
ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವುದರಿಂದ ನಾಯಕರು ಜನರ ಮನಗೆಲ್ಲಲು ಹತ್ತಾರು ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಎದುರಾಳಿ ಪಕ್ಷದ ನಾಯಕರನ್ನು ಕಟ್ಟಿಹಾಕಲು ತಮ್ಮ ಮಾತಿನ ಬಾಣಗಳನ್ನು ಜೋರಾಗಿ ಬಿಡುತ್ತಿದ್ದಾರೆ. ಒಂದೆಡೆ ಬಿಜೆಪಿ ನಾಯಕರು ಸಿದ್ದರಾಮಯ್ಯ, ಡಿ.ಕೆ ಮೇಲೆ ಹರಿಹಾಯ್ದಿದ್ದರೆ, ಇತ್ತ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಬಿಜೆಪಿ ಹಾಗೂ ಕುಮಾರಸ್ವಾಮಿ ವಿರುದ್ದ ಹರಿಹಾಯುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾಯಕರ ನಡುವೆ ಮಾತಿನ ಚಕಮಕಿ ಜೋರಾಗಿ ಆರಂಭವಾಗಿದೆ.
ಮಂಡ್ಯದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ, ಕುಮಾರಸ್ವಾಮಿ ವಿರುದ್ದ ಹರಿಹಾಯ್ದಿದ್ದ ಸಿದ್ದರಾಮಯ್ಯ, ಇಂದು ಕಲಬುರಗಿಯಲ್ಲಿ ಕೂಡಾ ಕುಮಾರಸ್ವಾಮಿ ವಿರುದ್ದ ಹರಿಹಾಯ್ದರು. ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳುತ್ತಲೇ, ಕುಮಾರಸ್ವಾಮಿ ಸುಳ್ಳು ಹೇಳುತ್ತಾ ಓಡಾಡುತ್ತಾರೆ ಎಂದು ಕುಮಾರಸ್ವಾಮಿಗೆ ತಿವಿಯುವ ಕೆಲಸ ಮಾಡಿದ್ದಾರೆ. ಇದಕ್ಕೆ ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯಗೆ ತಾಕತ್ ಇದ್ರೆ, ಸ್ವಂತ ಪಕ್ಷ ಕಟ್ಟಿ ಐದು ಸ್ಥಾನ ಗೆದ್ದು ತೋರಿಸಲಿ, ಇವರೆಲ್ಲಾ ಜನತಾ ಪಕ್ಷ ಬಿಟ್ಟು ಹೋದಮೇಲೆಯೇ ರಾಜ್ಯದಲ್ಲಿ ಅಡ್ಡಾಡಿ, ನಾನು ನಲವತ್ತು ಸ್ಥಾನ ಗೆದ್ದಿದ್ದೆನೆ ಎಂದು ಹೇಳಿದ್ದಾರೆ.
ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಬಗ್ಗೆ ಕೂಡಾ ಮಾತುಗಳು ಜೋರಾಗಿ ಆರಂಭವಾಗಿವೆ. ಒಂದೆಡೆ ಡಿ.ಕೆ.ಶಿವಕುಮಾರ್ ಅವರು ನಿಖಿಲ್ ಪರವಾಗಿ ನಾವು ಪ್ರಮಾಣಿಕವಾಗಿ ಕೆಲಸ ಮಾಡಿದ್ದೆವು. ಆದರೆ ಅವರು ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಲಿಲ್ಲಾ ಎಂದು ಮಂಡ್ಯದಲ್ಲಿ ಕುಮಾರಸ್ವಾಮಿ ವಿರುದ್ದ ಡಿ.ಕೆ ಶಿ ಹರಿಹಾಯ್ದಿದ್ದರು. ಇದಕ್ಕೆ ಇಂದು ಟಕ್ಕರ್ ನೀಡಿದ್ದ ಕುಮಾರಸ್ವಾಮಿ, ನಿಖಿಲ್ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಹತ್ತು ಲಕ್ಷ ಮತಗಳು ಬರಬೇಕಿತ್ತು ಎನ್ನುವ ಮೂಲಕ ಡಿ.ಕೆ ಶಿಗೆ ಎದುರೇಟು ನೀಡುವ ಕೆಲಸ ಮಾಡಿದ್ರು. ಕಾಂಗ್ರೆಸ್ನವರು ಬಂದಿದ್ದು ನಮ್ಮನ್ನು ಗೆಲ್ಲಿಸಲಿಕ್ಕೆ ಅಲ್ಲಾ, ಸೋಲಿಸಲಿಕ್ಕೆ ಬಂದಿದ್ದರು. ಸೋಲಿಸಲಿಕ್ಕೆ ಏನು ಬೇಕೋ ಅದನ್ನೆಲ್ಲಾ ಮಾಡಿದ್ರು ಅಂತ ಕೈ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಮತ್ತೆ ತಿರುಗೇಟು ನೀಡಿದ, ಡಿ.ಕೆ.ಶಿವಕುಮಾರ್, ನಾವೇನು ಕುಸ್ತಿ ಹಿಡಿಬೇಕಿತ್ತಾ ಅಂತ ಹೇಳಿದ್ದಾರೆ. ಕುಮಾರಸ್ವಾಮಿ ಅವರು ಪಕ್ಷವನ್ನು ವಿಸರ್ಜನೆ ಮಾಡ್ತೇನೆ ಅಂತ ಹೇಳಿದ್ರು. ಹೀಗಾಗಿ ನಾನು ನಮ್ಮ ಪಕ್ಷಕ್ಕೆ ಬಂದು ಸೇರಿಕೊಳ್ಳಿ ಅಂತ ಹೇಳಿದ್ದೇನೆ ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೇ ನೀಡಿರುವ ಕುಮಾರಸ್ವಾಮಿ, ನಾನು ಅಧಿಕಾರ ಸಿಕ್ರೆ, ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸದಿದ್ದರೇ, ಪಕ್ಷ ವಿಸರ್ಜನೆ ಮಾಡ್ತೇನೆ ಅಂತ ಹೇಳಿದ್ದೇನೆ ಅಂತ ಹೇಳಿದ್ದಾರೆ.
ಇದನ್ನೂ ಓದಿ:Congress Vs BJP: ಇವತ್ತೇ ಲೋಕಸಭಾ ಚುನಾವಣೆಯಾದರೆ ಯಾರು ಗೆಲ್ತಾರೆ? ಚರ್ಚೆಯಾಗ್ತಿದೆ ರಾಜಕೀಯ ಸಮೀಕ್ಷೆಯ ವಿವರ
ಒಟ್ಟಾರೆ ಚುನಾವಣೆ ಹತ್ತಿರ ಬರ್ತಿದ್ದಂತೆ, ಮತದಾರರ ಮನಗೆಲ್ಲಲು ನಾಯಕರ ಟಾಕ್ ಪೈಟ್ ಜೋರಾಗಿ ಮಾಡುತ್ತಿದ್ದಾರೆ. ಆ ಮೂಲಕ ಎದುರಾಳಿಗಳನ್ನು ಮಾತಿನಲ್ಲಿಯೇ ಕಟ್ಟಿಹಾಕುವ ಕೆಲಸ ಆರಂಭಿಸಿದ್ದಾರೆ. ಆದರೆ ಮತದಾರ ಯಾರ ಮಾತಿಗೆ ಮನ್ನಣೆ ನೀಡುತ್ತಾನೆ, ಯಾರ ಮಾತುಗಳನ್ನು ತಿರಸ್ಕಾರ ಮಾಡುತ್ತಾನೆ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ