ಬಾಗಲಕೋಟೆ: ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಹಾಸ್ಟೆಲ್ ಬಿಟ್ಟ SSLC ವಿದ್ಯಾರ್ಥಿನಿಯರು
ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಮೊಬೈಲ್ ಬಳಸಬೇಡಿ ಎಂಬ ಸಿಬ್ಬಂದಿಯ ಎಚ್ಚರಿಕೆಗೆ ನಾಲ್ವರು SSLC ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್ ತೊರೆದ ಘಟನೆ ನಡೆದಿದೆ. ಈ ಬಗ್ಗೆ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಾಲ್ಕೇ ಗಂಟೆಗಳಲ್ಲಿ, ನಾಪತ್ತೆಯಾದ ವಿದ್ಯಾರ್ಥಿನಿಯರನ್ನು ವಿಜಯಪುರದಲ್ಲಿ ಪತ್ತೆ ಹಚ್ಚಲಾಗಿದೆ.

ಬಾಗಲಕೋಟೆ, ಡಿಸೆಂಬರ್ 12: ಹಾಸ್ಟೆಲ್ನಲ್ಲಿ ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್ ತೊರೆದ ಘಟನೆ ಬಾಗಲಕೋಟೆಯ (Bagalkot) ನವನಗರದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಈ ಪ್ರಕರಣ ಜಿಲ್ಲೆಯ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು, ತಕ್ಷಣವೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಕೊನೆಗೂ ವಿಜಪುರದಲ್ಲಿ ವಿದ್ಯಾರ್ಥಿನಿಯರನ್ನು ಪತ್ತೆ ಮಾಡಲಾಗಿದ್ದು, ಸುರಕ್ಷಿತವಾಗಿ ಕರೆತರಲಾಗಿದೆ.
ಸಿಬ್ಬಂದಿ ಮಾತಿಗೆ ಕೋಪಗೊಂಡ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ
ನವನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿನಿಯರನ್ನು ಕಂಡಿದ್ದ ಹಾಸ್ಟೆಲ್ ಸಿಬ್ಬಂದಿ, ಹಾಸ್ಟೆಲ್ನಲ್ಲಿ ಮೊಬೈಲ್ ಬಳಸಿದರೆ ಪೋಷಕರಿಗೆ ಹೇಳುತ್ತೇನೆ ಎಂದು ಎಚ್ಚರಿಸಿದ್ದರು. ಅಷ್ಟಕ್ಕೇ ಕೋಪಗೊಂಡ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ವಸತಿ ಶಾಲೆಯನ್ನೇ ಬಿಟ್ಟು ಹೊರಹೋಗಿದ್ದಾರೆ. ಈ ವಿಷಯ ತಿಳಿದ ಸಿಬ್ಬಂದಿ ಕೂಡಲೆ ಬಾಗಲಕೋಟೆಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ ಹಾಸ್ಟೆಲ್ನಲ್ಲಿ BAMS ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ
ಕೆಲವೇ ಗಂಟೆಗಳಲ್ಲಿ ಬಾಲಕಿಯರನ್ನು ಪತ್ತೆ ಹಚ್ಚಿದ ಪೊಲೀಸರು
ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ನಾಲ್ವರು ವಿದ್ಯಾರ್ಥಿನಿಯರ ಹುಡುಕಾಟ ಶುರು ಮಾಡಿದ್ದರು. ಕೊನೆಗೂ ವಿಜಯಪುರದ ಬಸ್ ನಿಲ್ದಾಣ ಬಳಿ ವಿದ್ಯಾರ್ಥಿನಿಯರನ್ನು ಪತ್ತೆ ಮಾಡಲಾಗಿದೆ. ಬಾಗಲಕೋಟೆಯಿಂದ ಹುನಗುಂದ ಹೋಗಿದ್ದ ವಿದ್ಯಾರ್ಥಿನಿಯರು, ಅಲ್ಲಿಂದ ವಿಜಯಪುರಕ್ಕೆ ತೆರಳಿದ್ದರು. ಬಾಲಕಿಯರು ನಾಪತ್ತೆಯಾದ ನಾಲ್ಕೇ ತಾಸಿನಲ್ಲಿ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು ನಡುರಾತ್ರಿ 12.30ರ ಹೊತ್ತಿಗೆ ಅವರನ್ನು ರಕ್ಷಿಸಿದ್ದಾರೆ.
ಹಾಸ್ಟೆಲ್ನಲ್ಲಿ ಮೊಬೈಲ್ ಬಳಕೆ ನಿಷೇಧ
ಮೊದಲಿನಿಂದಲೂ ಮೊರಾರ್ಜಿ ಶಾಲೆಗಳಲ್ಲಿ ಮಕ್ಕಳ ಮೊಬೈಲ್ ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಆದಾಗಿಯೂ ನಾಲ್ವರಲ್ಲಿ ಒಬ್ಬ ವಿದ್ಯಾರ್ಥಿನಿಯು ಕದ್ದು ಮುಚ್ಚಿ ಹಾಸ್ಟೆಲ್ ಒಳಗೆ ಮೊಬೈಲ್ ತಂದಿದ್ದು, ನಾಲ್ವರೂ ಸೇರಿ ಬಳಕೆ ಮಾಡುತ್ತಿರುವಾಗ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:51 am, Fri, 12 December 25




