ಶೈಕ್ಷಣಿಕ ವರ್ಷದ ಅವಧಿ ಮತ್ತೆ ಪರಿಷ್ಕಾರ; ಜೂನ್ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭ

ಜೂನ್ 15ರಿಂದ 8, 9, 10ನೇ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಪ್ರಾಥಮಿಕ ಶಾಲೆಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಾಥಮಿಕ ಶಾಲೆಗಳಿಗೆ ಜೂ.14ರವರೆಗೂ ಬೇಸಿಗೆ ರಜೆ ನೀಡಲಾಗಿದೆ.

ಶೈಕ್ಷಣಿಕ ವರ್ಷದ ಅವಧಿ ಮತ್ತೆ ಪರಿಷ್ಕಾರ; ಜೂನ್ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭ
ಸಂಗ್ರಹ ಚಿತ್ರ

Updated on: May 31, 2021 | 6:09 PM

ಬೆಂಗಳೂರು: ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷದ ದಿನಾಂಕಗಳನ್ನು ಶಿಕ್ಷಣ ಇಲಾಖೆ ಮತ್ತೆ ಪರಿಷ್ಕರಿಸಿದೆ. ಜೂನ್ 14ರವರೆಗೆ ಬೇಸಿಗೆ ರಜೆ ವಿಸ್ತರಿಸಲಾಗಿದೆ. ಜೂನ್ 15ರಿಂದ 8, 9, 10ನೇ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಪ್ರಾಥಮಿಕ ಶಾಲೆಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಾಥಮಿಕ ಶಾಲೆಗಳಿಗೆ ಜೂ.14ರವರೆಗೂ ಬೇಸಿಗೆ ರಜೆ ನೀಡಲಾಗಿದೆ.

ಆದರೆ ಮುಂದಿನ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆ ಹೇಗಿರಬೇಕು ಎಂದು ನಿರ್ಧರಿಸುವ ಸಮಿತಿಯನ್ನು ಸರ್ಕಾರ ಇನ್ನೂ ರೂಪಿಸಬೇಕಿದೆ. ಕಳೆದ ಮೇ 19ರಂದೇ ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್​ ಇಂಥದ್ದೊಂದು ಸಮಿತಿ ಆರಂಭಿಸುವ ಬಗ್ಗೆ ತಿಳಿಸಿದ್ದರು. ಆರೋಗ್ಯ ತಜ್ಞರು ಮತ್ತು ಶಿಕ್ಷಣ ತಜ್ಞರು ಇರುವ ಈ ಸಮಿತಿಯು ಮುಂದಿನ ಶೈಕ್ಷಣಿಕ ವರ್ಷದ ನೀಲ ನಕಾಶೆ ರೂಪಿಸಲಿದೆ ಎಂದಿದ್ದರು. ಸಚಿವರು ಹೇಳಿಕೆ ನೀಡಿ ಸುಮಾರು ಒಂದು ವಾರವಾದರೂ ಸಮಿತಿ ಇನ್ನೂ ರೂಪುಗೊಂಡಿಲ್ಲ.

‘ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇನ್ನೆರೆಡು ವಾರಗಳಲ್ಲಿ ಮುಂದಿನ ವರ್ಷದ ಕ್ಯಾಲೆಂಡರ್ ಅಂತಿಮಗೊಳ್ಳಲಿದೆ. ಈ ಸವಾಲು ಹೇಗೆ ಎದುರಿಸಬೇಕು ಎಂಬ ಬಗ್ಗೆ ಬಹಳ ಸ್ಪಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ಹೇಳಿದ್ದಾರೆ.

‘ಸರ್ಕಾರಿ ಶಾಲೆಯ ಶೇ 70ರಷ್ಟು ಮಕ್ಕಳಿಗೆ ಆನ್​ಲೈನ್ ಪಾಠಗಳನ್ನು ಕೇಳಲು ಸಾಧ್ಯವಾಗಿಲ್ಲ ಎಂಬ ಅರಿವು ನಮಗಿದೆ. ಕಾರ್ಪೊರೇಟ್​ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಗಳಿಂದ ಮಕ್ಕಳಿಗೆ ಟ್ಯಾಬ್ ಕೊಡಿಸುವ ಪ್ರಯತ್ನ ನಡೆದಿದೆ. ಪ್ರತಿ ಮಗುವಿಗೂ ಗಮನ ಕೊಡುವವರನ್ನು ಗುರುತಿಸಲು ಯೋಜನೆ ರೂಪಿಸುತ್ತೇವೆ. ಸಮಿತಿ ರೂಪುಗೊಂಡ ನಂತರ ನಮ್ಮ ಆಲೋಚನೆಗಳನ್ನು ಸಮಿತಿಯ ಸದಸ್ಯರೊಂದಿಗೆ ಹಂಚಿಕೊಳ್ಳುತ್ತೇವೆ’ ಎಂದು ಅನ್ಬುಕುಮಾರ್​ ತಿಳಿಸಿದ್ದಾರೆ.

(Karnataka Education Department Decides to Reopen School from June 15)

ಇದನ್ನೂ ಓದಿ: ಪ್ರೌಢಶಾಲೆಯನ್ನೇ ಕೊವಿಡ್ ಕೇರ್ ಸೆಂಟರ್ ಮಾಡಿದ ಆದಿಚುಂಚನಗಿರಿ ಮಠ; ಕೊರೊನಾ ನಿರ್ವಹಣೆಗೆ ಕಾಲೇಜಿನ ಬಸ್ ಬಳಕೆ

ಇದನ್ನೂ ಓದಿ: ಶಾಲೆಗಳಿಗೆ ಬಾಕಿ ಇರುವ ಆರ್​ಟಿಇ ಮೊತ್ತ ಪಾವತಿಸಿ; ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ