ಟೊಮೆಟೊ ದರ(Tomato Rate) ಏರಿಕೆಗೆ ಬೇಸತ್ತ ಜನರಿಗೆ ಮತ್ತೊಂದು ಶಾಕ್ ಸಿಕ್ಕಿದ್ದು. ನಿನ್ನೆಯಿಂದ (ಆ.01) ಅಗತ್ಯ ವಸ್ತುಗಳು ದುಬಾರಿ ಆಗಿದೆ. ಈಗಾಗಲೇ ಕೆಜಿ ಟೊಮೆಟೊ ದರ 140-160 ರೂ. ಇದ್ದು ಟೊಮೆಟೊ ಖರೀದಿಸಲು ಜನ ಹಿಂಜರಿಯುವಂತಾಗಿದೆ. ಇದರ ನಡುವೆ ನಂದಿನಿ ಹಾಲಿನ (Milk Rate Hike) ಮೇಲೆ ಮೂರು ರೂಪಾಯಿ ದರ ಏರಿಕೆಯಾಗಿದೆ. ಜೊತೆಗೆ ಹೋಟೆಲ್ನ ಊಟ ತಿಂಡಿ ಕಾಫಿ ಟೀ ಮೇಲೆ(Hotel Food Rate) ಹತ್ತರಷ್ಟು ದರ ಏರಿಕೆಯಾಗಿದೆ. ಇನ್ನು ಇದರ ಜೊತೆ ಕಾಂಗ್ರೆಸ್ನ ಗ್ಯಾರಂಟಿಗಳಲ್ಲೊಂದಾದ ಗೃಹ ಜ್ಯೊತಿ ಯೋಜನೆ (Gruha Jyothi Scheme) ಫಲಾನುಭವಿಗಳಿಗೆ ನಿನ್ನೆಯಿಂದ ಶೂನ್ಯ ದರದ ಬಿಲ್ ಸಿಗುತ್ತಿದೆ. ಜುಲೈ 1 ರಿಂದ ಬಳಸಿದ ವಿದ್ಯುತ್‌ಗೆ ಗೃಹಜ್ಯೋತಿ ಯೋಜನೆಯಡಿ ಶುಲ್ಕ ವಿನಾಯಿತಿ ಮಾಡಲಾಗುತ್ತದೆ. ಇನ್ನು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ನವರು ಉಡುಪಿಗೆ ಭೇಟಿ ನೀಡಿದ್ದಾರೆ. ಉಡುಪಿಯಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಚಿತ್ರೀಕರಣ ಕೇಸ್ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು. ಇದೇ ವೇಳೆ ಸಿಎಂ ಉಡುಪಿಯ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಮಕ್ಕಳು ನಮಗೆ ಲ್ಯಾಪ್ಟಾಪ್ ಅವಶ್ಯಕತೆಯಿದೆ ಎಂದು ಬೇಡಿಕೆಯಿಟ್ಟಿದ್ದರು. ಮತ್ತೊಂದೆಡೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ(Bengaluru Mysuru Expressway) ಹೊಸ ನಿಯಮ ಜಾರಿಯಾಗಿದ್ದು ಟ್ರ್ಯಾಕ್ಟರ್, ಆಟೋ, ಬೈಕ್ಗೆ ಪ್ರವೇಶವಿಲ್ಲ. ಆದರೂ, ನಿಯಮ ಮೀರಿ ಹೆದ್ದಾರಿ ಬಳಸಿದವರಿಗೆ ಪೊಲೀಸರು 500 ರೂ. ದಂಡ ಹಾಕಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ಲೋಕಸಭಾ ಚುನಾವಣೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಎಐಸಿಸಿ ಕಚೇರಿಯಲ್ಲಿ ಸಭೆ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದರು. ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಮುಂದುವರಿದಿದೆ. 5 ಗ್ಯಾರಂಟಿಗಳಿಂದ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂದರು.
ಭ್ರಷ್ಟಾಚಾರದ ವಿಚಾರ ಊಹಾಪೋಹವೋ, ಆರೋಪವೋ ಕೆಲವೊಂದಿಷ್ಟು ಮಾಹಿತಿ ನಮ್ಮ ತನಕ ಬಂದಿದೆ, ಕೂಡಲೇ ಎಚ್ಚರವಹಿಸಿ. ಇಲ್ಲದಿದ್ರೆ ಸೂಕ್ತ ಕ್ರಮ ಅನಿವಾರ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸರ್ಕಾರದ ಇಮೇಜ್‌ಗೆ ಧಕ್ಕೆ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷ ಖರ್ಗೆ, ರಾಹುಲ್ ನೇತೃತ್ವದಲ್ಲಿ 2024ರ ಲೋಕಸಭಾ ಚುನಾವಣೆ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದೆ ಎಂದು ಐಸಿಸಿ ಕಚೇರಿಯಲ್ಲಿ ಸಭೆ ನಂತರ ಸಿಎಂ ಸಿದ್ದರಾಮಯ್ಯ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಸಂಬಂಧ ಚರ್ಚೆ ಮಾಡಿದ್ದು, ಜಿಲ್ಲೆಗಳಿಗೆ ಚುನಾವಣಾ ಉಸ್ತುವಾರಿಯಾಗಿ ಸಚಿವರನ್ನು ನೇಮಿಸುತ್ತೇವೆ ಎಂದರು.
ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ ಪ್ರಮುಖವಾಗಿ ಚರ್ಚೆ ಮಾಡಿದ್ದೇವೆ. ಕನಿಷ್ಠ 20 ಸ್ಥಾನ ಗೆಲ್ಲುವುದಾಗಿ ಹೈಕಮಾಂಡ್ಗೆ ಭರವಸೆ ನೀಡಿದ್ದೇವೆ ಎಂದು ಎಐಸಿಸಿ ಕಚೇರಿಯಲ್ಲಿ ಸಭೆ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಗ್ಯಾರಂಟಿ ಜಾರಿ ಬಗ್ಗೆ ಜನರಿಗೆ ಮನವರಿಕೆ ಮಾಡಲು ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ಎಐಸಿಸಿ ಕಚೇರಿ ಬಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು. ಲೋಕಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂದು ಹೇಳಿದರು.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸಚಿವರೊಂದಿಗೆ ನಡೆದಿದ್ದ ಎಐಸಿಸಿ ನಾಯಕರ ಸಭೆ ಮುಕ್ತಾಯವಾಗಿದೆ.
ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಕಪ್ಪುಚುಕ್ಕೆ ಬಾರದಂತೆ ನೋಡಿಕೊಳ್ಳಿವಂತೆ ಸಚಿವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಾರದರ್ಶಕ ಆಡಳಿತ ನೀಡಬೇಕು, ಹೈಕಮಾಂಡ್ ನಿಗಾ ವಹಿಸಲಿದೆ. ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದೇವೆ. ಭ್ರಷ್ಟಾಚಾರ ಆರೋಪ ಕಾಂಗ್ರೆಸ್ ಸರ್ಕಾರದ ವಿರುದ್ಧ ಬರಬಾರದು ಎಂದಿದ್ದಾರೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಧ್ಯಕ್ಷ ಖರ್ಗೆ ನೇತೃತ್ವದಲ್ಲಿ ಇಂದು ನಡೆದ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರ ಜತೆ ಮೊದಲ ಹಂತದ ಸಭೆ ಅಂತ್ಯವಾಗಿದೆ. 2024ರ ಲೋಕಸಭಾ ಚುನಾವಣೆ ಗೆಲ್ಲಲು ಸೂತ್ರ ರಚಿಸಲಾಗಿದೆ. 5 ಗ್ಯಾರಂಟಿಗಳು ಸರಿಯಾಗಿ ಜಾರಿಯಾಗಬೇಕು. ಫಲಾನುಭವಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಸಂಪರ್ಕ ಮಾಡಬೇಕು.
ಎಐಸಿಸಿ ಅಧ್ಯಕ್ಷ ಖರ್ಗೆ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಹಿನ್ನೆಲೆ ಬಿಜೆಪಿ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕಾಂಗ್ರೆಸ್‌ನಿಂದ ದೂರು ನೀಡಲಾಗಿದೆ. ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದ ನಿಯೋಗದಿಂದ ಆರಗ ಜ್ಞಾನೇಂದ್ರ ವಿರುದ್ಧ ಕೂಡಲೇ ಕೇಸ್ ದಾಖಲಿಸಿ ಕ್ರಮಕ್ಕೆ ಆಗ್ರಹಿಸಲಾಗಿದೆ.
ಈವರೆಗೆ ವಿಪಕ್ಷ ನಾಯಕನನ್ನು ನೇಮಕ ಮಾಡದಿದ್ದಕ್ಕೆ ಬೇಸರವಾಗಿದೆ. ಈ ಬಗ್ಗೆ ಎಲ್ಲರೂ ಪ್ರಶ್ನಿಸುತ್ತಿದ್ದಾರೆ, ಪ್ರಶ್ನೆಗೆ ಉತ್ತರಿಸಲು ಮುಜುಗರ ಆಗುತ್ತಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಚುನಾವಣೆ ಸೋಲನ್ನು ನಾಯಕರ ಮೇಲೆ ತೀರಿಸಿಕೊಳ್ಳುವುದು ಸರಿಯಲ್ಲ. ಬಿಜೆಪಿ ಹೈಕಮಾಂಡ್ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಹೊಳೆನರಸೀಪುರದಿಂದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಶಾಸಕರಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಅಶ್ವತ್ ರಾಮ್ ಎಂಬುವವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆವಾಗಿ ಪ್ರಿಯಾಂಕ್ ಖರ್ಗೆಗೆ ಹೈಕೋರ್ಟ್ ಬುಧವಾರ ಸಮನ್ಸ್ ಜಾರಿ ಮಾಡಿದೆ.
ಮಲ್ಲಿಕಾರ್ಜುನ ಖರ್ಗೆ, ಈಶ್ವರ್ ಖಂಡ್ರೆ ಬಗ್ಗೆ ಆರಗ ಅವಹೇಳನ ಹೇಳಿಕೆ ವಿಚಾರವಾಗಿ ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಬಳಿ ಆರಗ ಜ್ಞಾನೇಂದ್ರ ವಿರುದ್ಧ ಧಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಾಕಾರಿಯಾಗಿ ಮಾತಾಡಿದ್ದಾರೆ. ಕೇಸ್ ದಾಖಲಿಸಿಕೊಂಡು ಅವರನು ಬಂಧಿಸಬೇಕು. ಕ್ಷಮೆ ಕೇಳಿದರೆ ಸಾಲದು ಎಂದಿದ್ದಾರೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಜ್ಯ ನಾಯಕರ ಸಭೆ ಆರಂಭವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಈಶ್ವರ ಖಂಡ್ರೆ, ಬಿ.ನಾಗೇಂದ್ರ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ನಿನ್ನೆ 211 ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿದ್ದ ಸರ್ಕಾರ ಇಂದು ಅದನ್ನು ತಡೆ ಹಿಡಿದಿದೆ. ಯಾರು ರಿಲೀವ್ ಆಗದಂತೆ ಸದ್ಯ ವೈರಲೆಸ್ ಮೂಲಕ ಸಂದೇಶ ನೀಡಲಾಗಿದೆ.
ದೆಹಲಿಯ ಕರ್ನಾಟಕ ಭವನದಿಂದ ಎಐಸಿಸಿ ಕಚೇರಿಗೆ ನಾಯಕರು ಆಗಮಿಸಿದ್ದು, ಕೆಲವೇ ಕ್ಷಣದಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರ ಸಭೆಗೆ ಆಗಮಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳುವುದು ಒಂದು, ಮಾಡುವುದು ಇನ್ನೊಂದು. ಸಮಾಜದಲ್ಲಿ ಶೋಷಿತರಿಗೆ ಮೊದಲು ಶಿಕ್ಷಣ, ಆರ್ಥಿಕ ಭದ್ರತೆ ಬೇಕು. ನಿಮ್ಮ ಬಿಟ್ಟಿ ಭಾಗ್ಯಗಳನ್ನು ನಿಲ್ಲಿಸಿಬಿಡಿ ಎಂದು ಎಂಎಲ್ಸಿ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಮೈಸೂರು: ನಗರದ ಸಿದ್ದಪ್ಪ ವೃತ್ತದಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ಅಪಘಾತವಾಗಿತ್ತು. ಈ ವೇಳೆ ಇಬ್ಬರು ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಿ ಮೂಲಕ ಬಿಜೆಪಿ ಶಾಸಕ ಶ್ರೀವತ್ಸ್ ಅವರು ಮಾನವೀಯತೆ ಮೆರೆದಿದ್ದಾರೆ. ಶಾಸಕ ಶ್ರೀವತ್ಸ ಕಚೇರಿಗೆ ತೆರಳುತ್ತಿದ್ದರು ಈ ವೇಳೆ ಅದೇ ಮಾರ್ಗದಲ್ಲಿ ಅಪಘಾತವಾಗಿದ್ದು, ಆಟೋದಲ್ಲಿ ಬಾಲಕಿಯರನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಈ ಕುರಿತು ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.
ಮೈಸೂರು: ಚಾಲಕನೊಬ್ಬ ಕಂಠಪೂರ್ತಿ ಕುಡಿದು ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿದ ಘಟನೆ ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯಲ್ಲಿ ನಡೆದಿದೆ. ನಿಲ್ಲಲ್ಲು ಸಾಧ್ಯವಾಗದಷ್ಟು ಪಾನಮತ್ತನಾಗಿರುವ ಕಾರು ಚಾಲಕ ನಿಯಂತ್ರಣ ತಪ್ಪಿ ಪುಟ್ಫಾತ್ಗೆ ಕಾರನ್ನು ಕುದ್ದಿಸಿದ್ದಾನೆ. ಈ ಮೊದಲು ನಾಯಿಗೆ ಗುದ್ದಿಸಿ ನಂತರ ಬೈಕ್ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ನಾಯಿಗೆ ಕಾರು ಗುದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಗೆಣಸಿನಕುಣಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ ಘಟನೆ ನಡೆದಿದ್ದು, ಕರೆಂಟ್ ಶಾಕ್ನಿಂದ ಬಸ್ನಲ್ಲಿದ್ದ 35ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಕೂಡಲೇ ಅವರನ್ನ ಸಾಗರ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಾವಣಗೆರೆ: ರಾಜ್ಯ ಸರ್ಕಾರ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು ‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ತಿಂಗಳಾಗಿದ್ದರೂ ಭರವಸೆಗಳು ಯಾವುದೂ ಯಶಸ್ವಿಯಾಗಿಲ್ಲ. ಆರ್ಥಿಕ ಇಲಾಖೆ ಅಧಿಕಾರಿಗಳು ಕೇವಲ ಒಂದು ವರ್ಷಕ್ಕೆ ಮಾತ್ರ ಭರವಸೆ ಹಣ ಇಟ್ಟಿರುವುದಾಗಿ ಹೇಳಿದ್ದಾರೆ ಎಂದರು.
ಉಡುಪಿ: ಖಾಸಗಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಆಗಸ್ಟ್ 4ರ ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರ ಭೇಟಿ ಮಾಡಿ, ಎಸ್ಐಟಿ ತನಿಖೆಗೆ ಒತ್ತಾಯಿಸಿ ದೂರು ನೀಡುತ್ತೇವೆ ಎಂದು ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ. ಪೊಲೀಸರಿಗೆ ತನಿಖೆ ನಡೆಸಲು ಸರಕಾರ ಫ್ರೀ ಹ್ಯಾಂಡ್ ಬಿಟ್ಟಿಲ್ಲ. ಆರೋಪಿಗಳಿಗೆ ಬೇಲ್ ಸಿಗುವ ಸೆಕ್ಷನ್ ಹಾಕಲಾಗಿದೆ. ಬೆಳ್ಳಿಯಪ್ಪನವರ ಮೇಲೆ ವಿಶ್ವಾಸ ಇದೆ ನ್ಯಾಯ ಕೊಡುತ್ತಾರೆ ಎಂದರು.
ಕೋಲಾರ: ನಗರದಲ್ಲಿ ಏಕಾಏಕಿ ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದಿದೆ. ಓಕಿನೋವಾ ಕಂಪನಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು, ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದ್ದು, ಬೆಂಕಿಯಿಂದ ಸಂಪುರ್ಣವಾಗಿ ಸುಟ್ಟು ಕರಕಲಾಗಿದೆ. ಕೂಡಲೇ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದ್ದು, ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಮೆಡಿಕಲ್ ಸೀಟ್ ಕೊಡಿಸುವುದಾಗಿ ಲಕ್ಷಗಟ್ಟಲೆ ವಂಚನೆ ಮಾಡಿದ ಆರೋಪ ಕೇಳಿಬಂದಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ನಾನು ಸೆಂಟ್ರಲ್ ಗೌರ್ನಮೆಂಟ್ ನೌಕರ ಎಂದು, ನನಗೆ ಮಿನಿಸ್ಟರ್, ವೈದ್ಯಕೀಯ ಕಾಲೇಜಿನವರು ಗೊತ್ತಿದೆ ಎಂದು ಪರಿಚಯಸಿಕೊಂಡಿದ್ದನಂತೆ. ಇತನ ಮಾತು ನಂಬಿ ಇಬ್ಬರು ವಿದ್ಯಾರ್ಥಿಗಳ ಬಳಿ ಬರೊಬ್ಬರಿ 35 ಲಕ್ಷ ಹಣ ಪಡೆದಿದ್ದ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಇದೀಗ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬಿಸಿದ್ದಾರೆ.
ಉತ್ತರ ಕನ್ನಡ: ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಮೊಬೈಲ್ ಚಾರ್ಜರ್ ವೈರ್ನಿಂದ ವಿದ್ಯುತ್ ಪ್ರವಹಿಸಿ ಮಗು ಸಾವನ್ನಪ್ಪಿದೆ. ಸಂಜನಾ ದಂಪತಿಯ 8 ತಿಂಗಳ ಹೆಣ್ಣು ಮಗು ಇದಾಗಿದ್ದು, ಮೊಬೈಲ್ ಚಾರ್ಜ್ಗೆ ಹಾಕಿ ಪೋಷಕರು ಆಪ್ ಮಾಡದೇ ಇಟ್ಟಿದ್ದರು. ಈ ವೇಳೆ ಆನ್ಇದ್ದ ಚಾರ್ಜರ್ನ್ನು ಮಗು ಬಾಯಲ್ಲಿಟ್ಟುಕೊಂಡಿದ್ದು ಕೂಡಲೇ ಶಾಕ್ನಿಂದ ಕೊನೆಯುಸಿರೆಳದಿದೆ.
ಬೆಂಗಳೂರು: ನಿನ್ನೆ ವರ್ಗಾವಣೆಗೊಂಡಿದ್ದ ಕೆಲ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ಸರ್ಕಾರ ತಡೆ ಹಿಡಿದಿದೆ.
ನಿನ್ನೆ 211 ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು. ಇಂದು ಬೆಳಗ್ಗೆ ಸರ್ಕಾರದಿಂದ ದಿಢೀರ್ ತಡೆ ಹಿಡಿಯಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರ ಹಾಲಿನ ದರ ಎರಿಸಿದ ಬಳಿಕ ಇದೀಗ ನಂದಿನಿ ಪಾರ್ಲರ್ಗೆ ಹೊಸ ದರದ ಹಾಲು, ಮೊಸರು, ಮಜ್ಜಿಗೆ ಬಂದಿದೆ. ನಿನ್ನೆ(ಆ.1) ಹೊಸ ದರದ ಪ್ಯಾಕೆಟ್ ಇರಲಿಲ್ಲ. ಹಳೆಯ ದರದ ಪ್ಯಾಕೆಟ್ ಮಾರಾಟ ಮಾಡ್ತಿದ್ದೀರಾ ಎಂದು ಗ್ರಾಹಕರು ಕಿರಿಕ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು( ಆ.2) ಬೆಳಗ್ಗಿನಿಂದಲೇ ಹೊಸ ದರದ ಹಾಲು, ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಬಂದಿದೆ. (Normal)ಅರ್ಧ ಲೀಟರ್ ಹಾಲಿಗೆ ಹಿಂದೆ 20 ರೂಪಾಯಿ ಇತ್ತು. ಈಗ 22 ರೂಪಾಯಿ ಆಗಿದೆ. ಗ್ರಾಹಕರು 50 ಅಥವಾ 100 ರೂಪಾಯಿ ನೋಟು ಕೊಡುತ್ತಾರೆ. ಇದರಿಂದ ಚಿಲ್ಲರೆ ಕೊಡುವುದು ನಮಗೆ ಸಮಸ್ಯೆಯಾಗಿದೆ ಎಂದು ನಂದಿನಿ ಪಾರ್ಲರ್ ಮಾಲೀಕ ರವೀಶ್ ಹೇಳಿದ್ದಾರೆ.
ದೆಹಲಿ: ಇಂದು ದೆಹಲಿಯಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಸಭೆ ನಡೆಸುತ್ತಿದ್ದು, ಸಿಎಂ ಸೇರಿ ಎಲ್ಲಾ ಸಚಿವರುಗಳು ಸಭೆಗೆ ಹಾಜರಾಗಲಿದ್ದಾರೆ. ಅದರಂತೆ ಈ ಕುರಿತು ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಚಂದ್ರಪ್ಪ ‘ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಾಭಾವಿ ಸಭೆ ಕರೆಯಲಾಗಿದೆ. ನಮ್ಮ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಸಿಎಲ್‌ಪಿ ಸಭೆಯಲ್ಲಿ ಎಲ್ಲಾ ಗೊಂದಲಗಳು ಈಗಾಗಲೇ ಬಗೆಹರಿದಿದೆ ಎಂದರು.
ಬೆಂಗಳೂರು: ದೆಹಲಿಯಲ್ಲಿ ಇಂದು ಕಾಂಗ್ರೆಸ್ ಹೈಕಮಾಂಡ್ ಸಭೆ ಹಿನ್ನೆಲೆ ಬೆಳಗ್ಗೆ 9:45ರ ವಿಮಾನದಲ್ಲಿ ಸಿಎಂ, ಸಚಿವರು ಸೇರಿ ಕೆಂಪೇಗೌಡ ಏರ್ಪೋರ್ಟ್ನಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾಘಂಟಿ ವಿರುದ್ಧ FIR ದಾಖಲಾಗಿದೆ. ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದು, ಉದ್ದೇಶಪೂರ್ವಕವಾಗಿ KTPP ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎಂಬ ಅರೋಪದ ಮೇಲೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಸುಬ್ಬಣ್ಣ ರೈ ಅವರು ಕಮಲಾಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜುಗೊಳ್ಳತ್ತಿದೆ. ಕರ್ನಾಟಕದಲ್ಲಿ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಹೈಕಮಾಂಡ್ ಟಾರ್ಗೆಟ್ ಫಿಕ್ಸ್ ಮಾಡಿದೆ. ಹೀಗಾಗಿ ಇಂದು(ಆ.2) ರಾಜ್ಯ ನಾಯಕರ ಜೊತೆ ಹೈಕಮಾಂಡ್ ನಾಯಕರು ಮಹತ್ವದ ಸಭೆ ನಡೆಸಲಿದ್ದಾರೆ. ಜೊತೆಗೆ ರಾಜ್ಯ ನಾಯಕರ ನಡುವಿನ ಅಸಮಧಾನದ ಬೇಗುದಿಗೂ ಹೈಕಮಾಂಡ್ ಮದ್ದು ಅರೆಯಲಿದೆ.
Published On - 7:58 am, Wed, 2 August 23