Karnataka News Live: ಒಂದು ಕಡೆ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ಸಮಸ್ಯೆ ಉಂಟಾಗಿದೆ. ಕೇಂದ್ರ ಅಕ್ಕಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ (Congress) ನಾಯಕರು ಕಿಡಿಕಾರುತ್ತಿದ್ದಾರೆ. ಇನ್ನೊಂದೆಡೆ ವಿದ್ಯುತ್ ದರ (Electricity Hike) ಏರಿಕೆ ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಇವೆಲ್ಲದರ ಮಧ್ಯೆ ಹೋಟೆಲ್ ಮಾಲೀಕರು ಸಾರ್ವಜನಿಕರಿಗೆ ಶಾಕ್ ಕೊಡಲು ಮುಂದಾಗಿದ್ದಾರೆ. ತಿಂಡಿ-ತೀರ್ಥದ ಬೆಲೆ ಹೆಚ್ಚಳ ಮಾಡುತ್ತೇವೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಫ್ರೀ ಕರೆಂಟ್ ಸಿಗುತ್ತಿದೆ ಎನ್ನುವ ಖುಷಿ ಇಲ್ಲ. ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ ಅನ್ನೋ ನೋವು. ನಡುರಸ್ತೆಯಲ್ಲೇ ಧಿಕ್ಕಾರ.. ಆಕ್ರೋಶ.. ಕರೆಂಟ್ ಬಿಲ್ ಹೆಚ್ಚಳಕ್ಕೆ ಜನ ಕಂಗೆಟ್ಟಿದ್ದರೆ, ಮತ್ತೊಂದು ಕಡೆ ಉದ್ಯಮಿಗಳು, ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳ ಮಾಲೀಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕರೆಂಟ್ ಬಿಲ್ ವಿರುದ್ಧ ಹೋರಾಟ ಮತ್ತಷ್ಟು ಕಾವೇರುವ ಸಾಧ್ಯತೆ ಇದೆ. ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಇಲ್ಲಿಯವರೆಗೂ 32.45 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅದರಂತೆ ಇಂದು ಕೂಡ ಬರೋಬ್ಬರಿ 8,94,548 ಲಕ್ಷ ಜನ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ.
ರಾಯಚೂರು: ಈಗ ಚುನಾವಣೆ ನಡೆದ್ರೆ ಕಾಂಗ್ರೆಸ್ಗೆ 60 ಸೀಟು ಬರಲ್ಲ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹೇಳಿದರು. ರಾಯಚೂರಿನಲ್ಲಿ ಮಾತನಾಡಿದ ಅವರು ‘ಡಿ.ಕೆ ಶಿವಕುಮಾರ್ ತುರ್ತಾಗಿ ಮುಖ್ಯಮಂತ್ರಿ ಆಗಬೇಕು ಅಂತಿದ್ದಾರೆ. ಆದರೆ, ಸಿದ್ದರಾಮಣ್ಣನ ಚೇಲಾಗಳು ಸಿದ್ದರಾಮಯ್ಯ 5 ವರ್ಷ ಸಿಎಂ ಅಂತಾರೆ. ಕಾಂಗ್ರೆಸ್ ಪಕ್ಷದಲ್ಲಿ ಚೆನ್ನಾಗಿ ಬೆಂಕಿ ಹತ್ತಿದೆ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದರು.
ರಾಯಚೂರು: ಕಾಂಗ್ರೆಸ್ ಸರ್ಕಾರಕ್ಕೆ 5 ಗ್ಯಾರಂಟಿಗಳನ್ನು ಪೂರೈಸಲು ಆಗುತ್ತಿಲ್ಲವೆಂದು ರಾಯಚೂರಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ವಾಗ್ದಾಳಿ ನಡೆಸಿದರು. ಸರ್ಕಾರ ಬಂದು 40 ದಿನಗಳಲ್ಲಿ ಜನರು ಬೀದಿಗಿಳಿದಿದ್ದಾರೆ. ಸರ್ಕಾರದ ವಿರುದ್ಧ ಜನರು ರಸ್ತೆಗಿಳಿದಿದ್ದು ಇದೇ ಮೊದಲ ಬಾರಿ ಎಂದರು.
ವಿಜಯಪುರ: ಆಶ್ವಾಸನೆ ನೀಡಿರುವಂತೆ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರಕಾರ ಜಾರಿ ಮಾಡಬೇಕು, ಇಲ್ಲವಾದಲ್ಲಿ ಕಾಂಗ್ರೆಸ್ ಸರಕಾರ ಬಿದ್ದು ಹೋಗುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹೇಳಿಕೆ ವಿಚಾರ ‘ಅವರು ಲೋಕಸಭೆಯಲ್ಲಿ ಸೋಲುತ್ತಾರೆ, ಅದನ್ನ ರಕ್ಷಣೆ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ಸಚಿವ ಎಂ ಬಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ನಗರದ ರೇಸ್ಕೋರ್ಸ್ ರಸ್ತೆಯ ನಿವಾಸದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಹೌದು ಈ ವೇಳೆ ಮನೆಗೆ ಬಂದ ಡಿಕೆಶಿಗೆ ಹೂ ಗುಚ್ಛ ನೀಡಿ ಬೊಮ್ಮಾಯಿ ಸ್ವಾಗತಿಸಿದರು. ಬ್ರಾಂಡ್ ಬೆಂಗಳೂರು ಸಂಬಂಧ ಬೊಮ್ಮಾಯಿ ಸಲಹೆ ಪಡೆಯಲು ಬಂದಿರುವ ಡಿಕೆ ಶಿವಕುಮಾರ್, ಪ್ರತಿಯಾಗಿ ಬೊಮ್ಮಾಯಿಗೂ ಶಾಲು ಹೊದಿಸಿ, ಹೂ ಗುಚ್ಛ ನೀಡಿ ಧನ್ಯವಾದ ತಿಳಿಸಿದರು.
ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ.ಸೋಮಣ್ಣ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು ‘ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ.ಸೋಮಣ್ಣ ಅಪೇಕ್ಷೆ ಪಟ್ಟಿದ್ದು, ಯಾವುದೇ ತಪ್ಪೇನಿಲ್ಲ ಎಂದಿದ್ದಾರೆ. ‘ಯಾರೂ ರಾಜ್ಯಾಧ್ಯಕ್ಷರಾಗಬೇಕು, ಹೇಗೆ ಮುಂದುವರೆಯಬೇಕು ಅನ್ನೋದನ್ನ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನಿಸಲಿದ್ದಾರೆ ಎಂದರು.
ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಕುರಿತು ‘ ಸಭೆಯಲ್ಲಿ ಯೋಜನೆ ಸಂಬಂಧ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸೇರಿ ಕಂದಾಯ, ಗ್ರಾಮೀಣಾಭಿವೃದ್ಧಿ 3 ಇಲಾಖೆ ಸಚಿವರು, ಜೊತೆಗೆ ಅಧಿಕಾರಿಗಳು ಸುದೀರ್ಘವಾಗಿ ಸಭೆ ನಡೆಸಿದ್ದೇವೆ ಎಂದರು. ಇನ್ನು ಬುಧವಾರ ಸಚಿವ ಸಂಪುಟ ಸಭೆಯಲ್ಲಿ ಌಪ್ ಬಗ್ಗೆ ಸಿಎಂಗೆ ತೋರಿಸುತ್ತೇವೆ. ಬಳಿಕ
ಗೃಹಲಕ್ಷ್ಮೀ ಯೋಜನೆ ಜಾರಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ, ಆಗಸ್ಟ್ 17 ಅಥವಾ 18ರಂದು ‘ಗೃಹಲಕ್ಷ್ಮೀ’ ಜಾರಿ ಮಾಡುತ್ತೇವೆ ಎಂದರು.
ಬೆಂಗಳೂರು: ಇಂದು(ಜೂ.23) ಸಂಜೆ 6.30ಕ್ಕೆ ಮಾಜಿ ಸಿಎಂ ಬೊಮ್ಮಾಯಿಯವರನ್ನ ಡಿಸಿಎಂ ಡಿ.ಕೆ ಶಿವಕುಮಾರ್ ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಭೇಟಿಯಾಗಲಿದ್ದಾರೆ. ಇದೀಗ ಡಿ.ಕೆ ಶಿವಕುಮಾರ್ ಅವರು ಗೃಹಲಕ್ಷ್ಮೀ ಯೋಜನೆ ಜಾರಿ ವಿಚಾರವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.
ಉತ್ತರ ಕನ್ನಡ: ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ರನ್ನು ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅಪ್ಪಿಕೊಂಡು ಕಾರಿನಲ್ಲಿ ಕರೆದೊಯ್ದು ಗೌಪ್ಯ ಸಭೆ ನಡೆಸಿದ್ದಾರೆ. ಹೌದು ಚುನಾವಣೆಯಲ್ಲಿ ಗೆದ್ದಿದ್ದಕ್ಕೆ ಶುಭಕೋರಿ ಅಪ್ಪಿಕೊಂಡ ಸಂಸದ. ಬಳಿಕ ತಮ್ಮದೇ ಕಾರಿನಲ್ಲಿ ಪ್ರವಾಸಿ ಮಂದಿರ(IB)ಕ್ಕೆ ಕರೆದೊಯ್ದು ಗೌಪ್ಯ ಸಭೆ ನಡೆಸಿದ್ದಾರೆ.
ಬೆಂಗಳೂರು: ಭೂಕುಸಿತ ಉಂಟಾಗದಂತೆ ಎಚ್ಚರಿಕೆ ವಹಿಸಲು ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಕೃಷ್ಣಭೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. 2018ರಲ್ಲಿ ಕೊಡಗು ಭಾಗದಲ್ಲಿಯೇ ಭೂ ಕುಸಿತದಿಂದ 21ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ರಾಜ್ಯದಲ್ಲಿ ಮತ್ತೊಮ್ಮೆ ಇಂತಹ ಕಹಿ ಘಟನೆಗಳು ಸಂಭವಿಸಬಾರದು. ಈ ಬಾರಿ ಮೂಡಿಗೆರೆ, ಸುಳ್ಯ, ಭಾಗಮಂಡಲ, ಮಡಿಕೇರಿ, ವಿರಾಜಪೇಟೆ, ಸಕಲೇಶಪುರ ಸೇರಿ ಕೆಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಹೀಗಾಗಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕೆಂದು ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ.
ಬೆಂಗಳೂರು: ಗೃಹ ಲಕ್ಷ್ಮಿಯೋಜನೆ ಜಾರಿ ವಿಚಾರ ಕುರಿತು ಇಂದು(ಜೂ.23) ಡಿಸಿಎಂ ಡಿಕೆಶಿವಕುಮಾರ್ ನೇತೃತ್ವದಲ್ಲಿ ಇಲಾಖೆ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಬಹುತೇಕ ಜೂನ್ 26 ರಂದು ಯೋಜನೆ ಜಾರಿಗೆ ಸಿದ್ದತೆ ನಡೆದಿದೆ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರ ‘ಯಾಕೆ ಕೊಡಲ್ಲ ನನಗೆ, ಕೊಡಲೇಬೇಕು ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ರಾಜ್ಯದ ಯಾವ ನಾಯಕರ ಜೊತೆಗೂ ನಾನು ಮಾತನಾಡಿಲ್ಲ. ಇವರ ಕೈಯಲ್ಲಿ ಆಗದ ಕೆಲಸ ನಾನು ಮಾಡಿದ್ದೇನೆ. ಪ್ರಾಣದ ಹಂಗು ತೊರೆದು ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಸೋತಿರಬಹುದು. ಆದರೆ, ಕೊಟ್ಟ ಟಾಸ್ಕ್ನಲ್ಲಿ ಸೋತಿಲ್ಲ ಎಂದಿದ್ದಾರೆ.
ತುಮಕೂರು: ಅಧಿವೇಶನಕ್ಕೂ ಮುಂಚೆ ವಿಪಕ್ಷ ನಾಯಕರನ್ನು ಆಯ್ಕೆ ಮಾಡುತ್ತೇವೆ ಎಂದು ತುಮಕೂರಿನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನನಗೆ 81 ವರ್ಷ ಆದರೂ ನಾನು ಹೋರಾಟ ಮಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ನಾವೇ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ನನ್ನನ್ನು ಯಾರೂ ನಿರ್ಲಕ್ಷ್ಯ ಮಾಡಿಲ್ಲ ಎಂದಿದ್ದಾರೆ.
ತುಮಕೂರು: ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಗರದ ಗ್ಲಾಸ್ ಹೌಸ್ನಲ್ಲಿ ಬಿಜೆಪಿ ಸಾಧನೆ ಹಾಗೂ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದ್ದು, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಬಿಸಿ ನಾಗೇಶ್, ಸಂಸದ ಜಿಎಸ್ ಬಸವರಾಜು, ಶಾಸಕರಾದ ಸುರೇಶ್ ಗೌಡ, ಜ್ಯೋತಿ ಗಣೇಶ್ ಸೇರಿ ಅನೇಕರು ಭಾಗಿಯಾಗಿದ್ದಾರೆ.
ಕೊಪ್ಪಳ: ‘ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಗೆ ನಾಚಿಕೆಯಾಗಬೇಕು ಎಂದು ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು ‘ಸುಳ್ಳಿಗೆ ಇನ್ನೊಂದು ಹೆಸರೇ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ. ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದರು. ಒಂದು ಗ್ಯಾರಂಟಿ ಮಿಸ್ ಆದರೂ ಸದನ ನಡೆಯಲು ಬಿಡುವುದಿಲ್ಲ ಎಂದಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಿಗೆ ವಾರಂಟಿಯಿಲ್ಲ, ಈಗಾಗಲೇ ಕಾಂಗ್ರೆಸ್ ವಾಂತಿ ಮಾಡಿಕೊಳ್ಳುವ ಸ್ಥಿತಿಗೆ ಬಂದು ನಿಂತಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ‘ರಾಜ್ಯ, ಹಣಕಾಸಿನ ಮುಗ್ಗಟ್ಟಿನಲ್ಲಿದೆ ಈಗಾಗಲೇ ಅರ್ಧ ದಿವಾಳಿಯಾಗಿದೆ. ಮುಂದೆ ಸಂಬಳ ನೀಡಲು ಸಹ ಸರ್ಕಾರ ಬ್ಯಾಂಕ್ ನಿಂದ ಸಾಲ ಮಾಡಬೇಕು, ಬ್ಯಾಂಕ್ ಕೂಡ ಸಾಲ ಕೊಡಲ್ಲ. ನೀವು ಗ್ಯಾರಂಟಿ ಕೊಡ್ತಿವಿ ಅಂದಿದ್ದು, ಅದನ್ನ ನೀವು ಎಲ್ಲಿಂದಲಾದರೂ ತಂದು ಕೊಡಿ ಎಂದಿದ್ದಾರೆ.
ಯಾದಗಿರಿ: ಒಂದೇ ವರ್ಷದಲ್ಲಿ ಕಾಂಗ್ರೆಸ್ ಸರಕಾರ ಪತನವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹೌದು ಯಾದಗಿರಿಯ ಶಹಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಲಿಕಯ್ಯ ಗುತ್ತೇದಾರ್ ‘ಸರಕಾರ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿ ಯೋಜನೆ ನೀಡುವಲ್ಲಿ ವಿಫಲವಾಗುತ್ತದೆ. ನಾನು ಭವಿಷ್ಯ ಹೇಳುತ್ತಿದ್ದೇನೆ, ಈ ಸರಕಾರ ನಡೆಯುವುದಿಲ್ಲ. ಪಾರ್ಲಿಮೆಂಟ್ ಚುನಾವಣೆ ನಡೆಯುವುದಕ್ಕಿಂತ ಮುಂಚೆ ಸರಕಾರ ಪತನವಾಗೋದು ಗ್ಯಾರಂಟಿ ಎಂದಿದ್ದಾರೆ.
ಯಾದಗಿರಿ: ಜಗತ್ತಿನ ಜನ ವಿಶ್ವಾಸದಿಂದ ಭಾರತದ ಕಡೆ ನೋಡ್ತಿದ್ದಾರೆ. ಯುಕ್ರೇನ್ ಯುದ್ಧದಲ್ಲಿ ಸಿಲುಕಿದ್ದ 25 ಸಾವಿರ ವಿದ್ಯಾರ್ಥಿಗಳನ್ನ ಭಾರತಕ್ಕೆ ಕರೆತರಲಾಯ್ತು, ಜಗತ್ತಿಗೆ ಯೋಗವನ್ನ ಪರಿಚಯಿಸಿದವ್ರು ನರೇಂದ್ರ ಮೋದಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಯಾದಗಿರಿಯಲ್ಲಿ ಮಾತನಾಡಿದ ಅವರು ‘ಅರಬ್ ದೇಶದಲ್ಲಿ 25 ಎಕರೆ ಜಾಗ ತೆಗೆದುಕೊಂಡು ಗಣಪತಿ ದೇವಸ್ಥಾನ ಮಾಡಲಾಗುತ್ತಿದೆ. ಜನವರಿ 24ಕ್ಕೆ ಭವ್ಯ ರಾಮ ಮಂದಿರ ಉದ್ಘಾಟನೆ ಆಗುತ್ತೆ, ನರೇಂದ್ರ ಮೋದಿ ಅವರು ಸಾಂಸ್ಕೃತಿಕ ಭಾರತ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಕೊಡುವಾಗಲೇ ಎಚ್ಚರಿಕೆ ನೀಡಿದ್ದೆವು, ಎಲ್ಲಾ ಗ್ಯಾರಂಟಿಗಳಿಗೆ ಹಣ ಎಲ್ಲಿಂದ ತರುತ್ತೀರಾ ಎಂದು ಪ್ರಶ್ನಿಸಿದ್ದೆವು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಕಾಂಗ್ರೆಸ್ ಸರ್ಕಾರ ಮೊದಲು ತಮ್ಮ ಗ್ಯಾರಂಟಿ ಕೊಡಲಿ, ಈಗ ಅಕ್ಕಿ ಕೊಡಲು ಕೇಂದ್ರದ ಹೆಸರೇಳುತ್ತಿದ್ದಾರೆ. ಜನರಿಗೆ 5 ಕೆಜಿ ಉಚಿತ ಅಕ್ಕಿ ಕೊಡ್ತಿರೋದು ಪ್ರಧಾನಿ ಮೋದಿ ಎಂದರು.
ಜುಲೈ 1ರಿಂದ 7ರವರೆಗೆ ವನ ಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದ ವಿಕಾಸಸೌಧದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡೆ ಹೇಳಿದರು. ಈ ವರ್ಷ 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಣ್ಯ ಇಲಾಖೆಯಿಂದ ಬೃಹತ್ ಮಟ್ಟದ ಸಸಿ ನೆಡುವ ಕಾರ್ಯಕ್ರಮ
ಪರಿಸರ ಸಂರಕ್ಷಣೆ, ಅರಣ್ಯವನ್ನು ಹೆಚ್ಚು ಮಾಡುವುದು ನಮ್ಮ ಗುರಿ. ರೈತರಿಗೆ ಕಡಿಮೆ ದರದಲ್ಲಿ ಸಸಿ ನೀಡುವ ಕೆಲಸ ಇಲಾಖೆ ಮಾಡುತ್ತಿದೆ ಎಂದರು.
ಹಾಲಿನ ದರ ಹೆಚ್ಚಳ ಮಾಡಬೇಕೆಂಬುದು ಸರ್ಕಾರದ ನಿರ್ಧಾರವಲ್ಲ. ಹಾಲಿನ ದರ ಹೆಚ್ಚಳ ಮಾಡಬೇಂಬುದು ನನ್ನ ಅಭಿಪ್ರಾಯ ಎಂದು ಹಾಸನದಲ್ಲಿ ಸಹಕಾರ ಖಾತೆ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ರೈತರಿಗೆ ಉತ್ಪಾದನಾ ವೆಚ್ಚ ಜಾಸ್ತಿ ಇದೆ. ರೈತರಿಗೆ 5 ರೂ. ಹೆಚ್ಚಿಗೆ ದೊರಕಿಸಿಕೊಡಬೇಂಬುದು ನನ್ನ ಉದ್ದೇಶ. ಹಾಲಿನ ದರ ಏರಿಕೆ ಮಾಡಿ ಗ್ರಾಹಕರಿಗೆ ಹೊರೆ ಮಾಡುವುದಿಲ್ಲ ಎಂದರು.
ಬಸವ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದ ನಿಯೋಗದಿಂದ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಮೀಸಲಾತಿ ಮತ್ತು ಸಮುದಾಯದ ಅಭಿವೃದ್ಧಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದಾರೆ.
ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟಿಸಿದ್ದ ಕೈಗಾರಿಕೋದ್ಯಮಿಗಳ ಜತೆ ಇಂದು ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದಾರೆ. FKCCI ಸೇರಿದಂತೆ ಇತರೆ ಕೈಗಾರಿಕಾ ಸಂಸ್ಥೆಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇಂಧನ ಸಚಿವ ಕೆ.ಜೆ.ಜಾರ್ಜ್, ಅಧಿಕಾರಿಗಳು ಉಪಸ್ಥಿತರಿದ್ದಾರೆ.
40% ಕಮಿಷನ್ ಆರೋಪದ ದಾಖಲಾತಿ ಬಿಡುಗಡೆಯಾಗದ ವಿಚಾರವಾಗಿ ಪ್ರತಿಕ್ರಿಯಿಸಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಸಮಯ ಬಂದಾಗ ಕಮಿಷನ್ ಆರೋಪಕ್ಕೆ ದಾಖಲೆ ಬಿಡುಗಡೆ ಮಾಡಲಾಗುವುದು. ಈ ಸರ್ಕಾರದವರು ಯಾರೂ ನಮ್ಮ ಬಳಿ ಕಮಿಷನ್ ಕೇಳಿಲ್ಲ. ಸಚಿವರು, ಶಾಸಕರು ಕಮಿಷನ್ ಕೇಳಿದ್ರೆ ಬಹಿರಂಗಪಡಿಸುತ್ತೇವೆ. ಯಾರಾದರೂ ಕಮಿಷನ್ ಕೇಳಿದರೆ ಅದನ್ನೂ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ಕಮಿಷನ್ ಆರೋಪ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿಲ್ಲ ಎಂದು ಸಿಎಂ ಭೇಟಿ ಬಳಿಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು. ಕಾಮಗಾರಿ ಬಾಕಿ ಬಿಲ್ ಪಾವತಿ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಸಿಎಂ ಬಾಕಿ ಬಿಲ್ ಪಾವತಿ ಮಾಡೋದಾಗಿ ಭರವಸೆ ಕೊಟ್ಟಿದ್ದಾರೆ. ಅಧಿಕಾರಿಗಳ ಜತೆ ಚರ್ಚಿಸಿ ಬಾಕಿ ಬಿಲ್ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡೇ ಗೆದ್ದಿದ್ದೀರಿ. ನಿಮ್ಮ ವೈಯಕ್ತಿಕ ವರ್ಚಸ್ಸು ಏನು, ನಿಮ್ಮ ಸಾಧನೆ ಏನು ಹೇಳಿ? ನೀವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತೀರಿ ಎಂದು ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ಕಿಡಿ ಕಾರಿದ್ದಾರೆ.
ಪ್ರತಾಪ್ ಸಿಂಹ ಅವರೇ ನೀವು ಪತ್ರಕರ್ತರಾಗಿದ್ದಾಗ ಸ್ವಲ್ಪ ಓದುತ್ತಿದ್ರಿ. ಸಂಸದರಾದ ಮೇಲೆ ಓದೋದು ಬಿಟ್ಟಿದ್ದೀರಿ. ನಿಮಗೆ ತಾಕತ್ ಇದ್ದರೆ ಎಫ್ಸಿಐ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ. ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗುತ್ತೇನ್ರಿ ಎಂದು ಪ್ರಶ್ನಿಸಿದ್ದಾರೆ.
ಸೋಲಿನ ಭೀತಿಯಿಂದ ಪ್ರತಾಪ್ ಸಿಂಹ ಏನೇನೋ ಮಾತನಾಡುತ್ತಾರೆ. ಸಂಸದ ಪ್ರತಾಪ್ ಸಿಂಹ ಬಾಯಿ ಮುಚ್ಚಿಕೊಂಡು ಇರಬೇಕು ಅಷ್ಟೇ ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಬಗ್ಗೆ ವೈಯಕ್ತಿಕ ಹೇಳಿಕೆ ಕೊಡ್ತಿದ್ದಾರೆ. ವಿಷಯಾಧಾರಿತ ಬಿಟ್ಟು ವೈಯಕ್ತಿಕ ವಿಚಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಟೀಲ್‌ರವರೇ, ನೀವು ಮನೆಗೆ ಮಾರಿ, ಪರರಿಗೆ ಉಪಕಾರಿ. ನಿಮ್ಮ ಈ ಮನೆಮುರಕುತನಕ್ಕೆ ಈಗಾಗಲೇ ಜನ ಪಾಠ ಕಲಿಸಿದ್ದಾರೆ. ಆದರೂ ನಿಮಗೆ ಬುದ್ದಿ ಬಂದಿಲ್ಲ. ಕೇಂದ್ರ ಎಲ್ಲವನ್ನೂ ಕರ್ನಾಟಕಕ್ಕೆ ಕೊಡಲಿ ಎಂಬ ಸ್ವಾರ್ಥ ನಮ್ಮಲಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ನಿನ್ನೆ ಸಿಎಂ ಸಿದ್ದರಾಮಯ್ಯ ಅಮಿತ್ ಶಾರನ್ನು ಭೇಟಿ ಮಾಡಿ ಬಂದಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ಯಾರು ಎಂದು ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಪ್ರಶ್ನಿಸಿದರು. ಭಾಗ್ಯಗಳನ್ನು ನೀಡಲು ಆಗದೆ ಅವರೇ ಸಮಸ್ಯೆಗೆ ಸಿಲುಕುತ್ತಾರೆ. ಸರ್ಕಾರ ನಡೆಸಲು ಕಾಂಗ್ರೆಸ್ ವಿಫಲವಾಗಿದೆ ಎಂದರು.
ಅಕ್ಕಿ ವಿಚಾರದಲ್ಲಿ ರಾಜಕಾರಣ ಮಾಡುವ ಉದ್ದೇಶ ಕೇಂದ್ರಕ್ಕೆ ಇಲ್ಲ ಎಂದು ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಹೇಳಿದರು. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿಲ್ಲ, ಹಿಂದೆಯೂ ಆಗಿದ್ದರು. ಈ ಹಿಂದೆ ಆಗದಿದ್ದ ಸಮಸ್ಯೆ ಈಗ ಯಾಕೆ ಆಗುತ್ತಿದೆ. ಕೇಂದ್ರ ಅಕ್ಕಿ ಕೊಟ್ಟಾಗ ಸಿದ್ದರಾಮಯ್ಯ ತಮ್ಮ ಫೋಟೋ ಹಾಕಿದ್ರು. ಸಿದ್ದರಾಮಯ್ಯ ಕೇಂದ್ರದ್ದು ಸೇರಿ 10 ಕೆಜಿ ಕೊಡ್ತೇವೆ ಅಂತಾ ಹೇಳಿಲ್ಲ. ತಲಾ 10 ಕೆಜಿ ಅಕ್ಕಿ ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡ್ತೇವೆ ಎಂದರು.
ವಿಧಾನಮಂಡಲ ಅಧಿವೇಶನದ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆಗೆ ಬಿಜೆಪಿ ನಿರ್ಧಾರ ಮಾಡಿದ್ದು, ಹಾಗಾಗಿ ವಿಧಾನಸೌಧಕ್ಕೆ ಯಡಿಯೂರಪ್ಪ ರೀ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಧಿವೇಶನ ಆರಂಭವಾಗುವುದರೊಳಗೆ ಗ್ಯಾರಂಟಿ ಘೋಷಣೆ ಜಾರಿಯಾಗದಿದ್ದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ.
ಒಂದು ವಾರದಲ್ಲಿ 2 ಬಾರಿ ಗೋಯಲ್ ಭೇಟಿಗೆ ಸಚಿವ ಮುನಿಯಪ್ಪ ಪ್ರಯತ್ನಿಸಿದ್ದರು. ಆದರೆ ಭೇಟಿಗೆ ಅವಕಾಶ ನೀಡಿರಲಿಲ್ಲ. ವಿವಾದವಾದ ಹಿನ್ನೆಲೆಯಲ್ಲಿ ಇಂದು ಭೇಟಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಕೊನೆಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ಅವಕಾಶ ನೀಡಿದ್ದು, ಆಹಾರ ಸಚಿವ ಮುನಿಯಪ್ಪ ಬೆಳಗ್ಗೆ 7.30ರ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಬೆಳಗ್ಗೆ 10.30ಕ್ಕೆ ಗೋಯಲ್ರನ್ನು ಸಚಿವ ಮುನಿಯಪ್ಪ ಭೇಟಿಯಾಗಲಿದ್ದಾರೆ. ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಸುವಂತೆ ಮನವಿ ಮಾಡಲಿದ್ದಾರೆ.
ಇಂದು ಬಸವಜಯಮೃತ್ಯುಂಜಯಶ್ರೀ ಹಾಗೂ ಶಾಸಕ ಕಾಶಪ್ಪನವರ್ ನೇತೃತ್ವದ ಪಂಚಮಸಾಲಿ ನಾಯಕರ ನಿಯೋಗದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಲಿದ್ದು, ಮೀಸಲಾತಿ ಮತ್ತು ಸಮುದಾಯದ ಅಭಿವೃದ್ಧಿ ವಿಚಾರವಾಗಿ ಸಿಎಂ ಜೊತೆ ಚರ್ಚೆ ಮಾಡಲಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದ ನಿಯೋಗ ಇಂದು ಬೆಳಗ್ಗೆ 11 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ. ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆಗೆ ನಿಯೋಗ ಮನವಿ ಮಾಡಲಿದೆ.
ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಸಂಜೆ 6 ಗಂಟೆಗೆ ಭೇಟಿಯಾಗಲಿದ್ದಾರೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವ ಡಿ.ಕೆ.ಶಿವಕುಮಾರ್ ಈ ಹಿನ್ನೆಲೆ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಮಾತುಕತೆ ಮಾಡಲಿದ್ದಾರೆ. ಬಿಜೆಪಿ ಅವಧಿಯಲ್ಲಿ ಬೊಮ್ಮಾಯಿ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು. ಆ ದೃಷ್ಟಿಯಿಂದ ಅವರೊಂದಿಗೆ ಚರ್ಚೆ ಮಾಡಲಿದ್ದಾರೆ.
ವಿದ್ಯುತ್ ದರ ಹೆಚ್ಚಳ ಹಿನ್ನೆಲೆ ನಿನ್ನೆ ಕೈಗಾರಿಕೋದ್ಯಮಿಗಳು ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಇಂದು ಕೈಗಾರಿಕೋದ್ಯಮಿಗಳ ಜೊತೆ ಸಿಎಂ ಸಿದ್ಧರಾಮಯ್ಯ ಸಭೆ ಮಾಡಲಿದ್ದಾರೆ. ಮಧ್ಯಾಹ್ನ 12.30 ಕ್ಕೆ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಯಲಿದೆ. ಇಂಧನ ಇಲಾಖೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಭಾಗಿಯಾಗಲಿದ್ದಾರೆ.
Published On - 7:51 am, Fri, 23 June 23