ಬೆಂಗಳೂರು: ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿರುವ ಕರ್ನಾಟಕ ಸರ್ಕಾರ, ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ (Ravi D Channannavar) ಅವರನ್ನು ವರ್ಗಾವಣೆ ಮಾಡಿ ಗುರುವಾರ ಆದೇಶಿಸಿದೆ. ಕಿಯೋನಿಕ್ಸ್ ಎಂಡಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಡಿಐಜಿಪಿ (Internal security DIGP) ಆಗಿ ವರ್ಗಾವಣೆ ಮಾಡಲಾಗಿದೆ. ಇದರೊಂದಿಗೆ, ನೂತನ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ಪರ್ವ ಮುಂದುವರಿದಂತಾಗಿದೆ. ಕಳೆದ ಕೆಲವು ದಿನಗಳಲ್ಲಿ ಹತ್ತಾರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶಿಸಲಾಗಿತ್ತು.
ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿಯಿಂದ ಅಲೋಕ್ ಕುಮಾರ್ ಅವರನ್ನು ಎಡಿಜಿಪಿ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಉಮೇಶ್ ಕುಮಾರ್ ಅವರನ್ನು ಎಡಿಜಿಪಿ ಕ್ರೈಂ & ಟೆಕ್ನಿಕಲ್ ಸರ್ವಿಸ್, ಆರ್ ಹಿತೇಂದ್ರ ಅವರನ್ನು ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸೌಮೇಂದು ಮುಖರ್ಜಿ ಅವರನ್ನು ಎಡಿಜಿಪಿ ಪೊಲೀಸ್ ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.
ಕೆಲವು ದಿನಗಳ ಹಿಂದೆಯಷ್ಟೇ ಆರು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಕರ್ನಾಟಕ ಸರ್ಕಾರ ಮತ್ತೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿತ್ತು. ಕಪಿಲ್ ಮೋಹನ್ ಅವರನ್ನು ಮುಂದಿನ ಆದೇಶದವರೆಗೆ ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.
ಇದನ್ನೂ ಓದಿ: ಅಲೋಕ್ ಕುಮಾರ್ ಸೇರಿದಂತೆ ನಾಲ್ವರು IPS ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ
ಭ್ರಷ್ಟಾಚಾರ ಆರೋಪದಿಂದಾಗಿ ವಿವಾದಕ್ಕೆ ಸಿಲುಕಿದ್ದ ಚನ್ನಣ್ಣವರ್ ಅವರನ್ನು ಕಳೆದ ವರ್ಷ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ನಂತರ ಈ ವರ್ಗಾವಣೆ ಆದೇಶಕ್ಕೆ ತಡೆ ನೀಡಿತ್ತು. ಈ ಹಿಂದೆ ಸಿಐಡಿ ಎಸ್ಪಿ ಆಗಿಯೂ ಕಾರ್ಯನಿರ್ವಹಿಸಿದ್ದ ಚನ್ನಣ್ಣವರ್ ಹಲವು ಕರ್ತವ್ಯಗಳನ್ನು ನಿಭಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ