ಮಾರ್ಚ್ ಅಂತ್ಯದ ವೇಳೆಗೆ ಐದು ಲಕ್ಷ ರೈತರ ಬ್ಯಾಂಕ್​ ಖಾತೆಗಳಿಗೆ ಬೆಳೆ ವಿಮೆ

|

Updated on: Mar 10, 2024 | 7:01 AM

ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. 10 ತಿಂಗಳಲ್ಲಿ ವೈದ್ಯಕೀಯ ಕಾಲೇಜು, ಕೆಎಸ್‌ಆರ್‌ಟಿಸಿ ವಿಭಾಗ, ಆರ್‌ಟಿಒ ಕಚೇರಿ, ಪೊಲೀಸ್‌ ಠಾಣೆ, ಮಿನಿ ವಿಧಾನಸೌಧ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

ಮಾರ್ಚ್ ಅಂತ್ಯದ ವೇಳೆಗೆ ಐದು ಲಕ್ಷ ರೈತರ ಬ್ಯಾಂಕ್​ ಖಾತೆಗಳಿಗೆ ಬೆಳೆ ವಿಮೆ
ಸಚಿವ ಎನ್​. ಚಲುವನಾರಾಯಣಸ್ವಾಮಿ
Follow us on

ಮಂಡ್ಯ, ಮಾರ್ಚ್​ 10: ಈ ವರ್ಷ 25 ಲಕ್ಷ ರೈತರು ಬೆಳೆ ವಿಮೆಗೆ (Pradhan Mantri Fasal Bima Yojana – Crop Insurance) ನೋಂದಾಯಿಸಿಕೊಂಡಿದ್ದು ಮಾರ್ಚ್ ಅಂತ್ಯದ ವೇಳೆಗೆ 13 ಲಕ್ಷ ರೈತರಿಗೆ 1,400 ಕೋಟಿ ಮೊತ್ತವನ್ನು ಬೆಳೆ ವಿಮೆ ವಿತರಿಸಲಾಗುವುದು. ಪ್ರಸ್ತುತ 8 ಲಕ್ಷ ರೈತರಿಗೆ 600 ಕೋಟಿ ವಿಮೆ ಹಣ ಪಾವತಿಯಾಗಿದೆ. ಉಳಿದ 800 ಕೋಟಿ ರೂ. ಅನ್ನು ಮಾರ್ಚ್ ಅಂತ್ಯದೊಳಗೆ ಪಾವತಿಸಲಾಗುವುದು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ (N Cheluvrayaswamy) ಹೇಳಿದರು. ನಾಗಮಂಗಲ ತಾಲೂಕಿನ ಸವಲತ್ತು ವಿತರಣಾ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ 7,500 ಕೃಷಿ ಹೊಂಡ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಸಂಖ್ಯೆ 20,000 ತಲುಪಲಿದೆ ಎಂದು ತಿಳಿಸಿದರು.

ಐದು ಗ್ಯಾರೆಂಟಿ ಯೋಜನೆಗಳನ್ನು ಯಾವುದೇ ಜಾತಿ, ಧರ್ಮ, ಮೇಲು, ಕೀಳು ಎಂಬ ತಾರತಮ್ಯವಿಲ್ಲದೆ ಜನಸಾಮಾನ್ಯರಿಗೆ ಸಮಾನವಾಗಿ ನೀಡಲಾಗುತ್ತಿದೆ. ಜನರನ್ನು ಸಶಕ್ತಗೊಳಿಸಲು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ತನ್ನ ಭರವಸೆಯನ್ನು ಈಡೇರಿಸಿದೆ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಯೋಜನೆಗಳಿಗೆ 35,000 ಕೋಟಿ ವೆಚ್ಚ ಮಾಡಿದೆ ಎಂದು ಹೇಳಿದರು.

ಸಮಾಜದ ಎಲ್ಲ ವರ್ಗದವರಿಗೂ ಇದರ ಲಾಭ ತಲುಪಿದೆ. ಪ್ರತಿ ಕುಟುಂಬವು ಗ್ಯಾರೆಂಟಿ ಯೋಜನೆಗಳ ಮೂಲಕ ಸರಾಸರಿ 5,000 ರೂ. ಪಡೆಯುತ್ತಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಗ್ಯಾರೆಂಟಿ ಯೋಜನೆಗಳಿಗೆ 55 ಸಾವಿರ ಕೋಟಿ ರೂ. ಅನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದರು.

ಇದನ್ನೂ ಓದಿ: ಫಸಲ್ ಬಿಮಾ ಯೋಜನೆಯಲ್ಲಿ ರಾಜ್ಯಕ್ಕೆ ಬೀದರ್ ನಂಬರ್ ಒನ್​: ರೈತರ ಆಸಕ್ತಿಗೆ ಪ್ರಧಾನಿ ಮೋದಿ ಶ್ಲಾಘನೆ

ನಾಗಮಂಗಲ ತಾಲೂಕಿನಲ್ಲಿ 35 ವರ್ಷಗಳಿಂದ ಇದ್ದ ಸಮಸ್ಯೆಯನ್ನು ಬಗೆಹರಿಸಿ ಹಕ್ಕಿಪಿಕ್ಕಿ ಜನಾಂಗದವರಿಗೆ ಹಕ್ಕು ಪತ್ರವನ್ನು ವಿತರಿಸಲಾಗಿದೆ. ಕಳಪೆ ಬೀಜ ಮತ್ತು ರಸಗೊಬ್ಬರಗಳ ಬಗ್ಗೆ ಈ ಹಿಂದೆ ದೂರುಗಳು ಬಂದಿದ್ದು, ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ರೈತರು ತಾವು ಪಡೆಯುವ ಬೀಜ ಮತ್ತು ರಸಗೊಬ್ಬರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ವಿಷಯದ ಬಗ್ಗೆ ಯಾವುದೇ ದೂರುಗಳಿಲ್ಲ ಎಂದರು.

ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ

ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. 10 ತಿಂಗಳಲ್ಲಿ ವೈದ್ಯಕೀಯ ಕಾಲೇಜು, ಕೆಎಸ್‌ಆರ್‌ಟಿಸಿ ವಿಭಾಗ, ಆರ್‌ಟಿಒ ಕಚೇರಿ, ಪೊಲೀಸ್‌ ಠಾಣೆ, ಮಿನಿ ವಿಧಾನಸೌಧ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಾಗಮಂಗಲದ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. 60 ವರ್ಷ ಮೇಲ್ಪಟ್ಟವರಿಗೆ ಕನ್ನಡಕಗಳನ್ನು ವಿತರಿಸಲಾಯಿತು ಮತ್ತು ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್‌ಗಳನ್ನು ನೀಡಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ