ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸತೀಶ್ ಜಾರಕಿಹೊಳಿ: ಏನೆಲ್ಲ ನಡೆಯಿತು ಚರ್ಚೆ?

| Updated By: ಗಣಪತಿ ಶರ್ಮ

Updated on: Oct 04, 2024 | 2:39 PM

ಕರ್ನಾಟಕ ಕಾಂಗ್ರೆಸ್​ನಲ್ಲಿ ಹಾಗೂ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿರುವ ಮಧ್ಯೆಯೇ ಸಚಿವ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್​ರನ್ನು ಭೇಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಭೇಟಿ ವೇಳೆ ಏನೇನು ಚರ್ಚೆ ನಡೆಯಿತು? ವಿವರಗಳಿಗೆ ಮುಂದೆ ಓದಿ.

ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸತೀಶ್ ಜಾರಕಿಹೊಳಿ: ಏನೆಲ್ಲ ನಡೆಯಿತು ಚರ್ಚೆ?
ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸತೀಶ್ ಜಾರಕಿಹೊಳಿ
Follow us on

ನವದೆಹಲಿ, ಅಕ್ಟೋಬರ್ 4: ಮುಡಾ ಹಗರಣ ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಹೊತ್ತಿನಲ್ಲೇ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿಯಲ್ಲಿ ಖರ್ಗೆಯನ್ನು ಭೇಟಿಯಾದ ಸತೀಶ್ ಜಾರಕಿಹೊಳಿ ಸುಮಾರು ಒಂದು ತಾಸು ಸಮಾಲೋಚನೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆಯ ಚರ್ಚೆಗಳು ಹಾಗೂ ಇತರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಖರ್ಗೆ ಮಾತ್ರವಲ್ಲದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನೂ ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಗುರುವಾರ ರಾತ್ರಿ 9ಗಂಟೆ ಸುಮಾರಿಗೆ ವೇಣುಗೋಪಾಲ್ ಭೇಟಿಯಾಗಿರುವ ಸತೀಶ್ ಜಾರಕಿಹೊಳಿ ಸುಮಾರು ಅರ್ಧಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ಮುಡಾ ಪ್ರಕರಣದ ಬೆಳವಣಿಗೆಗಳ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಸಿಎಂ ವಿರುದ್ಧ ಇಡಿ ತನಿಖೆಯ ಪರಿಣಾಮಗಳ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಕರ್ನಾಟಕಕ್ಕೆ ಬರುವುದಾಗಿ ವೇಣುಗೋಪಾಲ್ ಹೇಳಿದ್ದಾರೆ.

ಅಕ್ಟೋಬರ್ 15ರಂದು ಬೆಂಗಳೂರಿಗೆ ವೇಣುಗೋಪಾಲ್

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅಕ್ಟೋಬರ್​ 15ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಪಕ್ಷದಲ್ಲಿ ಉಂಟಾಗಿರುವ ಗೊಂದಲ ಬಗ್ಗೆ ಚರ್ಚಿಸಲು ಅವರು ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ. ಇಡಿ ಕೇಸ್​​ ದಾಖಲಿಸಿದ ನಂತರ ಪಕ್ಷದಲ್ಲಿ ಉಂಟಾಗಿರುವ ಗೊಂದಲ, ಸಿಎಂ ಬದಲಾವಣೆ ವದಂತಿ, ದಲಿತ ನಾಯಕರ ಮೀಟಿಂಗ್ ಸೇರಿದಂತೆ ಹಲವು ವಿಚಾರಗಳ ಕುರಿತು ರಾಜ್ಯ ನಾಯಕರ ಜತೆ ಅವರು ಚರ್ಚೆ ಮಾಡಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರ ಜತೆಗೂ ಅವರು ಸಮಾಲೋಚನೆ ನಡೆಸಲಿದ್ದಾರೆ. ಪ್ರಸಕ್ತ ವಿದ್ಯಮಾನ, ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಏತನ್ಮಧ್ಯೆ ಸತೀಶ್ ಜಾರಕಿಹೊಳಿ ಹಾಗೂ ಖರ್ಗೆ ಭೇಟಿ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಟಿದ ಅವರು, ಅಧ್ಯಕ್ಷರು ನಮ್ಮ ಸರ್ವೋಚ್ಚ ನಾಯಕರು. ಅವರನ್ನು ಭೇಟಿ ಆಗುತ್ತಿರುತ್ತೇವೆ. ಕೆಲಸವಿದ್ದಾಗ ಅಧ್ಯಕ್ಷರ ಭೇಟಿಯಾಗುವುದು ಒಂದು ಸಹಜ ಪ್ರಕ್ರಿಯೆ. ಅದರಲ್ಲಿ ವಿಶೇಷ ಏನಿಲ್ಲ ಎಂದರು.

ಇದನ್ನೂ ಓದಿ: ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ 4 ಸಾವಿರ ರೂ. ಜಮೆ

ಸಿಎಂ ರೇಸ್​ನಲ್ಲಿ ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾರೇ ರೇಸ್​ನಲ್ಲಿದ್ದರೂ ನಮ್ಮ ಹೈಕಮಾಂಡ್​ ತೀರ್ಮಾನ ಮಾಡುತ್ತದೆ. 136 ಶಾಸಕರು ಇಚ್ಛೆಯ ಮೇರೆಗೆ ಸಿಎಂ ಆಗುವುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ