ಬೆಂಗಳೂರು, (ಸೆಪ್ಟೆಂಬರ್ 09): ಮೇಲ್ನೋಟಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಯಾವ ಅಬ್ಬರವೂ ಇಲ್ಲ, ಗೊಂದಲದ ವಾತಾವರಣವೂ ಇಲ್ಲ. ಸಿದ್ದರಾಮಯ್ಯ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದರೆ ತಾವೆಲ್ಲ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ತಮ್ಮ ಸಾಲಿಡಾರಿಟಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಡೆಯುತ್ತಿರುವ ವಿದ್ಯಮಾನ, ದೆಹಲಿಯ ದಂಡಯಾತ್ರೆಗಳು, ನಾಯಕರ ಪ್ರತ್ಯೇಕ ಸಭೆಗಳು, ಒನ್ ಟು ಒನ್ ಲಂಚ್- ಬ್ರೇಕ್ ಫಾಸ್ಟ್ ಮೀಟಿಂಗ್ ಗಳು ಬೇರೆಯದೇ ಕಥೆ ಹೇಳುತ್ತಿವೆ. ಇವೆಲ್ಲವುಗಳಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೊರೆ ಹೋಗಿದ್ದಾರೆ. ಹೌದು…ಸಿಎಂ ಕುರ್ಚಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿ ಎಂದು ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಂಜುನಾಥ್ ಭಂಡಾರಿ ಅವರು ಎಐಸಿಸಿ ಮಲ್ಲಿಕಾರ್ಜು ಖರ್ಗೆ ಅವರಿಗೆ ಪತ್ರ ಬರೆದಿದ್ದು, ಪಕ್ಷದ ನಿಯಮ ಉಲ್ಲಂಘಿಸಿ ಬಹಿರಂಗvಆಗಿಯೇ ಸಚಿವರು ಸಿಎಂ ಸ್ಥಾನದ ಆಕಾಂಕ್ಷೆ ಹೇಳಿಕೆ ನೀಡುತ್ತಿದ್ದಾರೆ. ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಅಷ್ಟೇ ಅಲ್ಲದೆ ಈ ಹೇಳಿಕೆಗಳಿಂದ ಸರ್ಕಾರ ಅಭದ್ರವಾಗುವ ಸಾಧ್ಯತೆ ಇದೆ. ಹಾಗಾಗಿ ಇಂತಹ ಚರ್ಚೆಗಳಿಗೆ ತಡೆಹಾಕುವ ಅವಶ್ಯಕತೆ ಇದೆ ಎಂದು ಖರ್ಗೆ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: 2028ಕ್ಕೆ ಸಿಎಂ ಆಗುವ ತಯಾರಿ ಇದೆ: ಡಿಕೆ ಶಿವಕುಮಾರ್ಗೆ ಶಾಕ್ ಕೊಟ್ಟ ಜಾರಕಿಹೊಳಿ
ಈ ಹೇಳಿಕೆಗಳಿಂದ ಸರ್ಕಾರ ಅಭದ್ರವಾಗುವ ಸಾಧ್ಯತೆ ಇದೆ. ಹಾಗಾಗಿ ಇಂಥ ಚರ್ಚೆಗಳಿಗೆ ತಡೆಹಾಕುವ ಅವಶ್ಯಕತೆ ಇದೆ. ತಮ್ಮ ಇಲಾಖೆಗೆ ನೀಡಿದ ಯೋಜನೆ ಜಾರಿಗೆ ಕ್ರಮವಹಿಸಲಿ. ಸಚಿವರು ರಾಜ್ಯದ ಜನರ ಸಮಸ್ಯೆಗಳನ್ನು ಆಲಿಸಬೇಕು. ಅದನ್ನು ಬಿಟ್ಟು ಸಿಎಂ ಆಕಾಂಕ್ಷಿ ಎಂದು ಹೇಳುವುದು ತಪ್ಪು. ಅಂಥವರ ವಿರುದ್ಧ ಪಕ್ಷ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆಗೆ ಒತ್ತಾಯಿಸಿದ್ದಾರೆ.
ಮುಡಾ ಕೇಸ್ ಫೈನಲ್ ಆಗಿಲ್ಲ. ಹೈಕೋರ್ಟ್‌ನಿಂದ ಆದೇಶ ಬಂದಿಲ್ಲ. ಕುರ್ಚಿ ಬದಲಾವಣೆ ಬಗ್ಗೆ ಹೈಕಮಾಂಡ್ ಸುಳಿವನ್ನೂ ಕೊಟ್ಟಿಲ್ಲ. ಹೀಗಿದ್ದರೂ ಕೂಸು ಹುಟ್ಟು ಮುನ್ನವೇ ಕುಲಾವಿ ಹೊಲಿಸಿದ್ರು ಎಂಬಂತೆ ಕಾಂಗ್ರೆಸ್ ಮನೆಯಲ್ಲಿ ಕೆಲ ನಾಯಕರು ಸಿಎಂ ಆಗೋದಕ್ಕೆ ಹೊಸ ಸೂಟು ರೆಡಿಮಾಡಿ ಬಿಟ್ಟಿದ್ದಾರೆ. ಸಿಎಂ ಕುರ್ಚಿಗೆ ನಾನು ನಾನು ಅಂತಾ ಟವೆಲ್ ಹಾಕ್ತಿದ್ದಾರೆ. ಅದಕ್ಕೆ ಅವರು ಬಳಸ್ತಿರೋ ಅಸ್ತ್ರವೇ ಸೀನಿಯರ್. ಸಚಿವರಾದ ಎಂಬಿ ಪಾಟೀಲ್, ಶಿವಾನಂದಾ ಪಾಟೀಲ್, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಸಿಎಂ ರೇಸ್ನಲ್ಲಿದ್ದಾರೆ. ಇದರ ಮಧ್ಯ ನಾನು ಸೀನಿಯರ್ ಎಂದು ಶಾಸಕ ಆರ್ವಿ ದೇಶಪಾಂಡೆ ಸಹ ಕೈಎತ್ತಿದ್ದಾರೆ.
ಕಾಂಗ್ರೆಸ್ನಲ್ಲಿನ ಈ ಸಿಎಂ ಕುರ್ಚಿ ಕಿತ್ತಾಟದಿಂದ ಬಿಜೆಪಿ ನಾಯಕರು ಲೇವಡಿ ಮಾಡಿಕೊಂಡು ಓಡಾಡುತ್ತಿದ್ದಾರೆ. ಆದ್ರೆ, ಇತ್ತ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಇದುವರೆಗೂ ಯಾವುದೇ ಸೂಚನೆ ನೀಡಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ