
ಬೆಂಗಳೂರು: ಚೀನಾ ಆ್ಯಪ್ (China App) ಮೂಲಕ ಸಾಲ ನೀಡಿ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೆ. ಇಂಡಿಟ್ರೇಡ್ ಫಿನ್ಕಾರ್ಪ್ಗೆ (M/s Inditrade Fincorp Ltd) ಕರ್ನಾಟಕ ಹೈಕೋರ್ಟ್ನಲ್ಲಿ (Karnataka High Court) ಬುಧವಾರ ಭಾರೀ ಹಿನ್ನಡೆಯಾಗಿದೆ. ಜಾರಿ ನಿರ್ದೇಶನಾಲಯವು (ED) ಬ್ಯಾಂಕ್ ಖಾತೆ ಜಪ್ತಿ ಮಾಡಿರುವುದನ್ನು ಪ್ರಶ್ನಿಸಿ ಇಂಡಿಟ್ರೇಡ್ ಫಿನ್ಕಾರ್ಪ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ವಜಾಗೊಳಿಸಿದೆ. ಸಣ್ಣ ಮೊತ್ತದ ಸಾಲ ನೀಡಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿರುವ ಆರೋಪ ಇಂಡಿಟ್ರೇಡ್ ಫಿನ್ಕಾರ್ಪ್ ಮೇಲಿದೆ. ಜತೆಗೆ, ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದುದು, ಚೀನಾ ನಂಟಿನ ಆರೋಪವನ್ನೂ ಎದುರಿಸುತ್ತಿದೆ. ಈ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಕಂಪನಿಯ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.
ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ವಿದೇಶಿ ಕೈವಾಡದಿಂದ ಸಂಚು ಹೂಡಿರುವ ಆರೋಪವೂ ಕಂಪನಿ ಮೇಲಿದೆ. ರಾಷ್ಟ್ರದ ಆರ್ಥಿಕ ಭದ್ರತೆ, ನಾಗರಿಕರ ಹಿತಾಸಕ್ತಿ ರಕ್ಷಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಮುಂದುವರಿಯುವ ಅಗತ್ಯವಿದೆ ಎಂದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ: Loan Apps: ಆ್ಯಪ್ಗಳಿಂದ ಸಾಲ ಪಡೆಯುವ ಮುನ್ನ ಇರಲಿ ಎಚ್ಚರ, ಚೀನಿ ಆ್ಯಪ್ಗಳಿಂದ ಆಗುವ ಮತ್ತೊಂದು ದೋಖಾ ಬಯಲು
ಈ ಹಿಂದೆ ದೇಶದ ಭದ್ರತೆಯ ದೃಷ್ಟಿಯಿದ ಟಿಕ್ ಟಾಕ್ ಸೇರಿದಂತೆ ಹಲವು ಚೀನೀ ಆ್ಯಪ್ಗಳನ್ನು ನಿಷೇಧಿಸಿದ್ದ ಭಾರತ ಸರ್ಕಾರ ಇತ್ತೀಚೆಗಷ್ಟೇ ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇಧಿಸಲು ತುರ್ತು ಕ್ರಮ ಕೈಗೊಂಡಿತ್ತು. ಇದರಲ್ಲಿ 138 ಬೆಟ್ಟಿಂಗ್ ಆ್ಯಪ್ಗಳು ಮತ್ತು 94 ಲೋನ್ ಆ್ಯಪ್ಗಳು ಸೇರಿವೆ. ಈ ಆ್ಯಪ್ಗಳನ್ನು ತಡೆಹಿಡಿಯಲು ಗೃಹ ಸಚಿವಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಸೂಚನೆ ಹೋಗಿದ್ದು, ಕ್ರಮ ಜರುಗಿಸಲಾಗುತ್ತಿದೆ ಎಂದು ವರದಿಯೊಂದು ಫೆಬ್ರುವರಿ ಆರಂಭದಲ್ಲಿ ತಿಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ