
ಬೆಂಗಳೂರು, ನವೆಂಬರ್ 28: ಕರ್ನಾಟಕ ಕಾಂಗ್ರೆಸ್ನಲ್ಲಿ (Congress) ತೀವ್ರಗೊಂಡಿರುವ ಅಧಿಕಾರ ಹಂಚಿಕೆ ಕಿತ್ತಾಟ ಸರ್ಕಾರದ ವರ್ಚಸ್ಸನ್ನೇ ಕುಗ್ಗಿಸುವ ಮಟ್ಟಕ್ಕೆ ಹೋಗಿರುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. 2024ರ ಆರಂಭದಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರಕಾರ ಹೊಂದಿದ್ದ ಜನಪ್ರಿಯತೆ ಈಗ ಏಕಾಏಕಿ ಕುಸಿತ ಕಂಡಿದೆ. ಆಡಳಿತದ ಬಗ್ಗೆ ಸಮಾಧಾನ ವ್ಯಕ್ತಪಡಿಸುವವರ ಸಂಖ್ಯೆ ಧಿಡೀರ್ ಹೆಚ್ಚಳವಾಗಿರುವುದು ಸಿ ವೋಟರ್ (CVoter Survey) ನಡೆಸಿರುವ ಸಮೀಕ್ಷೆಯಿಂದ ಬಹಿರಂಗವಾಗಿದೆ.
2024ರ ಜನವರಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ‘ತೃಪ್ತಿಕರವಾಗಿದೆ’ ಎಂದವರ ಪ್ರಮಾಣ ಶೇಕಡ 30.3 ರಷ್ಟಿತ್ತು. ಅದು ಈಗ (2025ರ ನವಂಬರ್ ಕೊನೆಯ ವಾರ) ಶೇಕಡ 26.9 ಕ್ಕೆ ಇಳಿಕೆಯಾಗಿದೆ. ಮತ್ತೊಂದೆಡೆ, ಸಿದ್ದರಾಮಯ್ಯ ಸರ್ಕಾರದ ಬಗ್ಗೆ ‘ಖಂಡಿತವಾಗಿಯೂ ತೃಪ್ತಿಕರವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದವರ ಪ್ರಮಾಣ ಹೆಚ್ಚಾಗಿದೆ. ಇದು 2024ರ ಜನವರಿ ಮೊದಲ ವಾರದಲ್ಲಿ 39ರಷ್ಟಿದ್ದರೆ, 2025ರ ನವೆಂಬರ್ ಕೊನೆಯ ವಾರದಲ್ಲಿ ಶೇಕಡ 42ಕ್ಕೆ ಏರಿಕೆಯಾಗಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಸಮೀಕ್ಷೆಗೆ ಹೆಚ್ಚಿನವರು ಬಿಜೆಪಿ ಅಥವಾ ಎನ್‌ಡಿಎ ಎಂದು ಉತ್ತರಿಸಿದ್ದಾರೆ. ಬಿಜೆಪಿ ಅಥವಾ ಎನ್‌ಡಿಎ ನಾಯಕರು ಮುಖ್ಯಮಂತ್ರಿ ಆಗಬೇಕೆಂದು ಶೇಕಡ 47.2 ರಷ್ಟು ಎಸ್ಸಿ ಸಮುದಾಯದವರು, ಶೇಕಡ 56.3 ರಷ್ಟು ಎಸ್‌ಟಿ ಸಮುದಾಯದವರು, ಶೇಕಡ 59.3 ಓಬಿಸಿ, ಶೇಕಡ 14.8ರಷ್ಟು ಮುಸ್ಲಿಮರು ಒಲವು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಿಚಾರಕ್ಕೆ ಬಂದರೆ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ 41.7 ರಷ್ಟು ಎಸ್ಸಿ ಸಮುದಾಯದವರು, ಶೇಕಡ 35.4 ರಷ್ಟು ಎಸ್‌ಟಿ ಸಮುದಾಯದವರು, ಶೇಕಡ 63.3 ಓಬಿಸಿ, ಶೇಕಡ 74.9ರಷ್ಟು ಮುಸ್ಲಿಮರು ಒಲವು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಇತರರಿಗೆ ಹೋಲಿಸಿದರೆ ಸಿದ್ದರಾಮಯ್ಯನವರೇ ಫೇವರಿಟ್ ಆಗಿದ್ದಾರೆ.
ಇದನ್ನೂ ಓದಿ: ಪಟ್ಟದ ಫೈಟ್ಗೆ ಹೊಸ ಟ್ವಿಸ್ಟ್: ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ ಅಹಿಂದ ನಾಯಕರು
ಮತ್ತೊಂದೆಡೆ, ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಬಯಸಿದವರ ಪ್ರಮಾಣ ತುಂಬಾ ಕಡಿಮೆ ಇದೆ. 7.4 ರಷ್ಟು ಎಸ್ಸಿ ಸಮುದಾಯದವರು, ಶೇಕಡ 5.9 ರಷ್ಟು ಎಸ್‌ಟಿ ಸಮುದಾಯದವರು, ಶೇಕಡ 6.0 ಓಬಿಸಿ, ಶೇಕಡ 9.1ರಷ್ಟು ಮುಸ್ಲಿಮರು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಬಯಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಕಾಂಗ್ರೆಸ್ ನಾಯಕರ ಬಗ್ಗೆಯೂ ಜನ ಒಲವು ವ್ಯಕ್ತಪಡಿಸಿಲ್ಲ ಎಂಬುದು ಸಿ ವೋಟರ್ ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ.