ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ಖಾಸಗಿ ಅನುದಾನ ರಹಿತ ಶಾಲೆಗಳು ರಾಜ್ಯ ಸರ್ಕಾರ ನಿಗದಿ ಪಡಿಸಿದ ರೀತಿಯಲ್ಲಿ ಶುಲ್ಕ ಪಡೆಯುವುದನ್ನು ಕಡ್ಡಾಯಪಡಿಸುವ ಹಾಗೂ ಉಲ್ಲಂಘಿಸಿದರೆ ಶಿಕ್ಷೆ ವಿಧಿಸುವ ಕರ್ನಾಟಕ ಶಿಕ್ಷಣ ಕಾಯಿದೆ 1983ರ ಕೆಲ ಸೆಕ್ಷನ್ ಗಳನ್ನು ಹೈಕೋರ್ಟ್ ಅಸಾಂವಿಧಾನಿಕ ಎಂದು ಹೈಕೋರ್ಟ್ ಹೇಳಿದೆ.

ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ: ಹೈಕೋರ್ಟ್ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್
Updated By: ರಮೇಶ್ ಬಿ. ಜವಳಗೇರಾ

Updated on: Jan 07, 2023 | 8:58 AM

ಬೆಂಗಳೂರು: ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ(Private Schools Fees) ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್(Karnataka High Court) ಏಕಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿದೆ. ಖಾಸಗಿ ಅನುದಾನ ರಹಿತ ಶಾಲೆಗಳು ರಾಜ್ಯ ಸರ್ಕಾರ ನಿಗದಿ ಪಡಿಸಿದ ರೀತಿಯಲ್ಲಿ ಶುಲ್ಕ ಪಡೆಯುವುದನ್ನು ಕಡ್ಡಾಯಪಡಿಸುವ ಹಾಗೂ ಉಲ್ಲಂಘಿಸಿದರೆ ಶಿಕ್ಷೆ ವಿಧಿಸುವ ಕರ್ನಾಟಕ ಶಿಕ್ಷಣ ಕಾಯಿದೆ 1983ರ ಕೆಲ ಸೆಕ್ಷನ್ ಗಳನ್ನು ಹೈಕೋರ್ಟ್ ಅಸಾಂವಿಧಾನಿಕ ಎಂದು ಹೈಕೋರ್ಟ್ ಹೇಳಿದೆ.

ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸೇರಿದಂತೆ ಮತ್ತಿತರ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಇ.ಎಸ್.ಇಂದಿರೇಶ್ ಅವರಿದ್ದ ನ್ಯಾಯಪೀಠ ಈ ಆದೆಶ ನೀಡಿದೆ. ಇದರಿಂದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಶುಲ್ಕ ವಿಧಿಸುವುದನ್ನು ನಿಯಂತ್ರಿಸುವುದಕ್ಕೆ ಸರ್ಕಾರಕ್ಕೆ ಇದ್ದ ಅಧಿಕಾರ ರದ್ದಾದಂತಾಗಿದೆ.

ಮಕ್ಕಳ ಅಪರಾಧಗಳಿಂದ ರಕ್ಷಣೆ, ಸುರಕ್ಷತೆ ಕಾಪಾಡುವ ಮಾರ್ಗಸೂಚಿ ಉಲ್ಲಂಘನೆಗೆ ದಂಡನೆ ವಿಧಿಸುವ ಅಧಿಕಾರವೂ ಕಾನೂನು ಬಾಹಿರ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರ ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ಅದರ ಉದ್ಯೋಗಿಗಳಿಂದ ಮೇಲೆ ಕ್ರಮ ಕೈಗೊಳ್ಳಬಹುದಾದ ಸೆಕ್ಷನ್ 5ಎ, ಅನುದಾನ ರಹಿತ ಶಾಲೆಗಳನ್ನು ನಿಯಂತ್ರಿಸುವ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ(ಡಿಇಆರ್‌ಎ)ಕ್ಕೆ ಅಧಿಕಾರ ಒದಗಿಸುವ ಸೆಕ್ಷನ್ 2(11)( ಎ), ನಿಗದಿಗಿಂತಲೂ ಹೆಚ್ಚುವರಿ ಶುಲ್ಕ ಪಡೆಯುವುದನ್ನು ನಿಯಂತ್ರಿಸುವ ಸೆಕ್ಷನ್ 48ರ ಉಲ್ಲಂಘನೆ ಮಾಡುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ 10 ಲಕ್ಷದವರೆಗೂ ದಂಡ ವಿಧಿಸುವುದಕ್ಕೆ ಅವಕಾಶ ನೀಡುವ ಸೆಕ್ಷನ್ 124ಎ ಅನ್ನು ಅಸಾಂವಿಧಾನಿಕ ಎಂದು ತಿಳಿಸಿದೆ.

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಹಕ್ಕುಗಳ ಮೆಲೆ ಸುಪ್ರೀಂಕೊರ್ಟ್ ರೂಪಿಸಿರುವ ಪ್ರಕಾರ ಕರ್ನಾಟಕ ಶಿಕ್ಷಣ ಕಾಯಿದೆ 1983ರ ಈ ಸೆಕ್ಷನ್‌ಗಳು ಸಂವಿಧಾನ ಪರಿಚ್ಛೇದ 14( ಕಾನೂನಿನಲ್ಲಿ ಸಮಾನತೆ), ಪರಿಚ್ಛೇದ 19(1)(ಜಿ)(ಕಾನೂನಿನ ಅಧೀನದಲ್ಲಿರುವ ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಮತ್ತು ವ್ಯವಹಾರವನ್ನು ನಡೆಸುವ ಹಕ್ಕು)ಯ ಉಲ್ಲಂಘನೆ ಮಾಡಿದಂತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.