ಬಳ್ಳಾರಿ ಪಾಲಿಕೆ, ರಾಮನಗರ ನಗರಸಭೆ ಸೇರಿ 10 ಸ್ಥಳೀಯ ಸಂಸ್ಥೆಗಳಿಗೆ ನಾಳೆಯೇ ಮತದಾನ: ಚುನಾವಣಾ ಆಯೋಗ
ರಾಜ್ಯದ 8 ಜಿಲ್ಲೆಗಳ 10 ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಮತ್ತು 2 ವಾರ್ಡ್ಗಳ ಉಪಚುನಾವಣೆ ನಿಗದಿಯಂತೆ ನಡೆಯಲಿದೆ ಎಂದು ಚುನಾವಣಾ ಆಯೋಗವು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಬೆಂಗಳೂರು: ಅವಧಿ ಮುಕ್ತಾಯವಾಗಿರುವ ರಾಜ್ಯದ 8 ಜಿಲ್ಲೆಗಳ 10 ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಮತ್ತು 2 ವಾರ್ಡ್ಗಳ ಉಪಚುನಾವಣೆ ನಿಗದಿಯಂತೆ ನಡೆಯಲಿದೆ ಎಂದು ಚುನಾವಣಾ ಆಯೋಗವು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಈಗಾಗಲೇ ಹೊರಡಿಸಿರುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಆಯೋಗವು ಹೇಳಿದೆ.
ಬಳ್ಳಾರಿ ಮಹಾನಗರ ಪಾಲಿಕೆ, ವಿಜಯಪುರ ಪುರಸಭೆ, ರಾಮನಗರ ನಗರಸಭೆ, ಚನ್ನಪಟ್ಟಣ ನಗರಸಭೆ, ಗುಡಿಬಂಡೆ ಪಟ್ಟಣ ಪಂಚಾಯಿತಿ, ಭದ್ರಾವತಿ ನಗರಸಭೆ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ, ಬೇಲೂರು ಪುರಸಭೆ, ಮಡಿಕೇರಿ ಪುರಸಭೆ, ಬೀದರ್ ನಗರಸಭೆಗಳಲ್ಲಿ ನಾಳೆ ಮತದಾನ ನಡೆಯಲಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 1 ಮತ್ತು ಬೀದರ್ ಜಿಲ್ಲೆ ಹಳ್ಳಿಖೇಡ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 11ರಲ್ಲಿ ಉಪಚುನಾವಣೆಗಳು ನಡೆಯಲಿವೆ ಎಂದು ಆಯೋಗವು ತಿಳಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಯ ಅನ್ವಯ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತಿ ಮತಗಟ್ಟೆ ಕೇಂದ್ರಗಳಿಗೂ ಕೋವಿಡ್ ರಕ್ಷಣಾ ಸಾಮಗ್ರಿಗಳನ್ನು ಒಗದಿಸಲಾಗಿದೆ. ಕೋವಿಡ್ ಸಂಬಂಧಿತ ಶಿಷ್ಟಾಚಾರಗಳನ್ನು ಎಲ್ಲಾ ಚುನಾವಣಾ ಸಿಬ್ಬಂದಿ ಅನುಸರಿಸಬೇಕು ಎಂದು ಆಯೋಗವು ಸೂಚನೆ ನೀಡಿದೆ.
ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಮತದಾನದ ಅವಧಿಯನ್ನು ಒಂದು ಗಂಟೆಯ ಅವಧಿಗೆ ವಿಸ್ತರಿಸಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತದಾನ ಮುಕ್ತಾಯಕ್ಕೆ ಒಂದು ಗಂಟೆ ಮುಂಚಿತವಾಗಿ ಕೋವಿಡ್ ಸೋಂಕಿತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ ಎಂದು ಆಯೋಗವು ಹೇಳಿದೆ.
(Voting on April 27 for Bellary and other 10 urban local bodies announces Election Commission)
ಇದನ್ನೂ ಓದಿ: Karnataka Lockdown: ನಾಳೆ ಸಂಜೆಯಿಂದ ಕರ್ನಾಟಕದಲ್ಲಿ ಕೊವಿಡ್ ಕರ್ಫ್ಯೂ! ಕೊರೊನಾ ನಿಯಂತ್ರಣಕ್ಕಾಗಿ 14 ದಿನ ರಾಜ್ಯಕ್ಕೆ ಬೀಗ
Published On - 7:53 pm, Mon, 26 April 21