ನೂತನ ಸರ್ಕಾರಕ್ಕೆ ಪಂಚಮಸಾಲಿಗೆ ಮೀಸಲಾತಿ ಸವಾಲು, ಸರ್ಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್

ಪಂಚಮಸಾಲಿಗೆ 2ಎ ಮೀಸಲಾತಿ ನೀಡದಂತೆ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ಮಾಡಿದ ಕರ್ನಾಟಕ ಹೈಕೋರ್ಟ್, ಅರ್ಜಿದಾರರು ಹಾಗೂ ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ.

ನೂತನ ಸರ್ಕಾರಕ್ಕೆ ಪಂಚಮಸಾಲಿಗೆ ಮೀಸಲಾತಿ ಸವಾಲು, ಸರ್ಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

Updated on: May 29, 2023 | 1:35 PM

ಬೆಂಗಳೂರು:  ನೂತನ ಕರ್ನಾಟಕ ಸರ್ಕಾರಕ್ಕೆ 2 ಎ ಮೀಸಲಾತಿ ಕೂಡಾ ಸವಾಲಾಗಿ ಎದುರಾಗಿದೆ. ಇಂದು(ಮೇ 29)  ಪಂಚಮಸಾಲಿಗೆ 2 ಎ ಮೀಸಲಾತಿ( panchmasali 2A Reservation ನೀಡದಂತೆ ಕೋರಿ ರಾಘವೇಂದ್ರ ಡಿ.ಜಿ. ಎಂಬುವರು ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ಕರ್ನಾಟಕ ಹೈಕೋರ್ಟ್(Karnataka High court), ವಿಭಾಗೀಯ ಪೀಠದಲ್ಲಿ ನಡೆಯಿತು.ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಸರ್ಕಾರದ ನಿಲುವು ತಿಳಿಸಲು ರಾಜ್ಯ ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಕಾಲಾವಕಾಶ ಕೋರಿದರು. ಹೀಗಾಗಿ ಅರ್ಜಿದಾರರು ಹಾಗೂ ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮಕುಮಾರ್ ಇನ್ನೂ ಹಿಂದುಳಿದ ವರ್ಗಗಳ ಆಯೋಗದ ವರದಿಯ ಪ್ರತಿಯನ್ನು ಸರ್ಕಾರ ತಮಗೆ ಒದಗಿಸಿಲ್ಲ. ಆಯೋಗ ವರದಿ ಸಲ್ಲಿಸಿದ ನಂತರ ರಾಜ್ಯ ಸರ್ಕಾರ 2 ಸಿ, 2 ಡಿ ಮೀಸಲಾತಿ ನೀಡಿದೆ. ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಮಾಹಿತಿ ಇದೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿಯ ಪ್ರತಿಯನ್ನು ತಮಗೆ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ಪ್ರಸನ್ನ ಬಿ ವರಾಳೆ, ಮುಚ್ಚಿದ ಲಕೋಟೆಯಲ್ಲಿನ ವರದಿ ತೆರೆಯಲು ಕೋರ್ಟ್ ನ ಅಧಿಕಾರಿಗೆ ಸೂಚನೆ ನೀಡಿದರು. ಅಲ್ಲದೇ ವರದಿಯ ಪ್ರತಿಯನ್ನು ಅರ್ಜಿದಾರರಿಗೆ ಒದಗಿಸಬೇಕು. ‌ ಪ್ರತಿ ಸಿಕ್ಕ 2 ವಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅಗತ್ಯವಿರುವ ತಿದ್ದುಪಡಿ ಮಾಡಲು ಅರ್ಜಿದಾರರಿಗೆ ಅವಕಾಶ ನೀಡಿದರು.

ಇದಾದ 2 ವಾರಗಳಲ್ಲಿ ಸರ್ಕಾರ ತಿದ್ದುಪಡಿಯಾದ ಪಿಐಎಲ್ ಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಸುಪ್ರೀಂ ಕೋರ್ಟ್ ಮುಸ್ಲಿಮರಿಗೆ ನೀಡಿದ್ದ ಶೇ. 4 ರ ಮೀಸಲಾತಿ ರದ್ದು ಕುರಿತು ವಿಚಾರಣೆ ನಡೆಸುತ್ತಿದೆ. ಆ ಅರ್ಜಿಯಲ್ಲಿ ಸುಪ್ರೀಂಕೋರ್ಟ್ ನೀಡುವ ಆದೇಶ ಈ ಪ್ರಕರಣದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಚಾಣೆಯನ್ನು ಜುಲೈ 25 ರ ನಂತರ ಕೈಗೆತ್ತಿಕೊಳ್ಳುವುದಾಗಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಮುಂದೆ ನೀಡುವ ಆದೇಶವನ್ನೂ ಹಾಜರುಪಡಿಸುವಂತೆ ಸರ್ಕಾರಕ್ಕೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾ.ಎಂ.ಜಿ.ಎಸ್. ಕಮಲ್ ರಿದ್ದ ಪೀಠ ವಿಚಾರಣೆಯನ್ನು ಮುಂದೂಡಿದೆ. ರಾಜ್ಯ ಸರ್ಕಾರ ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ 2 ಸಿ, 2 ಡಿ ಅಡಿ ಹೆಚ್ಚುವರಿ ಮೀಸಲಾತಿ ಒದಗಿಸಿತ್ತು. ಹೆಚ್ಚುವರಿ ಮೀಸಲಾತಿ ನೀಡುವ ಸರ್ಕಾರದ ಕ್ರಮವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

Published On - 1:01 pm, Mon, 29 May 23