
ಬೆಂಗಳೂರು, (ಅಕ್ಟೋಬರ್ 09): ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಹೈಕೋರ್ಟ್ ಗೆ (Karnataka High Court) ಮೇಲ್ಮನವಿ ಸಲ್ಲಿಸಿದ್ದಾರೆ. ಇಂದು(ಅಕ್ಟೋಬರ್ 09) ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದ್ಗಲ್ ಮತ್ತು ನ್ಯಾ.ವೆಂಕಟೇಶ್ ನಾಯ್ಕ್ ಟಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸಮಗ್ರ ಸಾರಾಂಶ ಸಲ್ಲಿಸಲು ಪ್ರಜ್ವಲ್ ಪರ ವಕೀಲರಿಗೆ ಸೂಚನೆ ನೀಡಿದೆ. ಜೊತೆಗೆ ಪ್ರಜ್ವಲ್ ಮೇಲ್ಮನವಿ ಬಗ್ಗೆ ಪ್ರತಿವಾದಿಯಾಗಿ ವಾದಿಸಲು ಎಸ್‌ಪಿಪಿ ನೇಮಕದ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದೆ.
ರಾಜಕೀಯ ದುರುದ್ದೇಶದಿಂದ ಮಹಿಳೆಯನ್ನು ಅಸ್ತ್ರವಾಗಿಸಿ ಎಫ್‌ಐಆರ್ ದಾಖಲಿಸಲಾಗಿದೆ. 2023 ರಲ್ಲಿ ಫಾರ್ಮ್ ಹೌಸ್ ನ ಗೃಹಪ್ರವೇಶದಲ್ಲಿ ಮಹಿಳೆ ಪಾಲ್ಗೊಂಡಿದ್ದಾರೆ. ಅತ್ಯಾಚಾರವಾಗಿದ್ದರೆ ಮಹಿಳೆ ಗೃಹಪ್ರವೇಶಕ್ಕೆ ಹೇಗೆ ಬರುತ್ತಿದ್ದರು. ಅಲ್ಲದೇ ಈ ಮಹಿಳೆಯಿಂದ 3 ವರ್ಷದ ಬಳಿಕ ಪೊಲೀಸರು ದೂರು ಪಡೆದಿದ್ದಾರೆ. ಸ್ಟೋರ್ ರೂಮಿನಲ್ಲಿ ಬಟ್ಟೆ, ಕೂದಲಿದ್ದ ಬ್ಯಾಗ್ ಅನ್ನು ಮಹಿಳೆ ಗುರುತಿಸಿಲ್ಲ. ಬ್ಯಾಟರಿ, ಪೇಂಟ್ ಇದ್ದ ರೂಮಿನಲ್ಲಿ ಮಹಿಳೆಯ ಉಡುಪು ಸಿಕ್ಕಿತೆಂದು ಹೇಳಿದ್ದಾರೆ.ಲಾಕ್ ಆಗಿದ್ದ ರೂಮಿನಲ್ಲಿ ವೀರ್ಯಾಣುವಿದ್ದ ಬಟ್ಟೆ ಸಿಗಲು ಸಾಧ್ಯವೇ? ಕೂದಲನ್ನು ಸುತ್ತಿ ಬ್ಯಾಗ್ ನಲ್ಲಿ ಇಟ್ಟ ರಹಸ್ಯ ತಿಳಿಯುತ್ತಿಲ್ಲ. ಮಹಿಳೆಯ ಸಿಆರ್ ಪಿಸಿ 164 ಹೇಳಿಕೆಯನ್ನು ಕೋರ್ಟ್ ಗೆ ಹಾಜರುಪಡಿಸಿಲ್ಲ. ವಿಡಿಯೋ ಇತ್ತೆಂದು ಆರೋಪಿಸಲಾದ ಮೊಬೈಲ್ ಅನ್ನೇ ವಶಕ್ಕೆ ಪಡೆದಿಲ್ಲ. ಎಫ್‌ಎಸ್‌ಎಲ್ ವರದಿಯಲ್ಲೂ ವಿರೋಧಾಭಾಸಗಳಿವೆ. ಹೀಗಾಗಿ ಶಿಕ್ಷೆ ರದ್ದುಪಡಿಸುವಂತೆ ಪ್ರಜ್ವಲ್ ರೇವಣ್ಣ ಪರ ವಕೀಲರು ಹೈಕೋರ್ಟ್ ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಕೆಆರ್ ನಗರ ಮೂಲದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆ ನಂತರ ಆಕೆಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿತ್ತು. ಜೊತೆಗೆ 10 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದರು. ಇನ್ನು ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತೀರ್ಪುನ್ನು ಕೋರ್ಟ್ ಕೇವಲ ನಾಲ್ಕೇ ತಿಂಗಳಲ್ಲಿ ಪ್ರಕಟಿಸಿರುವುದು ದಾಖಲೆಯಾಗಿದೆ.
ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟಿನ ತೀರ್ಪು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದು, ಇದಕ್ಕೆ ಪ್ರತಿವಾದಿಯಾಗಿ ಸರ್ಕಾರ ಪರ ವಕೀಲರು ಯಾವ ರೀತಿ ವಾದ ಮಂಡನೆ ಮಾಡುತ್ತಾರೆ? ಹೈಕೋರ್ಟ್ ಏನು ಆದೇಶ ಮಾಡುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 7:27 pm, Thu, 9 October 25