ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವ ಕಾರಣ ಮೇ ತಿಂಗಳ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ನೋಂದಾಯಿಸಿರುವ ಎಲ್ಲಾ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ಮೇ 2021ರ ಒಂದು ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಲಾಕ್ಡೌನ್ ಜಾರಿಯಲ್ಲಿದ್ದು, ಖಾಸಗಿ ವಾಹನಗಳು ರಸ್ತೆಗಿಳಿಯುವುದನ್ನು ನಿರ್ಬಂಧಿಸಿ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮೇ ತಿಂಗಳ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಜತೆಗೆ ಮೇ ಮತ್ತು ಜೂನ್ ಎರಡೂ ತಿಂಗಳಿಗೆ ಈ ವಿನಾಯಿತಿ ಘೋಷಿಸಿದ್ದರೆ ಸಾರ್ವಜನಿಕರಿಗೆ ಇನ್ನೂ ಅನುಕೂಲವಾಗಬಹುದಿತ್ತು ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.
ಇಂದು ಪತ್ತೆಯಾದ ಕೊವಿಡ್ ಸೋಂಕಿತರೆಷ್ಟು?
ಕರ್ನಾಟಕದಲ್ಲಿ ಇಂದು ಒಂದೇ ದಿನ 20,628 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 492 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು ಒಂದೇ ದಿನ 42,444 ಜನರು ಸೋಂಕುಮುಕ್ತರಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿ 21,126 ಜನರು ಕೊವಿಡ್ನಿಂದ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಕೊವಿಡ್ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.14.95ರಷ್ಟಿದ್ದು, ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ.8.97ರಷ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 4,889 ಜನರಿಗೆ ಕೊವಿಡ್ ಸೋಂಕು ಖಚಿತಪಟ್ಟಿದ್ದು, 278 ಜನರ ನಿಧನರಾಗಿದ್ದಾರೆ.
ಇಂದು ಖಚಿತಪಟ್ಟ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25,67,449ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 21,89,064 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 28298 ಜನರ ಸಾವನ್ನಪ್ಪಿದ್ದು, 3,50,066 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಇಂದು ಒಂದೇ ದಿನ 20,628 ಜನರಿಗೆ ಕೊವಿಡ್ ದೃಢ, ರಾಜ್ಯದ ಪಾಸಿಟಿವಿಟಿ ದರ ಶೇ.14.95
(Karnataka govt announces exemption for motor vehicle tax in May due to Lockdown)