ರಾಜ್ಯದ ವಿವಿಧೆಡೆ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಆರಂಭ; ಕೊರೊನಾ ಭೀತಿ ನಡುವೆಯೂ ಮತದಾನ

| Updated By: ಆಯೇಷಾ ಬಾನು

Updated on: Apr 27, 2021 | 8:29 AM

ಕೆಲ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಇಲ್ಲದೇ ಮತದಾರರು ಸರತಿಸಾಲಿನಲ್ಲಿ ನಿಂತಿರುವುದು ಕಂಡುಬರುತ್ತಿದ್ದು ಚುನಾವಣಾ ಸಿಬ್ಬಂದಿ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದಾರೆ. ರಾಮನಗರದ ವಾರ್ಡ್ ನಂಬರ್ 29 ರ ಮತಗಟ್ಟೆ ಸಂಖ್ಯೆ 66 ರಲ್ಲಿ ಮಾಸ್ಕ್ ಕೂಡಾ ಧರಿಸದೇ ಪುಟಾಣಿ ಮಕ್ಕಳನ್ನ ಕರೆದಿಕೊಂಡು ಮಹಿಳೆಯೊಬ್ಬರು ಮತ ಚಲಾಯಿಸಲು ಬಂದಿರುವುದು ಕಂಡುಬಂತು.

ರಾಜ್ಯದ ವಿವಿಧೆಡೆ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಆರಂಭ; ಕೊರೊನಾ ಭೀತಿ ನಡುವೆಯೂ ಮತದಾನ
ಮತಗಟ್ಟೆಗಳಿಗೆ ಹಕ್ಕು ಚಲಾಯಿಸಲು ಆಗಮಿಸಿದ ಮತದಾರರು
Follow us on

ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ಇಂದು ಸಂಜೆಯಿಂದ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ. ಇದಕ್ಕೂ ಮುನ್ನ ರಾಜ್ಯದ ಕೆಲ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಎಲ್ಲೆಡೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆ, ರಾಮನಗರ ನಗರಸಭೆ, ಚನ್ನಪಟ್ಟಣ ನಗರಸಭೆ, ಬೀದರ್ ನಗರಸಭೆ, ಮಡಿಕೇರಿ ನಗರಸಭೆ ಸೇರಿದಂತೆ 11 ನಗರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನಿಗದಿಯಂತೆ ಚುನಾವಣೆ ನಡೆಯುತ್ತಿದೆ. ಈ ಸಲುವಾಗಿ ಮುಂಜಾನೆಯಿಂದಲೇ ಮತದಾರರು ಮತಗಟ್ಟೆಗಳತ್ತ ಆಗಮಿಸುತ್ತಿದ್ದು, ಅಧಿಕಾರಿಗಳು ಕೊರೊನಾ ನಿಯಮಾವಳಿಗಳನ್ನು ಪಾಲಿಸುವಂತೆ ಮತದಾರರಿಗೆ ಸೂಚನೆ ನೀಡುತ್ತಿದ್ದಾರೆ.

ಕೊಡಗು: ಜಿಲ್ಲೆಯ ಮಡಿಕೇರಿ ನಗರಸಭೆಗೆ 7 ವರ್ಷಗಳ ಬಳಿಕ ಇಂದು ಚುನಾವಣೆ ನಡೆಯುತ್ತಿದೆ. ಮಡಿಕೇರಿ ನಗರಸಭೆಯ 21 ವಾರ್ಡ್‌ಗಳಲ್ಲಿ ಇಂದು ಮತದಾನ ಶುರುವಾಗಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಹಕ್ಕು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸುತ್ತಿದ್ದಾರೆ. ಸಂಜೆ 6 ಗಂಟೆಯ ತನಕ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಸಂಜೆ 5ರಿಂದ 6ರ ತನಕ ಕೊರೊನಾ ಸೋಂಕಿತರು ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಲಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 109 ಅಭ್ಯರ್ಥಿಗಳು ಕಣದಲ್ಲಿದ್ದು ಮತದಾರರು ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ಒಟ್ಟು 39 ವಾರ್ಡ್​ಗಳಿಗೆ ಚುನಾವಣೆ ನಡೆಯುತ್ತಿದೆ. ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 187 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರರು ಉತ್ಸುಕತೆಯಿಂದ ಮತಗಟ್ಟೆಗಳತ್ತ ಧಾವಿಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಒಟ್ಟು 338 ಮತಗಟ್ಟೆಗಳಲ್ಲಿ ಮತದಾ‌ನ ಪ್ರಕ್ರಿಯೆ ನಡೆಯಲಿದ್ದು, ಪ್ರತಿ ಮತಗಟ್ಟೆಗೆ 6ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೊರೊನಾ ನಿಮಿತ್ತ ಮತ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಪಲ್ಸ್ ಆಕ್ಸಿಮಿಟರ್ ಮೂಲಕ ಪರಿಶೀಲನೆ ಮಾಡಲಾಗುತ್ತಿದ್ದು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ ಚಲಾಯಿಸಲು ಮತ್ತು ಮತದಾನಕ್ಕೂ ಮುನ್ನ, ಮತದಾನದ ಬಳಿಕ ಸ್ಯಾನಿಟೈಜರ್ ಬಳಸಲು ಆದೇಶಿಸಲಾಗಿದೆ.

ರಾಮನಗರ, ಚನ್ನಪಟ್ಟಣ: ರಾಮನಗರ ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಚುನಾವಣೆ ಇಂದು ನಡೆಯುತ್ತಿದೆ. ಬೆಳಗ್ಗೆ 7 ರಿಂದ ಸಂಜೆ 6 ರ ತನಕ ಮತದಾನ ನಡೆಯಲಿದ್ದು, ಕೊನೆಯ ಒಂದು ಗಂಟೆ ಅವಧಿಯನ್ನು ಕೊರೊನಾ ಸೋಂಕಿತರಿಗೆ ಮೀಸಲಿಡಲಾಗಿದೆ. ರಾಮನಗರ ಹಾಗೂ ಚನ್ನಪಟ್ಟಣದ ತಲಾ 31 ವಾರ್ಡ್ ಸೇರಿ ಒಟ್ಟು 62 ವಾರ್ಡ್​ಗಳಿಗೆ ಚುನಾವಣೆ ನಡೆಯುತ್ತಿದ್ದು, 236 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಮನಗರದಲ್ಲಿ 76 ಹಾಗೂ ಚನ್ನಪಟ್ಟಣದಲ್ಲಿ 59 ಮತಗಟ್ಟೆಗಳು ಸೇರಿ ಒಟ್ಟು 135ಮತಗಟ್ಟೆಗಳಿಂದ 1,38,450 ಮತದಾರರು ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ. ಈ ಪೈಕಿ ರಾಮನಗರದಲ್ಲಿ 79,530 ಹಾಗೂ ಚನ್ನಪಟ್ಟಣದಲ್ಲಿ 58,920 ಮತದಾರರಿದ್ದಾರೆ.

ಬೀದರ್: ಬೀದರ್ ನಗರಸಭೆಯ 35 ವಾರ್ಡ್ ಪೈಕಿ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ 32 ಸ್ಥಾನಗಳಿಗೆ ನಡೆಯಲಿದೆ ಇಂದು‌ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಚುನಾವಣೆ ನಡೆಯಲಿದೆ.

ಮಡಿಕೇರಿ: ಮಡಿಕೇರಿ ನಗರಸಭೆ ಚುನಾವಣೆಗೆ ಈಗಾಗಲೇ ಮತದಾರರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಕೋವಿಡ್ ಭೀತಿ ಮಧ್ಯೆಯೂ ಮತಗಟ್ಟೆಗಳಿಗೆ ಮತದಾರರು ಆಗಮಿಸುತ್ತಿದ್ದಾರೆ. 21 ವಾರ್ಡ್ ಹೊಂದಿರುವ ಮಡಿಕೇರಿ ನಗರಸಭೆಯ 17 ಮತಗಟ್ಟೆಗಳಲ್ಲಿ ಹಕ್ಕು ಚಲಾವಣೆ ಆಗುತ್ತಿದ್ದು ಕೊರೊನಾ ನಿಯಮಾವಳಿಗಳ ಪಾಲನೆ ಆಗುವಂತೆ ಚುನಾವಣಾ ಸಿಬ್ಬಂದಿ ನಿಗಾ ವಹಿಸುತ್ತಿದ್ದಾರೆ.

ಕೊರೊನಾ ನಿಯಮಾವಳಿಗಳ ಉಲ್ಲಂಘನೆ
ಈ ಪೈಕಿ ಕೆಲ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಇಲ್ಲದೇ ಮತದಾರರು ಸರತಿಸಾಲಿನಲ್ಲಿ ನಿಂತಿರುವುದು ಕಂಡುಬರುತ್ತಿದ್ದು ಚುನಾವಣಾ ಸಿಬ್ಬಂದಿ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದಾರೆ. ರಾಮನಗರದ ವಾರ್ಡ್ ನಂಬರ್ 29 ರ ಮತಗಟ್ಟೆ ಸಂಖ್ಯೆ 66 ರಲ್ಲಿ ಮಾಸ್ಕ್ ಕೂಡಾ ಧರಿಸದೇ ಪುಟಾಣಿ ಮಕ್ಕಳನ್ನ ಕರೆದಿಕೊಂಡು ಮಹಿಳೆಯೊಬ್ಬರು ಮತ ಚಲಾಯಿಸಲು ಬಂದಿರುವುದು ಕಂಡುಬಂತು. ಇನ್ನೊಂದೆಡೆ ರಾಮನಗರದಲ್ಲಿ ಕೆಲ ಮತಗಟ್ಟೆಗಳ ಸಮೀಪ ಪಕ್ಷದ ಬ್ಯಾನರ್ ಹಿಡಿದು ಕುಳಿತಿದ್ದವರಿಗೆ ಎಚ್ಚರಿಕೆ ನೀಡಿದ ಪೊಲೀಸರು ಪಕ್ಷದ ಬ್ಯಾನರ್​ಗಳನ್ನು ತೆರವುಗೊಳಿಸಿದ್ದಾರೆ.

ಇದನ್ನೂ ಓದಿ:
6 ಅಡಿ ಅಂತರ ಕಾಯ್ದುಕೊಂಡರೂ ಕೊರೊನಾ ಅಪಾಯ ತಪ್ಪಿದ್ದಲ್ಲ: ಎಂ​ಐಟಿ ಅಧ್ಯಯನ

ಬಳ್ಳಾರಿ ಪಾಲಿಕೆ, ರಾಮನಗರ ನಗರಸಭೆ ಸೇರಿ 10 ಸ್ಥಳೀಯ ಸಂಸ್ಥೆಗಳಿಗೆ ನಾಳೆಯೇ ಮತದಾನ: ಚುನಾವಣಾ ಆಯೋಗ