ಬೆಂಗಳೂರು: ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ರೈತನಿಗೆ ತೀವ್ರ ಸಂಕಷ್ಟ ಎದುರಾಗಿದೆ.
ಕಾಫಿನಾಡು ಚಿಕ್ಕಮಗಳೂರಲ್ಲಿ ಭಾರಿ ಮಳೆ ಸೃಷ್ಟಿಸಿದ ಅವಾಂತರಕ್ಕೆ 6.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ತೋಟ ಸಂಪೂರ್ಣವಾಗಿ ನೆಲಕಚ್ಚಿದೆ. ಮೂಡಿಗೆರೆ ತಾಲೂಕಿನ ಕೆಂಬತ್ ಮಕ್ಕಿ ಗ್ರಾಮದ ರೈತ ರಾಜಣ್ಣ ಎಂಬುವರಿಗೆ ಸೇರಿದ 9 ಸಾವಿರ ಬಾಳೆ ಗಿಡಗಳು ನಾಶವಾಗಿದೆ.
ಇತ್ತ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಉಕ್ಕಿಹರಿದ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿದ ಪರಿಣಾಮ ಮೆಕ್ಕೆಜೋಳ ಬೆಳೆಸಿದ್ದ ಜಮೀನಿಗೆ ನೀರು ನುಗ್ಗಿದೆ. ಸಿಂಡೇನಹಳ್ಳಿ ಗ್ರಾಮದ ಕಾಂತರಾಜ್ ಎಂಬುವವರಿಗೆ ಎರಡು ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಸಂಪೂರ್ಣ ನಾಶವಾಗಿದೆ. ಹಾಗಾಗಿ, ಕಾಂತರಾಜ್ ತೆಪ್ಪದಲ್ಲಿ ತೆರಳಿ ಅಳಿದುಳಿದ ಮೆಕ್ಕೆಜೋಳ ಸಂಗ್ರಹಿಸಿಲು ಯತ್ನಿಸಿದರು.
ಹಾಸನ, ಹಾವೇರಿಯಲ್ಲೂ ಮೆಕ್ಕೆಜೋಳ ಬೆಳೆಗೆ ಹಾನಿ
ಅತ್ತ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಯಲ್ಲಿ ಭಾರಿ ಮಳೆಯಿಂದ ನೂರಾರು ಎಕರೆಯಲ್ಲಿ ಬೆಳಿಸಿದ್ದ ಮೆಕ್ಕೆಜೋಳಕ್ಕೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.ಇದಲ್ಲದೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿಯೂ ರಾಜು ವೆರ್ಣೇಕರ ಎಂಬುವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ನಾಶವಾಗಿದೆ.
ಹೂವಿನಹಡಗಲಿಯಲ್ಲಿ ಹೂವಿನ ಬೆಳೆ ನಾಶ
ಬಳ್ಳಾರಿ ಜಿಲ್ಲೆಯಲ್ಲಿ ಅಪಾಯದಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿಯಿಂದ ನದಿಪಾತ್ರದ ಜಮೀನು ಮುಳುಗಡೆಯಾಗಿದೆ. ಇದರಿಂದ ಎಕರೆಗಟ್ಟಲೆ ಜಮೀನಿನಲ್ಲಿ ಬೆಳೆಸಿದ್ದ ಹೂವಿನ ಬೆಳೆ ನಾಶವಾಗಿದೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬ್ಯಾಲಹುಣಿಸಿ, ಬನ್ನಿಮಟ್ಟಿ ಮತ್ತು ಮಕರಬ್ಬಿ ಗ್ರಾಮದ ಜಮೀನುಗಳು ಮುಳುಗಡೆಯಾಗಿದ್ದು ಹರಿಯೋ ನದಿಯಲ್ಲಿ ಹೂವು ಕೊಚ್ಚಿಹೋಗಿದೆ.
‘ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ’
ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಂದಾಯ ಸಚಿವ R. ಅಶೋಕ್ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.ಜೊತಗೆ,ಈಗಾಗಲೇ ಅಗತ್ಯ ಹಣ ಕೂಡ ಬಿಡುಗಡೆ ಮಾಡಲಾಗಿದೆ ಎಂದು ವಿಧಾನಸೌಧದಲ್ಲಿ ತಿಳಿಸಿದರು.