ಅಬಕಾರಿ ಇಲಾಖೆಯಲ್ಲಿ 2500 ಕೋಟಿ ರೂ. ಹಗರಣ, ಅಕ್ರಮದ ಹಣ ಅಸ್ಸಾಂ ಚುನಾವಣೆಗೆ ಬಳಕೆ: ಆರ್ ಅಶೋಕ್ ಗಂಭೀರ ಆರೋಪ

ಪ್ರತಿಪಕ್ಷ ನಾಯಕ ಆರ್ ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿದ್ದು, ಸಚಿವ ಆರ್​ಬಿ ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ವರ್ಗಾವಣೆ ಮತ್ತು ಪರವಾನಗಿ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಈ ಹಣವನ್ನು ಅಸ್ಸಾಂ ಚುನಾವಣೆಗಳಿಗೆ ಬಳಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ 2500 ಕೋಟಿ ರೂ. ಹಗರಣ, ಅಕ್ರಮದ ಹಣ ಅಸ್ಸಾಂ ಚುನಾವಣೆಗೆ ಬಳಕೆ: ಆರ್ ಅಶೋಕ್ ಗಂಭೀರ ಆರೋಪ
ಆರ್ ಅಶೋಕ್ ಹಾಗೂ ಆರ್​ಬಿ ತಿಮ್ಮಾಪುರ (ಸಂಗ್ರಹ ಚಿತ್ರ)

Updated on: Jan 19, 2026 | 9:49 AM

ಬೆಂಗಳೂರು, ಜನವರಿ 19: ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂಪಾಯಿ ಹಗರಣ (Karnataka Excise Scam) ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashoka) ಗಂಭೀರ ಆರೋಪ ಮಾಡಿದ್ದು, ಅಬಕಾರಿ ಸಚಿವ ಆರ್​ಬಿ ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರವು ಇಲಾಖೆಗಳಿಗೆ ಆದಾಯ ಸಂಗ್ರಹ ಗುರಿಗಳನ್ನು ನಿಗದಿಪಡಿಸುತ್ತದೆ. ಆದರೆ, ಅಬಕಾರಿ ಇಲಾಖೆಯಲ್ಲಿ ಪರವಾನಗಿಗಳನ್ನು ಹರಾಜು ಹಾಕಲಾಗುತ್ತಿದೆ. ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ ಅವರು 25 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ. ತಿಮ್ಮಾಪುರ ರಾಜೀನಾಮೆ ನೀಡದಿದ್ದರೆ, ಸಿದ್ದರಾಮಯ್ಯ ಅವರನ್ನೇ ಹೊಣೆಗಾರರನ್ನಾಗಿ ಪರಿಗಣಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ ಜಿ ರಾಮ್ ಜಿ) ಯೋಜನೆ ವಿರೋಧಿಸಲು ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಳ್ಳುತ್ತಿದೆ. ಆದರೆ ಇಡೀ ರಾಜ್ಯವನ್ನು ವ್ಯಸನದಲ್ಲಿ ಮುಳುಗಿಸುವುದರ ಜತೆಗೆ ಗಾಂಧಿಯವರ ಆದರ್ಶಗಳನ್ನು ಹಾಳು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

CL-7 ಪರವಾನಗಿಗೆ 1.25 ಕೋಟಿ ರೂ. ಲಂಚ ಕೇಳಲಾಗಿದೆ ಮತ್ತು CL-2 ಪರವಾನಗಿಗೆ 1.5 ಕೋಟಿ ರೂ. ಲಂಚ ನಿಗದಿಪಡಿಸಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ. CL-9 ಪರವಾನಗಿಗಳಿಗೆ ಒಟ್ಟು 92 ಕೋಟಿ ರೂ. ಮತ್ತು ಮೈಕ್ರೋಬ್ರೂವರಿ ಪರವಾನಗಿಗೆ 2.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಮತ್ತೆ ಬಂಧನದ ಭೀತಿಯಲ್ಲಿದ್ದ ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಬಿಗ್ ರಿಲೀಫ್

ಒಟ್ಟಾರೆಯಾಗಿ, 2,500 ಕೋಟಿ ರೂ. ಲಂಚ ಪಡೆಯಲಾಗಿದೆ. ಇದನ್ನು ಅಸ್ಸಾಂ ಚುನಾವಣೆಗಾಗಿ ಕಳುಹಿಸಲಾಗುತ್ತಿದೆ. ಹಣವನ್ನು ಸಚಿವರಿಗೆ ಅಥವಾ ಅವರ ಮಗನಿಗೆ ನೀಡಬೇಕೆಂದು ಉಲ್ಲೇಖಿಸಲಾದ ಆಡಿಯೋವೊಂದು ಬಹಿರಂಗವಾಗಿದೆ ಎಂದು ಅಶೋಕ ಆರೋಪಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಬಿಜೆಪಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ ಎಂದೂ ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ