
ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Election 2023) ಮುಹೂರ್ತ ಫಿಕ್ಸ್ ಆಗಿದೆ. ಮೇ 10ರಂದು ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಸೆಣಸಾಡಲು ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಮತ್ತೊಂದೆಡೆ ಎಲೆಕ್ಷನ್ ಡೇಟ್ ಅನೌನ್ಸ್ ಹಿನ್ನೆಲೆ ನೀತಿ ಸಂಹಿತೆ ಜಾರಿ ಆಗಿದೆ. ಇದರಂತೆ ಜನನಾಯಕರಿಗೆ ಒಂದಿಷ್ಟು ರೂಲ್ಸ್ಗಳು ಜಾರಿ ಆಗಿವೆ. ಇದರೆಲ್ಲದರ ನಡುವೆಯೂ ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡಲಾಗುತ್ತಿದೆ. ಬನ್ನಿ ಇಂದಿನಿಂದ ರಾಜಕೀಯ ನಾಯಕರು ಚುನಾವಣೆಗೆ ಯಾವ ರೀತಿ ತಯಾರಿ ನಡೆಸುತ್ತಿದ್ದಾರೆ ಎಂಬ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
ತುಮಕೂರು: ಕಾಂಗ್ರೆಸ್ ಪಕ್ಷದಲ್ಲಿ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಗುಬ್ಬಿ ಕ್ಷೇತ್ರದ ಮಾಜಿ ಶಾಸಕ ಶ್ರೀನಿವಾಸ್ ಹೇಳಿದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಬಳಿಯೂ ಟಿಕೆಟ್ ಕೊಡಿ ಅಂತಾ ಕೇಳಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯರ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ. ಗುಬ್ಬಿಯಲ್ಲಿರುವ ಅಲ್ಪಸ್ವಲ್ಪ ವ್ಯತ್ಯಾಸ ಸರಿಪಡಿಸಿಕೊಂಡು ಹೋಗುತ್ತೇನೆ. ಪಕ್ಷ ಯಾರಿಗೆ ಗುಬ್ಬಿ ಕ್ಷೇತ್ರದ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ. ನನಗೆ ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿಯೂ ಸ್ಪರ್ಧೆ ಮಾಡುವುದಿಲ್ಲ. ಇಲ್ಲಿ ಯಾರು ಯಾರನ್ನು ಗೆಲ್ಲಿಸಲು ಆಗಲ್ಲ, ಸೋಲಿಸುವುದಕ್ಕೂ ಆಗಲ್ಲ ಎಂದು ಹೇಳಿದರು.
ಬೆಂಗಳೂರು: ಮಾನಸಿಕವಾಗಿ ಸಿದ್ಧವಾಗಿರುವ ಸಚಿವ ವಿ.ಸೋಮಣ್ಣ ಚಾಮರಾಜನಗರ ಜಿಲ್ಲೆಯಲ್ಲಿ ಸ್ಪರ್ಧಿಸಲು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ಸೂಚಿಸಿದ್ರೆ ಚಾಮರಾಜನಗರ ಜಿಲ್ಲೆಯಿಂದ ಸ್ಪರ್ಧಿಸಲಿದ್ದಾರೆ. ಖಚಿತಗೊಂಡ ಬಳಿಕವಷ್ಟೇ ಗೋವಿಂದರಾಜನಗರ ಅಭ್ಯರ್ಥಿ ಬಗ್ಗೆ ನಿರ್ಧಾರ ಮಾಡಲಾಗುವುದು. ಅಲ್ಲಿವರೆಗೂ ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಫೈನಲ್ ಇಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಕೆಲಸ ಮಾಡುವಂತೆ ಖುದ್ದು ಕೇಂದ್ರ ಸಚಿವ ಅಮಿತ್ ಶಾ ಸೂಚಿಸಿದ್ದಾರೆ. ಹೀಗಾಗಿ ಬೆಂಗಳೂರಿನಿಂದ ಚಾಮರಾಜನಗರ ಜಿಲ್ಲೆಗೆ ಸೋಮಣ್ಣ ಶಿಫ್ಟ್ ಸಾಧ್ಯತೆ ಇದೆ.
ಬೆಂಗಳೂರು: ಕಾಂಗ್ರೆಸ್ನಿಂದ ಆಹ್ವಾನ ಬಂದಿಲ್ಲ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸ್ಪಷ್ಟನೆ ನೀಡಿದರು. ನನಗೆ ಯಾರೂ ಫೋನ್ ಆಗಲಿ, ನೇರವಾಗಿ ಆಹ್ವಾನ ಕೊಟ್ಟಿಲ್ಲ. ನಾನು ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಬಾರಿಯೂ ಜನ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.
ಬೆಂಗಳೂರು: ಶ್ರೀನಿವಾಸಪುರ ಕ್ಷೇತ್ರದ ಮುಖಂಡ ಶ್ರೀನಿವಾಸ್ ರೆಡ್ಡಿ ಇಂದು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಚಿವರಾದ ಭೈರತಿ ಬಸವರಾಜ್, ಡಾ.ಅಶ್ವತ್ಥ್ ಸಮ್ಮುಖದಲ್ಲಿ ಸೇರ್ಪಡೆ ಆಗಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ 3 ದೂರು ಸಲ್ಲಿಸಿದ್ದೇನೆ. ವರುಣ ಕ್ಷೇತ್ರದಲ್ಲಿ ನಿನ್ನೆ ಸಿದ್ದರಾಮಯ್ಯ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ವಾಲಗ ಬಾರಿಸುವವರಿಗೆ ಸಿದ್ದರಾಮಯ್ಯ ಹಣ ನೀಡಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು MLC ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಮೈಸೂರು: ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ವರುಣ ನಿರ್ಮಾಣವಾಗುತ್ತಾ ಎಂಬ ಸಾಕಷ್ಟು ಅನುಮಾನಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ಸುಳಿವು ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಬಲಿಷ್ಠ ಅಭ್ಯರ್ಥಿ ಹೇಳಿಕೆ ಹಿಂದೆ ನಾನಾ ಅರ್ಥ ಕೇಳಿಬರುತ್ತಿವೆ. ವರುಣದಿಂದ ಸ್ಪರ್ಧಿಸಲು ಯಡಿಯೂರಪ್ಪ ಗ್ರೀನ್ ಸಿಗ್ನಲ್ ನೀಡಿದರಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಈಗಾಗಲೇ ಸಿದ್ದರಾಮಯ್ಯ ವರುಣ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ನಿಲ್ಲಿಸುವಂತೆ ಕ್ಷೇತ್ರದಲ್ಲಿ ಒತ್ತಡ ಉಂಟಾಗಿದೆ. ಕಳೆದ ಬಾರಿ ಚುನಾವಣೆಯಲ್ಲೂ ವಿಜಯೇಂದ್ರ ಸ್ಪರ್ಧೆಗೆ ತೀವ್ರ ಒತ್ತಡ ಹಾಕಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಿ.ವೈ.ವಿಜಯೇಂದ್ರಗೆ ವರುಣ ಟಿಕೆಟ್ ಕೈತಪ್ಪಿತ್ತು.
ಬೆಂಗಳೂರು: ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಬಿಜೆಪಿ, ಕಾಂಗ್ರೆಸ್ನವರು ಜೆಡಿಎಸ್ ವಿರುದ್ಧ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಜತೆ ಜೆಡಿಎಸ್ ಒಳಒಪ್ಪಂದವಾಗಿದೆ ಎಂದು ಸಿಎಂ ಹೇಳುತ್ತಾರೆ. ಜೆಡಿಎಸ್ ವಿರುದ್ಧ ಮೈಸೂರಿನಲ್ಲಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿಯವರು ನಿಮ್ಮ ದುಡಿಮೆ ಬಗ್ಗೆ ಮಾತ್ರ ಮಾತನಾಡಿ. ನಮ್ಮ ಪಕ್ಷದ ವಿರುದ್ಧ ಮಾತನಾಡಬೇಡಿ. ಹಣ ನೀಡಿ ತಮ್ಮ ಪರ ಸಮೀಕ್ಷೆ ಮಾಡಿಸಿಕೊಂಡು ಯಾವುದೋ ಒಂದು ಕಂಪನಿ ಹೆಸರಿನಲ್ಲಿ ನಿನ್ನೆ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ತರಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ಮಾಜಿ ಸಚಿವ ರೋಷನ್ ಬೇಗ್ ಆಗಮಿಸಿದ್ದಾರೆ. ರೇಸ್ಕೋರ್ಸ್ ನಿವಾಸಕ್ಕೆ ಆಗಮಿಸಿದ್ದು, ಸಿಎಂ ಇಲ್ಲದ ಹಿನ್ನೆಲೆ ವಾಪಸ್ ಹೋಗಿದ್ದಾರೆ. ಗೇಟ್ ಬಳಿ ಪೊಲೀಸರಿಂದ ಮಾಹಿತಿ ಪಡೆದು ವಾಪಸ್ ಆಗಿದ್ದಾರೆ. ಪುತ್ರ ರುಮನ್ ಬೇಗ್ಗೆ ಟಿಕೆಟ್ ಕೊಡಿಸಲು ರೋಷನ್ ಕಸರತ್ತು ನಡೆಸುತ್ತಿದ್ದಾರೆ.
ಬೆಂಗಳೂರು: ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ನಾಯಕರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ರಾಜು ನಾಯಕ ಸೇರಿ ಹಲವು ನಾಯಕರು ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಸೇರ್ಪಡೆ ಆಗಿದ್ದಾರೆ.
ಸತ್ಯರತ್ನಂ ನಿರ್ದೇಶನದಲ್ಲಿ ಸಿದ್ದರಾಮಯ್ಯ ಜೀವನ ಆಧಾರಿತ ಸಿನಿಮಾ ಬಿಡುಗಡೆಗೆ ತಯಾರಿ ನಡೆದಿದೆ. ಲೀಡರ್ ರಾಮಯ್ಯ ಹೆಸರಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಜೆಡಿಎಸ್ ಮಾಜಿ ಶಾಸಕ ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಮಾನಸಿಕವಾಗಿ ನನಗೆ ಬಿಜೆಪಿ ಒಗ್ಗಲ್ಲ, ಹಾಗಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಬಿಜೆಪಿಯವರು ಕೋಮುಗಲಭೆ ಸೃಷ್ಟಿಸಿ ಅಧಿಕಾರ ಪಡೆಯುತ್ತಾರೆ ಎಂದು ತುಮಕೂರಿನಲ್ಲಿ ಗುಬ್ಬಿ ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ. ಲೋಕಸಭೆ ಟಿಕೆಟ್ ತಪ್ಪಲು ಡಿಕೆಶಿ ಕಾರಣ ಎಂಬ ಹೇಳಿಕೆ ವಿಚಾರಕ್ಕೆ, ಮಾಜಿ ಸಂಸದ ಮುದ್ದಹನುಮೇಗೌಡ ಹೇಳಿಕೆಗೆ ಶ್ರೀನಿವಾಸ್ ಟಾಂಗ್ ಕೊಟ್ಟಿದ್ದಾರೆ. ಯಾರು ಯಾರಿಗೂ ಮೋಸ ಮಾಡುವುದಕ್ಕೆ ಆಗಲ್ಲ. ಆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದರು. ಆಗಿನ ಪರಿಸ್ಥಿತಿಯಲ್ಲಿ ದೇವೇಗೌಡರಿಗೆ ಟಿಕೆಟ್ ತಪ್ಪಿಸಲು ಯಾರಿದ್ರು? ಪಕ್ಷ ಬಿಟ್ಟ ಮೇಲೆ ಇವರ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ತುಮಕೂರಿನಲ್ಲಿ ಗುಬ್ಬಿ ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಸಿದ್ದರಾಮಯ್ಯ ಗೆಲುವು ಸುಲಭವಿದೆ ಎಂದು ನನಗೆ ಅನಿಸುತ್ತಿಲ್ಲ. ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಹಾಕುತ್ತೇವೆ. ಟಿಕೆಟ್ ಬಗ್ಗೆ ತೀರ್ಮಾನ ಮಾಡೋದು ನಾನಲ್ಲ, ವರಿಷ್ಠರು. ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರ್ತೇವೆ ಅಂತಾ ಕನಸು ಕಾಣ್ತಿದ್ದಾರೆ ಎಂದರು.
ಸ್ವರೂಪ್ ಯಾರು ಅಂತಾ ಗೊತ್ತಿಲ್ಲವೆಂದು ರೇವಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ರೇವಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಹೆಚ್.ಡಿ.ರೇವಣ್ಣ ತಮಾಷೆಗೂ ಹೇಳಿರಬಹುದು ಎಂದ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. ದೇವೇಗೌಡರ ಮಕ್ಕಳಲ್ಲಿ ಜಗಳ, ಭಿನ್ನಾಭಿಪ್ರಾಯ ಗೋಚರ ಆಗಲ್ಲ. ಅವರಲ್ಲಿ ಜಗಳವಾಗುತ್ತಿದೆ ಅಂತಾ ನೀವು ನಂಬಿದ್ರೆ ಸುಳ್ಳಾಗ್ತೀರಾ. 4-5 ದಿನಗಳಲ್ಲಿ JDS ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಆಗುತ್ತೆ. ಹಾಸನ ಕ್ಷೇತ್ರದ ಟಿಕೆಟ್ ಕೂಡ ಘೋಷಣೆ ಆಗುತ್ತೆ. ಹಾಸನ ಟಿಕೆಟ್ ವಿಚಾರದಲ್ಲಿ ನಮಗೆ ಯಾವುದೇ ಗೊಂದಲ ಇಲ್ಲ ಎಂದರು.
ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡ್ತಿದೆ. ಕಾಂಗ್ರೆಸ್ ಆರೋಪಗಳನ್ನು ರಾಜ್ಯದ ಜನ ನಂಬುವುದಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ತಿರುಕನ ಕನಸು ಕಂಡಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ, ಡಿಕೆಶಿ ಮತ್ತೆ ವಿಪಕ್ಷ ಸ್ಥಾನದಲ್ಲೇ ಇರುತ್ತಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿದಷ್ಟೇ ಬೆಂಬಲ ಈಗಲೂ ಸಿಗಲಿದೆ. ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಸಮನಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆಗಾಗಿ ಹಗಲುಗನಸು ಕಾಣುತ್ತಿದ್ದಾರೆ. ಅದು ಕೇವಲ ತಿರುಕನ ಕನಸಾಗಲಿದೆ. ಕಾಂಗ್ರೆಸ್ ಪಕ್ಷ 70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಮೋದಿ, ಅಮಿತ್ ಶಾ ಇನ್ನೂ 3-4 ಬಾರಿ ರಾಜ್ಯಕ್ಕೆ ಬರಲಿದ್ದಾರೆ ಎಂದ ಬಿ.ಎಸ್.ಯಡಿಯೂರಪ್ಪ.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಾಯಕ ಇಲ್ಲ. ಪ್ರಧಾನಮಂತ್ರಿ ಮೋದಿ, ಅಮಿತ್ ಶಾ ಅವರಿಗೆ ಜನಬೆಂಬಲ ಸಿಗುತ್ತಿದೆ. ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆ ವೇಳೆ 2 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಬಿಜೆಪಿಯ ಜನಬೆಂಬಲ ನೋಡಿ ಕಾಂಗ್ರೆಸ್ನವರು ದಿಗ್ಭ್ರಾಂತರಾಗಿದ್ದಾರೆ. ಸಿಎಂ ಬೊಮ್ಮಾಯಿ ಎಲ್ಲಾ ವರ್ಗದವರಿಗೂ ನ್ಯಾಯ ಒದಗಿಸಿದ್ದಾರೆ. ರಾಜ್ಯದ ಜನರಿಗಾಗಿ ನಾನು ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದೇನೆ. ಎರಡು-ಮೂರು ದಿನಗಳಲ್ಲಿ ರಾಜ್ಯದಲ್ಲಿ ಪ್ರವಾಸ ಆರಂಭವಾಗುತ್ತೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ನಡೆಸುವೆ. ರಾಜ್ಯದಲ್ಲಿ 130 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಬಿಎಸ್ವೈ ತಿಳಿಸಿದರು.
ನಮ್ಮ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರು ಚುನಾವಣೆ ಮುಗಿಯುವವರೆಗೂ ಅವರವರ ಜಿಲ್ಲೆಗಳಲ್ಲಿ ಇದ್ದು ಕೆಲಸ ಮಾಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಅಮಿತ್ ಷಾ ನೇತೃತ್ವದಲ್ಲಿ ಎಲ್ಲಾ ಸಂಸದರ ಸಭೆ ಕರೆಯಲಾಗುತ್ತದೆ. ಸಿಎಂ ಮೀಸಲಾತಿ ಹೆಚ್ಚಳ ಮಾಡಿರುವುದು ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸವಾಗಿದೆ. ನಾನು ಜನರಿಗಾಗಿ ಹಲವು ಕಾರ್ಯಕ್ರಮ ಮಾಡಿದ್ದೇವೆ. ಸದ್ಯದಲ್ಲೇ ಅಭ್ಯರ್ಥಿಗಳನ್ನು ಹೈಕಮಾಂಡ್ ತೀರ್ಮಾನ ಮಾಡಲಿದ್ದಾರೆ. ನಂತರ ನಾನು, ಎಲ್ಲಾ ಮುಖಂಡರು, ಸಂಸದರು ಪ್ರವಾಸ ಮಾಡುತ್ತೇವೆ. ಹಿಂದೆ ನಾನು 25 ಸಂಸದರು ಗೆಲ್ಲುತ್ತೇವೆ ಎಂದು ಹೇಳಿದ್ದು ಸುಳ್ಳಾಗಲಿಲ್ಲ. ಶೀಘ್ರದಲ್ಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ರಚಿಸುತ್ತೇವೆ. ರಾಜ್ಯದಲ್ಲಿ ನಾಲ್ಕು ತಂಡಗಳಾಗಿ ವಿಜಯ ಸಂಕಲ್ಪ ಯಾತ್ರೆ ಮಾಡಿದ್ದೇವೆ. ವಿಜಯ ಸಂಕಲ್ಪ ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸೇರಿದ 8.50 ಲಕ್ಷ ರೂ. ಮೌಲ್ಯದ 612 ಕುಕ್ಕರ್ ವಶಕ್ಕೆ ಪಡೆಯಲಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಭಾವಚಿತ್ರ ಇರುವ ಬಾಕ್ಸ್ಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಚಿವರಾದ ಡಾ.ಸುಧಾಕರ್, ಆನಂದ್ ಸಿಂಗ್, ಶಾಸಕ ಯತ್ನಾಳ್ ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಬಿಜೆಪಿ ಶಾಸಕ ಕುಮಾರಸ್ವಾಮಿಯಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ನೂರಾರು ಮಹಿಳೆಯನ್ನ ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಚೆಕ್ ವಿತರಣೆ ಮಾಡಿದ್ದಾರೆ. ಮಹಿಳಾ ಸಂಘಟನೆಗಳಿಗೆ ಸರ್ಕಾರಿ ಅನುದಾನದ ಚೆಕ್ ವಿತರಣೆ ಮಾಡಿದ್ದಾರೆ. ಸ್ಥಳಕ್ಕೆ ಮೂಡಿಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರ್ಧಕ್ಕೆ ಕಾರ್ಯಕ್ರಮ ನಿಲ್ಲಿಸಿದರು.
ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಬಣ ಬಡಿದಾಟ ಮುಂದುವರೆದಿದೆ. ಹೈಕಮಾಂಡ್ ನಾಯಕರಿಗೆ ಬಿಜೆಪಿ ನಾಯಕರ ಕಿತ್ತಾಟ ಸವಾಲಾಗಿದೆ. ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ಟೀಂ ಇನ್ನೂ ಒಗ್ಗೂಡಿಲ್ಲ. ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಸ್ವಪಕ್ಷದವರನ್ನೇ ಸೋಲಿಸುವ ಲೆಕ್ಕಾಚಾರ ನಡೆಯುತ್ತಿದೆ. ಜಾರಕಿಹೊಳಿ ಬ್ರದರ್ಸ್ ಸೋಲಿಸಲು ಸ್ವಪಕ್ಷೀಯರಿಂದಲೇ ರಣತಂತ್ರ ಹೆಣೆಯಲಾಗುತ್ತಿದೆ.
ಶಾಮನೂರು ಶಿವಶಂಕರಪ್ಪ ನೀಡಿದ ಸೀರೆಗಳಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಮಹಿಳೆಯರು ಬೆಂಕಿ ಇಟ್ಟಿದ್ದಾರೆ. ನಿಮ್ಮ 60 ರೂಪಾಯಿ ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ ಭಾವಚಿತ್ರ ವಿರುವ ಬ್ಯಾಗ್ ನಲ್ಲಿ ಸೀರೆಗಳ ಹಂಚಿಕೆ ಮಾಡಲಾಗಿತ್ತು.
ಕೆಆರ್ಪಿಪಿಗೆ ಪುಟ್ಬಾಲ್ ಚಿಹ್ನೆ ಘೋಷಣೆ ಹಿನ್ನಲೆ ಅಭಿಮಾನಿಗಳು ಕೈ ಮೇಲೆ ಚಿಹ್ನೆಯ ಹಚ್ಚೆ ಹಾಕಿಸಿಕೊಂಡಿದ್ದಾರೆ. ಗಂಗಾವತಿಯ ಸಾಯಿನಗರದ ಯುವಕರು, ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಅಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೆ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ರಾಜು ನಾಯಕ್ ಬಂಡಾಯ ಎದ್ದಿದ್ದಾರೆ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಲು ರಾಜು ನಾಯಕ್ ಮುಂದಾಗಿದ್ದಾರೆ. ಇಂದು ಹೆಚ್ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಸೆರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಜೆ. ಎನ್ ಗಣೇಶ್ ಗೆ ಕೈ ಟಿಕೇಟ್ ನೀಡಲಾಗಿದೆ. ಜೆ.ಎನ್ ಗಣೇಶ್, ರಾಜು ನಾಯಕ್, ನಾರಾಯಣಪ್ಪ ಸೇರಿ ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಮೂವರು ಆಕಾಂಕ್ಷಿಗಳಿದ್ದರು.
ಹು-ಧಾ ಸೆಂಟ್ರಲ್ ಕ್ಷೇತ್ರದ ‘ಕೈ’ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಹುಬ್ಬಳ್ಳಿಯಲ್ಲಿ ಆಟೋ ಚಾಲಕರಿಗೆ ಸನ್ಮಾನ ಮಾಡಿ ಫ್ಯಾನ್ ವಿತರಣೆ ಮಾಡಿದ್ದಾರೆ. ತಮ್ಮ ಕಚೇರಿಯಲ್ಲಿ 50ಕ್ಕೂ ಹೆಚ್ಚು ಆಟೋ ಡ್ರೈವರ್ಗಳಿಗೆ ಫ್ಯಾನ್ ವಿತರಿಸಿದ್ದಾರೆ.
ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಬೆಂಗಳೂರಿನಲ್ಲಿ ಲೈಸೆನ್ಸ್ ಹೊಂದಿರುವ ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ ಹೇರಲಾಗಿದೆ. ನೀತಿ ಸಂಹಿತೆ ಮುಕ್ತಾಯವರೆಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಆದೇಶಿಸಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯ ಠಾಣೆಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕು. ಏಪ್ರಿಲ್ 10ರೊಳಗೆ ಠಾಣೆಯಲ್ಲಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಮೇ 16ರ ಬಳಿಕ ಸಾರ್ವಜನಿಕರು ಶಸ್ತ್ರಾಸ್ತ್ರ ವಾಪಸ್ ಪಡೆಯಬಹುದು.
ಚುನಾವಣೆ ಹಿನ್ನೆಲೆ ಕೋಲಾರ ಜಿಲ್ಲೆಯಿಂದ ನಾಲ್ವರನ್ನು ಗಡಿಪಾರು ಮಾಡಲಾಗಿದೆ. ಇನ್ನು ಹತ್ತು ಜನರ ಗಡಿಪಾರಿಗೆ ಸಿದ್ದತೆ ನಡೆದಿದೆ ಎಂದು ಕೋಲಾರ ಎಸ್ಪಿ ಎಂ.ನಾರಾಯಣ್ ಮಾಹಿತಿ ನೀಡಿದರು. ಹಾಗೂ 598 ಜನ ರೌಡಿ ಶೀಟರ್ ಗಳ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಬಾಂಡ್ ಬರೆಸಿಕೊಳ್ಳಲಾಗಿದ್ದು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಮತದಾರರಿಗೆ ಆಮಿಷವೊಡ್ಡಿ ಗಿಫ್ಟ್ ಹಂಚುತ್ತಿದ್ದ ಆರೋಪದಡಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ದಾವಣಗೆರೆ ಉತ್ತರ ಕ್ಷೇತ್ರದ ಮಾಜಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ FIR ದಾಖಲಾಗಿದೆ. ಎಸ್.ಎಸ್ & SSM ಅಭಿಮಾನಿ ಬಳಗದ ಹೆಸರಿನಲ್ಲಿ ಜನರಿಗೆ ಗಿಫ್ಟ್ ಹಂಚಲಾಗುತ್ತಿತ್ತು. ದಾಳಿ ನಡೆಸಿ 7.19 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ದಾವಣಗೆರೆಯ ಕೆಟಿಜೆ ನಗರದ ಠಾಣೆಯಲ್ಲಿ FIR ದಾಖಲಾಗಿದ್ದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದರು.
ಬ್ಯಾಡರಹಳ್ಳಿಯ ಮಹದೇಶ್ವರನಗರ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 12,500 ಕುಕ್ಕರ್ ಹಾಗೂ ಗ್ಯಾಸ್ ಸ್ಟವ್ಗಳನ್ನು ಜಪ್ತಿ ಮಾಡಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:58 am, Thu, 30 March 23