
Karnataka News Live: ರಾಜ್ಯಕ್ಕೆ ಮುಂಗಾರು ಕಾಲಿಡುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಆದರೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ಇದರಿಂದ ಕುಡಿಯುವ ನೀರಿಗು ಹಾಹಾಕಾರ ಉದ್ಭವಿಸಿದೆ. ಇನ್ನು ರಾಜಕೀಯ ವಲಯದಲ್ಲಿ ಅನ್ನ ಭಾಗ್ಯ ಯೋಜನೆಯದ್ದೇ ಸಾಕಷ್ಟು ಚರ್ಚೆಯಾಗುತ್ತಿದ್ದೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ಸಮಸ್ಯೆ ಉಂಟಾಗಿದೆ. ಕೇಂದ್ರ ಅಕ್ಕಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ (Congress) ನಾಯಕರು ಕಿಡಿಕಾರುತ್ತಿದ್ದಾರೆ. ಕರೆಂಟ್ ಬಿಲ್ ಹೆಚ್ಚಳಕ್ಕೆ ಜನ ಕಂಗೆಟ್ಟಿದ್ದರೆ, ಮತ್ತೊಂದು ಕಡೆ ಉದ್ಯಮಿಗಳು, ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳ ಮಾಲೀಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
ಗೃಹಜ್ಯೋತಿ ಯೋಜನೆಗೆ ಇಂದು 8,94,548 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಈವರೆಗೆ 32.45 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಗೃಹ ಜ್ಯೋತಿ ನೋಂದಣಿಯು ಇನ್ನಷ್ಟು ವೇಗ ಪಡೆದುಕೊಂಡಿದ್ದು, ಶನಿವಾರ ಸಂಜೆ 8 ಗಂಟೆವರೆಗೆ 45,61,662 ಗ್ರಾಹಕರು ನೋಂದಣಿಗೊಂಡಿದ್ದಾರೆ. ಇ-ಆಡಳಿತ ಇಲಾಖೆ ಪ್ರತ್ಯೇಕ ನೋಂದಣಿ ಲಿಂಕ್ ಅನ್ನು ರಾಜ್ಯದ 2,000 ವಿದ್ಯುಚ್ಛಕ್ತಿ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಶುಕ್ರವಾರ (ಜೂನ್ 23) 10,93,606 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು. ಶನಿವಾರ (ಜೂನ್ 24) ಸಂಜೆ 8 ಗಂಟೆಯವರೆಗೆ 11,17,208 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯಾದ್ಯಂತ ಬಿರುಗಾಳಿ, ಗುಡುಗು ಸಿಡಿಲು ಸಹಿತ ಬಾರಿ ಮಳೆಯಾಗುತ್ತಿದೆ. ಶಹಾಪುರನ ಹಳಿಪೇಟೆಯ ಬೆಟ್ಟದಲ್ಲಿ ಸಂಗಪ್ಪ ಹಾಗೂ ದೇವಪ್ಪಗೆ ಸೇರಿದ್ದ 19 ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಕುರಿಗಾಹಿಗಳು ಕುರಿಗಳ ಸಮೇತ ಮನೆ ಕಡೆ ತೆರಳುತ್ತಿದ್ದಾಗ ಸಿಡಿಲು ಬಡಿದು 2 ಲಕ್ಷ ಬೆಲೆ ಬಾಳುವ 19 ಕುರಿಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ಗೋವಿಂದ ಕಾರಜೋಳ, ಸಿದ್ದರಾಮಯ್ಯ ಪಂಚೆ ಮೇಲೆ ಏರಿಸಿಕೊಂಡು ಗ್ಯಾರಂಟಿ ಘೋಷಣೆ ಮಾಡಿದರು ಎಂದು ವ್ಯಂಗ್ಯವಾಡಿದರು. ಈಗ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಆಟೋ ಚಾಲಕರು, ಖಾಸಗಿ ಬಸ್ಸು ಮಾಲೀಕರು ಎಲ್ಲರೂ ಬೀದಿಗೆ ಬಂದಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ಆಟೋ ಚಾಲಕರು, ಖಾಸಗಿ ಬಸ್ಸು ಮಾಲೀಕರು ಬಡಿಗೆ ಎತ್ತಿಕೊಳ್ಳುತ್ತಾರೆ. ಸಿದ್ದರಾಮಯ್ಯನವರೇ ನೀವು ಅಮೇಲೆ ಪಂಚೆ ಕಳಚಿಕೊಂಡು ಓಡಬೇಕಾಗುತ್ತದೆ. ಮಹಿಳೆಯರು ಪೊರಕೆ ಎತ್ತಿಕೊಂಡು ಓಡಿಸಿಕೊಂಡು ಬರುತ್ತಾರೆ ಎಂದರು.
ಕಾಂಗ್ರೆಸ್ ಗ್ಯಾರಂಟಿಯಿಂದ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಯ್ತು ಎಂದು ಹೇಳಿದ ಮಾಜಿ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ನವರು ಘೋಷಿಸಿರುವ ಗ್ಯಾರಂಟಿ ಜಾರಿ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ನವರು ಅಧಿಕಾರ ಬಿಟ್ಟು ತೊಲಗಬೇಕು. ಕೇಂದ್ರ ನೀಡುವ 5 ಕೆಜಿ ಅಕ್ಕಿ ಸೇರಿ 15 ಕೆಜಿ ಅಕ್ಕಿ ಕೊಡಬೇಕು. ಅಧಿಕಾರಕ್ಕಾಗಿ ಗ್ಯಾರಂಟಿ ಘೋಷಿಸಿದ್ರಲ್ಲಾ ಸಿದ್ದರಾಮಯ್ಯನವರೇ ಈಗ ಪ್ರಧಾನಿ ನರೇಂದ್ರ ಮೋದಿ ಕಡೆ ಬೊಟ್ಟು ತೋರಿಸುತ್ತೀರಲ್ಲಾ? ನಮ್ಮ ಶಾಸಕರು ಅಧಿವೇಶನ ನಡೆಸಲು ಬಿಡದೆ ಹೋರಾಡಬೇಕು, ಅಧಿವೇಶನ ಆರಂಭದ ದಿನದಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಬೇಕು. ಈ ಸರ್ಕಾರದ ಮೂಗು ಹಿಂಡುವ ಕೆಲಸವನ್ನು ನಾವು ಮಾಡೋಣ. ಉಪವಾಸ ಸತ್ಯಾಗ್ರಹ ಬೇಡ, ಊಟ ಮಾಡಿ ಪ್ರತಿಭಟನೆ ಮಾಡೋಣ ಎಂದರು.
ಕಲಬುರಗಿ: ಜಿಲ್ಲೆಗೆ ಮುಂಗಾರು ಮಳೆ ಪ್ರವೇಶಿಸಿದ್ದು, ಜೇವರ್ಗಿ ಪಟ್ಟಣದಲ್ಲಿ ಕಳೆದೊಂದು ಗಂಟೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬಿಸಿಲಿನ ತಾಪದಿಂದ ತತ್ತರಿಸಿದ್ದ ಜೇವರ್ಗಿ ಪಟ್ಟಣಕ್ಕೆ ಮಳೆರಾಯ ತಂಪೆರೆದಿದ್ದಾನೆ. ಪಟ್ಟಣದ ಕೆಲವಡೇ ರಸ್ತೆಗಳು ಜಲಾವೃತಗೊಂಡಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆಯಾಗುತ್ತಿದ್ದು, ಬೈತ್‌ಕೋಲ್ ಗುಡ್ಡ ಕುಸಿದು ಮಳೆ ನೀರು ಮನೆಗಳಿಗೆ ನುಗ್ಗಿದೆ. ಸದ್ಯ ಅಧಿಕಾರಿಗಳು ಜೆಸಿಬಿ ಮೂಲಕ ರಸ್ತೆ ಮೇಲಿನ ಕಲ್ಲುಗಳನ್ನು ತೆರವುಗೊಳಿಸಲಾಗುತ್ತಿದೆ. ಅಲ್ಲದೆ, ಗುಡ್ಡ ಕಡಿದು ನೆವಿ ರಸ್ತೆ ಮಾಡುತ್ತಿರುವ ಹಿನ್ನಲೆ ಮನೆಗಳಿಗೆ ನೀರು ನುಗ್ಗಿದೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಲೋಕಸಭಾ ಚುನಾವಣಾ ತಯಾರಿಗಾಗಿ ಬಿಜೆಪಿ ನಾಯಕರಿಂದ 7 ತಂಡಗಳ ಪ್ರವಾಸ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ತಂಡದಿಂದ ಇಂದು ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಅರಮನೆ ಮೈದಾನದಲ್ಲಿ ಬೆಂಗಳೂರು ಕೇಂದ್ರ ಜಿಲ್ಲೆಯ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ. ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ಪಿ.ಸಿ. ಮೋಹನ್, ಶಾಸಕ ಮುನಿರತ್ನ, ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕ ಡಾ. ಅಶ್ವಥ್ ನಾರಾಯಣ, ಎಂಎಲ್‌ಸಿಗಳಾದ ಎನ್. ರವಿಕುಮಾರ್, ಗೋಪಿನಾಥ್ ರೆಡ್ಡಿ ಉಪಸ್ಥಿತರಿದ್ದಾರೆ.
ಬೆಂಗಳೂರು: ತಕ್ಷಣ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರದವರಿಗೆ ಸೂಚಿಸಿದ್ದೇವೆ ಎಂದು ಸಚಿವ ಕೆಹೆಚ್ ಮುನಿಯಪ್ಪ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆ ಸಂಬಂಧ ಸಭೆ ಬಳಿಕ ಮಾತನಾಡಿದ ಅವರು, ಅಕ್ಕಿ ದರ ನಿಗದಿ ಮಾಡುವುದು ಆ ಮೂರು ಏಜೆನ್ಸಿಗಳಿಗೆ ಬಿಟ್ಟಿದ್ದು. ಒಂದು ವಾರದೊಳಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಟ್ರೇಡರ್ಸ್, ಮಿಲ್ ಮಾಲೀಕರ ಜೊತೆ ಚರ್ಚಿಸಿ ತೀರ್ಮಾನಿಸುತ್ತಾರೆ. ಈ ಹಿಂದೆಯೂ ರಾಜ್ಯದಲ್ಲಿ ಇದೇ ಸಂಸ್ಥೆಗಳಿಂದ ಅಕ್ಕಿ ತರಿಸಲಾಗಿತ್ತು. ಸಂಸ್ಥೆಗಳಿಂದ ಪೂರೈಕೆ ಬಳಿಕ ಸರ್ಕಾರ ಅಕ್ಕಿ ಸರಬರಾಜು ಮಾಡುತ್ತದೆ ಎಂದರು.
ಹಾಸನ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಆರ್ ಅಶೋಕ್, ಹಾಸನದಲ್ಲಿ ಒಂದು ಶಾಸಕ ಸ್ಥಾನ ಇತ್ತು ಈಗ ಎರಡಾಗಿದೆ. ಎರಡು ನಾಲ್ಕು ಆಗಬೇಕು, ನಾಲ್ಕು ಆರು ಆಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತ ಶತ್ರು ಆಗಿದ್ದವರು. ದೇಶದ ಹಳ್ಳಿ ಹಾಗೂ ನಗರವನ್ನು ಜೋಡಣೆ ಮಾಡಿದವರು ಪ್ರದಾನಿ ಆಗಿದ್ದ ವಾಜಪೇಯಿ. ಕಾಂಗ್ರೆಸ್ ಅದಿಕಾರದಲ್ಲಿ ಇದ್ದಾಗ ನಮ್ಮದು ಹಾವಾಡಿಗರ ದೇಶವಾಗಿತ್ತು. ಈಗ ನಾವು ಇಡೀ ಜಗತ್ತನ್ನೇ ಆಡಿಸುತ್ತಿದ್ದೇವೆ. ಮೋದಿಯವರು ಇಡೀ ಜಗತ್ತನ್ನೇ ಆಡಿಸುತ್ತಿದ್ದಾರೆ. ಮೋದಿಯವರನ್ನು ಪ್ರಪಂಚ ಕೊಂಡಾಡುತ್ತಿದೆ. ನಮ್ಮ ಕೇಂದ್ರ ಸರ್ಕಾರ ಮಾಡಿರುವ ಕೆಲಸವನ್ನು ಜನರಿಗೆ ಹೇಳಬೇಕಿದೆ ಎಂದರು.
ಚಿಕ್ಕಮಗಳೂರು: ರಾಜ್ಯಾಧ್ಯಕ್ಷ ಸ್ಥಾನದ ಹಗ್ಗ-ಜಗ್ಗಾಟದ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಿರಾಕಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಲ್ಲ. ನಾನು ಯಾವುದೇ ರೇಸ್ನಲ್ಲಿ ಇಲ್ಲ. ನಾನು ಈಗಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಕಾರ್ಯಕರ್ತ ಅನ್ನೋದನ್ನ ಯಾವತ್ತೂ, ಯಾರು ಕಿತ್ತುಕೊಳ್ಳಲು ಆಗುವುದಿಲ್ಲ. ಪಕ್ಷ ನನಗೆ ಎಕ್ಸ್ ಪೀರಿಯನ್ಸ್, ಎಕ್ಸ್ ಪೋಸ್ ಎರಡಕ್ಕೂ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ನಾನು ಯಾವ ಹುದ್ದೆಯ ಆಕಾಂಕ್ಷಿಯಲ್ಲ ಎಂದರು.
ಪತ್ನಿ ಆರೋಗ್ಯ ವಿಚಾರಿಸಲು ಮಣಿಪಾಲ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಅವರು ತೆರಳಿದ್ದಾರೆ. ಅನಾರೋಗ್ಯ ಹಿನ್ನೆಲೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋಲಾರ: ಕೇಂದ್ರ ಏನೇ ಅಡೆತಡೆ ಮಾಡಿದರೂ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಕಂದಾಯ ಖಾತೆ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಕೇಂದ್ರ ಸರ್ಕಾರ ನಮ್ಮ ದಾರಿಗೆ ಬೆಟ್ಟವನ್ನೇ ಅಡ್ಡ ತಂದು ಕೂರಿಸಿದರೆ ಬೆಟ್ಟವನ್ನು ಹತ್ತಿ ಜನರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ. ಜನರಿಗೆ ಕೊಟ್ಟ ಮಾತಿನಂತೆ ಅಕ್ಕಿಯನ್ನು ಕೊಟ್ಟೇ ತೀರುತ್ತೇವೆ ಎಂದರು.
ಬೆಂಗಳೂರು: ತೆಲಂಗಾಣ ಸರ್ಕಾರ ಕರ್ನಾಟಕಕ್ಕೆ ಭತ್ತ ಕೊಡುವುದಾಗಿ ಹೇಳಿದ್ದಾರೆ. ಛತ್ತೀಸ್ಗಢ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡುವುದಾಗಿ ಹೇಳಿದೆ. 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಪಂಜಾಬ್ನವರು ನವೆಂಬರ್ನಿಂದ ಅಕ್ಕಿ ಕೊಡುತ್ತೇವೆ ಅಂತ ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿ: ಬಿಜೆಪಿ ಸ್ವಯಂಕೃತ ಅಪರಾಧವೇ ಚುನಾವಣೆಯಲ್ಲಿ ಸೋಲಿಗೆ ಕಾರಣ. ಬಿಜೆಪಿಯ ಅಡಿಪಾಯವೇ ಡಿಸ್ಟರ್ಬ್ ಆಗಿ ಕುಸಿದುಹೋಗುತ್ತಿದೆ. ಇದು ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಂಗಳೂರು: ಷಡ್ಯಂತರದಿಂದ ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲ. 25-26 ಲೋಕಸಭಾ ಸ್ಥಾನಗೆಲ್ಲುವ ಮೂಲಕ ಕೊಡುಗೆ ಕೊಡಬೇಕಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ 15 ಕೆಜಿ ಅಕ್ಕಿ ಕೊಡಬೇಕು. ನಿರುದ್ಯೋಗಿ ಪದವೀಧರ ಬ್ಯಾಂಕ್ ಖಾತೆಗೆ 3,000 ಹಣ ಕೊಡಬೇಕು. ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ಗೆ ನಿರ್ಧಾರ ವಿಚಾರವಾಗಿ ಮಾತನಾಡಿದ ಅವರು ಇದಕ್ಕೆ ಅವಕಾಶ ಕೊಡದಂತೆ ನಾವು ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ. ಅಧಿವೇಶನದ ಆರಂಭದ ದಿನದಿಂದ ನಾನು ಸತ್ಯಾಗ್ರಹ ಮಾಡುತ್ತೇನೆ. ಅಧಿವೇಶನ ಮುಗಿಯೋವರೆಗೂ ಕಾರ್ಯಕರ್ತರ ಜೊತೆ ಸತ್ಯಾಗ್ರಹ ಮಾಡುತ್ತೇನೆ. ವಿಧಾನಸಭೆಯಲ್ಲಿ ನಮ್ಮ ಪಕ್ಷದ ಶಾಸಕರು ಹೋರಾಟ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮೈಸೂರು: ಗೃಹಲಕ್ಷ್ಮೀ ಯೋಜನೆ ಜಾರಿ ತಡವಾಗುತ್ತಿಲ್ಲ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಆ್ಯಪ್ ತಯಾರಾಗಿದೆ. ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ. ಜೂ.27ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಾವತಿಸಬಾರದು. ಆಗಸ್ಟ್ 16 ಅಥವಾ 17ರಂದು ಮನೆ ಯಜಮಾನಿ ಖಾತೆಗೆ ಹಣ ತಲುಪುತ್ತದೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿ: ತೆಲಂಗಾಣ ಶಾಸಕ ರೋಹಿತ್ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಬಳಿ ನಡೆದಿದೆ. ಶಾಸಕ ರೋಹಿತ್ ರೆಡ್ಡಿ ಮಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದರು. ವೇಗವಾಗಿ ಸಾಗುತ್ತಿದ್ದಾಗ ಟಯರ್ ಸ್ಫೋಟಗೊಂಡು ಮರಕ್ಕೆ ಡಿಕ್ಕಿಯಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ಕಾರ್ಕಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಬಿಎಂಪಿ ಚುನಾವಣೆ ಮಾಡುತ್ತೇವೆ. ಚುನಾವಣೆ ಮಾಡಲೇಬೇಕು, ಯಾರೂ ತಪ್ಪಿಸಿಕೊಳ್ಳಲು ಆಗಲ್ಲ. ಚುನಾವಣೆ ವಿಚಾರವಾಗಿ ಕೋರ್ಟ್ ನಿರ್ದೇಶನ ಪಾಲಿಸಬೇಕು.
ವಾರ್ಡ್ ಎಷ್ಟಿರಲಿದೆ ಎಂದು ಈಗಲೇ ಹೇಳಲು ಆಗಲ್ಲ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ಅನ್ನಭಾಗ್ಯ ಯೋಜನೆ ಕುರಿತು ಇಂದು (ಜೂ.24) ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ನಡೆಯುವ ಸಭೆಯಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಸಿಎಸ್ ವಂದಿತಾ ಶರ್ಮಾ ಆಹಾರ ಇಲಾಖೆ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ನಿರಾಕರಣೆ ಹಿನ್ನೆಲೆ ಪರ್ಯಾಯ ವ್ಯವಸ್ಥೆ ಬಗ್ಗೆ ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ಬೇರೆ ಯಾವ ರಾಜ್ಯದಿಂದ ಎಷ್ಟು ಪ್ರಮಾಣದಲ್ಲಿ ಅಕ್ಕಿ ಸಿಗಲಿದೆ? ಯಾವ ದರದಲ್ಲಿ ಅಕ್ಕಿ ಲಭ್ಯವಿದೆ ಎಂಬುವುದರ ವಿಚಾರವಾಗಿ ಚರ್ಚೆ ನಡೆಯಲಿದೆ.
ಹುಬ್ಬಳ್ಳಿ: ಕೇಂದ್ರ ಸರ್ಕರ ರಾಜ್ಯಕ್ಕೆ ಅಕ್ಕಿ ಕೊಡದೆ ಇರುವುದು ಅಕ್ಷಮ್ಯ ಅಪರಾಧ. ಮೊದಲು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೇವೆ ಅಂದಿದ್ದರು. ಇದೀಗ ರಾಜಕೀಯ ಕಾರಣಕ್ಕೆ ಅಕ್ಕಿ ಕೊಡತಿಲ್ಲ. ಕೇಂದ್ರದ ನಾಯಕರು ಅಕ್ಕಿ ಕೊಡಸಲಿ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸಹಕಾರ ಕೊಡಬೇಕು. ಅಕ್ಕಿ ಕೊಡಲ್ಲ ಅನ್ನೋದು ಒಳ್ಳೆ ನಡವಳಿಕೆ ಅಲ್ಲ. ಅಕ್ಕಿ ಕೊಟ್ಟರೇ ಕಾಂಗ್ರೆಸ್ಗೆ ಲಾಭ ಆಗತ್ತೆ ಎಂದು ಬೇರೆ ಬೇರೆ ನೆಪ ಒಡ್ಡತಿದೆ. ಇದ ಅಕ್ಷಮ್ಯ ಅಪರಾಧ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಳಗಾವಿ: ಮುಂಗಾರು ಕೈಗೊಟ್ಟ ಹಿನ್ನೆಲೆ ಘಟಪ್ರಭಾ ನದಿ ಸಂಪೂರ್ಣವಾಗಿ ಬತ್ತಿದೆ. ಘಟಪ್ರಭಾ ನದಿಯಲ್ಲಿ ನೀರಿಲ್ಲದಿದ್ದರಿಂದ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಜಿಲ್ಲೆಯ ಗೋಕಾಕ್ ತಾಲೂಕಿನ ನಲ್ಲಾನಟ್ಟಿ, ಬಳೋಬಾಳ, ಬೀರನಗಟ್ಟಿ ಗ್ರಾಮಗಳ ಬಳಿ ಮೀನುಗಳು ಸತ್ತು ಬಿದ್ದಿವೆ.
ಮಂಡ್ಯ: ಮಂಡ್ಯ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದ್ದು, ಕಳೆದ ವಾರ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ನಿಲ್ದಾಣ ಇದೀಗ ಖಾಲಿ ಖಾಲಿಯಾಗಿದೆ. ಉಚಿತ ಬಸ್ ಪ್ರಯಾಣ ಹಿನ್ನೆಲೆ ಕಳೆದವಾರ ಮಹಿಳೆಯರು ಪ್ರವಾಸಿತಾಣ, ಪುಣ್ಯಕ್ಷೇತ್ರಗಳಿಗೆ ತೆರಳುತ್ತಿದ್ದರು. ಸೀಟು ಹಿಡಿಯಲು ಬಸ್ ಡೋರ್ ಬಳಿ ನೂಕಾಟ ತಳ್ಳಾಟ ಆಗಿತ್ತು. ಶಕ್ತಿಯೋಜನೆ ಜಾರಿಯಾಗಿ ಎರಡೇ ವಾರಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ಮಹಿಳಾ ಪ್ರಯಾಣಿಕರಿಲ್ಲದೆ ಮಂಡ್ಯ ಬಸ್ ನಿಲ್ದಾಣ ಬಣಗುಡುತ್ತಿದೆ.
ಮಂಡ್ಯ: ದಿನೇದಿನೇ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ನಿನ್ನೆ (ಜೂ.23) 78 ಅಡಿ ಇದ್ದ ಜಲಾಶಯದ ನೀರಿನಮಟ್ಟ ಇಂದು (ಜೂ.24) 77 ಅಡಿಗೆ ಬಂದು ತಲುಪಿದೆ. ನೀರಿನ ಮಟ್ಟ ಕುಸಿತ ಹಿನ್ನೆಲೆ
ಬೆಳೆಗಳಿಗೆ ನೀರಿಲ್ಲ. ಜು.2ನೇ ವಾರವರೆಗೆ ಕುಡಿಯಲು ಬಳಕೆಯಾಗುವಷ್ಟು ಮಾತ್ರ ನೀರು ಇದೆ. 124 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 77.005 ಅಡಿಯಷ್ಟೇ ನೀರು ಇದೆ. ಸದ್ಯ 514 ಕ್ಯೂಸೆಕ್ ಒಳಹರಿವು, 834 ಕ್ಯೂಸೆಕ್ ಹೊರ ಹರಿವು.
ರಾಮನಗರ: ಬೆಂಗಳೂರು-ಮೈಸೂರು ಹೈವೇ ಟೋಲ್ ದರ ಹೆಚ್ಚಳ ಖಂಡಿಸಿ ಇಂದು (ಜೂ.24) ಕನ್ನಡಪರ ಸಂಘಟನೆಗಳು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲು ನಿರ್ಧರಿಸಿವೆ. ಇಂದು ಬೆಳಗ್ಗೆ 10.30ರಿಂದ ಸಂಜೆ 6 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ.
ಬೀದರ್: ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ನಿಂಬೂರು ಸರಕಾರಿ ಶಾಲೆ ನಿಂಬೂರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
Published On - 8:12 am, Sat, 24 June 23