತಿದ್ದಾರೆ. ತುಮಕೂರು ಜಿಲ್ಲೆ ಬೆಂಗಳೂರಿನ ಪ್ರತಿಬಿಂಬದಂತೆ ಇರುವ ಕಾರಣಕ್ಕೆ ಇಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣ ಎಂದು ತಿಳಿಸಿದರು.
ಕಲಬುರಗಿಯ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆಯ ಡಾ ಧನರಾಜ್ ಅವರು ಕೊರೋನಾ ತೀವ್ರತೆ ಸರಿದೂಗಿಸುವಲ್ಲಿ ಎಲ್ಲಾ ಕ್ರಮಗಳನ್ನು ವಹಿಸಿದೆ. ಆಕ್ಸಿಜೆನ್ ಸೇರಿದಂತೆ ಅಗತ್ಯವಿರುವ ರೆಮಿಡಿಸಿವಿಯರ್ ಸಮಸ್ಯೆಯನ್ನು ಸರಿದೂಗಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ವೈದ್ಯ ಡಾ ಗಣೇಶ್ ಭಟ್ ಅವರು ಮಾತನಾಡಿ ತೀರ್ಥಹಳ್ಳಿಯಂತ ತಾಲ್ಲೂಕು ಕೇಂದ್ರದಿಂದ ಅವಶ್ಯವಿರುವ ತೀವ್ರ ತೆರನಾದ ರೋಗಿಗಳಿಗೆ ಆಂಬುಲೆನ್ಸ್ ಕಾಯ್ದಿರಿಸಲಾಗಿದೆ. ಇದರಿಂದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲು ತೊಂದರೆಯಾಗಿಲ್ಲ, ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಸಮಸ್ಯೆಯಾದಾಗ ಬಹುತೇಕ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರವಾನಿಸುವುದು ದೊಡ್ಡ ಸಮಸ್ಯೆಯಾಗಿದ್ದು ಅದಕ್ಕಾಗಿ ಆಂಬುಲೆನ್ಸ್‍ಗಳನ್ನು ಮೀಸಲಿರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ ಕೆ. ವಿ. ತ್ರಿಲೋಕ ಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ ಎಸ್ ಹರ್ಷ ಅವರೂ ವೈದ್ಯರೊಂದಿಗಿನ ಮುಖ್ಯಮಂತ್ರಿಯವರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಭಾರತ್ ಬಯೋಟೆಕ್ ಮಾತ್ರವಲ್ಲದೆ ಇನ್ನೂ 4 ಕಡೆ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ
(Karnataka CM BS Yediyurappa thanked to Covid doctors in Virtual Conference)