ಬೆಂಗಳೂರು: ಮಳೆ ಅಂದ್ರೆ ಜೀವ ಕಳೆ, ಮಳೆ ಅಂದ್ರೆ ಸೌಂದರ್ಯ, ಮಳೆ ಅಂದ್ರೆ ಈ ಜೀವ ಜಗತ್ತನ್ನು ಕಾಪಾಡೋ ‘ಅಮೃತಧಾರೆ’. ಅಂದಹಾಗೆ ಮಳೆ ಇಲ್ಲದೆ ಬದುಕು ಇಲ್ಲ, ಮಳೆ ಇಲ್ಲದೆ ಮನುಷ್ಯ ಭೂಮಿ ಮೇಲೆ ಬದುಕೋದು ಇಲ್ಲ. ಅದರಲ್ಲೂ ಭಾರತದಂತಹ ಕೃಷಿ ಆಧಾರಿತ ದೇಶದಲ್ಲಿ ಮಳೆ ಅನ್ನೋದು ಅಕ್ಷರಶಃ ಜೀವಕಳೆ ತುಂಬುತ್ತದೆ. ಇನ್ನೆರಡೇ ಎರಡು ದಿನ ಅಷ್ಟೇ, ಈಗಾಗಲೇ ಕೇರಳ ಪ್ರವೇಶಿಸಿರುವ ಮಾನ್ಸೂನ್ ಕರ್ನಾಟಕಕ್ಕೂ ಎಂಟ್ರಿ ಕೊಡಲಿದೆ.
ಮಳೆ ಸುರಿಯಬೇಕು.. ಇಳೆ ತಂಪಾಗಲು, ರೈತನ ಹೊಲ ಹಸಿರಾಗಲು, ಪ್ರಕೃತಿ ನಳನಳಿಸಲು. ಹೀಗೆ ಭೂಮಿಗೆ ಹೊಸ ಜೀವಕಳೆ ತುಂಬುವ ಮಳೆ ಇಳೆಗೆ ಬೀಳಲೇಬೇಕು. ಅದರಲ್ಲೂ ಭಾರತೀಯರ ಪಾಲಿಗಂತೂ ಮುಂಗಾರು ಮಳೆ ಬಹುದೊಡ್ಡ ಸಂಭ್ರಮವೇ ಸರಿ. ಅಂದಹಾಗೆ ಕೊರೊನಾ ಆರ್ಭಟದ ಮಧ್ಯೆ ಜರ್ಜರಿತವಾಗಿದ್ದ ಅನ್ನದಾತನಿಗೆ ಈ ಬಾರಿ ಮುಂಗಾರು ಮಳೆ ನಿರಾಸೆ ಮಾಡುತ್ತಿಲ್ಲ. ಅಂದುಕೊಂಡಿದ್ದಕ್ಕಿಂತಲೂ ಮೊದಲೇ ಕೇರಳದ ಕರಾವಳಿಯನ್ನ ಸೋಕಿರುವ ಮಾನ್ಸೂನ್, ಕರುನಾಡಿಗೂ ಎಂಟ್ರಿಕೊಡ್ತಿದೆ.
ಅವಧಿಗೂ ಮೊದಲೇ ವರುಣನ ಆರ್ಭಟ:
ಯೆಸ್, ಕರ್ನಾಟಕಕ್ಕೆ ಮುಂಗಾರು ಮಾರುತಗಳು ಪ್ರವೇಶ ಪಡೆಯುವ ಮೊದಲೇ ವರುಣನ ಆರ್ಭಟ ಶುರು ಆಗಲಿದೆ. ಅರಬ್ಬಿ ಸಮುದ್ರ ಹಾಗೂ ಕೇರಳ ಕರಾವಳಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು, ಮುಂದಿನ 2 ದಿನ ವಾಯುಭಾರ ಕುಸಿತವಾಗಲಿದೆ. ಪರಿಣಾಮ ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಕೆಲವೆಡೆ ಇಂದಿನಿಂದ ಭಾರಿ ಪ್ರಮಾಣದ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಮಲೆನಾಡು ಭಾಗದಲ್ಲೂ ಅಬ್ಬರಿಸಲಿದ್ದಾನೆ ವರುಣ:
ಕಳೆದ ಮೂರ್ನಾಲ್ಕು ದಿನದಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಆದ್ರೆ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗಿರಲಿಲ್ಲ. ಇಂದಿನಿಂದ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗೋ ಸಂಭವವಿದೆ. ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದ್ದು, ಬಂಗಾಳ ಕೊಲ್ಲಿಯಲ್ಲೂ ಮೇಲ್ಮೈ ಸುಳಿಗಾಳಿಯಿಂದಾಗಿ ಆಂಧ್ರದಿಂದ ತಮಿಳುನಾಡಿನವರೆಗೆ ಟ್ರಫ್ ನಿರ್ಮಾಣವಾಗಿದೆ. ಇದ್ರಿಂದ ವರುಣ ದೇವ ಅಬ್ಬರಿಸಿ ಬೊಬ್ಬಿರಿಯಲಿದ್ದಾನೆ. ಹೀಗಾಗಿ ಕೊಡಗು, ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನಲ್ಲಿ ಮಾನ್ಸೂನ್ ಅಬ್ಬರ ಜೋರಾಗಲಿದೆ.
ಪ್ರವಾಹದಂತೆ ಹರಿಯುತ್ತಿದೆ ನೀರು, ದಕ್ಷಿಣ ಕನ್ನಡದಲ್ಲಿ ಆತಂಕ:
ಮನೆಗೆ ನುಗ್ಗಿದ ನೀರು.. ಕುಂದಾನಗರಿಯಲ್ಲಿ ಮುನ್ನೆಚ್ಚರಿಕೆ!
ಕಳೆದ ವರ್ಷ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಇಡೀ ಕರುನಾಡಿಗೆ ಕರುನಾಡೇ ನಲುಗಿತ್ತು. ಈ ಮಧ್ಯೆ ಪ್ರಸಕ್ತ ವರ್ಷವೂ ಮಳೆ ಅಬ್ಬರಿಸಲು ಆರಂಭಿಸಿದೆ. ಮಂಗಳೂರಿನಂತೆ ಬೆಳಗಾವಿಯಲ್ಲೂ ಕಳೆದ ಬಾರಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದ, ಈಗ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ನಿನ್ನೆ ಸುರಿದ ಮಳೆಗೆ ಶಾಹುನಗರ, ಶಿವಾಜಿನಗರದ ಮನೆಗಳಿಗೆ ನೀರು ನುಗ್ಗಿತ್ತು. ಮಳೆ ನೀರು ಹೊರಹಾಕಲು ಜನ ಪರದಾಡಬೇಕಾಯ್ತು.
ಸಿಡಿಲು ಬಡಿದು ಮಹಿಳೆ ಸಾವು:
ದುರಂತ ಅಂದರೆ ಹಾವೇರಿ ಜಿಲ್ಲೆಯಲ್ಲಿ ನಿನ್ನೆ ಸಿಡಿಲು-ಗುಡುಗು ಸಮೇತ ಮಳೆ ಸುರಿದಿದ್ದು, ಸಿಡಿಲಿಗೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸನಿಡನೇಗಿಲು ಗ್ರಾಮದಲ್ಲಿ ರೈತ ಮಹಿಳೆ ಮೃತಪಟ್ಟಿದ್ದಾಳೆ. ಇನ್ನು ಮೃತ ಮಹಿಳೆಯನ್ನ ಮಲ್ಲವ್ವ ನಾಯ್ಕರ ಅಂತಾ ಗುರುತಿಸಲಾಗಿದ.
ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ!
ಮತ್ತೊಂದ್ಕಡೆ ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಗಾಂಧಿನಗರದಲ್ಲಿ ರಭಸದಿಂದ ಸಿಡಿಲು ನೆಲಕ್ಕಪ್ಪಳಿಸಿದೆ. ಪರಿಣಾಮ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಧಗಧಗನೇ ಹೊತ್ತಿ ಉರಿದಿದೆ.
ಇದಿಷ್ಟೇ ಅಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ನಿನ್ನೆ ಭಾರಿ ಅವಾಂತರ ಎಬ್ಬಿಸಿದ್ದಾನೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಧಾನಿ ‘ದೆಹಲಿ’ಯಲ್ಲೂ ಮಳೆಯ ಅಬ್ಬರ ಬಲು ಜೋರಾಗಿತ್ತು. ಮಳೆ ಆರ್ಭಟಕ್ಕೆ ರಾಷ್ಟ್ರದ ರಾಜಧಾನಿ ದೆಹಲಿಯ ರಸ್ತೆಗಳು ನದಿಯಂತಾಗಿದ್ದವು. ಇನ್ನು ಕರುನಾಡಲ್ಲಿ ನಿನ್ನೆ ಸುರಿದ ವಿಪರೀತ ಮಳೆಗೆ ಭಾರಿ ಬೆಳೆ ನಷ್ಟ ಉಂಟಾಗಿದೆ. ಜತೆಗೆ ಇನ್ನೂ 2 ದಿನ ಎಡಬಿಡದೆ ಮಳೆಯಾಗಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ.
Published On - 7:36 am, Mon, 1 June 20