ಅಂಗನವಾಡಿಗಳಲ್ಲಿ ವಿದ್ಯುತ್, ಶೌಚಾಲಯ ಮತ್ತು ಫ್ಯಾನ್ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಿ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

|

Updated on: Apr 20, 2021 | 4:15 PM

Karnataka High Court: ರಾಜ್ಯ ಸರ್ಕಾರ ಸಲ್ಲಿಸಿದ ವರದಿ ಪ್ರಕಾರ ರಾಜ್ಯದ 65,911 ಅಂಗನವಾಡಿ ಕೇಂದ್ರಗಳಲ್ಲಿ ಕೇವಲ 33,146 ಮಾತ್ರ ವಿದ್ಯುತ್ ಸಂಪರ್ಕವನ್ನು ಹೊಂದಿವೆ ಎಂದು ತಿಳಿದುಬಂದಿದೆ. ಕೇವಲ 29,516 ಕೇಂದ್ರಗಳಿಗೆ ಮಾತ್ರ ಫ್ಯಾನ್ ಇದೆ. 44,025 ಅಂಗನವಾಡಿಗಳಲ್ಲಿ ಮಾತ್ರ ಶೌಚಾಲಯ ಸೌಲಭ್ಯವಿದೆ.

ಅಂಗನವಾಡಿಗಳಲ್ಲಿ ವಿದ್ಯುತ್, ಶೌಚಾಲಯ ಮತ್ತು ಫ್ಯಾನ್ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಿ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಕರ್ನಾಟಕ ಹೈಕೋರ್ಟ್​
Follow us on

ಬೆಂಗಳೂರು: ಕರ್ನಾಟಕ ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲಿ ವಿದ್ಯುತ್ ಮತ್ತು ಶೌಚಾಲಯ ಸೌಲಭ್ಯ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ವಿಭಾಗೀಯ ಪೀಠವು ಅಂಗನವಾಡಿಗಳಲ್ಲಿನ ಮೂಲಸೌಕರ್ಯದ ಕೊರತೆ ಬಗ್ಗೆ ಬಗ್ಗೆ ಆಘಾತ ವ್ಯಕ್ತಪಡಿಸಿದೆ. ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳ ಕೊರತೆ ಬಗ್ಗೆ ವರದಿ ಆಗಿದೆ. ಅದರಲ್ಲಿನ ಮಾಹಿತಿಗಳು ಆಘಾತಕಾರಿಯಾಗಿವೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ರಾಜ್ಯದಲ್ಲಿ ಮಧ್ಯಮದಿಂದ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಎಲ್ಲ ಮಕ್ಕಳನ್ನು ಗುರುತಿಸಿ ಸಹಾಯ ಮಾಡಲು ಕೋರಿ ಸರ್ಕಾರೇತರ ಸಂಸ್ಥೆಯೊಂದು ಬರೆದ ಪತ್ರದ ಆಧಾರದ ಮೇಲೆ ಸುಮೊಟೊ ಅರ್ಜಿ ವಿಚಾರಣೆ ನಡೆದಿದೆ.

ರಾಜ್ಯ ಸರ್ಕಾರ ಸಲ್ಲಿಸಿದ ವರದಿ ಪ್ರಕಾರ ರಾಜ್ಯದ 65,911 ಅಂಗನವಾಡಿ ಕೇಂದ್ರಗಳಲ್ಲಿ ಕೇವಲ 33,146 ಮಾತ್ರ ವಿದ್ಯುತ್ ಸಂಪರ್ಕವನ್ನು ಹೊಂದಿವೆ ಎಂದು ತಿಳಿದುಬಂದಿದೆ. ಕೇವಲ 29,516 ಕೇಂದ್ರಗಳಿಗೆ ಮಾತ್ರ ಫ್ಯಾನ್ ಇದೆ. 44,025 ಅಂಗನವಾಡಿಗಳಲ್ಲಿ ಮಾತ್ರ ಶೌಚಾಲಯ ಸೌಲಭ್ಯವಿದೆ.

ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ಮಾಡಲು ಮತ್ತು ಎಲ್ಲಾ ಕೇಂದ್ರಗಳಿಗೆ ಫ್ಯಾನ್ ಪೂರೈಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ. 65,911 ಕೇಂದ್ರಗಳಿಗೆ ಶೌಚಾಲಯವನ್ನು ಒದಗಿಸುವಂತೆ ನಾವು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ ಎಂದು ನ್ಯಾಯಾಲಯ ಆದೇಶಿಸಿದೆ.

ಅದೇ ವೇಳೆ ಬೆಂಗಳೂರಿನಲ್ಲಿ ಸಾಕಷ್ಟು ಅಂಗನವಾಡಿಗಳನ್ನು ಸ್ಥಾಪಿಸುವಂತೆ ನ್ಯಾಯಾಲಯವು ರಾಜ್ಯವನ್ನು ಒತ್ತಾಯಿಸಿತು.

ಹುಡುಗರು, ಹುಡುಗಿಯರು ಮತ್ತು ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸಲು ನಾವು
ಶಿಫಾರಸು ಮಾಡುತ್ತೇವೆ. ರಾಜ್ಯವು ಈ ಶಿಫಾರಸುಗಳನ್ನು ಗಮನಿಸಬೇಕಾಗುತ್ತದೆ. ಬೆಂಗಳೂರು ನಗರದಲ್ಲಿ ಸಾಕಷ್ಟು ಸಂಖ್ಯೆಯ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರವು ನಿರ್ದೇಶನಗಳನ್ನು ಹಂತ ಹಂತವಾಗಿ ಪಾಲಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ. ಇದನ್ನು ಪಾಲಿಸಲು ಕಾಲಾವಕಾಶ ರೂಪಿಸುವ ಅಫಿಡವಿಟ್ ಅನ್ನು ಜೂನ್ 11 ರೊಳಗೆ ಸಲ್ಲಿಸಬೇಕು ಎಂದು ಕೋರ್ಟ್ ಹೇಳಿದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಗುರುತಿಸುವಿಕೆ, ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯ ಮೇಲ್ವಿಚಾರಣೆಗಾಗಿ ಹೈಕೋರ್ಟ್ ತನ್ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ ಗೌಡರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು.

ಇದನ್ನೂ ಓದಿ:  ಬೀದರ್​ನಲ್ಲಿ ಸೂಪರ್ ಅಂಗನವಾಡಿ ಕೇಂದ್ರ ; ಹೇಗಿದೆ ಗೊತ್ತಾ ಹೈಟೆಕ್ ಅಂಗನವಾಡಿ ?