
ಬೆಳಗಾವಿ,ಡಿ.12: ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಸರ್ಕಾರವು ಮುಂದಿನ ಒಂದು ತಿಂಗಳೊಳಗೆ ರಾಜ್ಯದ ಆರೋಗ್ಯ ಇಲಾಖೆಯಲ್ಲಿರುವ (Karnataka health jobs) ಎಲ್ಲ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದು ಹೇಳಿದ್ದಾರೆ. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್‌ಸಿ), ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿನ ಕೊರತೆಯನ್ನು ನೀಗಿಸಲು ಸರ್ಕಾರ ತ್ವರಿತ ನೇಮಕಾತಿ ಆರಂಭಿಸಲಿದೆ ಎಂದು ಹೇಳಿದ್ದಾರೆ.
337 ತಜ್ಞ ವೈದ್ಯರು ಮತ್ತು 250 ಸಾಮಾನ್ಯ ಕರ್ತವ್ಯ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಸರ್ಕಾರಿ ಕೋಟಾದ ವೈದ್ಯಕೀಯ ಪದವೀಧರರಿಗೆ ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವಾ ಯೋಜನೆಯಡಿಯಲ್ಲಿ 1,500 ವೈದ್ಯರನ್ನು ಸಹ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಹಣಕಾಸು ಇಲಾಖೆಯು ನೇರ ನೇಮಕಾತಿಯ ಮೂಲಕ ಇನ್ನೂ 120 ತಜ್ಞ ವೈದ್ಯರು ಮತ್ತು 100 ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳ ನೇಮಕಾತಿಗೆ ಅನುಮೋದನೆ ನೀಡಿದೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲ ರೀತಿ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳು ವಿಳಂಬವಾಗ್ತಿರೋದೇಕೆ? ಕೇಂದ್ರ ಸರ್ಕಾರ ಕೊಟ್ಟ ಕಾರಣ ಇಲ್ಲಿದೆ
ಇನ್ನು ಇಲಾಖೆಯು 600 ಸ್ಟಾಫ್ ನರ್ಸ್ ಹುದ್ದೆಗಳು, 400 ಜೂನಿಯರ್ ಲ್ಯಾಬೋರೇಟರಿ ಟೆಕ್ನಿಷಿಯನ್ ಹುದ್ದೆಗಳು ಮತ್ತು 400 ಫಾರ್ಮಾಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುತ್ತಿದೆ. ಇದರ ಜತೆಗೆ ನಿವೃತ್ತ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿ ಡಾ. ಹಿಮಾಂಶು ಭೂಷಣ್ ನೇತೃತ್ವದ ತಜ್ಞರ ಸಮಿತಿಯು ಐಪಿಎಚ್‌ಎಸ್ (Indian Public Health Standards) ಮಾನದಂಡಗಳು ಮತ್ತು ರಾಷ್ಟ್ರೀಯ ಆರೋಗ್ಯ ನೀತಿ ಮಾರ್ಗಸೂಚಿಗಳ ಆಧಾರದ ಮೇಲೆ ಹೊಸ ಪಿಎಚ್‌ಸಿಗಳು (Primary Health Centre) ಮತ್ತು ಸಿಎಚ್‌ಸಿಗಳನ್ನು (Certificate in Community Health) ಸ್ಥಾಪಿಸಬೇಕಾದ ಸ್ಥಳಗಳನ್ನು ವೈಜ್ಞಾನಿಕವಾಗಿ ಗುರುತಿಸುವ ಕಾರ್ಯವನ್ನು ಇವರಿಗೆ ವಹಿಸಲಾಗಿದೆ .
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:06 am, Fri, 12 December 25