ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ, ಗಣಿತ ಶಿಕ್ಷಕರಿಗೆ ಬರ: 22 ಲಕ್ಷ ವಿದ್ಯಾರ್ಥಿಗಳಿಗೆ 9 ಸಾವಿರ ಶಿಕ್ಷಕರು!

|

Updated on: Dec 16, 2024 | 9:56 AM

ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರ ತೀವ್ರ ಕೊರತೆಯಿದೆ. ಸುಮಾರು 22 ಲಕ್ಷ ವಿದ್ಯಾರ್ಥಿಗಳಿಗೆ ಕೇವಲ 8,895 ವಿಜ್ಞಾನ, ಗಣಿತ ಶಿಕ್ಷಕರಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ. ಅತಿಥಿ ಶಿಕ್ಷಕರ ನೇಮಕಾತಿ ಒಂದು ತಾತ್ಕಾಲಿಕ ಪರಿಹಾರ ಮಾತ್ರ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ, ಗಣಿತ ಶಿಕ್ಷಕರಿಗೆ ಬರ: 22 ಲಕ್ಷ ವಿದ್ಯಾರ್ಥಿಗಳಿಗೆ 9 ಸಾವಿರ ಶಿಕ್ಷಕರು!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 16: ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರ ಗಣನೀಯ ಕೊರತೆ ಇರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಕರ್ನಾಟಕವು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಗೆ ಹೆಸರುವಾಸಿಯಾಗಿದ್ದರೂ, ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯ ವರೆಗಿನ ಸುಮಾರು 22 ಲಕ್ಷ ವಿದ್ಯಾರ್ಥಿಗಳಿಗೆ ಕೇವಲ 8,895 ವಿಜ್ಞಾನ ಮತ್ತು ಗಣಿತ ಶಿಕ್ಷಕರಿದ್ದಾರೆ ಎಂದು ವರದಿಯಾಗಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 81,979 ಕನ್ನಡ ಶಿಕ್ಷಕರಿದ್ದರೆ, ಕೇವಲ 5,732 ಇಂಗ್ಲಿಷ್ ಶಿಕ್ಷಕರಿದ್ದಾರೆ. ಈ ಕೊರತೆಯನ್ನು ನೀಗಲು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇದು ದೀರ್ಘಾವಧಿಯ ಪರಿಹಾರವಲ್ಲ ಎಂದು ಶಿಕ್ಷಣತಜ್ಞರು ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗ್ರಾಮೀಣ ಭಾಗದ ಹಲವು ಶಾಲೆಗಳು ಮುಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಕಳಪೆ ಫಲಿತಾಂಶಕ್ಕೂ ಕಾರಣ

ಪ್ರತಿ ವರ್ಷ ಕೆಲವು ಜಿಲ್ಲೆಗಳು ಅಥವಾ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಬರಲು ಶಿಕ್ಷಕರ ಕೊರತೆಯೂ ಪರೋಕ್ಷ ಕಾರಣವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಿಗೆ ಸರಿಯಾಗಿ ಕಲಿಸದಿದ್ದರೆ, ಅವರಲ್ಲಿ ಕಲಿಕೆಯ ಆಸಕ್ತಿಯನ್ನು ಹುಟ್ಟುಹಾಕುವಲ್ಲಿ ಶಿಕ್ಷಕರು ವಿಫಲರಾದರೆ ಅದು ಸರ್ಕಾರದ ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡದಲ್ಲಿ ಬೋಧನೆ ಮಾಡುವುದರಿಂದ ಮಕ್ಕಳು ವೇಗವಾಗಿ ಗ್ರಹಿಸಬಹುದು. ಆದರೆ, ಇತರ ವಿಷಯಗಳ ಶಿಕ್ಷಕರ ತೀವ್ರ ಕೊರತೆ ಅವರ ಕಲಿಕೆಯನ್ನು ಕುಂಠಿತ ಮಾಡುತ್ತಿದೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ವಾಸುದೇವ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಶಿಕ್ಷಕರ ಸಂಖ್ಯೆ ಸಂಬಂಧಿತ ಅಂಕಿಅಂಶಗಳು ಆಘಾತಕಾರಿಯಾಗಿವೆ. ಇದು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಕುಂಠಿತಗೊಳಿಸುವಲ್ಲಿ ವ್ಯವಸ್ಥಿತ ವೈಫಲ್ಯವನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.

5, 8ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವುದು ಸರಿಯೇ?

ಕೆಲವೊಮ್ಮೆ, 5 ಅಥವಾ 8 ನೇ ತರಗತಿ ಮುಗಿದ ನಂತರ ವಿದ್ಯಾರ್ಥಿಗಳನ್ನು ಕನ್ನಡದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಬದಲಾಗುವಂತೆ ಒತ್ತಾಯಿಸಲಾಗುತ್ತದೆ. ಇದು ಅಪರಾಧಕ್ಕಿಂತ ಕಡಿಮೆಯಾದದ್ದೇನಲ್ಲ. ಯಾಕೆಂದರೆ, ಹೀಗೆ ಮಾಡಿದಾಗ ಮಕ್ಕಳು ಕಲಿಯಲು ಸಾಧ್ಯವಾಗದ ವಾತಾವರಣಕ್ಕೆ ತಳ್ಳಲ್ಪಡುತ್ತಾರೆ. ಆ ಸಂದರ್ಭದಲ್ಲಿ ಅವರ ಅಸಮರ್ಥತೆಗಾಗಿ ಅವಮಾನಕ್ಕೊಳಗಾಗುವ ಸಾಧ್ಯತೆಯೂ ಇದೆ ಎಂದು ಶರ್ಮಾ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

ಇತ್ತೀಚೆಗೆ, ಸರ್ಕಾರವು ನಿಯಮಗಳಲ್ಲಿ ಮಾಡಿದ ಬದಲಾವಣೆಗಳಿಂದ ಸುಮಾರು ಒಂದು ಲಕ್ಷ ಶಿಕ್ಷಕರಿಗೆ ಹಿಂಬಡ್ತಿ ನೀಡಲಾಯಿತು. 2016 ರ ಮೊದಲು ನೇಮಕಗೊಂಡವರು 1ರಿಂದ 5ನೇ ತರಗತಿಗೆ ಮಾತ್ರ ಬೋಧಿಸುವಂತೆ ಸರಕಾರ ಹೇರಿರುವ ನಿರ್ಧಾರದಿಂದ ಹಲವು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅಭಿವೃದ್ಧಿ ಶಿಕ್ಷಣತಜ್ಞ ನಿರಂಜನಾರಾಧ್ಯ ವಿಪಿ ಹೇಳಿದ್ದಾರೆ.

ಇದನ್ನೂ ಓದಿ: ಓದುತ್ತಿರುವ ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಈ ಸಿಂಪಲ್ ಟಿಪ್ಸ್ ​ ಟ್ರೈ ಮಾಡಿ

ಇಲಾಖೆಯಲ್ಲಿ 35,000 ಅತಿಥಿ ಶಿಕ್ಷಕರಿದ್ದು, ಅವರು 21.8 ಲಕ್ಷ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಅತಿಥಿ ಶಿಕ್ಷಕರ ಮೇಲಿನ ಅವಲಂಬನೆಯನ್ನು ಶಿಕ್ಷಣ ತಜ್ಞರು ಆಕ್ಷೇಪಿಸಿದ್ದಾರೆ. ಜತೆಗೆ, ಇದು ದೋಷಪೂರಿತ ವಿಧಾನ ಎಂದಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:53 am, Mon, 16 December 24