
ಬೆಂಗಳೂರು, ಸೆಪ್ಟೆಂಬರ್ 10: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ. ಟ್ಯುಟೋರಿಯಲ್ಸ್, ಅಕಾಡೆಮಿ, ಸ್ಟಡಿ ಸೆಂಟರ್‌ಗಳ ಹೆಸರಿನಲ್ಲಿ ಹಲವು ಸಂಸ್ಥೆಗಳು ಯಾವುದೇ ನೋಂದಣಿ ಅಥವಾ ಸರ್ಕಾರದ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಶಾಲಾ ಸಮಯದಲ್ಲೇ ಕೋಚಿಂಗ್ ತರಗತಿಗಳನ್ನು ನಡೆಸುತ್ತಿರುವ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟವೇ ಆಕ್ಷೇಪ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಚಿಸಿರುವ ಶಿಕ್ಷಣ ಸುಧಾರಣಾ ಉಪಸಮಿತಿಗೆ ಖಾಸಗಿ ಶಾಲೆಗಳ ಒಕ್ಕೂಟ ಮನವಿ ಸಲ್ಲಿಸಿದ್ದು, ರಾಜ್ಯದಲ್ಲಿರುವ ಎಲ್ಲ ಕೋಚಿಂಗ್ ಸೆಂಟರ್‌ಗಳನ್ನು ಕಡ್ಡಾಯವಾಗಿ ನೋಂದಣಿ ಮಾಡುವಂತೆ ಒತ್ತಾಯಿಸಿದೆ.
ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಟ್ಯುಟೋರಿಯಲ್ಸ್, ಅಕಾಡೆಮಿ ಹಾಗೂ ಸ್ಟಡಿ ಸೆಂಟರ್‌ಗಳ ಹೆಸರಿನಲ್ಲಿ ಕೋಚಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕೆಲವು ಸಂಸ್ಥೆಗಳು ಯಾವುದೇ ನೋಂದಣಿ ಅಥವಾ ಸರ್ಕಾರದ ಅನುಮತಿ ಪಡೆಯದೇ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿವೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಆರೋಪಿಸಿದೆ.
1ರಿಂದ 12ನೇ ತರಗತಿ ವಿದ್ಯಾರ್ಥಿಗಳು, ಸಿಇಟಿ, ನೀಟ್ ಹಾಗೂ ಜೆಇಇ ಪರೀಕ್ಷೆಗಳ ಆಕಾಂಕ್ಷಿಗಳಿಗೆ ತರಬೇತಿ ನೀಡುವ ಹೆಸರಿನಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಒಕ್ಕೂಟ ಹೇಳಿದೆ.
ಬೆಳಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಶಾಲಾ ಸಮಯದಲ್ಲೇ ಕೆಲವು ಕೋಚಿಂಗ್ ಸೆಂಟರ್‌ಗಳಲ್ಲಿ ತರಗತಿಗಳು ನಡೆಯುತ್ತಿವೆ ಎಂದು ಒಕ್ಕೂಟ ದೂರಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.
ಶಾಲಾ ಸಮಯದಲ್ಲಿ ಕೋಚಿಂಗ್ ತರಗತಿಗಳನ್ನು ನಡೆಸುವುದಕ್ಕೆ ಅವಕಾಶ ನೀಡಬಾರದು. ಸಂಜೆ ಅಥವಾ ರಜಾ ದಿನಗಳಲ್ಲಿ ಮಾತ್ರ ಕೋಚಿಂಗ್ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 2(39) ಹಾಗೂ 35ರ ಅನ್ವಯ ರಾಜ್ಯದಲ್ಲಿರುವ ಎಲ್ಲ ಕೋಚಿಂಗ್ ಸೆಂಟರ್‌ಗಳಿಗೂ ನೋಂದಣಿ ಕಡ್ಡಾಯಗೊಳಿಸಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಟ್ಯುಟೋರಿಯಲ್ಸ್, ಅಕಾಡೆಮಿಗಳು ಹಾಗೂ ಕೋಚಿಂಗ್ ಸೆಂಟರ್‌ಗಳಿಗೆ ನಿಗದಿತ ಕಾಲಮಿತಿಯಲ್ಲಿ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸದ ಸಂಸ್ಥೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನೋಂದಾಯಿತ ಕೋಚಿಂಗ್ ಸಂಸ್ಥೆಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕ ಪೋರ್ಟಲ್‌ನಲ್ಲಿ ಪ್ರಕಟಿಸಬೇಕು. ಇದರಿಂದ ಪೋಷಕರು ಅಧಿಕೃತ ಹಾಗೂ ಅನಧಿಕೃತ ಸಂಸ್ಥೆಗಳನ್ನು ಗುರುತಿಸಲು ಸಾಧ್ಯವಾಗಲಿದೆ ಎಂದು ಒಕ್ಕೂಟ ಹೇಳಿದೆ.
ಕೇವಲ ನೋಂದಣಿ ಮಾತ್ರವಲ್ಲದೆ, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶುಲ್ಕ ವಸೂಲಿಯಲ್ಲಿ ಪಾರದರ್ಶಕತೆ ಕಾಪಾಡಲು ನಿರ್ದಿಷ್ಟ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ ಒತ್ತಾಯಿಸಿದೆ. ಕೋಚಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುವ ಕಟ್ಟಡಗಳ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸುರಕ್ಷತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಒಂದು ತರಗತಿಯಲ್ಲಿ ಗರಿಷ್ಠ ಎಷ್ಟು ವಿದ್ಯಾರ್ಥಿಗಳನ್ನು ಇರಿಸಬೇಕು ಎಂಬುದಕ್ಕೂ ಮಿತಿ ನಿಗದಿಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಕೋಚಿಂಗ್ ಸೆಂಟರ್‌ಗಳಲ್ಲಿ ಬೋಧಿಸುವ ಶಿಕ್ಷಕರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ. ವಿದ್ಯಾರ್ಥಿಗಳಿಂದ ಪಡೆಯುವ ಪ್ರತಿಯೊಂದು ಶುಲ್ಕಕ್ಕೂ ಕಡ್ಡಾಯವಾಗಿ ರಸೀದಿ ನೀಡಬೇಕು. ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಗಳನ್ನು ರೂಪಿಸಬೇಕು ಎಂದು ಮನವಿ ಮಾಡಲಾಗಿದೆ. ಇದರ ಜತೆಗೆ, ‘ಶೇ 100 ಫಲಿತಾಂಶ’ ಸೇರಿದಂತೆ ಸುಳ್ಳು ಭರವಸೆ ನೀಡುವ ಜಾಹೀರಾತುಗಳಿಗೂ ಕಡಿವಾಣ ಹಾಕಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಖಾಸಗಿ ಶಾಲೆಗಳಿಗೆ ಹಲವು ನಿಯಮಗಳನ್ನು ವಿಧಿಸುತ್ತಿರುವ ಸರ್ಕಾರ, ಕೋಚಿಂಗ್ ಸೆಂಟರ್‌ಗಳ ವಿಚಾರದಲ್ಲಿ ಸೂಕ್ತ ನಿಯಂತ್ರಣ ಹೊಂದಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ನೋಂದಣಿ, ವಿದ್ಯಾರ್ಥಿಗಳ ಸುರಕ್ಷತೆ, ಶಿಕ್ಷಕರ ಅರ್ಹತೆ, ಶುಲ್ಕ ಪಾರದರ್ಶಕತೆ ಹಾಗೂ ಜಾಹೀರಾತು ನಿಯಂತ್ರಣ ಸೇರಿದಂತೆ ಒಕ್ಕೂಟ ಮುಂದಿಟ್ಟಿರುವ ಬೇಡಿಕೆಗಳನ್ನು ಶಿಕ್ಷಣ ಸುಧಾರಣಾ ಉಪಸಮಿತಿ ಪರಿಶೀಲಿಸುವುದಾಗಿ ಉಪಸಮಿತಿ ಅಧ್ಯಕ್ಷ ಹಾಗೂ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ. ಶಿಕ್ಷಣ ಸುಧಾರಣಾ ಉಪಸಮಿತಿ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ