ಕೊವಿಡ್‌ನಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ ಫಂಡ್‌ನಿಂದ ಪ್ರತಿ ತಿಂಗಳು ಸ್ಟೈಫಂಡ್, ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ ಕೇಂದ್ರ ಸರ್ಕಾರ
PM Cares Fund: ಪಿಎಂ ಕೇರ್ಸ್ ಫಂಡ್‌ನಿಂದ ಮಕ್ಕಳು 18 ವರ್ಷ ತುಂಬಿದ ನಂತರ ಮಾಸಿಕ ಸ್ಟೈಫಂಡ್ ನೀಡಲು ಸರ್ಕಾರ ನಿರ್ಧರಿಸಿದ್ದು, 23 ನೇ ವರ್ಷಕ್ಕೆ ಕಾಲಿಟ್ಟಾಗ 10 ಲಕ್ಷ ರೂ ವಿಮೆ ಒದಗಿಸುವುದಾಗಿ ಪ್ರಧಾನಿ ಮಂತ್ರಿ ಕಾರ್ಯಾಲಯದಿಂದ ಘೋಷಿಸಲಾಗಿದೆ.
ದೆಹಲಿ: ಕೊವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು ಹಣ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪಿಎಂ ಕೇರ್ ಫಂಡ್‌ನಿಂದ ಹಣ ನೀಡಲು ಕೇಂದ್ರ ನಿರ್ಧಾರ ನಿರ್ಧರಿಸಿದ್ದು, ಕೊವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸಲು ಸಹ ಕೇಂದ್ರ ಸರ್ಕಾರ ನಿರ್ಧರಿಸಿದೆ. ಪಿಎಂ ಕೇರ್ಸ್ ಫಂಡ್‌ನಿಂದ ಮಕ್ಕಳು 18 ವರ್ಷ ತುಂಬಿದ ನಂತರ ಮಾಸಿಕ ಸ್ಟೈಫಂಡ್ ನೀಡಲು ಸರ್ಕಾರ ನಿರ್ಧರಿಸಿದ್ದು, 23 ನೇ ವರ್ಷಕ್ಕೆ ಕಾಲಿಟ್ಟಾಗ 10 ಲಕ್ಷ ರೂ ವಿಮೆ ಒದಗಿಸುವುದಾಗಿ ಪ್ರಧಾನಿ ಮಂತ್ರಿ ಕಾರ್ಯಾಲಯದಿಂದ ಘೋಷಿಸಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕೊವಿಡ್‌ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಭವಿಷ್ಯವನ್ನು ರಕ್ಷಿಸುವುದು ಸರ್ಕಾರದ ಜವಾಬ್ಧಾರಿಯಾಗಿದ್ದು, ಅಂತಹ ಮಕ್ಕಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಿಳಿಸಿದ್ದಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
ಕೊವಿಡ್‌ನಿಂದ ಅನಾಥರಾದ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಾಲ ಒದಗಿಸಿ, ಸಾಲದ ಬಡ್ಡಿಯನ್ನು ಪಿಎಂ ಕೇರ್ಸ್ ಫಂಡ್‌ನಿಂದ ಭರಿಸಲಾಗುವುದು. 18 ವರ್ಷದವರೆಗೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ 5 ಲಕ್ಷಗಳ ಆರೋಗ್ಯ ವಿಮೆಯನ್ನು ಸಹ ಕೊವಿಡ್‌ನಿಂದ ಅನಾಥರಾದ ಮಕ್ಕಳಿಗೆ ಒದಗಿಸಲಾಗುವುದು ಎಂದು ತಿಳಿಸಿಲಾಗಿದೆ.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹತ್ತಿರದ ಕೇಂದ್ರೀಯ ವಿದ್ಯಾಲಯ ಅಥವಾ ಖಾಸಗಿ ಶಾಲೆಗೆ ಸೇರಿಸಲಾಗುವುದು. ಖಾಸಗಿ ಶಾಲೆಗೆ ಸೇರಿದಲ್ಲಿ ಆರ್ಟಿಇ ಯೋಜನೆಯಡಿ ಪಿಎಂ ಕೇರ್ಸ್ ಫಂಡ್‌ನಿಂದ ಮಕ್ಕಳ ಫೀಸ್ ಭರಿಸಲಾಗುವುದು. ಮಕ್ಕಳ ಶಾಲಾ ಸಮವಸ್ತ್ರ, ನೋಟ್ಬುಕ್ ಮತ್ತಿತರ ಶೈಕ್ಷಣಿಕ ಅಗತ್ಯ ವಸ್ತುಗಳ ವೆಚ್ಚವನ್ನು ಸಹ ಪಿಎಂ ಕೇರ್ಸ್ ಫಂಡ್‌ನಿಂದ ಭರಿಸಲಾಗುವುದು. 11ರಿಂದ 18 ವರ್ಷಗಳ ಒಳಗಿನ ಮಕ್ಕಳಿಗೆ ಹತ್ತಿರದ ಕೇಂದ್ರೀಯ ವಿದ್ಯಾಲಯ ಅಥವಾ ಸೈನಿಕ ಶಾಲೆಗಳಲ್ಲಿ ಪ್ರವೇಶಾತಿ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಘೋಷಿಸಿದೆ.
ಕೊವಿಡ್ ಸೋಂಕಿನಿಂದ ಅದೆಷ್ಟೋ ಪೋಷಕರು ಬಲಿಯಾಗಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ದೇಶದಲ್ಲಿ ಸರಿಸುಮಾರು 2021ರ ಏಪ್ರಿಲ್ 1ರಿಂದ ಇಲ್ಲಿಯವರೆಗೆ 577 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸಮೀಕ್ಷೆಯೊಂದರ ವರದಿ ಉಲ್ಲೇಖಿಸಿ ಇತ್ತೀಚಿಗೆ ತಿಳಿಸಿದ್ದರು.
ಮಕ್ಕಳ ಹೊಣೆ ಜಿಲ್ಲಾಡಳಿತದ್ದು: ಸುಪ್ರೀಂ ಕೊರೊನಾದಿಂದ ಅನಾಥರಾದ ಮಕ್ಕಳ ಪಾಲನೆ ಹೊಣೆಯನ್ನು ಜಿಲ್ಲಾಡಳಿತಗಳು ವಹಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ದೇಶದ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿತ್ತು. ಕೊರೊನಾದಿಂದ ತಂದೆ, ತಾಯಿ ಕಳೆದುಕೊಂಡು ಅನಾಥ ಮಕ್ಕಳ ಅಗತ್ಯತೆಗಳನ್ನು ತಕ್ಷಣವೇ ಪೂರೈಸಲು ಜಿಲ್ಲಾಡಳಿತಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ದೇಶಾದ್ಯಂತ ಕೊರೊನಾದಿಂದ ಅನಾಥರಾದ ಮಕ್ಕಳ ವಿವರ, ಅಂಕಿಅಂಶ ನೀಡಲು ಕೋರ್ಟ್ ಎಲ್ಲ ರಾಜ್ಯ ಸರ್ಕಾರಗಳಿಗೆ ತಿಳಿಸಿದ್ದು, ಎಲ್ಲ ರಾಜ್ಯಗಳು ಮಕ್ಕಳು ಹಸಿವಿನಿಂದ ಇರದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಕೊರೊನಾದಿಂದ ಅನಾಥರಾದ ಮಕ್ಕಳನ್ನು ಗುರುತಿಸಿ ಶನಿವಾರ ಸಂಜೆಯೊಳಗೆ ಅವರ ವಿವರವನ್ನು NCPCR ವೆಬ್ ಸೈಟ್ ಗೆ ಅಪ್ಲೋಡ್ ಮಾಡುವಂತೆ ಜಿಲ್ಲಾಡಳಿತಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಜತೆಗೆ ಅನಾಥ ಮಕ್ಕಳ ಬಗ್ಗೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಕಾಯದೇ ಮಕ್ಕಳನ್ನ ನೋಡಿಕೊಳ್ಳಬೇಕು ಎಂದು ಸಹ ತಿಳಿಸಿರುವ ಕೋರ್ಟ್, ಮುಂದಿನ ಮಂಗಳವಾರ ಈ ಕುರಿತು ವಿಚಾರಣೆ ಮುಂದುವರೆಸುವುದಾಗಿ ತಿಳಿಸಿದೆ.
ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ವಿಶೇಷ ಪರಿಹಾರ ನೀಡುವ ಬಗ್ಗೆ ನಿನ್ನೆಯ (ಮೇ 27) ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿತ್ತು. ಕೇಂದ್ರದಿಂದ ಈ ಬಗ್ಗೆ ಹೊಸ ಮಾರ್ಗಸೂಚಿ ಬರಲಿದೆ. ಆ ಬಳಿಕ ಬಂದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದೀಗ ಸುಪ್ರೀಂಕೋರ್ಟ್ ಈ ಕುರಿತು ನಿರ್ದೇಶನ ನೀಡಿರುವುದರಿಂದ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯ ಸರ್ಕಾರಗಳು ಮಕ್ಕಳನ್ನು ಕಾಪಾಡುವ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ಪ್ಯಾಕೇಜ್ ಘೋಷಿಸುವ ನಿರೀಕ್ಷೆ ಇದೆ.
(Union Government to provide support to Orphaned Kids due to Covid pandemic by PM Cares Fund)
Published On - 6:40 pm, Sat, 29 May 21