ಬೆಳಗಾವಿ: ಕರ್ನಾಟಕ ಪೊಲೀಸ್ ಇಲಾಖೆ (police Department) ಸಿಬ್ಬಂದಿಗೆ ನಿರ್ಬಂಧಿತವಾಗಿದ್ದ ಅಂತರ್ ಜಿಲ್ಲಾ ವರ್ಗಾವಣೆಗೆ(inter district transfer) ಇದೀಗ ಅವಕಾಶ ನೀಡಲಾಗಿದೆ. ಇಂದು(ಡಿಸೆಂಬರ್ 22) ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಪೊಲೀಸ್ ಸಿಬ್ಬಂದಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.ಆದ್ರೆ, ಕೆಲ ಷರತ್ತುಗಳೊಂದಿಗೆ ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಅವಕಾಶ ನೀಡಲಾಗಿದೆ.
ಪೊಲೀಸ್ ಇಲಾಖೆಗೆ ನೇಮಕವಾಗಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು. ಹಾಗೂ ಮಾಜಿ ಯೋಧರು ಸಹ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಆಗಬಹುದು. ಯಾವುದೇ ಒಂದು ಜಿಲ್ಲೆಯಲ್ಲಿ, ನೇಮಕಾತಿ ಹೊಂದಿದ ಹಾಗೂ ಅದೇ ಜಿಲ್ಲೆಯಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾವುದೇ ಸಿಬ್ಬಂದಿ, ಇತರೆ ಜಿಲ್ಲೆಗಳು ಅಥವಾ ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಹೊಂದಲು ಅರ್ಹತೆ ಹೊಂದಿರುತ್ತಾರೆ.
ಪೊಲೀಸ್ ಇಲಾಖೆಗೆ ನೇಮಕವಾದ ಹಾಗೂ ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿದ ಮಾಜಿ ಯೋಧರು ಸಹ ಬೇರೆ ಜಿಲ್ಲೆಗೆ ವರ್ಗಾವಣೆ ಕೋರಲೂ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ಸಿಕ್ಕಿದೆ.
ಮುಂಚೆ ಅವಕಾಶವಿತ್ತು
ರಾಜ್ಯ ನಾಗರಿಕ ಸೇವಾ ನಿಯಮ 16(ಎ) ಅನ್ವಯ ಈ ಹಿಂದೆ ಸೇವಾ ಜ್ಯೇಷ್ಠತೆ ಬಿಟ್ಟುಕೊಟ್ಟು ಬೇರೆ ಪೊಲೀಸ್ ವಲಯ, ಜಿಲ್ಲೆಗಳಿಗೆ ವರ್ಗಾವಣೆಯಾಗುವ ಅವಕಾಶವಿತ್ತು. ಪತಿ/ಪತ್ನಿ ಇಬ್ಬರು ಸರಕಾರಿ ನೌಕರರಾಗಿದ್ದರೆ, ಇಬ್ಬರೂ ಒಂದೇ ಜಿಲ್ಲೆಗೆ ವರ್ಗಾವಣೆ ಪಡೆಯಬಹುದಿತ್ತು. ಆದರೆ, 2021ರಲ್ಲಿ ಜಾರಿಗೆ ತಂದ ರಾಜ್ಯ ನಾಗರಿಕ ಸೇವಾ ತಿದ್ದುಪಡಿ ನಿಯಮ 16 (ಎ) ಅಂತರ್ ವಲಯ ವರ್ಗಾವಣೆಗೆ ಅವಕಾಶ ಇರಲಿಲ್ಲ. ಇದರಿಂದ ಪಿಎಸ್‌ಐ, ಎಎಸ್‌ಐ, ಪೊಲೀಸ್ ಕಾನ್ಸ್‌ಟೆಬಲ್‌ಗಳು ಹಾಗೂ ಇಲಾಖೆಯ ಗ್ರೂಪ್ (ಸಿ) (ಡಿ)ವೃಂದ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ ದಂಪತಿ ‘ಕೌಟುಂಬಿಕ’ ಜೀವನಕ್ಕೆ ವಿಘ್ನ ಉಂಟಾಗಿತ್ತು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:04 pm, Thu, 22 December 22