ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಮೇ 10 ರಿಂದ ಮೇ 24ರ ತನಕ ಜಾರಿಯಾಗಿರುವ ಲಾಕ್ಡೌನ್ ಐಸಿಎಂಆರ್ ಸಲಹೆ ಜಾರಿ ಆದಲ್ಲಿ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ. ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತ ಹೆಚ್ಚಿರುವ ಜಿಲ್ಲೆಗಳನ್ನು 6ರಿಂದ 8 ವಾರಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡಲು ಐಸಿಎಂಆರ್ ಸಲಹೆ ನೀಡಿದ್ದು, ಅದನ್ನು ಪಾಲಿಸಿದ್ದೇ ಆದಲ್ಲಿ ಕರ್ನಾಟಕದ 28 ಜಿಲ್ಲೆಗಳಲ್ಲಿ ಆರರಿಂದ ಎಂಟು ವಾರ ಕಾಲ ಸಂಪೂರ್ಣ ಲಾಕ್ಡೌನ್ ಮಾಡಬೇಕಾಗುತ್ತದೆ. ರಾಜ್ಯದ 31 ಜಿಲ್ಲೆಗಳ ಪೈಕಿ 28 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.10 ಕ್ಕಿಂತ ಮೇಲಿರುವುದರಿಂದ ಮೇ.24 ಕ್ಕೆ ಲಾಕ್ಡೌನ್ ಮುಗಿಯೋದು ಅನುಮಾನವಾಗಿದೆ.
ಮೇ ತಿಂಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.10 ಕ್ಕಿಂತ ಹೆಚ್ಚಿರುವ ಕರ್ನಾಟಕದ 28 ಜಿಲ್ಲೆಗಳನ್ನೂ ಸಂಪೂರ್ಣ ಲಾಕ್ಡೌನ್ ಮಾಡುವುದಾದರೆ ಬಹುತೇಕ ಇಡೀ ಕರ್ನಾಟಕವೇ ಲಾಕ್ಡೌನ್ ಆದಂತೆ ಆಗಲಿದೆ. ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಹರಡುವ ಮೂಲಕ ಸಾಕಷ್ಟು ಸಾವು ನೋವುಗಳಿಗೆ ಕಾರಣವಾಗಿರುವ ಕೊರೊನಾ ಎರಡನೇ ಅಲೆಯನ್ನು ಹತೋಟಿಗೆ ತರಬೇಕೆಂದರೆ ಇನ್ನೂ ಆರರಿಂದ ಎಂಟು ವಾರಗಳ ಲಾಕ್ಡೌನ್ ಅವಶ್ಯಕ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಭಿಪ್ರಾಯಪಟ್ಟಿರುವುದರಿಂದ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಐಸಿಎಂಆರ್ ಏನೇನು ಹೇಳಿದೆ?
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಜಿಲ್ಲೆಗಳು ಮುಂದಿನ ಆರರಿಂದ ಎಂಟು ವಾರಗಳ ತನಕ ಲಾಕ್ಡೌನ್ ಆದರೆ ಉತ್ತಮ. ಪರೀಕ್ಷೆಗೆ ಒಳಪಟ್ಟವರ ಪೈಕಿ ಶೇ.10ಕ್ಕಿಂತ ಹೆಚ್ಚು ಮಂದಿಗೆ ಪಾಸಿಟಿವ್ ಕಾಣಿಸಿಕೊಳ್ಳುತ್ತದೆ ಎಂದಾದಲ್ಲಿ ನಿಯಮ ಪಾಲನೆ ಮಾಡಬೇಕಾಗುತ್ತದೆ. ಪ್ರಸ್ತುತ ಭಾರತದ 718 ಜಿಲ್ಲೆಗಳಲ್ಲಿ ಪರೀಕ್ಷೆಗೆ ಒಳಗಾದ ಮಂದಿಯಲ್ಲಿ ಶೇ.10ಕ್ಕಿಂತ ಹೆಚ್ಚಿನವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ನವದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳೂ ಅಪಾಯದಲ್ಲಿವೆ ಎಂದಿದೆ.
ಪ್ರಸ್ತುತ ಅನೇಕ ರಾಜ್ಯಗಳು ಕೊರೊನಾ ತಡೆಗಟ್ಟುವಿಕೆಗಾಗಿ ಹಲವು ರೀತಿಯ ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದು, ಸಂದರ್ಭಕ್ಕನುಗುಣವಾಗಿ ಅದನ್ನು ವಿಸ್ತರಿಸಿಕೊಳ್ಳುತ್ತಿವೆ. ಐಸಿಎಂಆರ್ ಪ್ರಕಾರ ಶೇ.10ಕ್ಕಿಂತ ಅಧಿಕ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುವ ಜಿಲ್ಲೆಗಳನ್ನು ಸಂಪೂರ್ಣ ಬಂದ್ ಮಾಡಲೇಬೇಕಿದ್ದು, ಪಾಸಿಟಿವಿಟಿ ಪ್ರಮಾಣವು ಶೇ.5ರಿಂದ 10ರ ನಡುವೆ ಬಂದಾಗ ನಿಯಮಾವಳಿಗಳನ್ನು ಸಡಿಲಿಸಬಹುದು. ಆದರೆ, ಆ ಪ್ರಮಾಣಕ್ಕೆ ಬರಲು ಆರರಿಂದ ಎಂಟು ವಾರಗಳಂತೂ ಬೇಕೇಬೇಕು ಎನ್ನಲಾಗುತ್ತಿದೆ.
ಇದನ್ನೂ ಓದಿ:
ಮಹಾರಾಷ್ಟ್ರದಲ್ಲಿ ಮೇ 31ರವರೆಗೂ ಲಾಕ್ಡೌನ್ ಮುಂದುವರೆಯುವ ಸಾಧ್ಯತೆ; ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ
Corona Lockdown: ಇನ್ನೂ 6 ರಿಂದ 8 ವಾರಗಳ ಕಾಲ ಲಾಕ್ಡೌನ್ ಮುಂದುವರಿಕೆ ಅಗತ್ಯ: ಡಾ.ಬಲರಾಮ್ ಭಾರ್ಗವ್