Karnataka Hijab Hearing Live: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದ್ದಿದೆ. ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಸಮರ ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ. ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಅಂತ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದಾರೆ. ಆದರೆ ಈ ವಿವಾದದ ಬಗ್ಗೆ ಇಂದು ಹೈಕೋರ್ಟ್ನಲ್ಲಿ ವಿಚಾರಣೆ ಅಂತ್ಯವಾಗಿದೆ. ನಿನ್ನೆ ವಾದ ಪ್ರತಿವಾದದ ಬಳಿಕ ಕೋರ್ಟ್ ಇಂದಿಗೆ ವಿಚಾರಣೆ ಮುಂದೂಡಿತ್ತು. ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಅಂತ ಇಡೀ ರಾಜ್ಯ ಕಾದು ಕುಳಿತಿತ್ತು. ಆದರೆ ನಾಳೆ ಹಿಜಾಬ್ ಸಂಬಂಧ ಪಿಐಎಲ್ ಹಾಗೂ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ ಎಂದು ತ್ರಿಸದಸ್ಯರ ಪೀಠ ತಿಳಿಸಿದೆ. ಹಿಜಾಬ್ ವಿವಾದ ಹಿನ್ನೆಲೆ ಬಂದ್ ಆಗಿದ್ದ ಕಾಲೇಜುಗಳು ಇಂದಿನಿಂದ ಆರಂಭವಾಗಿದೆ. ಈ ನಡುವೆ ಹಿಜಾಬ್ ಧರಿಸಿ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡವಂತೆ ಒತ್ತಾಯಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆಗಳು ನಡೆದವು.
ನಾಳೆ ಹಿಜಾಬ್ ಸಂಬಂಧ ಪಿಐಎಲ್ ಹಾಗೂ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ. ಹಿಜಾಬ್ ಮತ್ತು ಸಮವಸ್ತ್ರದ ಕುರಿತಾದ ವಿಚಾರಣೆಯನ್ನು ನಾಳೆ ಹೈಕೋರ್ಟ್ ನಡೆಸಲಿದೆ. ಹೈಕೋರ್ಟ್ ಆದೇಶದ ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಲು ಹಿರಿಯ ವಕೀಲ ರವಿವರ್ಮಕುಮಾರ್ ನಿರ್ಧರಿಸಿದ್ದು, ದುಪಟ್ಟಾವನ್ನೇ ಧರಿಸಲು ಅನುಮತಿಗೆ ಮನವಿ ಮಾಡಿದ್ದಾರೆ. ಇನ್ನು ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ಎಜಿ ಹೇಳಿಕೆ ನೀಡಿದ್ದಾರೆ.
ಯೂಸುಫ್ ಅವರ ವಾದ ಕೇಳಿದ ಸಿಜೆ ನೀವು ಇನ್ನೂ ಏನನ್ನಾದರೂ ಹೇಳುವುದಕ್ಕಿದೆಯೇ ಎಂದಿದ್ದಾರೆ. ಈ ವೇಳೆ ಅವರು ನಾಳೆ ಸ್ವಲ್ಪ ಸಮಯ ನೀಡಿದರೆ ವಾದ ಮುಗಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ನೀವು ಲಿಖಿತ ವಾದಮಂಡನೆ ಸಲ್ಲಿಸಿ ಪರಿಶೀಲಿಸುತ್ತೇವೆ ಎಂದು ಸಿಜೆ ಹೇಳಿದ್ದಾರೆ. ನಂತರ ಅವರು ಮಧ್ಯಪ್ರದೇಶ ಹೈಕೋರ್ಟ್ ತೀರ್ಪಅನ್ನು ಉಲ್ಲೇಖಸಿ ಯೂಸುಫ್ ಮುಕ್ಕಲಾ ವಾದಮಂಡನೆ ಮುಕ್ತಾಯಗೊಳಿಸಿದ್ದಾರೆ.
ಸಂವಿಧಾನದಲ್ಲಿ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೀಡಿದೆ. ಸಮವಸ್ತ್ರದ ಹೆಸರಲ್ಲಿ ಬೇರೆಯವರ ಹಕ್ಕನ್ನು ಕಿತ್ತುಕೊಳ್ಳುವಂತಿಲ್ಲ. ನನ್ನ ಶಿಕ್ಷಣದ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳುವಂತಿಲ್ಲ. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು ಹಕ್ಕೆಂದು ತಿಳಿದಿದ್ದಾರೆ. ಈ ಹಕ್ಕನ್ನು ಸರ್ಕಾರ ಗೌರವಿಸಬೇಕು
ಹುಡುಗಿ ಕನ್ನಡಕ ಹಾಕಿದರೂ ನಿರ್ಬಂಧಿಸುತ್ತೀರಾ? ಎಂದ ವಕೀಲರು, ಸರ್ಕಾರದ ಕ್ರಮ ನ್ಯಾಯಬದ್ದವಾಗಿಲ್ಲ, ಆದೇಶಕ್ಕೂ ಮುನ್ನ ಪೋಷಕರ ನಿಲುವು ಕೇಳಬೇಕಿತ್ತು. ಆದೇಶಕ್ಕೂ ಮುನ್ನ ಪೋಷಕರು, ಶಿಕ್ಷಕರ ಸಮಿತಿಯನ್ನೂ ಕೇಳಿಲ್ಲ. ಇತರೆ ಮಕ್ಕಳ ಆಕ್ಷೇಪದ ಕಾರಣಕ್ಕೂ ಇಂತಹ ನಿರ್ಬಂಧ ಸರಿಯಲ್ಲ ಎಂದು ಯೂಸುಫು ಮುಕ್ಕಲಾ ವಾದ ಮಂಡನೆಮಾಡಿದ್ದಾರೆ.
ಹಿರಿಯ ವಕೀಲ ಯೂಸುಫು ಮುಕ್ಕಲಾ ವಾದಮಂಡನೆ ಆರಂಭಿಸಿದ್ದಾರೆ. ಬಾಂಬೆಯ ಹಿರಿಯ ವಕೀಲ ಯೂಸುಫ್ ಮುಕ್ಕಲಾ ಹೈಕೋರ್ಟ್ನಲ್ಲಿ ವಾದವನ್ನು ಆರಂಭಿಸಿದ್ದಾರೆ. ಆರಂಭದಲ್ಲಿಯೇ ಹಿಜಾಬ್ ನಿರ್ಬಂಧ ನಿರಂಕುಶ ಆದೇಶವಾಗಿದೆ ಎಂದಿದ್ದಾರೆ. ತ್ರಿವಳಿ ತಲಾಖ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ, ಸರ್ಕಾರದ ಆದೇಶ ನಿರಂಕುಶವೆಂದು ಹೇಳಬಯಸುತ್ತೇನೆ ಎಂದಿದ್ದಾರೆ.
ನವತೇಜ್ ಸಿಂಗ್ ಪ್ರಕರಣ ಉಲ್ಲೇಖಿಸುತ್ತಿರುವ ರವಿವರ್ಮಕುಮಾರ್ ವೈವಿದ್ಯತೆಯಲ್ಲಿ ಏಕತೆ ಇರುವುದನ್ನು ಪರಿಗಣಿಸಬೇಕು. ಶಿಕ್ಷಣದ ಹಕ್ಕಿನ ಕಾಯ್ದೆಯನ್ನೂ ಪ್ರಶ್ನಿಸಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆಯೇ ಕಡಿಮೆಯಿದೆ. ಸರ್ಕಾರದ ಇಂತಹ ಆದೇಶಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹಿನ್ನಡೆಯಾಗಿದೆ. ಸರ್ಕಾರದ ಆದೇಶ ರದ್ದುಪಡಿಸಲು ಮನವಿ ಮಾಡಿ ರವಿವರ್ಮಕುಮಾರ್ ವಾದಮಂಡನೆ ಮುಕ್ತಾಯಗೊಳಿಸಿದ್ದಾರೆ.
ಧಾರ್ಮಿಕ ಕಾರಣಕ್ಕೆ ತಾರತಮ್ಯ ಮಾಡುವಂತಿಲ್ಲ. ಉತ್ತರ ಪ್ರದೇಶ, ರಾಜಸ್ತಾನ ಹೈಕೋರ್ಟ್ ತೀರ್ಪುಗಳಿವೆ. ಕೆಲವೇ ಸಮುದಾಯಗಳು ಕಾನೂನು ಪಾಲಿಸುತ್ತಾರೆಂಬುದು ಸರಿಯಲ್ಲ. ಸರ್ಕಾರ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಿದೆ. ನಮ್ಮ ವಾದವನ್ನೂ ಕೇಳದೇ ನಮಗೆ ದಂಡಿಸಲಾಗಿದೆ. ಹಿಜಾಬ್ ನಿಂದ ನಮ್ಮನ್ನು ಶಾಲೆಯಿಂದ ಹೊರಗಿಡಲಾಗಿದೆ. ಅಧಿಕಾರವೇ ಇಲ್ಲದ ಸಮಿತಿಯ ಆದೇಶ ಇದಕ್ಕೆ ಕಾರಣ ತರಗತಿಗಳು ವೈವಿಧ್ಯತೆಯ ಪ್ರತಿನಿಧಿಯಂತಿರಬೇಕು ಎಂದು ವಾದಿಸಿದ್ದಾರೆ.
ಬಳೆ ಧರಿಸುವುದು ಧಾರ್ಮಿಕ ಗುರುತು ಅಲ್ಲವೇ? , ಹೀಗಿದ್ದಾಗ ಹಿಜಾಬ್ ಗೆ ಮಾತ್ರ ನಿರ್ಬಂಧ ವಿಧಿಸಿರುವುದೇಕೆ? ಮುಸ್ಲಿಂ ವಿದ್ಯಾರ್ಥಿನಿಯಾದ ಕಾರಣಕ್ಕೇ ನಿರ್ಬಂಧ ವಿಧಿಸಲಾಗಿದೆ. ಹಿಂದೂ ಯುವತಿಯರು ಬಿಂದಿ, ಬಳೆ ತೊಡುತ್ತಾರೆ, ಕ್ರಿಶ್ಚಿಯನ್ ವಿದ್ಯಾರ್ಥಿನಿಯರು ಕ್ರಾಸ್ ತೊಡುತ್ತಾರೆ. ಸಿಖ್ ವಿದ್ಯಾರ್ಥಿಗಳು ಟರ್ಬನ್ ತೊಡುತ್ತಾರೆ. ಸರ್ಕಾರ ಅದ್ಯಾವುದಕ್ಕೂ ನಿರ್ಬಂಧ ವಿಧಿಸಿಲ್ಲ. ಅದು ಯಾಕೆ ಎನ್ನುವಂತಹ ಪ್ರಶ್ನೆಗಳು ಸಂವಿಧಾನ ರಚನೆಯಾದ ಕ್ಷಣದಿಂದಲೂ ಇವೆ. ಧಾರ್ಮಿಕ ಕಾರಣಕ್ಕೆ ತಾರತಮ್ಯ ಮಾಡುವಂತಿಲ್ಲ. ಉತ್ತರ ಪ್ರದೇಶ, ರಾಜಸ್ತಾನ ಹೈಕೋರ್ಟ್ ನ ತೀರ್ಪುಗಳಿವೆ ಎಂದು ವಾದ ಮಂಡಿಸಿದ್ದಾರೆ.
ಸರ್ವೆಯ ವರದಿ ಅಧಿಕೃತವಾಗಿದ್ದರೆ ಮಾತ್ರ ಪರಿಗಣಿಸಬಹುದು ಎಂದು ನ್ಯಾ.ಕೃಷ್ಣ ದೀಕ್ಷಿತ್ ಹೇಳಿದ್ದಾರೆ. ಈ ವೇಳೆ ವಾದ ಮುಂದುವರೆಸಿದ ವಕೀಲರು ನಾನು ಈ ವರದಿಯ ಅಂಶಗಳನ್ನು ಪರಿಗಣಿಸಲು ಕೇಳುತ್ತಿಲ್ಲ. ಎಲ್ಲಾ ಧರ್ಮದವರೂ ಧಾರ್ಮಿಕ ಗುರುತು ಬಳಸುತ್ತಾರೆ. ಹಿಜಾಬ್ ಗೆ ಮಾತ್ರ ತಾರತಮ್ಯ ಧೋರಣೆ ಏಕೆ? ಬಳೆ ಧರಿಸುವುದು ಧಾರ್ಮಿಕ ಗುರುತು ಅಲ್ಲವೇ, ಹಿಜಾಬ್ ಗೆ ಮಾತ್ರ ನಿರ್ಬಂಧ ವಿಧಿಸಿರುವುದೇಕೆ? ಎಂದು ವಕೀಲರು ಪ್ರಶ್ನಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಧಾರ್ಮಿಕ ಗುರುತು ಧರಿಸುವುದು ಸಾಮಾನ್ಯ ಶಿಕ್ಷಕರು ಸೇರಿದಂತೆ ಹಲವರು ಹಣೆಯ ಮೇಲೆ ತಿಲಕ ಧರಿಸುತ್ತಾರೆ. ದೇವಾಲಯದ ಆನೆಯ ಮೇಲೆ ನಾಮ ಹಾಕುವ ವಿವಾದದ ಕುರಿತು ಹೇಳಿದ ಅವರು, ತೆಂಗಳೈ ಹಾಕಬೇಕೋ, ವಡಗಲೈ ನಾಮ ಹಾಕಬೇಕೋ ಎನ್ನುವ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ತೀರ್ಪು ಬರುವ ವೇಳೆಗೆ ಆನೆಯೇ ಸತ್ತುಹೋಗಿತ್ತು. ಕೋರ್ಟ್ ಆರು ತಿಂಗಳು ತೆಂಗಳೈ, ಆರು ತಿಂಗಳು ವಡಗಲೈ ನಾಮ ಇಡಲು ತೀರ್ಪು ನೀಡಿತ್ತು. ಸರ್ವೆ ವರದಿಯೊಂದರ ಪ್ರಕಾರ 56 ರಷ್ಟು ಹಿಂದೂಗಳು ಧಾರ್ಮಿಕ ಪೆಂಡೆಂಟ್ ಧರಿಸುತ್ತಾರೆ, ಶೇ. 84 ಮುಸ್ಲಿಮರು ಗಡ್ಡ, ಟೋಪಿ ಧರಿಸುತ್ತಾರೆ. ಸಿಖ್ಖರಲ್ಲೂ ಶೇ. 86 ರಷ್ಟು ಜನ ಗಡ್ಡ ಬಿಡುತ್ತಾರೆ ಎಂದಿದ್ದಾರೆ. ಇದಕ್ಕೆ ಹೈಕೋರ್ಟ್ ದಾಖಲೆ ಕೇಳಿದೆ.
ಸಮಿತಿಗೆ ಸರ್ಕಾರದ ಅಧಿಕಾರ ಹಸ್ತಾಂತರವೇ ಕಾನೂನುಬಾಹಿರವಾಗಿದೆ. ವಸತಿ ಯೋಜನೆಯ ಫಲಾನುಭವಿ ಗುರುತಿಸಲು ಶಾಸಕರಿಗೆ ಅಧಿಕಾರ ನೀಡಲಾಗಿತ್ತು. ಈ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸಿದಾಗ ಸರ್ಕಾರದ ಆದೇಶಕ್ಕೆ ತಡೆ ಸಿಕ್ಕಿದೆ. ಶಾಸಕರಾದವರಿಗೆ ಆಡಳಿತಾಧಿಕಾರ ನೀಡಬಾರದು. ನೀಡಿದರೆ ಅದು ಪ್ರಜಾಪ್ರಭುತ್ವದ ಮರಣಶಾಸನ ಆಗಲಿದೆ. ಯಾರೇ ಶಾಸಕರಾದರೂ ಅವರು ಪಕ್ಷದ ಪ್ರತಿನಿಧಿಯಾಗಿರುತ್ತಾರೆ. ಪಕ್ಷಕ್ಕೆ ಶಾಲೆಯ ಉಸ್ತುವಾರಿ ನೀಡುವುದು ಸರಿಯಲ್ಲ. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಶಾಸಕರು ನೋಡಿಕೊಳ್ಳಬಾರದು ಎಂದು ಹಿರಿಯ ವಕೀಲ ರವಿವರ್ಮಕುಮಾರ್ ವಾದ ಮಂಡಿಸಿದ್ದಾರೆ.
ಸಮವಸ್ತ್ರದ ಬಗ್ಗೆ ಸಿಜೆ ಪ್ರಶ್ನಿಸಿದ್ದಕ್ಕೆ ವಾದ ಮಂಡಿಸಿದ ವಕೀಲ ರವಿವರ್ಮಕುಮಾರ್ ಅವರು ಇಲ್ಲ, ಇದಕ್ಕೆಂದೇ ಶಿಕ್ಷಣ ಕಾಯ್ದೆಯಲ್ಲಿ ಪ್ರತ್ಯೇಕ ಪ್ರಾಧಿಕಾರವಿದೆ. ಕಾಲೇಜು ಅಭಿವೃದ್ದಿ ಸಮಿತಿ ಪೊಲೀಸ್ ಅಧಿಕಾರ ಬಳಸುತ್ತಿದೆ. ಸಮಿತಿಗೆ ಸಮವಸ್ತ್ರ ನಿಗದಿಪಡಿಸುವ ಅಧಿಕಾರವಿಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಿಸಿ ಸಮಿತಿ ಪೊಲೀಸ್ ಅಧಿಕಾರ ಬಳಸುತ್ತಿದೆ ಎಂದು ಹೇಳಲಾಗದು. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿದ್ದರೆ ಕೊಡಿ ನಾನು ಒಪ್ಪುತ್ತೇನೆ ಎಂದು ನ್ಯಾ.ಕೃಷ್ಣ ದೀಕ್ಷಿತ್ ಹೇಳಿದ್ದಾರೆ. ಮಅರು ವಾದ ಮಂಡಿಸಿ, ಸಮಿತಿ ಶಾಸಕರ ನೇತೃತ್ವದಲ್ಲಿ ಕೆಲಸ ಮಾಡುತ್ತಿದೆ, ಈ ಸಮಿತಿ ಯಾರಿಗೂ ಉತ್ತರದಾಯಿಯಾಗಿಲ್ಲ. ಇದು ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲ ರವಿವರ್ಮಕುಮಾರ್ ವಾದ ಮಂಡಿಸುವ ವೇಳೆ ಹೇಳಿದ್ದಾರೆ.
ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಮೂಲಕ ಆದೇಶ. ಸುತ್ತೋಲೆಯ ಮೂಲಕ ಕಾಲೇಜು ಅಭಿವೃದ್ದಿ ಸಮಿತಿ ರಚಿಸಲಾಗಿದೆ. ಸರ್ಕಾರದ ಅನುದಾನ ಬಳಸಿಕೊಳ್ಳುವುದು, ಶಿಕ್ಷಣದ ಗುಣಮಟ್ಟ ಕಾಪಾಡುವುದು, ಮೂಲಭೌತ ಸೌಕರ್ಯ ಕಲ್ಪಿಸುವುದು ಕಾಲೇಜು ಅಭಿವೃದ್ದಿ ಸಮಿತಿ ಕರ್ತವ್ಯವಾಗಿದೆ. ಸಮವಸ್ತ್ರ ಶಿಕ್ಷಣದ ಗುಣಮಟ್ಟದ ವ್ಯಾಪ್ತಿಗೆ ಬರುವುದಿಲ್ಲವೇ? ಶಿಸ್ತು, ಸಮಾನತೆ ಸಾಧಿಸುವುದೂ ಗುಣಮಟ್ಟವೆಂದು ಪರಿಗಣಿಸಬಹುದೇ ಎಂದು ಸಿಜೆ ಪ್ರಶ್ನಿಸಿದ್ದಾರೆ.
ಹಿಜಾಬ್, ಕೇಸರಿ ಶಾಲು ನಿರ್ಬಂಧಿಸಿದ ಆದೇಶ ಓದುತ್ತಿರುವ ರವಿವರ್ಮಕುಮಾರ್, ಕಾಲೇಜು ಅಭಿವೃದ್ದಿ ಸಮಿತಿಗೆ ಸಮವಸ್ತ್ರ ನಿಗದಿ ಅಧಿಕಾರ ನೀಡಲಾಗಿದೆ. ಶಿಕ್ಷಣ ಕಾಯ್ದೆಯಡಿ ಕೆಲವು ಪ್ರಾಧಿಕಾರಗಳಿಗೆ ಮಾತ್ರ ಅಧಿಕಾರವಿದೆ. ಸರ್ಕಾರದ ಅಧೀನದಲ್ಲಿರುವ ಅಧಿಕಾರಿಗೆ ಮಾತ್ರ ಅಧಿಕಾರ ನೀಡಬಹುದು. ಗೆಜೆಟ್ ನೋಟಿಫಿಕೇಷನ್ ಮೂಲಕ ಮಾತ್ರ ಅಧಿಕಾರ ಹಸ್ತಾಂತರಿಸಬಹುದು. ಆದರೆ ಕಾಲೇಜು ಅಭಿವೃದ್ದಿ ಸಮಿತಿ ಪ್ರಾಧಿಕಾರವಲ್ಲ.
ವಕೀಲ ರವಿವರ್ಮ ಕುಮಾರ್ ಅವರ ವಾದಕ್ಕೆ ಉತ್ತರಿಸಿ ನಿರ್ಬಂಧ ವಿಧಿಸಿಲ್ಲವೆಂದು ಲೈಸೆನ್ಸ್ ಇರುವ ಶಸ್ತ್ರಾಸ್ತ್ರ ಕೊಂಡೊಯ್ಯಬಹುದೇ ಎಂದು
ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಅದೇ ರೀತಿ ನಿಮ್ಮ ವಾದ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಬಹುದು ಎಂದು ನ್ಯಾ.ದೀಕ್ಷಿತ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಕೀಲ ಹಿಜಾಬ್ ಗೆ ಕಾನೂನುರೀತ್ಯಾ ನಿರ್ಬಂಧವಿಲ್ಲದಿದ್ದಾಗ ಸರ್ಕಾರ ಏಕೆ ಅಡ್ಡಿಪಡಿಸುತ್ತಿದೆ. ಸರ್ಕಾರದ ಆದೇಶದಲ್ಲಿ ಹಿಜಾಬ್ ಗೆ ನಿರ್ಬಂಧ ವಿಧಿಸಲಾಗಿದೆ. ಸಮಾನತೆ, ಒಗ್ಗಟ್ಟಿನ ಭಾವನೆಗೆ ಹಿಜಾಬ್ ಅಡ್ಡಿಯೆಂದು ಸರ್ಕಾರ ಹೇಳುತ್ತಿದೆ ಎಂದು ಮರು ವಾದಿಸಿದ್ದಾರೆ.
ನೀವು ಈ ಮಾರ್ಗಸೂಚಿ ಆಧರಿಸಿ ವಾದ ಮಂಡಿಸುತ್ತೀರಾ, ಹಾಗಿದ್ದರೆ ಅದರ ಕಾನೂನುಬದ್ದತೆ ಬಗ್ಗೆ ತಿಳಿಸಿ ಎಂದು ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರಿಸಿದ ರವಿವರ್ಮಕುಮಾರ್, ಇಲ್ಲ ಇದು ಆದೇಶವಲ್ಲ ನಾನು ಇದನ್ನು ಹೇಳಿಕೆಯಾಗಷ್ಟೇ ನೀಡುತ್ತಿದ್ದೇನೆ. ಇಲಾಖೆ ಏನು ಹೇಳಿದೆ ಎಂಬುದಕ್ಕಷ್ಟೇ ಈ ದಾಖಲೆ ನೀಡುತ್ತಿದ್ದೇನೆ, ಹಿಜಾಬ್ ಧರಿಸಿದ ಕಾರಣಕ್ಕೆ ವಿದ್ಯಾರ್ಥಿಗಳ ಮೇಲೆ ಕ್ರಮ ಸರಿಯಲ್ಲ. ಶಿಕ್ಷಣ ಕಾಯ್ದೆಯಡಿಯಲ್ಲಿ ಸಮವಸ್ತ್ರ ನಿಗದಿಪಡಿಸಿಲ್ಲ. ಹಿಜಾಬ್ ಗೆ ಯಾವುದೇ ನಿರ್ಬಂಧ ಹೇರಲಾಗಿಲ್ಲ ಎಂದಿದ್ದಾರೆ.
ಶಿಕ್ಷಣ ಪಠ್ಯಕ್ರಮ ನಿಗದಪಡಿಸಲು ಕಾಯ್ದೆಯಲ್ಲಿ ಅವಕಾಶವಿದೆ, ಪೋಷಕರು, ಶಿಕ್ಷಕರ ಸಮಿತಿ ರಚಿಸಲು ಅವಕಾಶವಿದೆ. ಕಾಲೇಜು ಅಭಿವೃದ್ದಿ ಸಮಿತಿಗೆ ನಿಯಮದಲ್ಲಿ ಅವಕಾಶವಿಲ್ಲ. ನಿನ್ನೆ ನೀವು ಹೇಳಿದ ಅಂಶವನ್ನು ನೋಟ್ ಮಾಡಿದ್ದೇವೆ . ಶಾಲೆಯ ಪ್ರಾಸ್ಪೆಕ್ಟಸ್ ನಲ್ಲಿ ಈ ವರ್ಷದ ಶಿಕ್ಷಣದ ಮಾಹಿತಿ ನೀಡಲಾಗಿದೆ. ಪಿಯು ಕಾಲೇಜಿನಲ್ಲಿ ಈ ಸಾಲಿಗೆ ಸಮವಸ್ತ್ರ ನಿಗದಿಪಡಿಸಿಲ್ಲ. 2020-21 ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಈ ಮಾರ್ಗಸೂಚಿಯಲ್ಲಿ ಸಮವಸ್ತ್ರ ನಿಗದಿಪಡಿಸಿಲ್ಲ, ಯಾರು ಈ ಮಾರ್ಗಸೂಚಿ ಹೊರಡಿಸಿದ್ದಾರೆಂದು ಮಾಹಿತಿಯಿಲ್ಲ. ಇದನ್ನು ಮಾರ್ಗಸೂಚಿ ಎಂದು ಕರೆಯುವುದು ಹೇಗೆ ಇದು ಸರ್ಕಾರಿ ದಾಖಲೆಯೇ?, ಯಾರು ಮಾರ್ಗಸೂಚಿ ನೀಡಿದ್ದಾರೆ ಎಂದು ಸಿಜೆ ಪ್ರಶ್ನಿಸಿದ್ದಾರೆ.
ಹಿರಿಯ ವಕೀಲ ರವಿವರ್ಮಕುಮಾರ್ ವಾದಮಂಡನೆ ಆರಂಭಸಿದ್ದಾರೆ. ಒಮ್ಮೆ ನಿಗದಿಪಡಿಸಿದ ಸಮವಸ್ತ್ರವನ್ನು 5 ವರ್ಷ ಬದಲಿಸಬಾರದು. ಬದಲಿಸುವ ಮುನ್ನ 1 ವರ್ಷಕ್ಕೆ ಮುನ್ನ ನೋಟಿಸ್ ನೀಡಬೇಕು, ಪೋಷಕರಿಗೆ ನೋಟಿಸ್ ನೀಡಬೇಕೆಂಬ ನಿಯಮವಿದೆ ಎಂದು ವಾದದ ವೇಳೆ ಶಿಕ್ಷಣ ಕಾಯ್ದೆ ಉಲ್ಲೇಖಿಸುತ್ತಿರುವ ರವಿವರ್ಮಕುಮಾರ್ ಹಿಜಾಬ್ ವಿಚಾರದಲ್ಲೂ 1 ವರ್ಷ ಮೊದಲೇ ನೋಟಿಸ್ ನೀಡಬೇಕಿತ್ತು ಎಂದಿದ್ದಾರೆ.
ಹೈಕೋರ್ಟ್ ವಿಚಾರಣೆಯನ್ನು ಎಲ್ಲರೂ ನೋಡುತ್ತಿದ್ದಾರೆ. ಹೀಗಾಗಿ ಶೀಘ್ರ ವಾದ ಮಂಡನೆ ಪೂರ್ಣಗೊಳಿಸಲು ಸೂಚಿಸಿ ವಕೀಲ ಸುಭಾಷ್ ಝಾ ರಿಂದ ಹೈಕೋರ್ಟ್ ಗೆ ಮನವಿ ಮಾಡಿದೆ. ಒಂದು ಅರ್ಜಿಗೆ ಒಬ್ಬರೇ ವಾದಿಸಬೇಕು. ಒಂದೇ ವಾದವನ್ನು ಪುನರಾವರ್ತನೆ ಮಾಡಬಾರದು. ಎಲ್ಲಾ ಮಧ್ಯಂತರ ಅರ್ಜಿ ವಿಚಾರಣೆ ಅಗತ್ಯವಿಲ್ಲ. ಈ ಅರ್ಜಿಗಳಿಂದ ಕೋರ್ಟ್ ಸಮಯ ವ್ಯರ್ಥವಾಗುತ್ತಿದೆ ಎಂದು ಸಿಜೆ ತಿಳಿಸಿದ್ದಾರೆ.
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಅರ್ಜಿ ವಿಚಾರವಾಗಿ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆರಂಭವಾಗಿದೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ವಿಚಾರಣೆ ಆರಂಭಿಸಿದ್ದು. ತೀರ್ಪು ಇಂದು ಪ್ರಕಟವಾಗುತ್ತಾ ಎನ್ನುವ ಕುತೂಹಲ ಮೂಡಿದೆ.
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ವಿಚಾರ ಕೆಲ ಹೊತ್ತಿನಲ್ಲೇ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭವಾಗಲಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ಅರ್ಜಿಯ ವಿಚಾರಣೆ ನಡೆಸಿಲಿದೆ.
ಚಿಕ್ಕಮಗಳೂರಿನ ಎಂಇಎಸ್ ಕಾಲೇಜಿನಲ್ಲಿ ತಾರಕಕ್ಕೇರಿದ ವಿದ್ಯಾರ್ಥಿನಿಯರ ಪ್ರತಿಭಟನೆ. ಕಾಲೇಜಿನ ಒಳಗಡೆ ವಿದ್ಯಾರ್ಥಿನಿಯರ ಪ್ರತಿಭಟನೆ ನಡೆಸುತ್ತಿದ್ದು, ಕಾಲೇಜಿನ ಹೊರಗಡೆ ಪೋಷಕರ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರಿ ಸಂಖ್ಯೆಯಲ್ಲಿ ಕಾಲೇಜ್ ಗೇಟ್ ಮುಂಭಾಗ ಜನರ ಸೇರಿದ್ದು.ತರಗತಿಗಳು ಬಂದ್ ಮಾಡಲಾಗಿದೆ. ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ವಿದ್ಯಾರ್ಥಿನಿಯರ ಪಟ್ಟು ಹಿಡಿದಿದ್ದು ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹಿಜಾಬ್-ಕೇಸರಿಶಾಲು ವಿವಾದ ವಿಚಾರದಲ್ಲ ಗದಗನಲ್ಲಿ ಹೋರಾಟ ತೀವ್ರಗೊಂಡಿದೆಗದಗನಲ್ಲಿ ಶಾಲೆ ಎದುರು ನೂರಾರು ಪೋಷಕರು ಜಮಾಯಿಸಿದ್ದು, ಪ್ರತಿಭಟನೆ ಕಾವು ಹೆಚ್ಚಿದೆ. ಇಷ್ಟು ದಿನ ಏನೇ ಮಾಡಿದ್ರು ಸಹಿಸಿಕೊಂಡಿದ್ದೇವೆ. ಈಗ ನಮ್ಮ ಪರದೆಗೆ ಕೈಹಾಕಿರಿ ಅಂದ್ರೆ ನಾವ್ ಕೇಳಲ್ಲ ಅಂತ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದು, ಇವತ್ತು ನಿನ್ನೆ ಬಂದಿರೋದು ಅಲ್ಲ ಇದು. ನಿಮ್ಮಥರ ಫ್ಯಾಷನ್ ಮಾಡಕ್ ನಿಂತಿಲ್ಲಾ ನಾವು, ಇನ್ಮುಂದೆ ಕೇಳಂಗಿಲ್ಲಾ. ನಮಗೆ ನ್ಯಾಯ ಬೇಕು ಎಲ್ಲರಿಗೂ ಎಚ್ಚರಿಕೆ ಕೊಡ್ತೀವಿ ಅರ್ಥ ಮಾಡಿಕೊಳ್ಳಿ ಡಿಸಿ ಅವರನ್ನು ಸ್ಥಳಕ್ಕೆ ಕರೆಸುವಂತೆ ಸ್ಥಳದಲ್ಲಿ ಕಿರುಚಾಡಿದ್ದಾರೆ.
ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ವಿವಾದ ವಿಚಾರ ಉಗ್ರ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಿದ್ಧ ಎಂದು ಉಡುಪಿಯಲ್ಲಿ ವಿಹಿಂಪ, ಬಜರಂಗದಳದಿಂದ ಜಂಟಿ ಸುದ್ದಿಗೋಷ್ಠಿ ನಡೆಸಿ ಹೇಳಿದೆ. ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.
ಹಿಜಾಬ್‌ಗೆ ವಿದೇಶದಿಂದ ಬೆಂಬಲ ಸಿಗುತ್ತಿದೆ. ಈ ಬೆಳವಣಿಗೆ ಬಹಳ ಆತಂಕಕಾರಿಯಾಗಿದೆ. ಇದೊಂದು ಜಿಹಾದ್‌ನ ಷಡ್ಯಂತ್ರ, ಕುತಂತ್ರ, ಹುನ್ನಾರ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಲಾಗಿದೆ. ಉಡುಪಿಯಲ್ಲಿ ವಿಹಿಂಪ, ಬಜರಂಗದಳದಿಂದ ಜಂಟಿ ಸುದ್ದಿಗೋಷ್ಠಿಯಲ್ಲಿ ಚರ್ಚಿಸಲಾಗಿದೆ.
ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳ ಪ್ರತಭಟನೆಯ ಕಿಚ್ಚು ಹೆಚ್ಚಾಗಿದೆ. ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗ್ರತಾಕ್ರಮವಾಗಿ ಕಾಲೇಜಿಗೆ ಅನಿರ್ದಿಷ್ಟವಾದಿ ರಜೆ ಘೋಷಣೆ ಮಾಡಲಾಗಿದೆ. ಹುಬ್ಬಳ್ಳಿಯ ಮೂರುಸಾವಿರ ಮಠದ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯಿಂದ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ.
ತುಮಕೂರಿನಲ್ಲಿ ಎಂಪ್ರೆಸ್ ಶಾಲೆಯ ವಿದ್ಯಾರ್ಥಿನಿಯರಿಂದ ಹೈಡ್ರಾಮ ನಡೆದಿದೆ. ಶಾಲೆಯಿಂದ ಟೌನ್ ಹಾಲ್,ಟೌನ್ ಹಾಲ್ ನಿಂದ ಜೆಸಿ ರಸ್ತೆ.
ಜೆಸಿ ರಸ್ತೆಯಿಂದ ಅಶೋಕ ರಸ್ತೆಯಲ್ಲಿ ವಿದ್ಯಾರ್ಥಿನಿಯರು ಮೆರವಣಿಗೆ ನಡೆಸಿದ್ದಾರೆ. 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪರೇಡ್ ಮಾಡಿದ್ದು, ಶಾಲೆಗೂ ಹೋಗದೆ ಮನೆಗೂ ಹೋಗದೇ ಪರೇಡ್ ಮಾಡುತ್ತಿದ್ದಾರೆ. ಹಿಜಾಬ್ ಇಲ್ಲದೆ ಶಾಲೆಗೆ ಹೋಗಲ್ಲ ಎನ್ನುತ್ತಿರುವ ವಿದ್ಯಾರ್ಥಿನಿಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಹಿಜಾಬ್ ವಿವಾದ ಹಿನ್ನೆಲೆ ಶಿರಸಿಯಲ್ಲಿ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ತಡೆಯಲಾಗಿದೆ. ಶಿರಸಿಯ ಎಂಇಎಸ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ವೆಳೆ ಪ್ರಿನ್ಸಿಪಾಲ್ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ್ದು ಮೂವರು ವಿದ್ಯಾರ್ಥಿನಿಯರಿಂದ ಹಿಜಾಬ್ ತೆಗೆಯಲು ಒಪ್ಪಿದ್ದಾರೆ. ಇನ್ನು ಹಿಜಾಬ್ ತೆಗೆಯಲು ಒಪ್ಪದೆ ಕಾಲೇಜಿನಿಂದ 15 ವಿದ್ಯಾರ್ಥಿನಿಯರ ಹೊರಗಡೆ ಬಂದಿದ್ದಾರೆ.
ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾಗಿದ್ದಾರೆ. ಯಾದಗಿರಿ ನಗರದ ನ್ಯೂ ಕನ್ನಡ ಖಾಸಗಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಪೋಷಕರ ಪ್ರಚೋದನೆ ಒಳಗಾಗಿ 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ.
ಹಿಜಾಬ್‌ಗೆ ಅನುಮತಿಯನ್ನು ನೀಡದ ಹಿನ್ನೆಲೆ ಇಂಟರ್ನಲ್ ಪರೀಕ್ಷೆಯನ್ನು ವಿದ್ಯಾರ್ಥಿನಿಯರು ಬಹಿಷ್ಕರಿಸಿದ ಘಟನೆ ನಡೆದಿದೆ. ಬಳ್ಳಾರಿಯ ಸರಳಾದೇವಿ ಕಾಲೇಜಿನಲ್ಲಿ ನಡೆದ ಘಟನೆ ನಡೆದಿದ್ದು, ನಮಗೆ ಪರೀಕ್ಷೆಗಿಂತಾ ಹಿಜಾಬ್ ಮುಖ್ಯ ಎಂದು ಇಂಟರ್ನಲ್ ಪರೀಕ್ಷೆಯನ್ನು ಬಿಟ್ಟು 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹೊರಬಂದಿದ್ದಾರೆ. ನಮಗೆ ನಮ್ಮ ಧರ್ಮ ಮುಖ್ಯವೆಂದು ಹೊರ ಬಂದ ವಿದ್ಯಾರ್ಥಿನಿಯರು
ಶಿಕ್ಷಣ ಎಷ್ಟು ಮುಖ್ಯವೋ ಹಿಜಾಬ್ ಸಹ ಅಷ್ಟೆ ಮುಖ್ಯ, ಹೀಗಾಗಿ ಹಿಜಾಬ್ ಧರಿಸಿ ಪಾಠ ಕೇಳಲು ಅನುಮತಿ ನೀಡಿವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಪ್ರಗತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಕಾಲೇಜು ಆಡಳಿತ ಮಂಡಳಿ ಮುಂದೆ ಪಟ್ಟು ಹಿಡಿದು ಕುಳಿತಿರೂ ವಿದ್ಯಾರ್ಥಿನಿಯರು. ಎಷ್ಟೇ ಪಟ್ಟು ಹಿಡಿದ್ರು ಕ್ಲಾಸ್ ಗೆ ಅನುಮತಿ ನೀಡದ ಹಿನ್ನೆಲೆ, ಪೋಷಕರ ಜೊತೆ ವಿದ್ಯಾರ್ಥಿನಿಯರು ಕಾಲೇಜಿನಿಂದ ಮನೆಗೆ ವಾಪಸ್ ತೆರಳಿದ್ದಾರೆ.
ಹಿಜಾಬ್ ಧರಿಸಿದ ಹಿನ್ನೆಲೆ ಕಾಲೇಜ್ ಪ್ರವೇಶಕ್ಕೆ ಸಿಬ್ಬಂದಿ ನಿರಾಕರಿಸಿದ್ದಾರೆ. ಹೀಗಾಗಿ ಹಿಜಾಬ್ ತೆಗೆಯದೇ ಮನೆಗೂ ಹೋಗದೇ ಕಾಲೇಜ್ ಗೇಟ್ ಬಳಿ ವಿದ್ಯಾರ್ಥಿನಿ ಕಾಯ್ದು ನಿಂತ ಘಟನೆ ನಡೆದಿದೆ. ಹರಿಹರ ನಗರದ ಸರ್ಕಾರಿ ಪಿಯು ಕಾಲೇಜ್ ನಲ್ಲಿ ಘಟನೆ ನಡೆದಿದ್ದು, ಕಾಲೇಜ್ ಗೇಟ್ ಒಂದು ಗಂಟೆಯಿಂದ ವಿದ್ಯಾರ್ಥಿನಿ ನಿಂತಿದ್ದಳು. ಕಾಲೇಜ್ ಗೇಟ್ ಮುಂದೆ ನಿಂತ ವಿದ್ಯಾರ್ಥಿನಿ ಇದ್ದ ಸ್ಥಳಕ್ಕೆ ಬಂದ ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹಿರೇಗೌಡರ್ ಭೇಟಿ ನೀಡಿದ್ದಾರೆ. ಹೀಗಿದ್ದರೂ ನಿಂತ ಸ್ಥಳದಿಂದ ವಿದ್ಯಾರ್ಥಿನಿ ಕದಲದ ದೃಶ್ಯ ಕಂಡುಬಂದಿದೆ.
ವಿಜಯಪುರ ಜಿಲ್ಲೆಯಲ್ಲಿ ತಾರಕಕ್ಕೇರಿದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ. ತರಗತಿಗಳಲ್ಲಿ ಹಿಜಾಬ್ ಗೆ ಅವಕಾಶ ನೀಡದ ಕಾರಣ ತರಗತಿ ಹೊರಗಡೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಜಯಪುರ ನಗರದ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿನಿಯರ ಬೆಂಬಲಕ್ಕೆ ಬಂದ ಮಹಿಳಾ ಪೋಷಕರು, ನಮ್ಮ ಮಕ್ಕಳಿಗೆ ತರಗತಿಗಳಿಂದ ಹೊರಗೆ ಹಾಕಿದ್ದು ತಪ್ಪು. ನಮ್ಮ ಮಕ್ಕಳಿಗೆ ಹಿಜಾಬ್ ಸಹಿತ ತರಗತಿಗಳಲ್ಲಿ ಹಾಜರಾಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇಷ್ಟು ದಿನಗಳ ಕಾಲ ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಇದ್ದೆವು. ಇದೀಗ ಹಿಜಾಬ್ ಹಾಗೂ ಕೇಸರಿ ಶಾಲಿನ ನೆಪದಲ್ಲಿ ಒಡಕನ್ನು ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಜಾಬ್ ಎನ್ನುವುದು ನಮ್ಮ ಧಾರ್ಮಿಕ ಹಕ್ಕು. ನಾವು ಇತರರ ಧಾರ್ಮಿಕ ಹಕ್ಕಿಗೆ ಕೂಡ ಗೌರವಿಸುತ್ತೇವೆ. ಶಾಲಾ-ಕಾಲೇಜಿನ ಶಿಕ್ಷಣಕ್ಕೆ ನಮ್ಮ ಮಕ್ಕಳು ಶುಲ್ಕ ಕಟ್ಟಿದ್ದಾರೆ ಎಂದಿದ್ದಾರೆ. ಇನ್ನು ತಾರಕ್ಕೇರಿದ ಪ್ರತಿಭಟನೆ ನಮ್ಮ ದೇಹ ನಮ್ಮ ಹಕ್ಕು, ವಿ ವಾಂಟ ಜಸ್ಟೀಸ್ , ಹಿಜಾಬ್ ಹಮಾರಾ ಹಕ್ ಹೈ ಎಂದು ವಿದ್ಯಾರ್ಥಿನಿಯರು ಘೋಷಣೆ ಕೂಗುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು. ಸ್ಥಳದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಕೋರ್ಟ್ ನಿಮಯ ಉಲ್ಲಂಘಿಸಿದರೆ ಕ್ರಮಕೈಗೊಳ್ಳುತ್ತೇವೆ. ಹಿಜಾಬ್ ಧರಿಸಿ ಬರುತ್ತೇವೆಂದು ಪಟ್ಟು ಹಿಡಿಯುವಂತಿಲ್ಲ
ಪಟ್ಟು ಹಿಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಕೋರ್ಟ್ ಆದೇಶಕ್ಕೆ ಮಾನ್ಯತೆ ಕೊಡದಿದ್ದರೆ ಈ ದೇಶದ ಪ್ರಜೆಗಳೆಲ್ಲ ಅನ್ನೋದು ಅರ್ಥವಾಗುತ್ತದೆ ಕಾನೂನಿಗಿಂತ ಇಲ್ಲಿ ಯಾರೂ ದೊಡ್ಡವರಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಬೇಕೆಂದರೆ ಶಿಕ್ಷಣ ಸಂಸ್ಥೆಗಳು ಮಾಡಿರುವ ಕಾನೂನು ನನ್ನ ಪಾಲಿಸಿ ಬರಬೇಕು. ಎಲ್ಲರೂ ಕೋರ್ಟ್ ಆದೇಶವನ್ನು ಪಾಲನೆ ಮಾಡಲೇಬೇಕು.
ಪ್ರತಿಭಟನೆ ಮಾಡುವರು ಮಾಡಲಿ ಆದರೆ ಅವರು ಶಾಲೆ ಒಳಗಡೆ ಬರಲಿಕ್ಕೆ ಅವಕಾಶವಿಲ್ಲ. ಕೋರ್ಟ್ ಆದೇಶ ಪಾಲನೆ ಮಾಡುವವರ ವಿರುದ್ಧ ಕ್ರಮ ಆಗಬೇಕು. ಕೆಲವು ಕಾಲೇಜುಗಳಲ್ಲಿ ನಿಯಮ ಉಲ್ಲಂಘನೆ ವಿಚಾರ ಗಮನಕ್ಕೆ ಬಂದಿದೆ ಯಾರು ಕೂಡ ನಿಯಮ ಉಲ್ಲಂಘನೆ ಮಾಡದಂತೆ ಹಾಗೂ ಕೋರ್ಟ್ ಆದೇಶದಂತೆ ಶಾಲೆಗಳ ನಡೆಯುವಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಕೋರ್ಟ್ ತೀರ್ಪು ಬಂದಿಲ್ಲ, ನಾವು ಹಿಜಾಬ್ ತೆಗೆಯಲ್ಲ ಎಂದು ಬಳ್ಳಾರಿಯ ಸರಳಾದೇವಿ ಕಾಲೇಜಿನ ಉಪನ್ಯಾಸಕಿ ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದಾರೆ. ಹಿಜಾಬ್ ತೆಗೆಯಲು ಮುಂದಾಗಿದ್ದ ವಿದ್ಯಾರ್ಥಿನಿಯರ ಬಳಿ ಹಿಜಾಬ್‌ಗೆ ಬೆಂಬಲಿಸಿ ಎಂದಿದ್ದಾರೆ. ಹಿಜಾಬ್ ತೆಗೆಯದಂತೆ ಹೇಳಿದ ಉಪನ್ಯಾಸಕಿ ಕೋರ್ಟ್ ಆರ್ಡರ್ ಬಂದಿಲ್ಲ ನಾವ್ಯಾಕೇ ಹಿಜಾಬ್ ಹಾಕಿಕೊಂಡು ಬರಬಾರದು ದಿನ ಇಲ್ಲದ ವಿವಾದ ಈಗ್ಯಾಕೆ ನಿಮ್ಮ ಸ್ನೇಹಿತರಿಗೆ ಬೆಂಬಲಿಸಿ ಹಿಜಾಬ್ ಹಾಕಿಕೊಂಡು ಬರುವಂತೆ ಹೇಳಿರಿ ಎಂದಿದ್ದಾರೆ. ಇದೇ ವೇಳೆ ಹಿಜಾಬ್ ತೆಗೆಯದೆ ಮನೆಗೆ ವಿದ್ಯಾರ್ಥಿನಿಯರು ವಾಪಸಾಗಿದ್ದಾರೆ.
ಕಾಫಿನಾಡಲ್ಲಿ ಮುಂದುವರಿದ ಹಿಜಾಬ್ ವಿವಾದ. ಚಿಕ್ಕಮಗಳೂರು ನಗರದ ಮೌಂಟೇನ್ ವ್ಯೂ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ವೇಳೆ ಆಡಳಿತ ಮಂಡಳಿ-ವಿಧ್ಯಾರ್ಥಿಗಳ ಜೊತೆ ಮಾತಿನ ಚಕಮಕಿ ನಡೆದಿದ್ದು, ತರಗತಿ ಬೇಡ, ಕ್ಯಾಂಪಸ್ ಒಳಗೆ ಬಿಡುವಂತೆ ಆಗ್ರಹಿಸಿದ್ದಾರೆ. ಕ್ಯಾಂಪಸ್ ಗೆ ಬಿಡಲು ಆಡಳಿತ ಮಂಡಳಿ ನಕಾರ ವ್ಯಕ್ತಪಡಿಸಿದೆ. ಹೀಗಾಗಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ. ಹೀಗಾಗಿ 30ಕ್ಕೂಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರಕ್ಕೆ ಹಾಕಲಾಗಿದೆ.
ಬಳ್ಳಾರಿಯಲ್ಲಿ ಹಿಜಾಬ್ ವಿವಾದ ಶುರುವಾಗಿದ್ದು ಹಿಜಾಬ್ ತಗೆಯಲ್ಲ ಅಂತಾ ವಿದ್ಯಾರ್ಥಿನಿಯರು ಹಠ ಹಿಡಿದಿದ್ದಾರೆ. ಹಿಜಾಬ್ ನಮ್ಮ ಧಾರ್ಮಿಕ ಹಕ್ಕು. ಬುರ್ಕಾ ಬೇಕಾದ್ರೆ ತಗೆಯುತ್ತೇವೆ. ಹಿಜಾಬ್ ತಗೆಯಲ್ಲ ಎಂದಿದ್ದಾರೆ. ಆದರೆ ಹಿಜಾಬ್ ತಗೆದು ಕ್ಲಾಸ್ ಗೆ ಹೋಗಲು ಕೆಲವು ವಿದ್ಯಾರ್ಥಿನಿಯರಿಂದ ಒಪ್ಪಿಗೆ ನೀಡಿದ್ದಾರೆ. ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಹಿಜಾಬ್ ತಗೆಯದಿರಲು ನಿರ್ಧಾರಿಸಿದ್ದು ಬಳ್ಳಾರಿಯ ಸರಳಾದೇವಿ ಕಾಲೇಜಿನಲ್ಲಿ ಹಿಜಾಬ್ ಕುರಿತಂತೆ ವಿದ್ಯಾರ್ಥಿನಿಯರಲ್ಲೆ ಭಿನ್ನಮತ ವ್ಯಕ್ತವಾಗಿದೆ. ಹಿಜಾಬ್ ತಗೆಯಲ್ಲ ಅಂತಾ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು ನ್ಯಾಯಾಲಯದ ಆದೇಶ ಬರುವವರೆಗೂ ಹಿಜಾಬ್ ತಗೆಯಲ್ಲ ಎಂದಿದ್ದಾರೆ.
ಪ್ರಾರ್ಚಾರ್ಯರು ವಿದ್ಯಾರ್ಥಿನಿಯರ ಮನವೊಲಿಕೆಗೆ ಯತ್ನಿಸಿದರೂ ಪ್ರಯೋಜನವಾಗದ ಹಿನ್ನೆಲೆ ಹಿಜಾಬ್ ತಗೆಯದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಆಡಳಿತ ಮಂಡಳಿ ಹೊರಕ್ಕೆ ಕಳುಹಿಸಿದೆ. ಇದರಿಂದ ಕಾಲೇಜು ಹಿಂಭಾಗಿಲಿನ ಮೂಲಕ ವಿದ್ಯಾರ್ಥಿನಿಯರು ಮನೆಗೆ ಮರಳಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಬುಗಿಲೆದ್ದಿದ್ದು, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಹೈಡ್ರಾಮಾ ನಡೆದಿದೆ.
ಹಿಜಾಬ್ ಹಾಗೂ ಬುರ್ಕಾ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಡೆದಿದ್ದಾರೆ. ಆದರೆ ಹಿಜಾಬ್ ಧರಿಸಿಯೇ ಕ್ಲಾಸ್ ಹೋಗುವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದು, ವಿದ್ಯಾರ್ಥಿನಿಯರಿಗೆ ಪೋಷಕರು ಸಹ ಸಾಥ್ ನೀಡಿದ್ದಾರೆ.
ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳು, ಹಿಜಾಬ್ ಅವಕಾಶ ಕೊಡಲಿಲ್ಲ ಅಂದ್ರೆ ಮನೆಗೆ ಹೋಗುತ್ತೇವೆ ಯಾವುದೇ ಕಾರಣಕ್ಕೂ ಹಿಜಾಬ್ ಬಿಡಲ್ಲ ಎಂದು ಪಟ್ಟು ಸಡಿಲಸದ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿನ ಆವರಣದಲ್ಲಿಯೇ ನಿಂತಿದ್ದಾರೆ. ಇನ್ನೂ ಸ್ಥಳದಲ್ಲಿ ಪೊಲೀಸರು ಕೂಡ ಬೀಡು ಬಿಟ್ಟಿದ್ದಾರೆ.
ಮಲ್ಲೇಶ್ವರಂ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ತೆರವಿಗೆ ವಿರೋಧ ವ್ಯಕ್ತವಾಗಿದ್ದು. ಮಲ್ಲೇಶ್ವರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ವಿರೋಧ ಮಾಡಿದ್ದಾರೆ. ಬುರ್ಕಾ, ಹಿಜಾಬ್ ತೆರವು ಮಾಡ್ತಿದ್ದ ಪ್ರಾಂಶುಪಾಲರ ಜೊತೆ ತಗಾದೆ ತೆಗೆದ ಕಾಂಗ್ರೆಸ್ ಕಾರ್ಯಕರ್ತರು
ಬಿಕೆ ಹರಿಪ್ರಸಾದ್ ಕಳುಹಿಸಿದ್ದು ಎಂದಿದ್ದಾರೆ. ಹಿಜಾಬ್ ತೆರವು ಮಾಡಬೇಡಿ ನೇರವಾಗಿ ತರಗತಿಗೆ ಹೋಗಿ ಎಂದು ಸೂಚನೆ ಕೊಡ್ತಿರುವ ಕಾರ್ಯಕರ್ತರು ವಿದ್ಯಾರ್ಥಿನಿಯರನ್ನ ಕ್ಲಾಸ್ ರೂಂ ಒಳಗೆ ಕಳುಹಿಸಿದ್ದಾರೆ. ಇನ್ನು 144 ಸೆಕ್ಷನ್ ಜಾರಿಯಲ್ಲಿದೆ ಹೊರಗೆ ನಡೆಯಿರಿ ಎಂದು ಸ್ಥಳಕ್ಕೆ ಬಂದ ಮಲ್ಲೇಶ್ವರಂನ ಪೊಲೀಸ್ ಇನ್ಸ್ಪೆಕ್ಟರ್ ಸೂಚನೆ ನೀಡಿದ್ದಾರೆ . ಇದೇ ವೇಳೆ ಕೋರ್ಟ್ ಆರ್ಡರ್ ತೋರಿಸಿ ಎಂದು ಕಿರಿಕ್ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಲು ನೀವು ಯಾರು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸ್ ಇನ್ಸ್ಪೆಕ್ಟರ್ ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದದ ಮಧ್ಯೆ ಇಂದಿನಿಂದ ಕಾಲೇಜುಗಳು ರೀ ಓಪನ್ ಆಗಿದೆ. ರಾಯಚೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುರ್ಕಾ ಹಾಗೂ ಹಿಜಾಬ್ ಧರಿಸಿ ಕಾಲೇಜು ಆವರಣದೊಳಗೆ ವಿದ್ಯಾರ್ಥಿನಿಯರು ತೆರಳುತ್ತಿದ್ದಾರೆ. ಹೀಗಾಗಿ ಬುರ್ಕಾ, ಹಿಜಾಬ್ ಧರಿಸಿ ಪ್ರವೇಶಿಸಿದ್ದಕ್ಕೆ ಕಾಲೇಜಿನಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಈ ಬಗ್ಗೆ ಕಾಲೇಜಿನ ಪ್ರಿನ್ಸಿಪಲ್ ಸಮಜಾಯಿಷಿ ನೀಡಿದ್ದಾರೆ. ಪ್ರತ್ಯೇಕ ಕೊಠಡಿಯೊಂದರಲ್ಲಿ ಬುರ್ಕಾ ಹಾಗೂ ಹಿಜಾಬ್ ತೆಗೆಯುವಂತೆ ಸೂಚಿಸಲಾಗಿದೆ. ಹಿಜಾಬ್ ತೆಗೆಸಿಯೇ ತರಗತಿಯಲ್ಲಿ ಕೂರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದು, ಈ ಮಧ್ಯೆ ಮಾದ್ಯಮದವರಿಗೆ ಕಾಲೇಜು ಒಳಗಡೆ ಪ್ರವೇಶ ಮಾಡದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಆಗಮನ ಹಿನ್ನೆಲೆ ತರಗತಿಯೊಳಗೆ ವಿದ್ಯಾರ್ಥಿನಿಯರನ್ನು ಸಿಬ್ಬಂದಿ ಬಿಡದ ಕಾರಣ ಕೊಠಡಿಯ ಮುಂದೆಯೇ ವಿದ್ಯಾರ್ಥಿನಿಯರು ಪ್ರತಿಭಟನೆ ಆರಂಭಿಸಿದ್ದಾರೆ. ವಿಜಯಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಘಟನೆ ನಡೆದಿದೆ. ಪಿಯು ಉಪನಿರ್ದೇಶಕರ ಹಾಗೂ ಇತರೆ ಅಧಿಕಾರಿಗಳ ಮನವೊಲಿಕೆಗೂ ಬಗ್ಗದ ವಿದ್ಯಾರ್ಥಿನಿಯರು ಕಾಲೇಜಿನ ಕೊಠಡಿಗಳ ಎದುರು ಪ್ರತಿಭಟನೆ ನಡಿಸಿ ಹೈಡ್ರಾಮಾ ಮಾಡಿದ್ದಾರೆ. ಇದೇ ವೇಳೆ ವಿದ್ಯಾರ್ಥಿನಿಯರನ್ನು ಕೊಠಡಿ ಹೊರಗೆ ಸಿಬ್ಬಂದಿ ಹೊರಕ್ಕೆ ಹಾಕಿದ್ದಾರೆ.
ನಮಗೆ ಸಮವಸ್ತ್ರ ಕಡ್ಡಾಯವಿಲ್ಲ ವಿದ್ಯಾರ್ಥಿನಿಯರು ಯಾವ ಬಟ್ಟೆಯನ್ನಾದರೂ ಹಾಕಿಕೊಂಡು ಬರಬಹುದು. ಯಾವುದೇ ವಿರೋಧ ವಿಲ್ಲ ಎಂದು ಬೆಂಗಳೂರಿನ ಮಹಾರಾಣಿ ಕಾಲೇಜಿನ ಪ್ರಿನ್ಸಿಪಲ್ ಪ್ರಕಾಶ್ ಹೇಳಿದ್ದಾರೆ. ಸಮವಸ್ತ್ರ ಇದ್ದಿದ್ದರೆ ಮಾತ್ರ ನಾವು ಸಮವಸ್ತ್ರ ಕಡ್ಡಾಯ ಮಾಡುತ್ತಿದ್ದೆವು. ಆದರೆ ನಿನ್ನೆ ನಮ್ಮ ಆಯುಕ್ತರು ಸ್ಪಷ್ಟವಾಗಿ ಹೇಳಿದ್ದಾರೆ, ಸಮವಸ್ತ್ರ ಇಲ್ಲದ ಕಡೆ ಯಾವುದೇ ನಿಯಮಗಳನ್ನ ಹಾಕಬಾರದು ಎಂದು. ಹೀಗಾಗಿ ಸಮವಸ್ತ್ರ ಇಲ್ಲದ ಹಿನ್ನೆಲೆ ನಿಯಮ ಹೇರಲು ಆಗುವುದಿಲ್ಲ ಎಂದಿದ್ದಾರೆ.
ಹಿಜಾಬ್ ಕೇಸರಿ ಶಾಲು ಸಂಘರ್ಷದಿಂದ ಪೊಲೀಸರು ಕಾಲೇಜುಗಳ ಆವರಣದಲ್ಲಿ ಬಂದೋಬಸ್ತ್ ಮಾಡಿದ್ದಾರೆ. ಈ ವೇಳೆ ಒಂದು ವರ್ಷದ ಮಗುವನ್ನ ಎತ್ತುಕೊಂಡು ಮಹಿಳಾ ಪೊಲೀಸ್ ಪೇದೆ ಡ್ಯೂಟಿಗೆ ಹಾಜರಾದ ದೃಶ್ಯ ಕಂಡುಬಂದಿದೆ. ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಮುಂಭಾಗ ಒಂದು ವರ್ಷದ ಮಗುವನ್ನು ಎತ್ತುಕೊಂಡು ಮಹಿಳಾ ಪೇದೆ ಡ್ಯೂಟಿಗೆ ಆಗಮಿಸಿದ್ದಾರೆ. ಪೇದೆ ಪಾರ್ವತಿ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಡ್ಯೂಟಿ ಗೆ ಹಾಜರಾಗಿದ್ದಾರೆ.
ಶಿವಮೊಗ್ಗದಲ್ಲಿ ಕಾಲೇಜು ಆರಂಭವಾಗಿದ್ದರೂ ನಗರದ ಡಿವಿಎಸ್ ಕಾಲೇಜು ಬಳಿ ಹಿಜಾಬ್‌ಗೆ ಅನುಮತಿ ಕೊಟ್ಟರೆ ತರಗತಿಗೆ ಹೋಗುತ್ತೇವೆ. ಇಲ್ಲದಿದ್ದರೆ ನಾವು ತರಗತಿಗೆ ಹೋಗಲ್ಲವೆಂದು ವಿದ್ಯಾರ್ಥಿನಿಯರು ಗಲಾಟೆ ಆರಂಭಿಸಿದ್ದಾರೆ. ಅವರು ಕೇಸರಿ ಶಾಲು ಹಾಕಿಕೊಂಡು ಬೇಕಾದ್ರೆ ಬರಲಿ, ನಮಗೆ ಮಾತ್ರ ಹಿಜಾಬ್ ಧರಿಸಲು ಅನುಮತಿ ನೀಡಿ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜ್ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್, ಬುರ್ಖಾ ಧರಿಸಿಕೊಂಡೇ ಕಾಲೇಜಿಗೆ ಹಾಜರಾದ ಬೆಂಗಳೂರಿನ ಆರ್ ಸಿ ಕಾಲೇಜಿನ ವಿದ್ಯಾರ್ಥಿನಿಯರು ಬುರ್ಕಾ ಧರಿಸಿಯೇ ತರಗತಿಗೆ ತೆರಳುತ್ತೇವೆ ಎನ್ನುತ್ತಿದ್ದಾರೆ. ನಾವು ಯಾಕೆ ಹಿಜಾಬ್ ತೆಗೆಯಬೇಕು?, ಇದು ನಮ್ಮ ಹಕ್ಕು, ಸ್ಕೂಲ್ ನಲ್ಲಿ ಇದ್ದಾಗಿಂದ ಹಾಕೊಂಡು ಬರ್ತಿದ್ದೀವಿ. ಹಿಜಾಬ್ ಈಗ ಮಾತ್ರ ಅಲ್ಲ, ಹಿಂದಿನಿಂದಲೂ ಇದೆ ಕಾಲೇಜಿನಲ್ಲಿ ನಮಗೆ ಅವಕಾಶ ಕೊಟ್ಟಿದ್ದಾರೆ, ಹಿಜಾಬ್ ಬುರ್ಖಾ ಹಾಕಿಕೊಂಡೇ ಕ್ಲಾಸ್ ನಲ್ಲಿ ಕೂರುತ್ತೇವೆ. ಇದನ್ನ ತೆಗೆಯಲು ಯಾವುದೇ ವ್ಯವಸ್ಥೆ ಇಲ್ಲ ಹಿಜಾಬ್, ಬುರ್ಖಾ ಧರಿಸಬೇಡಿ ಅಂತ ನಮ್ಮ ಕಾಲೇನಜಿನಲ್ಲಿ ಹೇಳಿಲ್ಲ ಹೇಳಿದ್ರೂ ನಾವು ರಿಮೂವ್ ಮಾಡೊಲ್ಲ ಎಂದು ನಗರದ ಆರ್ ಸಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದು ಬುರ್ಕಾ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.
ಹಿಜಾಬ್- ಕೇಸರಿ ವಿವಾದದಿಂದ ಬಂದ್ ಆಗಿದ್ದ ಕಾಲೇಜು ಇಂದು ಆರಂಭವಾಗಿದೆ. ಬಾಗಲಕೋಟೆಯ ಸರಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಬುರ್ಕಾ ಹಿಜಾಬ್ ಧರಿಸಿ ಕಾಲೇಜು ವಿದ್ಯಾರ್ಥಿನಿಯರು ಆಗಮಿಸುತ್ತಿದ್ದಾರೆ. ಕಾಲೇಜಿನಲ್ಲಿ ಬುರ್ಕಾ, ಹಿಜಾಬ್ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ಬುರ್ಕಾ ತೆಗೆದು ಕ್ಲಾಸ್ ಗೆ ತೆರಳುತ್ತಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು ಇನ್ನೂಕಾಲೇಜಿಗೆ ಆಗಮಿಸಲಿಲ್ಲ. ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ 6 ಜನ ವಿದ್ಯಾರ್ಥಿನಿಯರು ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ಕಾಲೇಜು ಓಪನ್ ಆದರು ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಲಿಲ್ಲ.
ಮೈಸೂರಿನ ಸಂತ ಫಿಲೋಮಿನಾ ಕಾಲೇಜಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸುತ್ತಿದ್ದಾರೆ. ಇದೇ ಕಾಲೇಜು ಬಳಿ ಫೆಬ್ರವರಿ 4 ರಂದು ವಿದ್ಯಾರ್ಥಿಗಳು ಹಿಜಾಬ್ ಡೇ ಆಚರಿಸಿದ್ದರು. ಇಂದು ಸಹಾ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಾರೆ.
ಕೊಪ್ಪಳದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತ್ತಿದ್ಧಾರೆ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹೈಕೋರ್ಟ್ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಕಾಲೇಜು ಆಡಳಿತ ಮಂಡಳಿ ಕ್ರಮಕ್ಕೆ ಮುಂದಾಗಿದೆ.
ಇಂದಿನಿಂದ ಪಿಯು, ಪದವಿ ಕಾಲೇಜು ಆರಂಭ ಹಿನ್ನೆಲೆ ಎಲ್ಲರೂ ಕೋರ್ಟ್ ಮಧ್ಯಂತರ ಆದೇಶ ಪಾಲಿಸಬೇಕು ಅಂತ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.. ಕೋರ್ಟ್ ಆದೇಶ ಪಾಲಿಸದ ಮಕ್ಕಳ ಮನವೊಲಿಸಬೇಕು. ಕಾಲೇಜು ಆಡಳಿತ ಮಂಡಳಿ ಮಕ್ಕಳನ್ನ ಮನವೊಲಿಸಬೇಕು. ವಿದ್ಯೆ ಕಡೆ ಗಮನ ಕೊಡಿ, ವಸ್ತ್ರದ ಕಡೆ ಅಲ್ಲವೆಂದು ಶಿಕ್ಷಣ ಸಚಿವ ನಾಗೇಶ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಧಾರವಾಡದ ಕೆಸಿಡಿ ಕಾಲೇಜಿನಿಂದ ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿ ವಾಪಸ್ಸಾಗಿದ್ದಾಳೆ.
ಕೋರ್ಟ್ ಆದೇಶವನ್ನ ಪಾಲನೆ ಮಾಡಲು ಸೂಚನೆ ಕೊಟ್ಟಿದ್ದೇವೆ. ಮಕ್ಕಳು ಸಹ ಹಿಜಾಬ್ ತಗೆದು ಕ್ಲಾಸ್ ರೂಂಗೆ ಹೋಗುತ್ತಿದ್ದಾರೆ. ನಮ್ಮ ಕಾಲೇಜ್‌ನಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಹಿಜಾಬ್ ಧರಸಿಕೊಂಡು ಬಂದಿದ್ದರು ಅವರಿಗೆ ಹೇಳಿದ್ದೇವೆ. ಅವರು ಸಹ ನಮಗೆ ಸಹ ಕೊಡುತ್ತಿದ್ದಾರೆ ಅಂತ ಶೇಷಾದ್ರಿಪುರಂ ಪದವಿ ಕಾಲೇಜ್‌ನಲ್ಲಿ ಪ್ರಾಂಶಪಾಲರು ಹೇಳಿಕೆ ನೀಡಿದ್ದಾರೆ.
ಇಂದಿನಿಂದ ಕಾಲೇಜು ಆರಂಭವಾಗುತ್ತಿರುವ ಹಿನ್ನೆಲೆ ಕಾಲೇಜುಗಳತ್ತ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಬುರ್ಖಾ, ಹಿಬಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಕಾಲೇಜಿನಲ್ಲಿ ಹಿಬಾಜ್, ಬುರ್ಖಾ ತೆಗೆದು ವಿದ್ಯಾರ್ಥಿನಿಯರು ತರಗತಿಗಳಿಗೆ ಹೋಗುತ್ತಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ವಿಜಯಪುರ ನಗರದ ಸರ್ಕಾರಿ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗಿದ್ದಾರೆ. ಸರ್ಕಾರದ ವಸ್ತ್ರ ನೀತಿ ಸಂಹಿತೆ ಪಾಲಿಸಬೇಕೆಂದು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮನವಿ ಮಾಡಿದ್ದರೂ. ಕ್ಯಾರೆ ಎನ್ನದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಯಲ್ಲಿ ಕೂತಿದ್ದಾರೆ.
ಮಹಾರಾಣಿ ಕಾಲೇಜಿನಲ್ಲಿ ಹಿಜಾಬ್ ಹಾಗೂ ಬುರ್ಖಾ ಧರಿಸಿಕೊಂಡೇ ವಿದ್ಯಾರ್ಥಿನಿಯರು ತರಗತಿಯೊಳಗೆ ಕೂತಿದ್ದಾರೆ. ಕಾಲೇಜು ಆಡಳಿತ ಮಂಡಳಿಯಿಂದ ಯಾವುದೇ ವಿರೋಧವಿಲ್ಲದ ಕಾರಣ ವಿದ್ಯಾರ್ಥಿನಿಯರು ಯಥಾಸ್ಥಿತಿ ಬುರ್ಖಾ ಧರಿಸಿಕೊಂಡು ಬರುತ್ತಿದ್ದಾರೆ.
ಮಲ್ಲೇಶ್ವರಂನ ಸರ್ಕಾರಿ ಮಹಿಳಾ ಪಿಯುಸಿ ಕಾಲೇಜಿಗೆ ಮೂರು ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡು ಕಾಲೇಜಿಗೆ ಬಂದಿದ್ರು. ಅದನ್ನು ತೆಗೆದಿಟ್ಟು ಕ್ಲಾಸ್ ಗೆ ಹೋಗುವಂತೆ ಪ್ರಿನ್ಸಿಪಾಲ್ ರವಿ ಸೂಚನೆ ನೀಡಿದ್ದಾರೆ. ಹಿಜಾಬ್ ಹಾಕಿಕೊಂಡು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರಿಗೂ ತೆಗೆಯಲು ಹೇಳುವಂತೆ ಶಿಕ್ಷಕರಿಗೆ ಪ್ರಿನ್ಸಿಪಾಲ್ ರವಿಸೂಚನೆ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಬಳ್ಳಾರಿಯಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಹಿಜಾಬ್ ಬಿಚ್ಚಿಟ್ಟು ಕ್ಲಾಸ್ಗೆ ತೆರಳುವಂತೆ ಪ್ರಾರ್ಚಾರ್ಯರು ಮನವಿ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಪ್ರತ್ಯೇಕ ರೂಂನಲ್ಲಿ ಹಿಜಾಬ್ ಬಿಚ್ಚಿಟ್ಟು ಕ್ಲಾಸ್ ಗೆ ತೆರಳುತ್ತಿದ್ದಾರೆ.
ಮಹಾರಾಣಿ ಕಾಲೇಜಿಗೆ ಪೊಲೀಸ್ ಭದ್ರತೆ ಮಾಡಲಾಗಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಇಂದಿನಿಂದ ರಾಜ್ಯಾದ್ಯಂತ ಕಾಲೇಜುಗಳು ಆರಂಭವಾಗುತ್ತಿರುವ ಹಿನ್ನೆಲೆ. ನಗರದಲ್ಲೂ ಕಾಲೇಜುಗಳ ಮೇಲೆ ಖಾಕಿ ಹದ್ದಿನ ಕಣ್ಣು ಇಟ್ಟಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಕಳೆದೊಂದು ವಾರದಿಂದ ಬಂದ್ ಆಗಿದ್ದ ಕಾಲೇಜುಗಳು. ಇಂದಿನಿಂದ ಪುನಾರಂಭವಾಗುತ್ತಿದೆ. ಬೆಂಗಳೂರಿನಲ್ಲಿ ಹಿಜಾಬ್ ಗೊಂದಲ ಸೃಷ್ಟಿಯಾಗುವ ಸಾಧ್ಯತೆಯಿದೆ. ನಿನ್ನೆ ರಾಜ್ಯದ 9 ಜಿಲ್ಲೆಗಳಲ್ಲಿ 13 ಕ್ಕೂ ಅಧಿಕ ಶಾಲೆಗಳಲ್ಲಿ ಮಕ್ಕಳು ಹಿಜಾಬ್ ಧರಿಸಿದ್ದರು. ಕೇಸರಿ ಶಾಲು ಧರಿಸದೆ ಮಕ್ಕಳು ಆದೇಶ ಪಾಲಿಸಿದ್ದರು. ಆದರೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು 9 ಜಿಲ್ಲೆಯ ಕೆಲ ಶಾಲೆಗಳಲ್ಲಿ ಹಿಜಾಬ್ ಧರಿಸಿ, ತಲೆಗೆ ಟೋಪಿ ಧರಿಸಿದ್ದರು.
ಹೈಕೋರ್ಟ್ ಆದೇಶ ಕಟ್ಟು ನಿಟ್ಟಿನ ಪಾಲನೆಯಾಗಬೇಕು ಅಂತ ಕಾಲೇಜುಗಳಿಗೆ ಕೊಡಗು ಡಿಸಿ ಆದೇಶ ಡಾ ಬಿಸಿ ಸತೀಶ್ ಆದೇಶ ನೀಡಿದ್ದಾರೆ. ಕಾಲೇಜುಗಳಿಗೆ ಹೊರಗಿನವರ ಪ್ರವೇಶ ನಿಷೇಧಿಸಿಸಲಾಗಿದೆ. ಧಾರ್ಮಿಕ ಉಡುಪು ಧರಿಸಿ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಡಿ. ಧಾರ್ಮಿಕ ಉಡುಪು ಧರಿಸಿ ಬರುವವರ ಮನವೊಲಿಸಿ. ವಿದ್ಯಾರ್ಥಿಗಳ ಮೇಲೆ ಬಲ ಪ್ರಯೋಗ ಮಾಡಬೇಡಿ ಅಂತ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸತೀಶ್ ಸೂಚನೆ ನೀಡಿದ್ದಾರೆ.
ಮೈಸೂರು ಜಿಲ್ಲಾ ವ್ಯಾಪ್ತಿಯ ಶಾಲಾ ಕಾಲೇಜುಗಳ ಸುತ್ತ 144 ಸೆಕ್ಷನ್ ಜಾರಿ ಆಗಿದೆ. ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಆದೇಶ ನೀಡಿದ್ದಾರೆ. 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪ್ರತಿಭಟನೆಗಳು ನಡೆಯುವ ಸಾಧ್ಯತೆ ಹಿನ್ನೆಲೆ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಬಾಗಲಕೋಟೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಪಿಯು, ಪದವಿ ಕಾಲೇಜುಗಳಿಗೆ ಪೊಲೀಸ್ ಬಿಗಿಭದ್ರತೆ ಮಾಡಲಾಗಿದೆ. ಕಾಲೇಜು ವ್ಯಾಪ್ತಿಯೊಳಗೆ ಪೋಷಕರು, ಅನ್ಯ ವ್ಯಕ್ತಿಗಳು ಬರುವಂತಿಲ್ಲ. ಜಿಲ್ಲಾದ್ಯಂತ ಶಾಲಾ- ಕಾಲೇಜು ವ್ಯಾಪ್ತಿಯಲ್ಲಿ 144ನಿಷೇದಾಜ್ಞೆ ಮುಂದುವರೆದಿದೆ. ಕಾಲೇಜು ಸುತ್ತಮುತ್ತ ಗುಂಪು ಸೇರುವಂತಿಲ್ಲ. ಯಾವುದೇ ಸಭೆ ಸಮಾರಂಭ, ಪ್ರತಿಭಟನೆ ಮಾಡುವಂತಿಲ್ಲ. ಆಯಾ ಠಾಣಾ ವ್ಯಾಪ್ತಿಯಲ್ಲಿ ಪಿಯು, ಪದವಿ ಕಾಲೇಜಿಗೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.ಎಲ್ಲ ಕಾಲೇಜುಗಳಲ್ಲಿ ಪೋಷಕರನ್ನು ಕರೆದು ಶಾಂತಿ ಸಭೆ ನಡೆಸಲಾಗಿದೆ.
ರಜೆ ನೀಡಿದ್ದ ಕಾಲೇಜುಗಳು ಇಂದಿನಿಂದ ಪ್ರಾರಂಭವಾಗುತ್ತಿರುವ ಹಿನ್ನೆಲೆ ತುಮಕೂರು ಜಿಲ್ಲೆಯ ಎಲ್ಲಾ ಕಾಲೇಜುಗಳ ಸುತ್ತಮುತ್ತ 144 ಸೆಕ್ಷನ್ ಜಾರಿಯಾಗಿದೆ. ಕಾಲೇಜಿನ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಆದೇಶ ನೀಡಿದ್ದಾರೆ. ಮುಂದಿನ ಆದೇಶದ ವರೆಗೆ 144 ಸೆಕ್ಷನ್ ಜಾರಿ ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಕೆಲ ಷರತ್ತುಗಳನ್ನ ವಿಧಿಸಿದೆ. ಗುರುತಿನ ಚೀಟಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಕಾಲೇಜಿಗೆ ಬರಲು ಅವಕಾಶ ನೀಡಲಾಗಿದೆ. ಕಾಲೇಜು ಸುತ್ತಮುತ್ತ ಜನ ಗುಂಪುಗೂಡುವಂತಿಲ್ಲ. ನಿಷೇಧಾಜ್ಞೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಸುವಂತಿಲ್ಲ. ಯಾವುದೇ ಮಾರಕಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನ ಹಿಡಿದು ಓಡಾಡುವಂತಿಲ್ಲ. ಯಾವುದೇ ಸಭೆ, ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ತುಮಕೂರು ಡಿಸಿ ವೈಎಸ್ ಪಾಟೀಲ್ ಆದೇಶ ನೀಡಿದ್ದಾರೆ.
ಹಿಜಾಬ್ನ ತೆಗೆಯಿರಿ ಅಂತಾ ಯಾರು ಹೇಳಂಗಿಲ್ಲ, ಅಪ್ಪ-ಅಮ್ಮನಿಗೂ ರೈಟ್ಸ್ ಇಲ್ಲ ಅಂತ ಚಿಕ್ಕಮಗಳೂರಿನಲ್ಲಿ ಟಿವಿ9 ಜೊತೆ ತನ್ನ ಹೇಳಿಕೆಯನ್ನು ವಿದ್ಯಾರ್ಥಿನಿ ಸಮರ್ಥಿಸಿಕೊಂಡಿದ್ದಾಳೆ. ಪ್ರತಿಭಟನೆಯ ವೇಳೆ ವಿದ್ಯಾರ್ಥಿನಿ ಶಿಕ್ಷಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾಳೆ. ಹಿಜಾಬ್ ತೆಗೆಯಿರಿ ಅನ್ನೋ ರೈಟ್ಸ್ ಅಪ್ಪ ಅಮ್ಮಂದಿರಿಗೆ ಇಲ್ಲ. ಹೀಗಿರುವಾಗ ಇವರ್ಯಾರು ಎಂದು ಪ್ರಶ್ನಿಸಿದ್ದಾಳೆ. ನಾವು ನಮ್ಮಿಂದ ಹಿಜಾಬ್ ಹಾಕೋದು, ಯಾರು ಹೇಳಿ ಅಲ್ಲ ಅಂತ ವಿದ್ಯಾರ್ಥಿನಿ ಉಮೇರಾ ಫಾತಿಮಾ ಪ್ರತಿಕ್ರಿಯೆ ನೀಡಿದ್ದಾಳೆ.
ರಾಜ್ಯಾದ್ಯಂತ ಇಂದಿನಿಂದ ಕಾಲೇಜುಗಳ ಪುನಾರಂಭವಾಗುತ್ತಿರುವ ಹಿನ್ನೆಲೆ, ಕೆಲ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ರಾಮನಗರ, ಬಾಗಲಕೋಟೆ, ರಾಯಚೂರು, ವಿಜಯಪುರ, ಕೊಪ್ಪಳ, ಉತ್ತರ ಕನ್ನಡ, ಮೈಸೂರು, ಮಂಡ್ಯ, ತುಮಕೂರು ದಾವಣಗೆರೆ, ಕಲಬುರಗಿಯಲ್ಲಿ ಶಾಲೆ-ಕಾಲೇಜು ಬಳಿ ಭದ್ರತೆ ಕೈಗೊಳ್ಳಲಾಗಿದೆ. ಪ್ರೌಢಶಾಲೆ, ಕಾಲೇಜುಗಳ ಸುತ್ತಮುತ್ತ 144 ಸೆಕ್ಷನ್ ಜಾರಿ ಆಗಿದೆ.
Published On - 8:24 am, Wed, 16 February 22