ಆರೋಗ್ಯ ಇಲಾಖೆಯಿಂದ ರಾಜ್ಯಾದ್ಯಂತ ಆರೋಗ್ಯ, ಪೌಷ್ಟಿಕ ಸಮೀಕ್ಷೆ; ಆ್ಯಪ್ ಮೂಲಕ ಮಾಹಿತಿ ಕಲೆ ಹಾಕುತ್ತಿದೆ ಸರ್ಕಾರ

ಗರ್ಭಿಣಿಯರಲ್ಲಿ ರಕ್ತಹೀನತೆ, ಮಾನಸಿಕ ಆರೋಗ್ಯ ಸ್ಥಿತಿಗತಿ ಬಗ್ಗೆಯೂ ಸಮೀಕ್ಷೆ ನಡೆಸಲಾಗುತ್ತಿದೆ. ರಾಜ್ಯದ ಪ್ರತಿ ಕುಟುಂಬದ ಆರೋಗ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ತಿಳಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಆರೋಗ್ಯ ಇಲಾಖೆಯಿಂದ ರಾಜ್ಯಾದ್ಯಂತ ಆರೋಗ್ಯ, ಪೌಷ್ಟಿಕ ಸಮೀಕ್ಷೆ; ಆ್ಯಪ್ ಮೂಲಕ ಮಾಹಿತಿ ಕಲೆ ಹಾಕುತ್ತಿದೆ ಸರ್ಕಾರ
ಸಾಂದರ್ಭಿಕ ಚಿತ್ರ
Image Credit source: PTI

Updated on: Jun 09, 2023 | 9:35 PM

ಬೆಂಗಳೂರು: ಜೂನ್ 30ರವರೆಗೆ ರಾಜ್ಯಾದ್ಯಂತ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಯನ್ನು (health and nutrition survey) ಸರ್ಕಾರ ನಡೆಸುತ್ತಿದ್ದು, ಈಗಾಗಲೇ ಜೂನ್​ 1ರಿಂದಲೇ ಸಮೀಕ್ಷೆ ಆರಂಭಗೊಂಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯಡಿ ಆರೋಗ್ಯ ಇಲಾಖೆ (Health Ministry) ಈ ಸಮೀಕ್ಷೆಯನ್ನು ಹಮ್ಮಿಕೊಂಡಿದೆ. ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಯಲಿದ್ದು, ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯ ಸ್ಥಿತಿ, ಅಪೌಷ್ಟಿಕತೆ ವಿವರವನ್ನು ಸಾರ್ವಜನಿಕರು ಆ್ಯಪ್​ನಲ್ಲಿ ದಾಖಲಿಸಬೇಕಾಗುತ್ತದೆ.

ಗರ್ಭಿಣಿಯರಲ್ಲಿ ರಕ್ತಹೀನತೆ, ಮಾನಸಿಕ ಆರೋಗ್ಯ ಸ್ಥಿತಿಗತಿ ಬಗ್ಗೆಯೂ ಸಮೀಕ್ಷೆ ನಡೆಸಲಾಗುತ್ತಿದೆ. ರಾಜ್ಯದ ಪ್ರತಿ ಕುಟುಂಬದ ಆರೋಗ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ತಿಳಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ರಾಜ್ಯದ ಜನರ ಆರೋಗ್ಯದ ವಿವರಗಳನ್ನು ಕಲೆಹಾಕುವುದರಿಂದ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಅನುಕೂಲವಾಗಲಿದೆ. ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆಗಳಿಗೆ ಆದ್ಯತೆ ನೀಡಲು ಸಹಕಾರಿಯಾಗಲಿದೆ. ಯಾವ ಜಿಲ್ಲೆಗಳಲ್ಲಿ ಆರೋಗ್ಯ ಸಮಸ್ಯೆಯಿದೆ ಎಂದು ತಿಳಿಯಲು ನೆರವಾಗಲಿದೆ. ಅಪೌಷ್ಟಿಕತೆ, ರಕ್ತಹೀನತೆ ಕಂಡುಬಂದರೆ ಪೂರಕ ಆಹಾರ ನೀಡಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಮೊಟ್ಟೆ ಖರೀದಿಸಲು ಬಿಡುಗಡೆಯಾಗದ ಅನುದಾನ: ಸಾಲದ ಸುಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು

ಗರ್ಭಿಣಿಯರು, ಬಾಣಂತಿಯರಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಇತರೆ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರಕಾರದಿಂದ ಅನುದಾನ ಬಿಡುಗಡೆಯಾಗದೆ, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮೊಟ್ಟೆಗಾಗಿ ನಾಲ್ಕು ತಿಂಗಳಿಂದ ಸಾಲದ ಹೊರೆ ಹೊತ್ತಿರುವ ಬಗ್ಗೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ರಾಜ್ಯದಲ್ಲಿ ಸುಮಾರು 65,911 ಅಂಗನವಾಡಿ ಕೇಂದ್ರಗಳಿವೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಪೌಷ್ಟಿಕಾಂಶ ನೀಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ ನೀಡಲಾಗುತ್ತಿದೆ. ಸುಮಾರು 6 ಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರು ಮತ್ತು ಸುಮಾರು 40 ಲಕ್ಷ ಮಕ್ಕಳು ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಈ ರೀತಿಯ ಯೋಜನೆಗಳ ಮುಂದುವರಿಕೆ ಮತ್ತು ಸೂಕ್ತ ಅನುಷ್ಠಾನಕ್ಕೆ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ನೆರವಾಗಲಿದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ