ಅಕ್ಕಿ ಖರೀದಿ ಸಂಕಷ್ಟ; ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮುಂದಿರುವ ಸಾಧ್ಯತೆಗಳೇನು?
ಸದ್ಯದ ಪರಿಸ್ಥಿತಿಯಲ್ಲಿ ಒಂದೇ ಏಜೆನ್ಸಿ ಅಥವಾ ಸಂಸ್ಥೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸುವುದು ಅಸಾಧ್ಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ಮೂರು ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಅಕ್ಕಿ ಖರೀದಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರು: ಕರ್ನಾಟಕದ ನೂತನ ಕಾಂಗ್ರೆಸ್ ಸರ್ಕಾರಕ್ಕೆ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ಉಚಿತ ಅಕ್ಕಿ ನೀಡುವುದು ಸವಾಲಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರವು ಈಗಾಗಲೇ 5 ಕೆಜಿ ಅಕ್ಕಿ ನೀಡುತ್ತಿದ್ದರೆ, ಅದಕ್ಕೆ 5 ಕೆಜಿ ಸೇರಿಸಿ 10 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ದಾರ ಕುಟುಂಬದವರಿಗೆ ರಾಜ್ಯ ಸರ್ಕಾರ ನೀಡಬೇಕಿದೆ. ಹೆಚ್ಚುವರಿ 5 ಕೆಜಿ ಅಕ್ಕಿಯ ಖರೀದಿಗೆ ರಾಜ್ಯ ಸರ್ಕಾರವು ಈಗಾಗಲೇ ಭಾರತೀಯ ಆಹಾರ ನಿಗಮದ (FCI) ಮೊರೆ ಹೋಗಿದ್ದು, ಅಲ್ಲಿ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹೀಗಾಗಿ ಯೋಜನೆಯ ಜಾರಿ ವಿಳಂಬವಾಗಲಿದೆ ಎಂದು ಸರ್ಕಾರ ತಿಳಿಸಿದೆ. ಜತೆಗೆ ಅಕ್ಕಿ ಖರೀದಿ ಸರ್ಕಾರಕ್ಕೆ ತಲೆನೋವಾಗಿಯೂ ಪರಿಣಮಿಸಿದೆ.
ಇದೀಗ ರಾಜ್ಯ ಸರ್ಕಾರ ಎಫ್ಸಿಐ ಹೊರತುಪಡಿಸಿ ಬೇರೆ ಸಂಸ್ಥೆಗಳಿಂದ ಅಕ್ಕಿ ಖರೀದಿಗೆ ಮುಂದಾಗಿದೆ. ನ್ಯಾಷನಲ್ ಕೋ-ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಷನ್ (NCCF), ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (ನಾಫೆಡ್), ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಮೂರು ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಸೇರಿದ್ದಾಗಿದ್ದು, ಇವುಗಳಲ್ಲಿ ಯಾವುದರಿಂದಲಾದರೂ ಅಕ್ಕಿ ಪಡೆಯಲು ರಾಜ್ಯಕ್ಕೆ ಅವಕಾಶವಿದೆ.
ಈಗಾಗಲೇ ಈ ಮೂರು ಸಂಸ್ಥೆಗಳಿಂದ ರಾಜ್ಯ ಸರಕಾರ ಕೊಟೇಷನ್ ಕೇಳಿದ್ದು, ಗುರುವಾರ ರಾತ್ರಿ ವೇಳೆ ಮೂರು ಸಂಸ್ಥೆಗಳ ದರಪಟ್ಟಿ ಕೈ ಸೇರುವ ಸಾಧ್ಯತೆ ಇದೆ.
ಈ ಮಧ್ಯೆ, 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯವಿರುವ ಬಗ್ಗೆ ಛತ್ತೀಸ್ಗಢ ಈಗಾಗಲೇ ಮಾಹಿತಿ ನೀಡಿದೆ. ಆಂಧ್ರಪ್ರದೇಶದಲ್ಲೂ ಅಕ್ಕಿ ಲಭ್ಯತೆ ಇದೆ, ಆದರೆ ನಿಗದಿತ ಪ್ರಮಾಣದಲ್ಲಿ ಪೂರೈಕೆ ಸಾಧ್ಯವಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದೆ. ಇದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ: ವಿದ್ಯುತ್ ಆಯ್ತು, ಇನ್ನು ದುಬಾರಿಯಾಗಲಿದೆ ಅಕ್ಕಿ; ಬೆಲೆ ಹೆಚ್ಚಳಕ್ಕೆ ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ
ಕನಿಷ್ಠ ಬೆಂಬಲ ಬೆಲೆ ನೀಡಿ ರಾಜ್ಯದ ಬೆಳೆಗಾರರಿಂದಲೇ ಖರೀದಿಸುವ ಅವಕಾಶವೂ ಸರ್ಕಾರದ ಮುಂದಿದೆ. ಸರ್ಕಾರಕ್ಕೆ 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಒಂದೇ ಕಡೆಯಿಂದ ಇಷ್ಟು ಅಕ್ಕಿ ಲಭ್ಯವಾಗುವುದಿಲ್ಲ. ಹಾಗೆಂದು ಪ್ರತ್ಯೇಕ ಕಡೆಗಳಿಂದ ಅಕ್ಕಿ ಖರೀದಿ ಮಾಡಿದರೆ ಸಾಗಾಣಿಕ ವೆಚ್ಚದಲ್ಲಿ ಭಾರೀ ವ್ಯತ್ಯಾಸವಾಗಲಿದೆ. ಈ ಕಾರಣಕ್ಕೆ ಒಂದೇ ರಾಜ್ಯ ಅಥವಾ ಒಂದೇ ಸಂಸ್ಥೆಯಿಂದ ಅಕ್ಕಿ ಪಡೆಯಲು ಕಸರತ್ತು ನಡೆಸಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಒಂದೇ ಏಜೆನ್ಸಿ ಅಥವಾ ಸಂಸ್ಥೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸುವುದು ಅಸಾಧ್ಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ಮೂರು ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಅಕ್ಕಿ ಖರೀದಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ