AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MP Renukacharya: ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣ: ಶಾಸಕ ರೇಣುಕಾಚಾರ್ಯಗೆ ಸಂಕಷ್ಟ

ಚುನಾವಣೆ ಸಂದರ್ಭದಲ್ಲೇ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯಗೆ ಸಂಕಷ್ಟ ಎದುರಾಗಿದೆ. ಅವರು ತಮ್ಮ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ.

MP Renukacharya: ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣ: ಶಾಸಕ ರೇಣುಕಾಚಾರ್ಯಗೆ ಸಂಕಷ್ಟ
ಎಂ. ಪಿ. ರೇಣುಕಾಚಾರ್ಯ
ರಮೇಶ್ ಬಿ. ಜವಳಗೇರಾ
|

Updated on: Mar 30, 2023 | 9:39 AM

Share

ಬೆಂಗಳೂರು: ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ(MP renukacharya) ಅವರು ತಮ್ಮ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ (disproportionate asset case) ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌(Karnataka High Court) ವಜಾಗೊಳಿಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಮಾಜಿ ಸಚಿವ ಹಾಗೂ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಮತ್ತು ದಾವಣಗೆರೆಯ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಇದರಿಂದ ರೇಣುಕಾಚಾರ್ಯ ಹಿನ್ನಡೆಯಾಗಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಲೋಕಾಯುಕ್ತ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಶಾಸಕ ರೇಣುಕಾಚಾರ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿ ವಜಾಗೊಳಿಸಿದೆ.

ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲ ಬಿ ಎಸ್ ಪ್ರಸಾದ್ ವಾದ ಮಂಡಿಸಿ, ಪ್ರಕರಣ ಸಂಬಂಧ ರೇಣುಕಾಚಾರ್ಯ ವಿರುದ್ಧ 2015ರಲ್ಲಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಿದ್ಧಪಡಿಸಿದ್ದಾರೆ. ಆದರೆ, ಅರ್ಜಿದಾರರು ಜನಪ್ರತಿನಿಧಿಯಾಗಿದ್ದಾರೆ. ಅಂತಿಮ ವರದಿ ಸಲ್ಲಿಕೆಗಾಗಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದ ಅಗತ್ಯ. ಸಕ್ಷಮ ಪ್ರಾಧಿಕಾರವಾದ ಸ್ಪೀಕರ್ ಅವರಲ್ಲಿ ಅನುಮತಿ ಕೋರಲಾಗಿದೆ. ಅವರು ಅನುಮತಿ ನೀಡಿದ ಕೂಡಲೇ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಈ ಹಂತದಲ್ಲಿ ಪ್ರಕರಣದ ಎಫ್‌ಐಆರ್ ರದ್ದುಪಡಿಸಬಾರದು ಎಂದು ಕೋರಿದ್ದರು. ಈ ಮನವಿ ಪುರಸ್ಕರಿಸಿರುವ ಹೈಕೋರ್ಟ್, ರೇಣುಕಾಚಾರ್ಯ ಅವರ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಇದರೊಂದಿಗೆ ಶಾಸಕ ರೇಣುಕಾಚಾರ್ಯರಿಗೆ ಸಂಕಷ್ಟ ಎದುರಾಗಿದೆ.

ರೇಣುಕಾಚಾರ್ಯ ಮತ್ತು ಅವರ ಸಹೋದರರು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಗುರುಪಾದಯ್ಯ ಮಠದ್ ಎಂಬುವರು ದಾವಣಗೆರೆಯ ಲೋಕಾಯುಕ್ತ ನ್ಯಾಯಾಲಯಕ್ಕೆ 2015ರ ಏಪ್ರಿಲ್‌ 28ರಂದು ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ನ್ಯಾಯಾಲಯ ಆದೇಶಿಸಿತ್ತು.

ಲೋಕಾಯುಕ್ತ ಪೊಲೀಸರು ರೇಣುಕಾಚಾರ್ಯ ವಿರುದ್ಧ 2015ರ ಮೇ 5ರಂದು ಎಫ್‌ಐಆರ್ ದಾಖಲಿಸಿ, ಅವರ ಮತ್ತು ಕುಟುಂಬದ ಸದಸ್ಯರ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದರು. ಹೀಗಾಗಿ, 2017ರ ಮಾರ್ಚ್‌ 6ರಂದು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದ ರೇಣುಕಾಚಾರ್ಯ, ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿದ್ದರು. ಜತೆಗೆ, ಅರ್ಜಿ ಇತ್ಯರ್ಥವಾಗುವರೆಗೆ ತನಿಖೆಗೆ ತಡೆ ನೀಡುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್ ವಜಾಗೊಳಿಸಿತ್ತು.