Breaking News Today: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನಿನ್ನೆ(ಸೆ.21) ಆದೇಶ ನೀಡಿದೆ. ಈ ಹಿನ್ನೆಲೆ ಇಂದು ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರಿನಾದ್ಯಂತ ಕಟ್ಟೆಚ್ಚರ ವಹಿಸಲು ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ. ಇನ್ನು ಈಗಾಗಲೇ ಲೋಕಸಭೆ ಚುನಾವಣೆಗೆ ಉಭಯ ಪಕ್ಷಗಳು ತಯಾರಿ ನಡೆಸುತ್ತಿದ್ದು. ಅದರಂತೆ ನಿನ್ನೆ ಜೆಡಿಎಸ್, ಬಿಜೆಪಿ ಮೈತ್ರಿ ಮಾತುಕತೆ ದೆಹಲಿಯ ಹೆಚ್ಡಿ ದೇವೇಗೌಡ ಅವರ ನಿವಾಸದಲ್ಲಿ ನಡೆದಿದೆ. ಈ ಕುರಿತು ಇಂದು ಬೆಳಗ್ಗೆ 9.30ಕ್ಕೆ ದೆಹಲಿಯ ಸಫ್ದರ್ಜಂಗ್ ಲೇನ್ನಲ್ಲಿರುವ ನಿವಾಸದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಕೆಲವೆಡೆ ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಈ ಎಲ್ಲದರ ಕ್ಷಣಕ್ಷಣದ ಮಾಹಿತಿ ಟಿವಿ9 ಲೈವ್ನಲ್ಲಿ ಪಡೆಯಿರಿ.
ಕಾನೂನು ತಜ್ಞರು ಕ್ಯಾಬಿನೆಟ್‌ಗೆ ಬಂದು ಎಲ್ಲ ಕಾನೂನು ವಿವರ ನೀಡಿದ್ದಾರೆ ಎಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. 5000 ಕ್ಯೂಸೆಕ್ ಬಿಡಲು ಹೇಳಿದ್ದಾರೆ, 7000 ಕ್ಯೂಸೆಕ್ ಇನ್‌ಫ್ಲೋ ಇದೆ. ಸಾಮಾನ್ಯವಾಗಿ 2500ರಿಂದ 3000 ಕ್ಯೂಸೆಕ್ ನೀರು ಹರಿಯುತ್ತದೆ. ನಾವು ಇದುವರೆಗೆ ಎಲ್ಲ ರೈತರ ಹಿತವನ್ನೂ ಕಾಪಾಡಿದ್ದೇವೆ ಎಂದಿದ್ದಾರೆ.
195 ತಾಲೂಕುಗಳ ಬರ ಘೋಷಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬೆಂಗಳೂರು ಮಹಾನಗರದ ಹಲವೆಡೆ ಮಳೆ ಸುರಿದಿದೆ. ಮೆಜೆಸ್ಟಿಕ್, ಟೌನ್ ಹಾಲ್, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ರಾಜಾಜಿನಗರ, ಶಾಂತಿನಗರ ಸೇರಿದಂತೆ ಹಲವೆಡೆ ವರ್ಷಧಾರೆ ಆಗಿದ್ದು, ಮಳೆಯಿಂದ ವಾಹನ ಸವಾರರ ಪರದಾಡಿದ್ದು, ಸಂಚಾರ ವ್ಯತ್ಯಯವಾಗಿದೆ.
ನಾಳಿನ ಮಂಡ್ಯ ಬಂದ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ. ದೆಹಲಿಯಿಂದ ನಾಳೆ ಮಂಡ್ಯಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಬಂದ್ ಬೆಂಬಲಿಸುವ ಬಗ್ಗೆ ಸಿ.ಎಸ್.ಪುಟ್ಟರಾಜು ಜತೆ ಚರ್ಚೆ ಮಾಡಿದ್ದಾರೆ.
ಜೆಡಿಎಸ್ ಹೆಸರಿನಲ್ಲಿರುವ ಸೆಕ್ಯುಲರ್ ಅನ್ನೋ ಪದವನ್ನು ತೆಗೆದು ಹಾಕಲಿ ಎಂದು ವಿಧಾನಸೌಧದಲ್ಲಿ ಕೃಷಿ ಇಲಾಖೆಯ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಜನತಾ ಪರಿವಾರ ಹುಟ್ಟಿದ ಬಳಿಕ ಎಂದೂ ಇಂಥ ನಿರ್ಧಾರ ಕೈಗೊಂಡಿರಲಿಲ್ಲ. ಈಗ JDSನವರು ಬಿಜೆಪಿ ಜತೆ ಹೋಗಿದ್ದಾರೆ ಅಂದರೆ ಅದರಲ್ಲೇ ಅರ್ಥ ಆಗುತ್ತೆ ಅವರಿಗೆ ಇವರ ಅವಶ್ಯಕತೆ ಇತ್ತು, ಇವರಿಗೆ ಅವರ ಅವಶ್ಯಕತೆ ಇತ್ತು.
2 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶ್ರೀವಿದ್ಯಾ ಪಿ.ಐ. – ಹೆಚ್ಚುವರಿ ನಿರ್ದೇಶಕಿ, ಫಿಸ್ಕಲ್ ಪಾಲಿಸಿ ಸಂಸ್ಥೆ, ಆರ್ಥಿಕ ಇಲಾಖೆ
ರಮ್ಯ ಎಸ್.- ಬಿಬಿಎಂಪಿ ವಲಯ ಅಯುಕ್ತೆ, ಬೊಮ್ಮನಹಳ್ಳಿ ವಲಯ
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ಆರಂಭವಾಗಿದೆ. ಕಾವೇರಿ ನೀರಿನ ವಿಚಾರದ ಬಗ್ಗೆ ಸಚಿವರು ಮಹತ್ವದ ಚರ್ಚೆ ನಡೆಸಲಿದ್ದಾರೆ. ಸರ್ಕಾರದ ಮುಂದಿನ ನಡೆಯ ಬಗ್ಗೆ ಸಂಪುಟದಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಒಂದು ಕಡೆ ನೀರಿಲ್ಲ ಅಂತಾರೆ, ಮತ್ತೊಂದು ಕಡೆ ನೀರು ಬಿಡುತ್ತಾರೆ. ಸರ್ಕಾರ ಗ್ಯಾರಂಟಿಗಳ ಭಜನೆ ಮಾಡಿಕೊಂಡು ಕುಳಿತಿದೆ. ಸರ್ಕಾರಕ್ಕೆ ಕನಿಷ್ಠ ತಿಳಿವಳಿಕೆ ಕೂಡ ಇಲ್ಲ ಎಂದಿದ್ದಾರೆ.
ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, JDS ಗೆಲ್ಲುವುದೇ ನಮ್ಮ ಗುರಿ. ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದೆ ಯಾವುದೇ ರೀತಿಯಲ್ಲೂ ಗೊಂದಲ ಇಲ್ಲದೆ ಮೈತ್ರಿ ನಡೆಯುತ್ತೆ. ಮೈತ್ರಿ ಸಂಬಂಧ ಚರ್ಚಿಸಲೆಂದೇ ಇಂದು ಬಿಜೆಪಿ ನಾಯಕರ ಭೇಟಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಅಧಿಕೃತವಾಗಿ ಮೈತ್ರಿ ಬಗ್ಗೆ ಕೆಲ ವಿಚಾರ ಚರ್ಚೆ ನಡೆಸಿದ್ದೇವೆ ಎಂದು ದೆಹಲಿಯಲ್ಲಿ ಸಭೆ ಬಳಿಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮೈತ್ರಿ ಬಗ್ಗೆ ಎಲ್ಲಾ ರೀತಿಯಲ್ಲೂ ಸುಗಮವಾಗಿ ಚರ್ಚೆ ನಡೆಯುತ್ತಿದೆ. ಎಷ್ಟು ಸೀಟ್ ನಮಗೆ ಕೊಡುತ್ತಾರೆಂಬುದು ಮುಖ್ಯವಲ್ಲ ಎಂದು ಹೇಳಿದ್ದಾರೆ.
ಬಿಜೆಪಿ, ಜೆಡಿಎಸ್ ಮೈತ್ರಿ ಸಂಬಂಧ ಅಂತಿಮ ಮಾತುಕತೆ ಆರಂಭವಾಗಿದ್ದು, 6 ಸ್ಥಾನಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. 6 ಕ್ಷೇತ್ರಗಳ ಪಕ್ಷಗಳ ಬಲಾಬಲ ಮತ ವಿವರವನ್ನು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಲೆ ಹಾಕುತ್ತಿದ್ದಾರೆ. ಬಿಜೆಪಿಗಿಂತಾ ಹೆಚ್ಚು ಮತಗಳು ಇರುವ ಕ್ಷೇತ್ರಗಳ ಮೇಲೆ ಕಣ್ಣಿಡಲಾಗಿದೆ.
ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ ನಾಲ್ವರು IPS ಅಧಿಕಾರಿಗಳಿಗೆ ಹುದ್ದೆ ನೀಡಲಾಗಿದೆ.
ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ ಅರಣ್ಯ ಘಟಕ
ಸಿ.ಬಿ.ವೇದಮೂರ್ತಿ, ಪೊಲೀಸ್ ವರಿಷ್ಠಾಧಿಕಾರಿ, ಗುಪ್ತಚರ ಇಲಾಖೆ
ಹಾಕೆ ಅಕ್ಷಯ್ ಮಚ್ಚೀಂದ್ರ, ಡಿಸಿಜಿ, ಗೃಹರಕ್ಷಕ ದಳ
ಕ್ಷಮಾ ಮಿಶ್ರಾ, ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
ಗುಪ್ತಚರ ಇಲಾಖೆ ಎಸ್ಪಿ ಆಗಿದ್ದ ರವೀಂದ್ರ ಗಡಾದಿ ವರ್ಗಾವಣೆ
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಆಗಿ ವರ್ಗಾವಣೆ
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, JDS ಮೈತ್ರಿ ವಿಚಾರವಾಗಿ ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ ನಿವಾಸದಲ್ಲಿ ಸಭೆ ಆರಂಭವಾಗಿದೆ. ಅಮಿತ್ ಶಾ ಜತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಉಪಸ್ಥಿತರಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸಂಜೆ ಮಾತುಕತೆ ನಡೆಯಲಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. JDS ಜೊತೆಗಿನ ಮಾತುಕತೆ ನಂತರ ವರಿಷ್ಠರು ನಮಗೆ ತಿಳಿಸುತ್ತಾರೆ. ನಮ್ಮ ನಾಯಕರು ಬೇರೆ ಬೇರೆ ಹಂತದಲ್ಲಿ ವರಿಷ್ಠರ ಜೊತೆ ಚರ್ಚಿಸಿದ್ದಾರೆ. ಜೆಡಿಎಸ್ನವರ ಮನಸ್ಥಿತಿ ತಿಳಿದು ಬಳಿಕ ನಮ್ಮ ಜೊತೆ ಮಾತಾಡುತ್ತಾರೆ ಎಂದು ಹೇಳಿದ್ದಾರೆ.
ಮಂಡ್ಯ: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ‘ಸುಪ್ರೀಂ’ ಆದೇಶ ವಿಚಾರ ‘ಮತ್ತೆ ನೀರು ಹರಿಸಿದರೆ ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಮಾತನಾಡಿದ ಅವರು ‘ಒಂದು ವೇದಿಕೆ ಸೃಷ್ಟಿ ಮಾಡುತ್ತೇವೆ, ಚಿತ್ರನಟರು ಭಾಗಿಯಾಗಲಿದ್ದಾರೆ. ಕಾವೇರಿ ನೀರು ಹಳೇ ಸಮಸ್ಯೆ, ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಮೈಸೂರು: ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ನೇತೃತ್ವದಲ್ಲಿ ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪ್ರತಿಭಟನಾನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆ ಜೊತೆ ಸಿಎಂ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ.ಎಂ.ಟಿ.ರೇಜು ಇನ್ನಿತರರು ಉಪಸ್ಥಿತರಿದ್ದಾರೆ.
ಮಂಡ್ಯ: ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ಅಭಿಷೇಕ್ ಅಂಬರೀಶ್ ಕೂಡ ಭಾಗಿಯಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಡನಕಾರರು ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು: ಸುಪ್ರೀಂಕೋರ್ಟ್ ಆದೇಶ ಹಿನ್ನಲೆ ಬೆಂಗಳೂರಿನ ಎಸ್ಬಿಎಂ ವೃತ್ತದಲ್ಲಿ ನಮ್ಮ ಕರ್ನಾಟಕ ಸೇನೆ ಪ್ರತಿಭಟನೆ ನಡೆಸಿದೆ. ಅವೆನ್ಯೂ ರಸ್ತೆಯ ರಾಜ ಮಾರ್ಕೆಟ್ ವೃತ್ತದಲ್ಲಿ ಕರವೇ ನಾರಾಯಗೌಡ ಬಣದಿಂದ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ಘೋಷಣೆ ಕೂಗಿದ್ದಾರೆ.
ಧಾರವಾಡ: ಕಾವೇರಿ ನೀರು ಬಿಡುವಂತೆ ಆದೇಶ ಹಿನ್ನೆಲೆ ಧಾರವಾಡದ ಡಿಸಿ ಕಚೇರಿ ಎದುರು ಸಂಸದರು ಹಾಗೂ ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಕರವೇ ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ನೀರು ಬಿಡದಂತೆ ಒತ್ತಾಯಿಸಿ, ನೀರು ಬಿಟ್ಟರೆ ಕ್ರಾಂತಿ ಎಂದು ಘೋಷಣೆ ಕೂಗುವ ಮೂಲಕ ಟಿ ಎ ನಾರಾಯಣಗೌಡ ಬಣದ ಕಾರ್ಯಕರ್ತರಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ.
ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಬರಗಾಲ ಹಿನ್ನೆಲೆ ಮಲಪ್ರಭಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡಲಾಗಿದೆ. ಹೌದು, ಶಾಸಕರಾದ ವಿಶ್ವಾಸ್ ವೈದ್ಯ, ಎನ್.ಎಚ್ ಕೋನರೆಡ್ಡಿಯಿಂದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಯ 14 ತಾಲೂಕಿನಲ್ಲಿ ಕುಡಿಯುವ ಸಲುವಾಗಿ ನೀರು ಬಿಡುಗಡೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರ ವಲಯದಲ್ಲಿರುವ ಜಾಕ್ವೆಲ್ನಿಂದ ನೀರು ರಿಲೀಸ್ ಆಗಿದೆ.
ಬೆಂಗಳೂರು: ಕಾವೇರಿ ವಿಚಾರದಲ್ಲಿ ಸರ್ಕಾರ ಎಡವಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ನಮ್ಮ ವಕೀಲರು ಕೋರ್ಟ್ ಪ್ರೊಸೀಡಿಂಗ್ ನೋಡಿದ್ದಾರೆ, ರಾಜ್ಯದ ಲೀಗಲ್ ಟೀಂ ಸರಿಯಾಗಿ ವಾದ ಮಾಡಿಲ್ಲ. ಟ್ರಿಬ್ಯುನಲ್ ನಾರ್ಮ್ಸ್ ಬಗ್ಗೆ, ತಮಿಳುನಾಡಿನಲ್ಲಿ ಎಷ್ಟು ನೀರು ಬಳಕೆಯಾಗಿದೆ ಎಂಬುದನ್ನು ಹೇಳಿಲ್ಲ. ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಬೇಕಿದೆ. ಅದನ್ನು ನಾವು ಮಾಡುತ್ತಿದ್ದೇವೆ. ಈಗಾಗಲೇ ಮಂಡ್ಯ, ಚಾಮರಾಜನಗರ, ಬೆಂಗಳೂರಿನಲ್ಲಿ ಸೇರಿ ಎಲ್ಲಾ ಕಡೆ ಹೋರಾಟ ಮಾಡಲು ನಿರ್ಧಾರ ಮಾಡಿದ್ದು, ಇಂದಿನ ಸಭೆಯಲ್ಲಿ ಹೋರಾಟದ ರೂಪು ರೇಷೆ ನಿರ್ಧರಿಸಲಿದ್ದೇವೆ ಎಂದರು.
ದಾವಣಗೆರೆ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು ಸಂಸದ ಜಿಎಂ. ಸಿದ್ದೇಶ್ವರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯದ ಹಿತ ಕಾಪಡಲಿಲ್ಲವೆಂದು ಸಂಸದರ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ.
ಮಂಡ್ಯ: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ‘ಸುಪ್ರೀಂ’ ಆದೇಶ ವಿಚಾರ ‘ಪ್ರಜೆಗಳ ಹಿತವನ್ನು ಕಾಪಾಡುವ ಕೆಲಸ ಯಾವುದೇ ಸರ್ಕಾರ ಮಾಡಲಿ. ಸದ್ಯ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುವ ಸ್ಥಿತಿ ಬಂದಿದೆ. ವಸ್ತುಸ್ಥಿತಿ ಬಗ್ಗೆ ಸುಪ್ರೀಂಕೋರ್ಟ್ಗೆ ಸರ್ಕಾರ ಸೂಕ್ತ ಮನವರಿಕೆ ಮಾಡಲಿ ಎಂದು ಮಂಡ್ಯದಲ್ಲಿ ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಶ್ರೀ ಹೇಳಿದರು. ‘ನಾವು ಕೂಡ ರಾಜ್ಯ ಹಾಗೂ ಕೇಂದ್ರ ಸಚಿವರ ಜೊತೆ ಮಾತನಾಡುತ್ತೇವೆ. ಆದಷ್ಟು ಬೇಗ ಮೇಕೆದಾಟು ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಿ ನಿರ್ಮಲಾನಂದನಾಥ ಶ್ರೀ ಹೇಳಿದರು.
ಬೆಂಗಳೂರು: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹಿನ್ನಲೆ ಕಾವೇರಿ ಕಿಚ್ಚು ಭುಗಿಲೆದ್ದಿದ್ದು, ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಅದರಂತೆ ವಿಜಯನಗರದ ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಭೂತದಹನ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯ: ಬರಿದಾಗಿರುವ ಕಾವೇರಿಗೆ ಬರದ ಶಾಸನ ಕೊಟ್ಟಿದ್ದಾರೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಮಂಡ್ಯದಲ್ಲಿ ಹೇಳಿದ್ದಾರೆ. ‘ಮಾರಣಾಂತಿಕ ತೀರ್ಪು ಕೊಟ್ಟಿದ್ದಾರೆ. ಕಾವೇರಿ ಕೊಳ್ಳದ ಡ್ಯಾಮ್ ಗಳು ಬರಿದಾಗುತ್ತಿವೆ. ಮಳೆ ಬರದಿದ್ದರೇ ಬರ ಬರಲಿದೆ ಎಂದಿದ್ದಾರೆ.
ನವದೆಹಲಿ: ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಅಂಗೀಕಾರ ಹಿನ್ನಲೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಪೂರ್ಣ ಬಹುಮತದೊಂದಿಗೆ ಬಿಲ್ ಅಂಗೀಕಾರವಾಗಿದ್ದಕ್ಕೆ, ದೇಶದ ಎಲ್ಲ ತಾಯಂದಿಯರು, ಸೋದರಿಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಇಂಥಹ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುವ ಅವಕಾಶ ಬಿಜೆಪಿಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿ ಬಿಲ್ ಬಗ್ಗೆ ಚರ್ಚೆ ನಡೆಯಲಿದ್ದು, ಮಹಿಳಾ ಮೀಸಲಾತಿ ಬಿಲ್ ಹೊಸ ಪ್ರಜಾಪ್ರಭುತ್ವದ ಬದ್ಧತೆಯ ಪ್ರತೀಕ ಎಂದು ಹೇಳಿದರು.
ನವದೆಹಲಿ: ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಅಂಗೀಕಾರವಾದ ಹಿನ್ನಲೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದಿಂದ ಪ್ರಧಾನಿ ಮೋದಿಗೆ ಸನ್ಮಾನ ಮಾಡಲಾಯಿತು.
ದೆಹಲಿ: ಕಾವೇರಿ ನೀರಿನ ವಿಚಾರವಾಗಿ ಹೆಚ್ಡಿ ದೇವೇಗೌಡ ಮಾತಾಡಲಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಖರ್ಗೆ ಹೇಳಿಕೆಗೆ ಹೆಚ್.ಡಿ.ಡಿ ಪ್ರತಿಕ್ರಿಯೆ ನೀಡಿದ್ದಾರೆ ‘ರಾಜ್ಯಸಭೆಯಲ್ಲಿ ಕಾವೇರಿ ನದಿ ಬಗ್ಗೆ ನಾನೊಬ್ಬನೇ ಮಾತಾಡಿದ್ದು, ಕಾವೇರಿ ನದಿ ವಿಚಾರದ ಬಗ್ಗೆ ನನ್ನ ಬಾಯಿಯಿಂದ ಹೇಳಿಸಬೇಡಿ ಎಂದಿದ್ದಾರೆ.
ನವದೆಹಲಿ: ಮೈತ್ರಿ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು ‘ನಾನು ಕ್ಲಿಯರ್ ಆಗಿ ಹೇಳ್ತಿನಿ ರಿಯಾಕ್ಟ್ ಮಾಡಲ್ಲ. ಕುಮಾರಸ್ವಾಮಿ ಆ ಬಗ್ಗೆ ಮಾತಾಡ್ತಾರೆ ಎಂದರು.
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರ ಹಿನ್ನಲೆ ನೀರು ಸಂಸ್ಕರಣಾ ಘಟಕದ ಬಳಿ ಕನ್ನಡ ಪರ ಸಂಘಟನೆ ಹಾಗೂ ಕಾವೇರಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆ ಕಾಡನಹಳ್ಳಿ ಬಳಿ ಇರುವ ಪಂಪ್ ಹೌಸ್ ಎದುರು ಬೆಂಗಳೂರಿಗೆ ನೀರು ಹರಿಸದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ತುಮಕೂರು: ಶಿರಾ ಪಟ್ಟಣದಲ್ಲಿ ಪರವಾನಗಿ ಇಲ್ಲದೆ ಓಡಿಸುತ್ತಿದ್ದ 15 ಆಟೋಗಳು ಹಾಗೂ 1 ಶಾಲಾ ಬಸ್ಗಳನ್ನು ಆರ್ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ಶೂರೆನ್ಸ್, ಡಿಎಲ್ ಇಲ್ಲದೇ ವಾಹನ ಓಡಿಸುತ್ತಿದ್ದ ಚಾಲಕರಿಗೆ ಆರ್ಟಿಒ ಇನ್ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶಾಕ್ ನೀಡಿದ್ದಾರೆ.
ದೆಹಲಿ: ರಾಜ್ಯಸಭೆಯಲ್ಲೂ ಮಹಿಳಾ ಮೀಸಲಾತಿ ಬಿಲ್ ಅಂಗೀಕಾರ ಹಿನ್ನಲೆ ಟ್ವೀಟ್ ಮೂಲಕ ದೇಶದ 140 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದ್ದಾರೆ. ‘ಮಹಿಳಾ ಮೀಸಲಾತಿ ಬಿಲ್ ಅಂಗೀಕಾರಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ. ಉಭಯ ಸದನಗಳ ಸದಸ್ಯರಿಗೂ ಅಭಿನಂದನೆ ತಿಳಿಸಿದ್ದಾರೆ.
हमारे देश की लोकतांत्रिक यात्रा का एक ऐतिहासिक क्षण! 140 करोड़ भारतवासियों को बहुत-बहुत बधाई!
नारी शक्ति वंदन अधिनियम से जुड़े बिल को वोट देने के लिए राज्यसभा के सभी सांसदों का हृदय से आभार। सर्वसम्मति से इसका पास होना बहुत उत्साहित करने वाला है।
इस बिल के पारित होने से जहां…
— Narendra Modi (@narendramodi) September 21, 2023
ಶಿವಮೊಗ್ಗ: ಹಳೆ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿದ್ದು, ಈ ವೇಳೆ ಗಲಾಟೆಯಲ್ಲಿ 5 ಮಂದಿಗೆ ಚಾಕು ಇರಿದ ಘಟನೆ ಶಿವಮೊಗ್ಗದ ದ್ರೌಪದಮ್ಮ ಸರ್ಕಲ್ನಲ್ಲಿ ತಡರಾತ್ರಿ ನಡೆದಿದೆ. ಪವನ್ ಹಾಗೂ ಕಿರಣ್ ಎಂಬ ಎರಡು ಗುಂಪಿನಿಂದ ಗಲಾಟೆ ನಡೆದಿದ್ದು, ಚಾಕು ಇರಿತಕ್ಕೊಳಗಾದ ಐದು ಮಂದಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ದೆಹಲಿ: ನಿನ್ನೆ ನಿಗದಿಯಾಗಿದ್ದ ಅಮಿತ್ ಶಾ ಹಾಗೂ ಹೆಚ್ಡಿ ಕುಮಾರಸ್ವಾಮಿ ಮೀಟಿಂಗ್, ಇಂದು ನಿಗದಿ ಮಾಡಲಾಗಿದೆ. ಲೋಕಸಭಾ ವಿಶೇಷ ಅಧಿವೇಶನ ನಿನ್ನೆ ತಡವಾಗಿ ಮುಗಿದ ಹಿನ್ನೆಲೆ ಇಂದು ಮೈತ್ರಿ ಮಾತುಕತೆ ನಡೆಯಲಿದೆ. ಇವತ್ತು ಸಂಜೆ ಒಳಗಾಗಿ ಕಮಲದಳ ದೋಸ್ತಿ ಮೈತ್ರಿ ಅಧಿಕೃತ ಘೋಷಣೆ ಮಾಡಲಿದ್ದು, ಅಮಿತ್ ಶಾ, ಜೆಪಿ ನಡ್ಡಾ ಜೊತೆ ಕುಮಾರಸ್ವಾಮಿ, ಎಚ್ಡಿ ರೇವಣ್ಣ ಮೈತ್ರಿ ಮಾತುಕತೆ ಮಾಡಲಿದ್ದಾರೆ. ಈ ಕುರಿತು ಅಮಿತ್ ಶಾ ಇಂದು ಎರಡು ಗಂಟೆ ನಂತರ ಮೈತ್ರಿ ಮೀಟಿಂಗ್ಗೆ ಸಮಯ ಕೊಟ್ಟಿದ್ದಾರೆ.
ಮಂಡ್ಯ: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹಿನ್ನಲೆ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ತೀವ್ರಗೊಂಡಿದೆ. ಜಿಲ್ಲೆಯಲ್ಲಿಂದು ರೈತರು, ಕನ್ನಡ ಸಂಘಟನೆಗಳಿಂದ ಸರಣಿ ಪ್ರತಿಭಟನೆ ನಡೆಯಲಿದೆ. ಇಡೀ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಟಿ.ಕೆ.ಹಳ್ಳಿ ಪಂಪ್ಹೌಸ್ಗೆ ಕನ್ನಡಪರ ಸಂಘಟನೆಗಳ ಮುತ್ತಿಗೆ ಹಾಕಲಿದ್ದು, ಬೆಂಗಳೂರಿಗೆ ನೀರು ನಿಲ್ಲಿಸಿ ರೈತರ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಲಿದ್ದಾರೆ.
Published On - 7:54 am, Fri, 22 September 23