
ಬೆಂಗಳೂರು, (ಸೆಪ್ಟೆಂಬರ್ 09): ಕೇಂದ್ರ ಸಚಿವರ ಹೆಸರಿನಲ್ಲಿ ಕರ್ನಾಟಕ ರಾಜ್ಯಪಾಲ (Karnataka Governor) ಥಾವರ್ ಚೆಂದ್ ಗೆಹ್ಲೋಟ್ ( thawar chand Gehlot) ಅವರಿಗೆ ಫೋನ್ ಕರೆ ಮಾಡಿ ವಂಚನೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Union Minister Dharmendra Pradhan ) ಹೆಸರಿನಲ್ಲಿ ಗೆಹ್ಲೋಟ್ ಅವರಿಗೆ 2 ಬಾರಿ ಫೋನ್ ಕರೆ ಮಾಡಲಾಗಿದ್ದು, ಧರ್ಮೇಂದ್ರ ಪ್ರಧಾನ್ ಅವರಂತೆ ಮಾತನಾಡಿದ್ದಾರೆ. ಬಳಿಕ ಪರಿಶೀಲಿಸಿದಾಗ ಕರೆ ಮಾಡಿದ್ದ ನಂಬರ್ ಫೇಕ್ ಎಂದು ಗೊತ್ತಾಗಿದೆ. ಕೂಡಲೇ ಈ ಬಗ್ಗೆ ರಾಜಭವನದ ಅಧಿಕಾರಿ ದೂರಿನ ಅನ್ವಯ ಕೇಂದ್ರ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಚ್ಚರಿ ಅನ್ನಿಸಿದರೂ ಸತ್ಯ ಸೈಬರ್ ವಂಚಕರು ಕೋರ್ಟ್ ಜಡ್ಜ್ ಗಳನ್ನೇ ಬಿಟ್ಟಿಲ್ಲ. ಹೌದು…ಬೆಂಗಳೂರಿನ ಕುಮಾರ ಕೃಪಾ ಗೆಸ್ಟ್ ಹೌಸ್ ರೂಮ್ ಬುಕ್ಕಿಂಗ್ ನೆಪದಲ್ಲಿ ಪಂಜಾಬ್ ಮೂಲದ ನ್ಯಾಯಾಧೀಶರಿಗೆ 12 ಸಾವಿರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ನಡೆದಿದೆ. ಸೆಪ್ಟೆಂಬರ್ 2ರಂದು ಬೆಂಗಳೂರಿನ ಪರಿಚಯಸ್ಥ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದ ಜಡ್ಜ್, ಕುಮಾರಕೃಪಾ ಗೆಸ್ಟ್ ಹೌಸ್ ಬುಕ್ ಮಾಡಿಕೊಡಲು ಸಂಬಂಧಪಟ್ಟವರ ಮಾಹಿತಿ ಕೇಳಿದ್ದರು. ಬಳಿಕ ಪೊಲೀಸ್ ಅಧಿಕಾರಿ ವೆಬ್ ಸೈಟ್ ಚೆಕ್ ಮಾಡಿದಾಗ https://kumarakrupaaguesthouse.com/ ಲಿಂಕ್ ನಲ್ಲಿದ್ದ ನಂಬರ್ ಕಲೆಕ್ಟ್ ಮಾಡಿ ಜಡ್ಜ್ ಗೆ ನೀಡಿದ್ದರು. ನಂತರ ನ್ಯಾಯಾಧೀಶರು ಆ ನಂಬರ್ ಗೆ ಕರೆ ಮಾಡಿ ಕುಮಾರಕೃಪಾದಲ್ಲಿ ರೂಮ್ ಬುಕ್ ಮಾಡುವಂತೆ ಹೇಳಿದ್ದಾರೆ. ಆದ್ರೆ, ಇದಕ್ಕೆ 12 ಸಾವಿರ ರೂ. ಪಾವತಿಸುವಂತೆ ಆಕಡೆಯಿಂದ ವ್ಯಕ್ತಿ ಹೇಳಿದ್ದಾನೆ. ಇದನ್ನು ನಂಬಿದ ಜಡ್ಜ್, 12 ಸಾವಿರ ರೂಪಾಯಿ ಪಾವತಿಸಿದ್ದಾರೆ.
ರೂಮ್ ಬುಕ್ ಆಗಿದೆ ಎಂದು ನಂಬಿ ನ್ಯಾಯಾಧೀಶರು, ಸೆಪ್ಟೆಂಬರ್ 6ರಂದು ಬೆಂಗಳೂರಿಗೆ ಬಂದಿಳಿದು ನೇರವಾಗಿ ಕುಮಾರ ಕೃಪಾಗೆ ಗೆಸ್ಟ್ ಹೌಸ್ ಗೆ ಆಗಮಿಸಿ ರೂಮ್ ಬಗ್ಗೆ ವಿಚಾರಿಸಿದ್ದಾರೆ. ಆಗ ಜಡ್ಜ್ ಹೆಸರಲ್ಲಿ ಯಾವುದೇ ರೂಮ್ ಬುಕ್ ಆಗಿಲ್ಲದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಜಡ್ಜ್ ಆ ನಂಬರ್ ಕರೆ ಮಾಡಿದ್ರೆ ಸ್ವೀಚ್ ಆಫ್ ಎಂದು ಹೇಳಿದೆ. ಕೊನೆಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಇನ್ನು ಈ ಬಗ್ಗೆ ಬೆಂಗಳೂರಿನ ಪೊಲೀಸ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಕೇಂದ್ರ ಸೈಬರ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆದಿದೆ.
ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ಸೈಬರ್ ನಲ್ಲಿ ಬೇರೆ ಬೇರೆ ತರ ಅಪರಾಧ ಆಗುತ್ತಿದೆ. ಇದು ಎರಡು ತಿಂಗಳ ಹಿಂದೆ ಆಗಿದ್ದು, ತಡವಾಗಿ ದೂರು ಕೊಟ್ಟಿದ್ದಾರೆ. ಇದರ ಬಗ್ಗೆ ಕೇಸ್ ದಾಖಲಿಸಿ ತನಿಖೆ ಮಾಡಲಾಗುತ್ತಿದೆ. ಫ್ರಾಡ್ ಮಾಡುವರು ಪ್ರತಿಸಲ ಹೊಸ ಹೊಸ ಟೆಕ್ನಿಕ್ ಬಳಸುತ್ತಿದ್ದಾರೆ. ಡಿಜಿಟಲ್ ಅರೆಸ್ಟ್ ತುಂಬಾ ಕಾಮನ್ ಆಗಿದೆ . ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಜಾಗೃತಿ ಹೆಚ್ಚು ಮೂಡಿಸುತ್ತಿದ್ದೇವೆ ಎಂದರು.