ಬೆಂಗಳೂರು, (ಜನವರಿ 28): ಮುಡಾ ಹಗರಣದ ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಡಿಬಾರ್ ಮಾಡಿದ್ದ ಕೇಂದ್ರ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರನ್ನು ನೇಮಿಸಿತ್ತು. ಹೀಗಾಗಿ ಅವರು ಕೇಂದ್ರ ಸಿಎಟಿ ಸದಸ್ಯ ಸ್ಥಾನ ನಿರಾಕರಿಸಿದ್ದರು. ಇದರಿಂದ ಕೇಂದ್ರ ಸರ್ಕಾರವು ದೇಸಾಯಿ ಅವರನ್ನು 3 ವರ್ಷಗಳ ಕಾಲ ಸರ್ಕಾರದ ಎಲ್ಲಾ ನೇಮಕಾತಿಗಳಿಂದ ಡಿಬಾರ್ ಮಾಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ದೇಸಾಯಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ದೇಸಾಯಿ ಡಿಬಾರ್ ಮಾಡಿದ್ದ ಕೇಂದ್ರದ ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ.
ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ರಾಜ್ಯ ಸರ್ಕಾರ ಮುಡಾ ಹಗರಣದ ತನಿಖಾ ಆಯೋಗದ ಮುಖ್ಯಸ್ಥರಾಗಿ ನೇಮಿಸಿತ್ತು. ಹೀಗಾಗಿ ದೇಸಾಯಿ ಅವರನ್ನು ಕೇಂದ್ರ ಸರ್ಕಾರ ಸಿಎಟಿ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಆದ್ರೆ, ಅವರು ಈ ಸ್ಥಾನವನ್ನು ನಿರಾಕರಿಸಿದ್ದರು. ಆದರೂ ಸಹ ಕೇಂದ್ರ, ಸಿಎಟಿ ಸದಸ್ಯರಾಗಿ ನೇಮಕವಾದ 30 ದಿನಗಳಲ್ಲಿ ಹುದ್ದೆ ಸ್ವೀಕರಿಸಬೇಕು. ಆದ್ರೆ, ಸ್ವೀಕರಿಸದೇ ನಿಯಮ ಉಲ್ಲಂಘಿಸಿದ್ದಕ್ಕೆ 3 ವರ್ಷ ಇತರೆ ಯಾವುದೇ ಹುದ್ದೆ ಸ್ವೀಕರಿಸದಂತೆ ದೇಸಾಯಿ ಅವರಿಗೆ ನಿರ್ಬಂಧಿಸಿತ್ತು.
ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ನಿವೃತ್ತ ನ್ಯಾ.ಪಿ.ಎನ್.ದೇಸಾಯಿ ಹೈಕೋರ್ಟ್ಗೆ ಮೊರೆ ಹೋಗಿದ್ದು, ನಿರ್ಬಂಧಕ್ಕೆ ಮುನ್ನ 15 ದಿನಗಳ ನೋಟಿಸ್ ನೀಡಿಲ್ಲವೆಂದು ಅರ್ಜಿದಾರರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದರು. ಈ ವಾದವನ್ನು ಆಲಿಸಿದ ನ್ಯಾ.ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ದೇಸಾಯಿ ವಿರುದ್ಧದ ಡಿಬಾರ್’ ಆದೇಶಕ್ಕೆ ತಡೆ ನೀಡಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶಿಸಿದೆ. ಇನ್ನು ಮುಂದಿನ ವಿಚಾರಣೆಯನ್ನು ವಿಚಾರಣೆ ಫೆಬ್ರವರಿ 6ಕ್ಕೆ ನಿಗದಿಪಡಿಸಿದೆ.
ನಿವೃತ್ತ ನ್ಯಾ. ದೇಸಾಯಿ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದು, ನ್ಯಾ. ದೇಸಾಯಿ ಅವರು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿದ್ದು,ಹೈದಾರಾಬಾದ್ ಪೀಠದ ಸಿಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ರಾಷ್ಟ್ರಪತಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಆಗಸ್ಟ್ 14ರಂದು ಪತ್ರ ಬರೆದಿದ್ದಾರೆ. ಇದರಲ್ಲಿ ಮುಡಾ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿದ್ದು, ಆರು ತಿಂಗಳಲ್ಲಿ ಜವಾಬ್ದಾರಿ ಮುಗಿಯಲಿದೆ. ಹೀಗಾಗಿ, ಸದ್ಯಕ್ಕೆ ಕೇಂದ್ರ ಸರ್ಕಾರದ ನೇಮಕಾತಿಯನ್ನು ನಿರಾಕರಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಅಲ್ಲದೇ ನೇಮಕಾತಿ ಪ್ರಸ್ತಾವವನ್ನು ಸಂಪುಟ ನೇಮಕಾತಿ ಸಮಿತಿಗೆ ಕಳುಹಿಸುವುದಕ್ಕೂ ಮುನ್ನ ಆಯ್ಕೆಯಾಗಿರುವವರ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಇದಾದ ಬಳಿಕ 30 ದಿನಗಳಲ್ಲಿ ನೇಮಕವಾದವರು ಕರ್ತವ್ಯಕ್ಕೆ ಹಾಜರಾಗದಿದ್ದರೆ 15 ದಿನಗಳ ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡಬೇಕು. ಅದಾಗ್ಯೂ ಅವರು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಡಿಬಾರ್ ಮಾಡಬಹುದು. ಇಲ್ಲಿ, ನ್ಯಾ. ದೇಸಾಯಿ ಅವರಿಗೆ ಆಯ್ಕೆಯಾದ ಬಳಿಕ ಅವರ ಒಪ್ಪಿಗೆ ಪಡೆದಿಲ್ಲ, ಡಿಬಾರ್ ಮಾಡುವುದಕ್ಕೂ ಮುನ್ನ ನೋಟಿಸ್ ಸಹ ನೀಡಿಲ್ಲ. ನ್ಯಾ. ದೇಸಾಯಿ ಅವರನ್ನು ಸಿಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡುವುದರಿಂದ ಡಿಬಾರ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿದೆ. ಹೀಗಾಗಿ, ಡಿಬಾರ್ ಮಾಡಿರುವ ಆದೇಶಕ್ಕೆ ತಡೆಯಾಜ್ಞೆ ವಿಧಿಸಬೇಕು ಎಂದು ಉದಯ್ ಹೊಳ್ಳ ಅವರು ತಮ್ಮ ವಾದಲ್ಲಿ ಕೋರ್ಟ್ಗೆ ಮನವಿ ಮಾಡಿದರು.
ನ್ಯಾ.ಪಿ ಎನ್ ದೇಸಾಯಿ ಅವರು ಸಿಎಟಿಗೆ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದಾದ ಆರು ತಿಂಗಳು ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ. ಈ ಮಧ್ಯೆ, ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರವು ಪಿ ಎನ್ ದೇಸಾಯಿ ಅವರ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ಆಯೋಗ ರಚಿಸಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರವು ನ್ಯಾ. ದೇಸಾಯಿ ಅವರಿಗೆ ಸಿಎಟಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ನೇಮಕಾತಿ ಪತ್ರ ಕಳುಹಿಸಿತ್ತು. ಮುಡಾ ಹಗರಣದ ತನಿಖೆಗೆ ಆರು ತಿಂಗಳ ಗಡುವು ನೀಡಿದ್ದು, ಅದು ಮುಗಿದ ಬಳಿಕ ಸಿಎಟಿ ಜವಾಬ್ದಾರಿ ಪಡೆದುಕೊಳ್ಳುವುದಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಕೇಂದ್ರ ಸರ್ಕಾರವು ನ್ಯಾ. ದೇಸಾಯಿ ಅವರನ್ನು ಮೂರು ವರ್ಷಗಳಿಗೆ ಡಿಬಾರ್ ಮಾಡಿದೆ ಎಂದು ವಾದ ಮಂಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.