
ಬೆಂಗಳೂರು, (ಅಕ್ಟೋಬರ್ 27): ಬೆಂಗಳೂರಿನ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದ ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಜ್ಯ ಪೊಲೀಸ್ ಸೈಬರ್ ಕಮಾಂಡ್ ಘಟಕವು ಇನ್ನೂ ಎರಡು ಅಂತಾರಾಜ್ಯ ಜಾಲಗಳನ್ನು ಬಯಲಿಗೆಳೆದಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ತನಿಖೆಯ ವೇಳೆ ದೊರೆತ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ತಮಿಳುನಾಡಿನ ತಿರುಚ್ಚಿ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇನ್ನೂ ಎರಡು ಸಿಮ್ ಫಾರ್ಮ್ ತಾಣಗಳನ್ನು ಪತ್ತೆ ಹಚ್ಚಿದೆ.
ವೈಟ್‌ಫೀಲ್ಡ್ ವಿಭಾಗದ ಪಟ್ಟಂದೂರು ಅಗ್ರಹಾರ ಹಾಗೂ ಕಾಡುಗೋಡಿ ಠಾಣೆಗಳ ವ್ಯಾಪ್ತಿಯಲ್ಲಿನ ಎರಡು ಅಪಾರ್ಟ್‌ಮೆಂಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ಜಾಲದ ಮೇಲೆ ದಾಳಿ ನಡೆಸಿದ್ದ ಸೈಬರ್ ಕಮ್ಯಾಂಡ್ ಘಟಕದ ಸಿಬ್ಬಂದಿ ಒಟ್ಟು 10 ಸಿಮ್ ಬಾಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದ್ದರು. ವಶಕ್ಕೆ ಪಡೆಯಲಾಗಿದ್ದ ಉಪಕರಣಗಳು, ದೂರಸಂಪರ್ಕ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳ ತಾಂತ್ರಿಕ ಆಧಾರದ ಮೇಲೆ ಕಾರ್ಯಾಚರಣೆ ಮಾಡಿದಾಗ ತಮಿಳುನಾಡಿನಲ್ಲೂ ಜಾಲ ಪತ್ತೆಯಾಗಿದೆ.
ದೂರಸಂಪರ್ಕ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 10 ಇ – ಸಿಮ್ ಸೌಲಭ್ಯ ಇರುವ ಸಿಮ್ ಬಾಕ್ಸ್ ಸಾಧನಗಳನ್ನ ವಶಕ್ಕೆ ಪಡೆಯಲಾಗಿದೆ . ದೇಶದ ಹಲವು ಭಾಗಗಳಿಗೆ ಜಾಲ ಹರಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಸೈಬರ್ ಕಮಾಂಡ್ ತಂಡ ತನಿಖೆ ಮುಂದುವರಿಸಿದೆ.
ಸಿಮ್ ಬಾಕ್ಸ್ ಎಂಬುದು ಬಹು ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಸಾಧನವಾಗಿದೆ. ವಿದೇಶಗಳಿಂದ ಬರುವ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಂತೆ ಬಿಂಬಿಸಿ ರೂಟ್ ಮಾಡಲು ವಂಚಕರು ಇದನ್ನು ಬಳಸುತ್ತಾರೆ. ತನಿಖೆಯ ಪ್ರಕಾರ, ಕಾಡುಗೋಡಿ ಹಾಗೂ ವೈಟ್‌ಫೀಲ್ಡ್‌ನಲ್ಲಿ ಈ ಜಾಲವನ್ನು ನಡೆಸಲಾಗುತ್ತಿತ್ತು. ಕಾಡುಗೋಡಿಯಲ್ಲಿ ತಲಾ 32 ಸಿಮ್ ಸ್ಲಾಟ್‌ಗಳಿರುವ 6 ಸಾಧನಗಳು (ಒಟ್ಟು 192 ಸಿಮ್ ಸ್ಲಾಟ್‌ಗಳು) ಹಾಗೂ ವಿವಿಧ ಸೇವಾ ಪೂರೈಕೆದಾರರ ಇ-ಸಿಮ್ ಸಂಪರ್ಕಗಳು ಪತ್ತೆಯಾಗಿವೆ. ಇನ್ನುಳಿದ ಸ್ಥಳದಲ್ಲಿ ಒಟ್ಟು 128 ಸಿಮ್ ಸ್ಲಾಟ್‌ಗಳಿರುವ 4 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
Published On - 8:43 pm, Tue, 27 October 26