ಕೆಐಎಡಿಬಿ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ವಾಪಾಸ್ ಪಡೆಯಲಾಗುವುದು; ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ

| Updated By: ಸುಷ್ಮಾ ಚಕ್ರೆ

Updated on: Sep 08, 2021 | 8:05 PM

ಯಾವ ಉದ್ದೇಶಕ್ಕೆ ಜಮೀನನ್ನು ಪಡೆಯಲಾಗಿತ್ತೋ ಅದಕ್ಕೇ ಬಳಸಬೇಕು. ಬೇರೆ ಉದ್ದೇಶಕ್ಕೆ ಬಳಕೆ ಮಾಡಿದ್ದರೆ 15 ದಿನದೊಳಗೆ ನೋಟೀಸ್ ನೀಡಲಾಗುವುದು. ಅದಕ್ಕೂ ಉತ್ತರ ನೀಡದಿದ್ದರೆ ನೀಡಿರುವ ಜಮೀನು ವಾಪಾಸ್ ಪಡೆಯಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ಎಚ್ಚರಿಸಿದ್ದಾರೆ.

ಕೆಐಎಡಿಬಿ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ವಾಪಾಸ್ ಪಡೆಯಲಾಗುವುದು; ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ
ಮುರುಗೇಶ್ ನಿರಾಣಿ
Follow us on

ಬೆಂಗಳೂರು: ಕೈಗಾರಿಕಾ ಉದ್ದೇಶಗಳಿಗಾಗಿ ಕೆಐಎಡಿಬಿ ಮೂಲಕ ಪಡೆದ ಜಮೀನನ್ನು ಬಳಕೆ ಮಾಡದಿದ್ದರೆ 15 ದಿನಗಳಲ್ಲಿ ನೋಟಿಸ್ ನೀಡಲಾಗುವುದು. ಒಂದು ವೇಳೆ ಆ ಜಾಗವನ್ನು ಬೇರೆ ಉದ್ದೇಶಕ್ಕಾಗಿ ಬಳಸಿದ್ದರೆ ಹಿಂಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಾವ ಉದ್ದೇಶಕ್ಕೆ ಜಮೀನು ಪಡೆಯಲಾಗಿತ್ತೋ ಅದಕ್ಕೇ ಬಳಸಬೇಕು. ಒಂದು ವೇಳೆ ಬಳಕೆ ಮಾಡದಿದ್ದರೆ, 15 ದಿನದೊಳಗೆ ನೋಟೀಸ್ ನೀಡಲಾಗುವುದು. ಈಗಾಗಲೇ ಕಳೆದ ಒಂದು ವಾರದಿಂದ ಕೆಲವರಿಗೆ ನೋಟೀಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. 15 ದಿನದಲ್ಲಿ ಸಮರ್ಪಕ ಉತ್ತರ ಬಾರದಿದ್ದರೆ ಮತ್ತೊಂದು ನೋಟೀಸ್ ಕೊಡಲಾಗುವುದು. ಹಾಗೊಂದು ವೇಳೆ ಅದಕ್ಕೂ ಉತ್ತರ ನೀಡದಿದ್ದರೆ ನೀಡಿರುವ ಜಮೀನು ವಾಪಾಸ್ ಪಡೆಯಲಾಗುವುದು ಎಂದು ತಿಳಿಸಿದರು.

ಕೆಲವರು ಕೈಗಾರಿಕಾ ಉದ್ದೇಶಗಳಿಗಾಗಿ ಪಡೆದಿರುವ ಜಮೀನಿನಲ್ಲಿ ಶೇ. 100ರಷ್ಟು ಕೆಲಸವನ್ನು ಪೂರ್ಣ ಮಾಡಿದ್ದರೆ, ಇನ್ನು ಕೆಲವರು ಶೇ. 20 ರಷ್ಟು ಮಾತ್ರ ಕೆಲಸ ಪ್ರಾರಂಭಿಸಿದ್ದಾರೆ. ರಾಜ್ಯದ ಯಾವ ಯಾವ ಕಡೆ ಜಮೀನನ್ನು ಖಾಲಿ ಬಿಡಲಾಗಿದೆ ಎಂಬುದರ ಬಗ್ಗೆ ಇಲಾಖೆ ವತಿಯಿಂದ ಸಮೀಕ್ಷೆ ನಡೆಸಲಾಗುವುದು ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

ಕೆಐಎಡಿಬಿಯಿಂದ ಜಮೀನು ಪಡೆದು ಖಾಲಿ ಬಿಟ್ಟಿರುವ ಪ್ರದೇಶಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.

ಕರ್ನಾಟಕಕ್ಕೆ ಮೊದಲ ಸ್ಥಾನ:
ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕರ್ನಾಟಕ 62,085 ಕೋಟಿ ವಿದೇಶಿ ನೇರ ಬಂಡವಾಳ (ಎಫ್‍ಡಿಎ) ಆಕರ್ಷಿಸುವ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಅತ್ಯುತ್ತಮ ಹೂಡಿಕೆದಾರರ ತಾಣವಾಗುತ್ತಿದೆ ಎಂದು ಮುರುಗೇಶ್ ನಿರಾಣಿ ಸಂತಸ ವ್ಯಕ್ತಪಡಿಸಿದರು.

ಏಪ್ರಿಲ್​ನಿಂದ ಜೂನ್ ತಿಂಗಳ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ವಿದೇಶಿ ಬಂಡವಾಳ ಆಕರ್ಷಿಸುವ ರಾಜ್ಯಗಳ ಪೈಕಿ ಮೊದಲ ಸ್ಥಾನಕ್ಕೆ ಬಂದಿದೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2019-20ರಲ್ಲಿ ಕರ್ನಾಟಕ 30,745 ಕೋಟಿ, 2020-21ರಲ್ಲಿ 56,884, 2021-22ರಲ್ಲಿ 62,085 ಕೋಟಿ ಬಂಡವಾಳ ಆಕರ್ಷಿಸಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಂಡವಾಳ ಆಕರ್ಷಣೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ನಮ್ಮ ಸರ್ಕಾರ ಸಾಕಷ್ಟು ವಿಶೇಷ ಗಮನ ಹರಿಸಿದೆ. ದೇಶದಲ್ಲಿ ಒಟ್ಟಾರೆ ವಿದೇಶಿ ಹೂಡಿಕೆಯಲ್ಲಿ ಕರ್ನಾಟಕದ ಪಾಲು ಶೇ.48ರಷ್ಟಿದೆ. ಇದಕ್ಕೆ ಕಾರಣ ವಿಶ್ವದರ್ಜೆ ಮೂಲಭೂತ ಸೌಕರ್ಯಗಳು. ಹೀಗಾಗಿ ವಿದೇಶಿ ಹೂಡಿಕೆದಾರರು ನಮ್ಮ ಕಡೆ ಕರ್ನಾಟಕದತ್ತ ಮುಖ ಮಾಡಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಮುಂದಿನ ದಿನಗಳಲ್ಲಿ ನಮಗೆ ಇನ್ನೂ ದೊಡ್ಡ ಮೊತ್ತದಲ್ಲಿ ನೇರ ಬಂಡವಾಳ ಹರಿದು ಬರಲಿದೆ. ವಿಶ್ವದಲ್ಲೇ ಅತ್ಯುತ್ತಮವಾದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ವಿಶ್ವದರ್ಜೆಯ ರಸ್ತೆಗಳು, ವಿದ್ಯುತ್ ಸೇರಿದಂತೆ ಹತ್ತು ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಿದ್ದೇವೆ. ಕೈಗಾರಿಕೆಗೆ ಸಂಬಂಧಿಸಿದ ಯಾವುದೇ ವಿವಾದಗಳನ್ನು ಕಾಲಮಿತಿಯೊಳಗೆ ಪರಿಹರಿಸಿಕೊಡುವ ರಾಜ್ಯಗಳಲ್ಲಿ ನಾವೇ ಮೊದಲಿಗರು. ಕರ್ನಾಟಕ ಉದ್ಯೋಗ ಮಿತ್ರವು ದೇಶದ ಅಗ್ರಮಾನ್ಯ ಹೂಡಿಕೆ ಪ್ರಚಾರದ ಸಂಸ್ಥೆಯಾಗಿ‌ ಹೊರಹೊಮ್ಮಿದೆ ಎಂಬ ಮಾಹಿತಿಯನ್ನು ಸಚಿವ ನಿರಾಣಿ ತಿಳಿಸಿದರು.

ದೇಶದ ಒಟ್ಟು 20 ರಾಜ್ಯಗಳ ಸಾಧನೆಯನ್ನು ಪರಿಗಣಿಸಿ ಈ ಶ್ರೇಯಾಂಕ ನೀಡಲಾಗಿದೆ. ಹೂಡಿಕೆ ಉತ್ತೇಜನ ಪ್ರಚಾರಕ್ಕೆ ಸಂಬಂಧಿಸಿದ ಒಟ್ಟು 8 ವಿಭಾಗಳ ಪೈಕಿ 4ರಲ್ಲಿ ಕರ್ನಾಟಕ ಉದ್ಯೋಗ ಮಿತ್ರ ಶೇ.100 ಅಂಕಗಳನ್ನು ಗಳಿಸಿದೆ. ಹೂಡಿಕೆ ಯೋಜನೆಗಳ ಗಳಿಕೆ, ಹೂಡಿಕೆ ಯೋಜನೆಗಳಿಗೆ ಸೌಲಭ್ಯ, ಯೋಜನೆ ಜಾರಿ ಬಳಿಕ ಪೂರಕ ನೆರವು ಮತ್ತು ವೆಬ್‌ಸೈಟ್‌ ನಿರ್ವಹಣೆ ವಿಭಾಗದಲ್ಲಿ ಉದ್ಯೋಗ ಮಿತ್ರ ಪೂರ್ಣಾಂಕ ಗಳಿಸಿದೆ. ಉದ್ಯಮಿಗಳಿಗೆ ಹೂಡಿಕೆ ಅವಕಾಶಗಳು ಹಾಗೂ ಆಯ್ಕೆ ಕುರಿತಂತೆ ಸಮರ್ಪಕ ಮಾಹಿತಿ ಒದಗಿಸುವ ಪ್ರಕ್ರಿಯೆ ಪಾಲಿಸುವ ಜತೆಗೆ, ಹೂಡಿಕೆಗೆ ಪೂರಕ ಸೌಲಭ್ಯ ಒದಗಿಸುವಲ್ಲಿ ಏಜೆನ್ಸಿಯ ಪಾತ್ರ ಗಣನೀಯವಾದುದು ಎಂದು ಸಚಿವ ‌ಮುರುಗೇಶ್ ನಿರಾಣಿ ಪ್ರಶಂಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ನವೆಂಬರ್​ನಲ್ಲಿ ಇನ್​ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶ: ಮುರುಗೇಶ್ ನಿರಾಣಿ

Ganesh Chaturthi: ಗಣೇಶನ ಮೂರ್ತಿಗೆ ಎತ್ತರ ನಿಗದಿ ಮಾಡಿರುವ ಆದೇಶ ಹಿಂಪಡೆಯಿರಿ; ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಒತ್ತಾಯ

(Karnataka Industries Minister Murugesh Nirani Warning on KIADB Land Usage For Other Purpose)

Published On - 8:02 pm, Wed, 8 September 21