Karnataka Rain News Live: ತಡವಾಗಿಯಾದರೂ ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಕಳೆದ ಒಂದೆರಡು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ, ಭೀಮಾ ಸೇರಿ ಪ್ರಮುಖ ನದಿಗಳ ನೀರಿನಮಟ್ಟದಲ್ಲಿ ದಿಢೀರ್ ಏರಿಕೆಯಾಗಿ ಕರಾವಳಿ, ಮಲೆನಾಡು ಸೇರಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಕಾಣಿಸಿಕೊಂಡಿದೆ. ಇನ್ನು ಕೃಷ್ಣ, ಭೀಮಾ, ವರದಾ, ದೂದಗಂಗಾ, ಮಲಪ್ರಭಾ, ತುಂಗಾ, ಶರಾವತಿ, ನೇತ್ರಾವತಿ, ಕುಮಾರಧಾರಾ, ಕಾಳಿ, ಕಾವೇರಿ, ಲಕ್ಷ್ಮಣ ತೀರ್ಥ ಸೇರಿ ರಾಜ್ಯದಲ್ಲಿ ಹಲವು ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಆಸ್ತ ವ್ಯಸ್ತಗೊಂಡಿದೆ. ಭಾರೀ ಮಳೆ ಕಾರಣ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಶಾಲೆಗೆ ರಜೆ ಘೋಷಿಸಲಾಗಿದೆ.
ಬೆಂಗಳೂರು: ಎಲ್ಲಾ ಕಡೆ ಮಳೆ ಬರುತ್ತಿದೆ. ನಗರದಲ್ಲಿ ಇವತ್ತು ನಾಳೆ ಮಳೆ ಮುನ್ಸೂಚನೆ ಇಲ್ಲ. ಇದ್ದಕ್ಕಿದ್ದಾಗೆ ಮಳೆ ಬಂದರೆ ಪಾಲಿಕೆ ಹೇಗೆ ಕೆಲಸಮಾಡುತ್ತದೆ? ಎಂದು ತಿಳಿಯಬೇಕಿತ್ತು. ಗುಂಡಿ, ಮರ, ಮಳೆ ವಿಚಾರವಾಗಿ ಸಾಕಷ್ಟು ಕರೆ ಬರುತ್ತಿದೆ. ಹೀಗಾಗಿ ವಾರ್ ರೂಂ, ಕಂಟ್ರೋಲ್ ರೂಂನಲ್ಲಿ ಹೇಗೆ ಕೆಲಸ ಆಗುತ್ತಿದೆ ಅನ್ನೊದನ್ನ ನೋಡಲು ಬಂದಿದ್ದೇನೆ ಎಂದು ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಬೆಳಗಾವಿ: ಭಾರೀ ಮಳೆಯಿಂದ ಬುಡರಕಟ್ಟಿ ಗ್ರಾಮದಲ್ಲಿ 3 ಮನೆಗಳು ಕುಸಿತಗೊಂಡಿವೆ. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಡಾ.ಸಂಜೀವ್ ಎಂ.ಪಾಟೀಲ್ ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಮನೆಗಳಲ್ಲಿದ್ದ 13 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಕಳೆದುಕೊಂಡ ಮೂರು ಕುಟುಂಬಕ್ಕೂ ಎಸ್ಪಿ ಸಂಜೀವ್ ಧೈರ್ಯ ತುಂಬಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ನಿರಂತರ ಮಳೆ ಹಿನ್ನೆಲೆ ಬಿಬಿಎಂಪಿ ಕೇಂದ್ರ ಕಚೇರಿಯ ವಾರ್ ರೂಮ್ಗೆ ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಬಿಬಿಎಂಪಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ರಿಂದ ಮಾಹಿತಿ ಪಡೆದರು.
ಹಾಸನ ಜಿಲ್ಲೆಯ ಬಿಸಿಲೆಘಾಟ್ ಸಮೀಪ ಗುಡ್ಡದ ಮಣ್ಣು ಕುಸಿತಗೊಂಡಿದೆ. ಸತತ 7 ಗಂಟೆಗಳ ಕಾರ್ಯಾಚರಣೆ ನಂತರ ಮಣ್ಣು ತೆರವುಗೊಳಿಸಲಾಯಿತು. ರಾಜ್ಯ ಹೆದ್ದಾರಿ 85ರಲ್ಲಿ ಗುಡ್ಡ ಕುಸಿತಗೊಂಡ ಹಿನ್ನೆಲೆ ಸಕಲೇಶಪುರ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಚಾರ ಸ್ಥಗಿತವಾಗಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಭಾರೀ ಮಳೆಯಿಂದ ಗುಡ್ಡ ಕುಸಿದಿತ್ತು.
ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಜುಲೈ 26 ರಂದು ಸಂಜೆ 4 ಗಂಟೆಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಜೊತೆ ಸಿಎಂ ಸಿದ್ದರಾಮಯ್ಯ ಅವರು ವಿಡಿಯೋ ಸಂವಾದ ನಡೆಸಲಿದ್ದಾರೆ. ಆ ಮೂಲಕ ಮಳೆ ಹಾನಿ, ಬೆಳೆ ಪರಿಸ್ಥಿತಿ ಮಾಹಿತಿ ಪಡೆಯಲಿದ್ದಾರೆ.
IPS ಅಧಿಕಾರಿ ಅನೂಪ್ ಶೆಟ್ಟಿ ರಿಲೀವ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 12ರಂದು ಸಿಐಡಿಗೆ ವರ್ಗಾವಣೆಯಾಗಿದ್ದ ಅನೂಪ್ ಶೆಟ್ಟಿ, ಬಿಟ್ ಕಾಯಿನ್ ಪ್ರಕರಣದ SIT ತಂಡದಲ್ಲಿದ್ದಾರೆ. ಸದ್ಯ ಅನೂಪ್ ಶೆಟ್ಟು ಕಮಿಷನರ್ ಕಚೇರಿಯ ಆಡಳಿತ ವಿಭಾಗದಲ್ಲಿದ್ದಾರೆ. ವರ್ಗಾವಣೆಯಾಗಿದ್ದರೂ ಆಡಳಿತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆ ಅವರನ್ನು ಕೂಡಲೇ ರಿಲೀವ್ ಮಾಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಇದೆ.
ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಬಳಿ ಲಘು ಭೂಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಒಂದೂವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿದ್ದು, ಸ್ಥಳೀಯರು, ಚೆಸ್ಕಾಂ ಸಿಬ್ಬಂದಿಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯಿತು. ಬಳಿಕ ವಾಹನಗಳ ಸುಗಮ ಸಂಚಾರ ಆರಂಭವಾಯಿತು.
ನೇಕಾರರ ವಿಶೇಷ ಯೋಜನೆಯಡಿ ವಿದ್ಯುತ್ ಪೂರೈಕೆ ಮುಂದುವರಿಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. 1.25 ರೂ. ದರದಲ್ಲಿ ವಿದ್ಯುತ್ ಪೂರೈಕೆಯ ಯೋಜನೆ ಮುಂದುವರಿಕೆ ಮಾಡುವುದಾಗಿ ನೇಕಾರರ ನಿಯೋಗಕ್ಕೆ ಭರವಸೆ ನೀಡಿದರು. ನೇಕಾರರ ನಿಯೋಗ ಇಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿತ್ತು. ಈ ವೇಳೆ ಭರವಸೆ ನೀಡಿದ ಸಿಎಂ, ವಿಶೇಷ ಯೋಜನೆ ಮುಂದುವರಿಸುವುದಾಗಿ ತಿಳಿಸಿದರು. ಜೊತೆಗೆ 10 HPವರೆಗಿನ ಘಟಕಗಳಿಗೆ 250 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಶೀಘ್ರವೇ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.
ಬೆಳಗಾವಿ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಹಣ ಪಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಿನ್ನೆಯಿಂದಲೂ ನನಗೂ ಸಹ ಮೂರು ಕಂಪ್ಲೆಂಟ್ ಬಂದಿದೆ. ಯಾರಾದರೂ ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. ಲಾಗಿನ್ ಐಡಿ, ಪಾಸ್ವರ್ಡ್ ರದ್ದು ಮಾಡಬೇಕೆಂದು ಸೂಚನೆ ನೀಡಲಾಗಿದೆ. ಉಚಿತವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರು.
ಬೆಳಗಾವಿ: ಸರ್ಕಾರ ಕಡೆವಲು ತಂತ್ರ ಮಾಡಲಾಗುತ್ತಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಬೆಳಗಿನಿಂದ ಬ್ಯುಸಿ ಇದ್ದೆ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಪ್ರಕಾರ ಎಲ್ಲವೂ ಅಂತೆ ಕಂತೆ ಊಹಾಪೋಹ. ಆದರೆ ಡಿಕೆ ಶಿವಕುಮಾರ್ ನಮ್ಮ ಅಧ್ಯಕ್ಷರು ಅವರಿಗೆ ಎಲ್ಲ ರೀತಿಯ ಮಾಹಿತಿ ಇರುತ್ತದೆ. ನಮಗೆ ಸ್ವಲ್ಪ ಇನ್ಪಾರ್ಮೆಷನ್ ಕಡಿಮೆ ಅವರು ಹೇಳಿದ್ದಾರೆ ಅಂದರೆ ಎನೋ ಇರುತ್ತದೆ ಎಂದರು.
ಚಾಲಕರ ನಿಗಮ ಮಾಡಲು ಮನವಿ ಮಾಡಲಾಗಿದೆ. ಎಲ್ಲ ಹಳದಿ ಬೋರ್ಡ್ ಚಾಲಕರಿಗೆ ಇದರಿಂದ ಅನುಕೂಲ ಆಗುತ್ತದೆ. ಚಾಲಕರ ಅಂಕಿ ಅಂಶ ಒಂದೇ ಸ್ಥಳದಲ್ಲಿ ಸಿಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಚಾಲಕರಿಗೆ ಸೂಚಿಸಿದರು. ಅಲ್ಲದೆ, ರ್ಯಾಪಿಡೋ ಬೈಕ್ ಟ್ಯಾಕ್ಸಿಗೆ ನಿರ್ಬಂಧ ಹೇರುವುದು ನನ್ನ ಜವಾಬ್ದಾರಿ. ಅದನ್ನು ಖಂಡಿತಾ ನಿಷೇಧ ಮಾಡುತ್ತೇವೆ ಎಂದರು. ಬೆಂಗಳೂರಿನ ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ನಡೆದ ಖಾಸಗಿ ಸಾರಿಗೆ ಒಕ್ಕಟದ ಸಭೆಯಲ್ಲಿ ಈ ಹೇಳಿಕೆ ನೀಡಿದರು. ಇದೇ ವೇಳೆ 50000 ಓಲಾ, ಉಬರ್ ಕ್ಯಾಬ್ಗಳ ಪೈಕಿ 25000 ಕ್ಯಾಬ್ ಕಪ್ಪು ಪಟ್ಟಿಗೆ ಸೇರಿವೆ. ಕಪ್ಪುಪಟ್ಟಿಗೆ ಸೇರಿಸಿರುವ ಚಾಲಕರ ಪಟ್ಟಿ ಕೈಬಿಡುವಂತೆ ಸಚಿವರಿಗೆ ಒಕ್ಕೂಟದ ಸದಸ್ಯ ನಾರಾಯಣಸ್ವಾಮಿ ಮನವಿ ಮಾಡಿದರು.
ಸಿಂಗಾಪುರದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್, ಹೋಗುವವರೆಲ್ಲರೂ ಹೋಗಿ ಅಲ್ಲೇ ಚರ್ಚೆ ಮಾಡಲಿ. ಪಕ್ಷದಲ್ಲಿ ಇರುವವರೆಲ್ಲಾ ಇಲ್ಲೇ ಚರ್ಚೆ ಮಾಡಲಿ. ಎಲ್ಲೆಲ್ಲಿ ಏನೇನಾಗುತ್ತಿದೆ ಅಂತಾ ನಮಗೆ ಮಾಹಿತಿ ಇದೆ. ಎಲ್ಲವೂ ಚರ್ಚೆ ಆಗಬೇಕಲ್ವಾ ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿ ಜಟಾಪಟಿಗೆ ಸಿಎಂ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಿದ್ದಾರೆ. ಸಿಎಂ ಸಂಬಂಧಿ ಸೂರಿ ಪಾಯಲ್ ಅವರನ್ನು KSPCB ಸದಸ್ಯ ಹುದ್ದೆಯಿಂದ ಮಂಡಳಿ ಅಧ್ಯಕ್ಷ ಶಾಂತ ತಮ್ಮಯ್ಯ ಅವರು ವಜಾಗೊಳಿಸಿದ್ದಾರೆ. ಹೀಗಾಗಿ ಶಾಂತ ತಮ್ಮಯ್ಯ ವಿರುದ್ಧ ಸಿಎಂ ಸಿದ್ದರಾಮಯ್ಯ ತನಿಖಾಸ್ತ್ರ ಪ್ರಯೋಗಿಸಿದ್ದಾರೆ. 17 ಕೋಟಿ ಅಕ್ರಮ ನಡೆದಿದೆ ಎಂದು ಸೂರಿ ಪಾಯಲ್ ಆರೋಪಿಸಿದ್ದರು. ಇದೇ ವಿಚಾರಕ್ಕೆ ಮಾಜಿ ಎಂಎಲ್ಸಿ ಪಿ.ಆರ್.ರಮೇಶ್ ಅವರು ದೂರು ನೀಡಿದ್ದಾರೆ. ಇದನ್ನು ಆಧರಿಸಿ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
17 ಕೋಟಿ ಅಕ್ರಮದ ಕುರಿತು ತನಿಖೆ ನಡೆಸುವಂತೆ ಸಿಎಸ್ಗೆ ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಮಂಗಳೂರಿನ ಅದ್ಯಪಾಡಿ ಸಮೀಪದ ಮುಗೇರ ಕುದ್ರು ಪ್ರದೇಶ ನದಿ ನೀರಿನಿಂದ ಜಲಾವೃತವಾಗಿದೆ. ಸುಮಾರು 30 ಕ್ಕೂ ಹೆಚ್ಚು ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮನೆಯ ಸುತ್ತಲು ನೀರು ಆವರಿಸಿದೆ. ಸುಮಾರು 100 ಎಕರೆಗೂ ಹೆಚ್ಚು ಪ್ರದೇಶ ಜಲಾವೃತವಾಗಿದೆ. ಹೀಗಾಗಿ ಜನರು ದೋಣಿಯನ್ನು ಅವಲಂಬಿಸಿದ್ದಾರೆ. ಅಲ್ಲದೆ, ಹೈಡ್ರೋಲಿಕ್ ಗೇಟ್ ತೆರೆದು ನೆರೆ ಸಮಸ್ಯೆಗೆ ಮುಕ್ತಿ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ವರುಣಾರ್ಭಟ ತೀವ್ರಗೊಂಡಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಚೆರಿಯ ಪರಂಬು, ಕಲ್ಲುಮೊಟ್ಟೆ ಗ್ರಾಮಕ್ಕೆ ಜಲದಿಗ್ಬಂಧನ ಹಾಕಿದ್ದು, 70 ಕ್ಕೂ ಅಧಿಕ ಕುಟುಂಬಗಳು ನೆರೆಯಲ್ಲಿ ಸಿಲುಕಿಕೊಂಡಿವೆ. ಪರಿಸ್ಥಿತಿ ಹೀಗಿದ್ದರೂ ಜಿಲ್ಲಾಡಳಿತವು ದೋಣಿಗಳ ವ್ಯವಸ್ಥೆ ಕಲ್ಪಿಸಿಲ್ಲ. ಕನಿಷ್ಟ ರಕ್ಷಣಾ ಸಿಬ್ಬಂದಿಯನ್ನೂ ನೇಮಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ. ಶಿಥಿಲಾವಸ್ಥೆಯ ತೆಪ್ಪದಲ್ಲೇ ಪ್ರವಾಹ ದಾಟಲು ಗ್ರಾಮಸ್ಥರು ಸಾಹಸ ಮಾಡುತ್ತಿದ್ದಾರೆ. ಸಾಹಸಿ ಯುವಕರು ಫ್ಲಾಸ್ಟಿಕ್ ಬುಟ್ಟಿ, ಮರದ ದೊಣ್ಣೆ ಸಹಾಯದಿಂದ ಗ್ರಾಮಸ್ಥರನ್ನು ಪ್ರವಾಹ ದಾಟಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಅಂಕೋಲ ತಾಲೂಕಿನ ಬಿಳಿಹೊಯ್ಯ, ಹೊನ್ನೆಬೈಲ್ ಗ್ರಾಮಗಳಿಗೆ ನದಿ ನೀರು ನುಗ್ಗಿದೆ. ಸದ್ಯ ದೋಣಿಗಳ ಮೂಲಕ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಗಂಗಾವಳಿ ನದಿ ನೀರಿನ ಮಟ್ಟ ಹೆಚ್ಚಿದ್ದರಿಂದ ಈ ಗ್ರಾಮಗಳಿಗೆ ನೀರು ನುಗ್ಗಿದೆ. ಎರಡು ಗ್ರಾಮಗಳ ಮನೆಗಳಲ್ಲಿದ್ದ ಫ್ರಿಡ್ಜ್, ದವಸ ಧಾನ್ಯಗಳಿಗೆ ಹಾನಿಯಾಗಿದೆ. ಗ್ರಾಮಸ್ಥರ ನೆರವಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ.
ಸರ್ಕಾರ ಉರುಳಿಸುವ ತಂತ್ರದ ಬಗ್ಗೆ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ವಿಚಾರವಾಗಿ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ಬಿಜೆಪಿಯವರು ದೇಶಾದ್ಯಂತ ಜನರಿಂದ ಆಯ್ಕೆ ಆದ ಸರ್ಕಾರ ಉರುಳಿಸುವುದರಲ್ಲಿ ಪರಿಣಿತರು. ಬೇರೆ ಬೇರೆ ರಾಜ್ಯದಲ್ಲಿ ಅನೇಕ ಸರ್ಕಾರ ಪತನಗೊಳಿಸಿದ್ದಾರೆ. ಹಾಗಾಗಿ ನಾವು ಎಚ್ಚರಿಕೆಯಿಂದ ಇರಬೇಕು. ಅಧಿಕಾರಕ್ಕಾಗಿ ಅವರು ಏನು ಮಾಡುವುದಕ್ಕೂ ಹೇಸುವುದಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕಾಗುತ್ತದೆ. ಡಿಕೆ ಶಿವಕುಮಾರ್ ಅವರಿಗೆ ಮಾಹಿತಿ ಇರಬಹುದು, ಹಾಗಾಗಿ ಮಾತಾಡಿದ್ದಾರೆ. ಹಿಂದಿನ ಸಚಿವರೋ ಅಥವಾ ಸಿಎಂ ಅವರೋ ಒಂದು ಹೇಳಿಕೆ ಕೊಟ್ಟಿದ್ದನ್ನ ನೋಡಿದ್ದೇನೆ. ಹಾಗಾಗಿ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಾ ಇರಬಹುದು ಎಂದರು.
ಕಳೆದ 10 ದಿನಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಹಿಂದೆ ಹೇಳಿದ್ದೆ ಜುಲೈ ತಿಂಗಳಲ್ಲಿ ಮಳೆಯಾಗುತ್ತೆ ಅಂತ ಹವಾಮಾನ ಇಲಾಖೆ ಹೇಳಿತ್ತು. ಜೂನ್ ತಿಂಗಳಲ್ಲಿ 56 % ಮಳೆ ಕೊರತೆ ಇತ್ತು. ಒಂದು ವಾರದ ಹಿಂದೆ 29% ಇಳಿದಿತ್ತು. ನಿನ್ನೆಗೆ 19% ಮಳೆ ಕೊರತೆ ಕಡಿಮೆ ಆಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಬಂದ ಕಾರಣ ಶೇ 14% ಕೊರತೆ ಇದೆ ಎಂದು ವಿಕಾಸಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಬಳಿ ಇರುವ ಶ್ರಮಬಿಂದುಸಾಗರ ಬ್ಯಾರೇಜ್ ಮೇಲೆ ನಿಂತು ಯುವಕರು ರೀಲ್ಸ್ ಮಾಡುತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ನಿಂತು ಹುಚ್ಚಾಟವಾಡುತ್ತಿದ್ದು, ಅಪ್ಪಿತಪ್ಪಿ ನದಿಗೆ ಬಿದ್ದರೇ ಶವ ಕೂಡ ಸಿಗುವುದು ದುರ್ಲಬವಾಗುತ್ತದೆ. ಅಷ್ಟೊಂದು ರಭಸವಾಗಿ ಕೃಷ್ಣಾ ನದಿ ಹರಿಯುತ್ತಿದೆ.
ಬೆಂಗಳೂರು: ವಿದೇಶದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ ಅವರೇನೋ ತಂತ್ರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾಡುವುದು ಬಿಟ್ಟು ಹೊರಗೆ ತಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹರಿಹಾಯ್ದರು. ಇನ್ನು ಮುನಿರತ್ನ ಹನಿಟ್ರ್ಯಾಪ್ ಮಾಡಿಸಿದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಯಾರು ಹೇಳಿದ್ದಾರೋ ಅವರನ್ನೇ ಕೇಳಿ ಎಂದರು.
ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದ ಹಿನ್ನೆಲೆ ಮಳೆಗೆ ಜೋಯಿಡಾ ತಾಲೂಕಿನ ಚಾಪೋಲಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಗೋಡೆ ಕುಸಿತವಾಗಿದೆ. ಇಂದು (ಜು.24) ಶಾಲೆಗೆ ರಜೆ ಕೊಟ್ಟಿರುವ ಹಿನ್ನಲೆ ಭಾರಿ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಶಿಕ್ಷಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೋಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ಮಂಡ್ಯ: ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಬೋರೇಗೌಡ ಆಯ್ಕೆಯಾಗಿದ್ದಾರೆ.
ಹಾಸನ: ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರೆದಿದ್ದು, ಸಕಲೇಶಪುರ, ಆಲೂರು, ಹಾಸನದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದ ಜನರು ಮನೆಯಿಂದ ಹೊರಬರುತ್ತಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಗೆ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ಕಾಂಕ್ರಿಟ್ ರಸ್ತೆ ಬಿರುಕು ಬಿಟ್ಟಿದೆ.
ಉಡುಪಿ: ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಜಾರಿ ಬಿದ್ದು ಯುವಕ ನಾಪತ್ತೆಯಾಗಿರುವ ಘಟನೆ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತದಲ್ಲಿ ನಡೆದಿದೆ. ಭದ್ರಾವತಿ ಮೂಲದ ಶರತ್ ಕುಮಾರ್(23) ನಾಪತ್ತೆಯಾದ ಯುವಕ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ: ಕದ್ರಾ ಡ್ಯಾಂನಿಂದ 72 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗೋಪಿಶಿಟ್ಟಾ ಗ್ರಾಮದ ಹೊರವಲಯಕ್ಕೆ ಅಪಾರ ಪ್ರಮಾಣ ನೀರು ನುಗ್ಗಿದೆ. ನೂರಾರು ಎಕರೆ ಭತ್ತದ ಗದ್ದೆಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಮಾವಿನ ತೋಟ, ಅಡಿಕೆ, ತೆಂಗಿನ ತೋಟಕ್ಕೆ ನೀರು ನುಗ್ಗಿದೆ. ಕಾಳಿ ನದಿಯಲ್ಲಿ ನೀರಿನ ಪ್ರಮಾಣದ ನಿರಂತರ ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಆತಂಕ ಸೃಷ್ಠಿಯಾಗಿದೆ.
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ನದಿಗೆ ಒಳಹರಿವು ಹೆಚ್ಚಳವಾಗಿದೆ. ಕೊಯ್ನಾ ಜಲಾಶಯ ಪ್ರದೇಶ 150 ಮಿಮೀ, ಮಹಾಬಳೇಶ್ವರ 185 ಮಿಮೀ, ನವಜಾ 201ಮಿಮೀ ಮಳೆಯಾಗುತ್ತಿರುವ ಹಿನ್ನೆಲೆ ಕೊಯ್ನಾ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೊಯ್ನಾ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆ
ಕೃಷ್ಣಾ ನದಿಗೆ 1 ಲಕ್ಷ 14 ಸಾವಿರ ಕ್ಯೂಸೆಕ್‌ಕ್ಕಿಂತ ಹೆಚ್ಚು ನೀರು ಬಿಡಲಾಗುತ್ತಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 9 ಕೆಳಹಂತದ ಸೇತುವೆಗಳ ಜಲಾವೃತವಾಗಿದ್ದು, ಕುಡಚಿ – ಉಗಾರ ಸೇತುವೆ ಮುಳುಗಡೆ ಹಂತ ತಲುಪಿದೆ. ಕುಡಚಿ – ಉಗಾರ ಸೇತುವೆ ಮುಳುಗಡೆಗೆ ಕೇವಲ 5 ಅಡಿ ಮಾತ್ರ ಬಾಕಿ ಇದೆ.
ಉಡುಪಿ: ತಗ್ಗರ್ಸೆ ಗ್ರಾಮದಲ್ಲಿ ಭಾರಿ ಮಳೆಗೆ ರಸ್ತೆ ಕೊಚ್ಚಿಹೋಗಿದೆ. ಬೈಂದೂರು ಪಟ್ಟಣ ಪಂ. ವ್ಯಾಪ್ತಿಯ ತಗ್ಗರ್ಸೆ
ಕಾಮಗಾರಿ ಮುಗಿದು ಒಂದು ವರ್ಷದಲ್ಲೇ ಸಂಪರ್ಕ ರಸ್ತೆ ನೀರುಪಾಲಾಗಿದೆ. ಕಳಪೆ ಕಾಮಗಾರಿ ಹಿನ್ನೆಲೆ ರಸ್ತೆಗೆ ಹಾಕಿದ್ದ ಮಣ್ಣು ಕೊಚ್ಚಿಹೋಗಿದೆ. ರಸ್ತೆ ಕಾಮಗಾರಿಗಾಗಿ ಮೂರು ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದ್ದು, ಎರಡು ಕಾರುಗಳು ಹೇಮಾವತಿ ನದಿಗೆ ಉರುಳಿಬಿದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ನಡೆದಿದೆ. ಚಾಲಕರ ನಿಯಂತ್ರಣ ತಪ್ಪಿ ಬಣಕಲ್ ಸಮೀಪ ಹೇಮಾವತಿ ನದಿಗೆ ಶಿಫ್ಟ್ ಹಾಗೂ ಇನೋವಾ ಕಾರು ಬಿದ್ದಿವೆ. ಇನೋವಾ ಕಾರು ಪುತ್ತೂರಿನಿಂದ ಚಿಕ್ಕಮಗಳೂರಿಗೆ ಹೋಗುತ್ತಿತ್ತು. ಎರಡು ಕಾರಿನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರು: ಕೇರಳದ ವಯನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿದ ಪರಿಣಾಮ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹೆಚ್ ಡಿ ಕೋಟೆ ತಾಲ್ಲೂಕು ಬೀಚನಹಳ್ಳಿ ಗ್ರಾಮದ ಬಳಿ ಇರುವ ಕಬಿನಿ ಜಲಾಶಯ 84 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 78.31 ಅಡಿ, ಜಲಾಶಯದ ಇಂದಿನ ಒಳಹರಿವು 20,749 ಕ್ಯೂಸೆಕ್, ಜಲಾಶಯದ ಹೊರಹರಿವು 3333 ಕ್ಯೂಸೆಕ್, ಗರಿಷ್ಠ 19.52 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಇದೆ. ಜಲಾಶಯದಲ್ಲಿ ಸದ್ಯಕ್ಕೆ 16.09 ಟಿಎಂಸಿ ನೀರು ಸಂಗ್ರಹವಾಗಿದೆ.
ಹಾಸನ: ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಸಕಲೇಶಪುರ ತಾಲ್ಲೂಕಿನ, ಮಾಗೇರಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸೋಮವಾರಪೇಟೆ-ಮಾಗೇರಿ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ. ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಹಿನ್ನೆಲೆ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಶೃಂಗೇರಿ ದೇವಾಲಯ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿವೆ. ಗಾಂಧಿ ಮೈದಾನ, ಪ್ಯಾರಲ್ ರಸ್ತೆಯ ಮೇಲೆ ನದಿ ರಭಸವಾಗಿ ಹರಿಯುತ್ತಿದೆ. ಶೃಂಗೇರಿ ಪಟ್ಟಣದಿಂದ ಗಾಂಧಿ ಮೈದಾನಕ್ಕೆ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದೆ.
Published On - 8:21 am, Mon, 24 July 23