ಕಾಂಗ್ರೆಸ್ನ ಶಕ್ತಿ ಯೋಜನೆಯೂ ಮಹಿಳೆಯರಿಗೆ ವರದಾನವಾಗಿದೆ. ವೀಕೆಂಡ್ ಹಿನ್ನೆಲೆ ಮಹಿಳೆಯರು ಗುಂಪು ಗುಂಪಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದು ಬಹುತೇಕ ಸರ್ಕಾರಿ ಬಸ್ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ಜೊತೆಗೆ ಇಂದಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮುಂದಿನ 4 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ
ವಿಜಯಪುರ: ನೃತ್ಯ ಮಾಡುತ್ತಿದ್ದ ಮಹಿಳೆಯ ತಲೆಯ ಮೇಲಿಂದ ಮಡಿಕೆಗಳು ಬಿದ್ದ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ನಡೆದ ದುರ್ಗಾದೇವಿ ಜಾತ್ರಾ ಕಾರ್ಯಕ್ರಮದಲ್ಲಿ ನಡೆದಿದೆ. ದುರ್ಗಾದೇವಿ ಜಾತ್ರೆಯ ಅಂಗವಾಗಿ ನಡೆಯುತ್ತಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಹಿಳೆ ತನ್ನ ತಲೆಯ ಮೇಲೆ ಒಂದರ ಮೇಲೊಂದರಂತೆ 10 ಕ್ಕೂ ಅಧಿಕ ಮಡಿಕೆಗಳನ್ನು ಇಟ್ಟುಕೊಂಡು ಗ್ಲಾಸ್ ಮೇಲೆ ನಿಂತು ನೃತ್ಯ ಮಾಡುತ್ತಿದ್ದಾಗ ಮಂಟಪದ ಮೇಲ್ಬಾಗ ತಗುಲಿ ಏಕಾಏಕಿ ಮಡಿಕೆಗಳು ಕೆಳಗೆ ಬಿದ್ದಿವೆ. ಹೀಗೆ ಬಿದ್ದ ಮಡಿಕೆಗಳು ಮಹಾರಾಷ್ಟ್ರದ ಆಹಾರ ಸಚಿವ ಸಂಜಯ್ ಬಾವು ರಾಠೋಡ್ ಪಕ್ಕದಲ್ಲೇ ಬಿದ್ದಿವೆ.
ಸಿಎಂ ಸಿದ್ದರಾಮಯ್ಯ ಅವರು ಆರ್ಚ್ ಬಿಷಪ್ ಅವರನ್ನು ಭೇಟಿಯಾದರು. ಮಿಲ್ಲರ್ಸ್ ರಸ್ತೆಯಲ್ಲಿರುವ ಡಾ.ಪೀಟರ್ ಮಚಾಡೋ ನಿವಾಸದಲ್ಲಿ ಆರ್ಚ್ ಬಿಷಪ್ ರೆವರೆಂಡ್ ಡಾ.ಪೀಟರ್ ಮಚಾಡೋ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಸಚಿವರಾದ ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್ ಖಾನ್ ಜೊತೆಗಿದ್ದರು.
ಸರ್ಕಾರಿ ಬಸ್ ಹತ್ತುವಾಗ ಮಹಿಳೆಯರ ನಡುವೆ ಜಗಳ ನಡೆದ ಘಟನೆ ಹಾವೇರಿ ಜಿಲ್ಲೆಯ ಗುತ್ತಲ ಬಸ್ ನಿಲ್ದಾಣದಲ್ಲಿ ನಡೆದಿದೆ. ರಾಣೇಬೆನ್ನೂರ ಮಾರ್ಗದ ಬಸ್ ತಡವಾಗಿ ಆಗಮಿಸಿದ ಹಿನ್ನೆಲೆ ಬಸ್ ಹತ್ತುವಾಗ ಗುತ್ತಲನಿಂದ ಮಾಗಳಕ್ಕೆ ತೆರಳುವ ಮಹಿಳೆಯರ ಮಧ್ಯೆ ಗಲಾಟೆ ನಡೆದಿದೆ. ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ನಡೆದಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪುರುಷರು, ಸಮಾಧಾನ ಮಾಡಿದರು.
ಕಾರವಾರ: ಫ್ರೀ ಬಸ್‌ನಲ್ಲಿ ಧಾರ್ಮಿಕ ಕ್ಷೇತ್ರಕ್ಕೆ ಬಂದ ಮಹಿಳೆಯರು ವಾಪಸ್ ಹೋಗಲು ಬಸ್ ಇಲ್ಲದೆ ಪರದಾಟ ನಡೆಸುವಂತಾಯಿತು. ವೀಕೆಂಡ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಕ್ಕೆ ಬಂದ ಹುಬ್ಬಳ್ಳಿ, ಹಾವೇರಿ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಯ 40ಕ್ಕೂ ಹೆಚ್ಚು ಮಹಿಳೆಯರು ಹೊನ್ನಾವರ ಬಸ್ ನಿಲ್ದಾಣದಲ್ಲಿ ಬಸ್ ಸಮಸ್ಯೆ ಎದುರಿಸಬೇಕಾಯಿತು. ವಿವಿಧ ಭಾಗಕ್ಕೆ ತೆರಳುವ ವಾಯುವ್ಯ ಸಾರಿಗೆ ಬಸ್ ರಾತ್ರಿ 7 ಕ್ಕೆ ಸಂಚಾರ ಬಂದ್ ಆಗಲಿದ್ದು, ಮಾಹಿತಿ ತಿಳಿಯದೇ ಪ್ರವಾಸಕ್ಕೆ ಬಂದು ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಅಲ್ಲದೆ, ಹೊನ್ನಾವರದಿಂದ ಶಿವಮೊಗ್ಗ ಜಿಲ್ಲೆಗೆ ಬಸ್ ಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಗದಗ: ಕೇಂದ್ರ- ರಾಜ್ಯ ಸರ್ಕಾರಗಳ ಅಕ್ಕಿ ಜಟಾಪಟಿ ವಿಚಾರವಾಗಿ ಮಾತನಾಡಿದ ಸಚಿವ ಹೆಚ್ಕೆ ಪಾಟೀಲ್, ಇದು ಜನ ದ್ರೋಹ ನಿಲುವು ಎಂದರು. ಬಡವರಿಗೆ ಅಕ್ಕಿ ವಿತರಣೆ ಮಾಡುವವರಿಗೆ ಕೊಡಲ್ಲ ಅಂತಾರೆ. ಈ ರೀತಿ ರಾಜ್ಯ ಸರ್ಕಾರಗಳಿಗೆ ತಾರತಮ್ಯ ಮಾಡುವಂತಿಲ್ಲ. ಕೇಂದ್ರ ಸರ್ಕಾರ ಈ ಜನ ದ್ರೋಹಿ ನಿಲುವು ಬದಲಿಸಿಕೊಳ್ಳಬೇಕು. ಇಲ್ಲವೆಂದರೆ ಜನರು ಆಕ್ರೋಶಕ್ಕೆ ಕಾರಣವಾಗುತ್ತೀರಿ. ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಕೇಂದ್ರ ಮಾಡುತ್ತಿದೆ. ಈ ಇಕ್ಕಟ್ಟಿನಿಂದ ಹೇಗೆ ಜನರ ಆಶೀರ್ವಾದದಿಂದ ಪಾರಾಗಬೇಕು ಅಂತ ನಮಗೆ ಗೋತ್ತು. ಯೋಜನೆ ಜಾರಿ ಮಾಡೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅಕ್ಕಿ ಪಡೆಯಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಅಧಿಕಾರಿಗಳು ಕೂಡ ಕೆಲಸ ಮಾಡುತ್ತಿದ್ದಾರೆ ಎಂದರು.
ಬೆಂಗಳೂರು: ಅರೇಬಿಕ್ ಕಾಲೇಜಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿದರು. ಇದೇ ವೇಳೆ ಸಚಿವರಾದ ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಉಪಸ್ಥಿತರಿದ್ದರು.
ಕೊಪ್ಪಳ: ಜಿಲ್ಲೆಯ ಹಲವೆಡೆ ಮಧ್ಯಾಹ್ನದಿಂದ ಧಾರಾಕಾರ ಮಳೆಯಾಗಿದ್ದು, ಕೊಪ್ಪಳ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿದೆ.
ಅನ್ನಭಾಗ್ಯ ಅಕ್ಕಿ ಖರೀದಿ ಸಂಬಂಧ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಅಕ್ಕಿ ವಿಚಾರಕ್ಕೆ ಬಿಜೆಪಿಯವರು ಧರಣಿ ಮಾಡುತ್ತೇವೆಂದು ಹೇಳುತ್ತಿದ್ದಾರೆ, ಇದು ಬಿಜೆಪಿಯವರಿಗೆ ಸಂಬಂಧಪಟ್ಟ ವಿಚಾರವಲ್ಲ. ಪ್ರಧಾನಿ ಮೋದಿ 15 ಲಕ್ಷ ಕೊಡುತ್ತೇವೆ ಅಂತ ಹೇಳಿದ್ದರು, ಈವರೆಗೆ ಕೊಟ್ಟಿಲ್ಲ. ಬಿಜೆಪಿಯವರು ನೀಡಿದ್ದ 10 ಭರವಸೆಗಳು ಹಾಗೆಯೇ ಇವೆ. ಕಾಲಾವಕಾಶ ಬೇಕು ಎಲ್ಲಾವನ್ನು ಸರಿ ಮಾಡುತ್ತೇವೆ ಎಂದರು.
ದಾವಣಗೆರೆ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಕುರ್ಚಿ ವಾರ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟ್ ಬೀಸಿದ್ದಾರೆ. ತಲಾ ಎರಡೂವರೆ ವರ್ಷ ಅಂತಾ ಇದುವರೆಗೂ ಯಾರೂ ಹೇಳಿಲ್ಲ. ಹೀಗಾಗಿ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ಅದು ಪಕ್ಷದ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಹಾಗೂ ಜನ ಬಿಲ್ ಕಟ್ಟದ ವಿಚಾರವಾಗಿ ಕಿವಿಮಾತು ಹೇಳುವ ಮೂಲಕ ಸರ್ಕಾರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಪೂರೈಕೆ ಆಗುವುದಿಲ್ಲ. ರಾಜ್ಯದಲ್ಲಿ ಮಳೆ ಇಲ್ಲ, ಬರ ಬಂದಿದೆ. ಜನರಿಗೆ ಕುಡಿಯುವ ನೀರು, ಕೃಷಿಗೆ ನೀರು ಇಲ್ಲದೇ ಸಮಸ್ಯೆ ಆಗಿದೆ. ಕುಡಿಯುವ ನೀರು ಸರಬರಾಜು ಆಗಲು ವಿದ್ಯುತ್ ಬೇಕು. ಕರೆಂಟ್ ನೀಡದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಆಗುತ್ತದೆ. ಹೈಡ್ರೋ ಎಲೆಕ್ಟ್ರಿಕ್ ಪವರ್ ಕೊರತೆ ಇದೆ. ವಿದ್ಯುತ್ ಇಲಾಖೆಯ ಎಲ್ಲಾ ನಿಗಮಗಳಿಗೆ ಹಣ ಬಿಡುಗಡೆ ಮಾಡಬೇಕು. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ವಿದ್ಯುತ್ ಶಕ್ತಿಯ ಕ್ಷಾಮ ಎದುರಾಗಲಿದೆ ಎಂದು ಶಿಗ್ಗಾಂವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಹೇಳಿದರು.
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಚಿಕ್ಕಬಳ್ಳಾಪುರ ನಗರದ ಬಸ್ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿದೆ. ಮಕ್ಕಳನ್ನು ಎತ್ತಿಕೊಂಡು ಬಸ್ ಹತ್ತಲು ಮಹಿಳೆಯರು ಹರಸಾಹಸ ಪಡುತ್ತಿದ್ದಾರೆ. ಕೆಲವು ಮಹಿಳೆಯರು ಬಸ್ ಕಿಟಕಿಗಳಿಂದ ಹತ್ತುತ್ತಿದ್ದಾರೆ. ಬಸ್ಗಳು ಶೇ.80ರಷ್ಟು ಮಹಿಳೆಯರಿಂದ ತುಂಬಿ ತುಳುಕುತ್ತಿವೆ.
ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದವರು ಮುಖ್ಯಮಂತ್ರಿ ಆಗಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಪ್ರಸನ್ನಾನಂದಪುರಿಶ್ರೀ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಮಠದಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಮುಖ್ಯಮಂತ್ರಿ ಆಗಲು ಶ್ರಮಿಸಬೇಕಾಗಿದೆ. ಹಿಂದಿನ ಸರ್ಕಾರ ಎಸ್ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿದೆ. ಎಸ್ಟಿ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್ನಲ್ಲಿ ಸೇರಿಸಬೇಕು. ಈ ಬಗ್ಗೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆಯಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು ಎಂದರು.
ಮುಂದೆ ಸಿಎಂ ಆಗುವ ಅರ್ಹತೆ ಸತೀಶ್ ಜಾರಕಿಹೊಳಿಗೆ ಇದೆ ಎಂದು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದವರು ಒಮ್ಮೆ ಮುಖ್ಯಮಂತ್ರಿ ಆಗಬೇಕು. ಈಗಲೇ ಡಿಸಿಎಂ ಸ್ಥಾನ ಕೇಳುವ ಪ್ಲ್ಯಾನ್ ಇತ್ತು, ಆದರೆ ಆಗಿಲ್ಲ. ನಾನು ಮಾತ್ರ ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಬಿಜೆಪಿ ಪರ ನಟ ಸುದೀಪ್ ಪ್ರಚಾರ ಮಾಡಿದ್ದಕ್ಕೆ ಬೇಸರವಾಯ್ತು. ST ಮೀಸಲು ಕ್ಷೇತ್ರ ಬಿಟ್ಟು ಬೇರೆ ಕಡೆ ಪ್ರಚಾರ ಮಾಡಬೇಕಿತ್ತು. ನಮ್ಮ ಸಮಾಜದವರು ಎಂದು ಅಭಿಮಾನದಿಂದ ನೋಡುತ್ತೇವೆ ಎಂದರು.
ಗದಗ: ಮಹಿಳಾ ಮಣಿಗಳಿಂದಲೇ ಸರ್ಕಾರಿ ಬಸ್ಗಳು ತುಂಬಿ ತುಳುಕ್ಕುತ್ತಿವೆ. ಬಸ್ ಏರಲು ಮುಗಿಬಿದ್ದ ಜನರನ್ನು ನೋಡಿ ಬಾಲಕ ಬಸ್ ಏರಿಲು ನಿರಾಕರಣೆ ಮಾಡಿ ಕಣ್ಣೀರು ಹಾಕುತ್ತಿದ್ದಾನೆ. ನೂಕು ನುಗ್ಗಲಿನಲ್ಲಿ ಬರಲು ನಾ ಒಲ್ಲೆ ಎಂದು ಹಠ ಹಿಡಿದ ಬಾಲಕನನ್ನು ಸಮಾಧಾನ ಮಾಡಲು ತಾಯಿ ಹರಸಾಹಸ ಪಡುವಂತಾಯಿತು.
ಮೋದಿ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆಜಿ ಅಕ್ಕಿ ನೀಡುತ್ತಿದೆ. ಕಾಂಗ್ರೆಸ್ ಕೊಟ್ಟ ಭರವಸೆಯಂತೆ 10 ಕೆಜಿ ಅಲ್ಲ 15 ಕೆಜಿ ಅಕ್ಕಿ ನೀಡಲಿ ಎಂದು ಶಿವಮೊಗ್ಗದಲ್ಲಿ ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನೀವು ಕೊಟ್ಟ ಭರವಸೆಯನ್ನು ಮೊದಲು ಈಡೇರಿಸಿ. ರಾಜ್ಯದಲ್ಲಿ ಸಾಕಷ್ಟು ಗೋದಿ, ರಾಗಿ, ಭತ್ತ ಬೆಳೆಯುತ್ತಾರೆ. ಕಾಂಗ್ರೆಸ್ ನಾಯಕರಿಗೆ ಬೇರೆ ರಾಜ್ಯದ ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಅಲ್ಲಿಂದ ಖರೀದಿಸುತ್ತಾರೆ ಎಂದರು. ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ ಅಂತ ಹೇಳಿದ್ದಾರೆ. ಯಾವುದೇ ತನಿಖೆಯಾದರೂ ಮಾಡಿಸಿ, ತಪ್ಪಾಗಿದ್ದರೆ ಜೈಲಿಗೆ ಕಳಿಸಿ ಎಂದರು. ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಉಪದೇಶ ಮಾಡುವಷ್ಟು ದೊಡ್ಡವನಲ್ಲ. ಪ್ರತಾಪ್ ಸಿಂಹ ಸೋಲಿಲ್ಲದ ಸರದಾರರು, ವಾಗ್ಮಿಗಳು. ನಾನು ಸೇರಿ ನಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು ಎಂದರು.
ಹೆಚ್ಚುವರಿ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೊದಲು ಭಾರತೀಯ ಆಹಾರ ನಿಗಮ ಅಕ್ಕಿ ನೀಡುವುದಾಗಿ ಹೇಳಿತ್ತು. ಜೂನ್ 12ರಂದು ಎಫ್ಸಿಐ ಕೂಡ ಪತ್ರ ಬರೆದು ಅಕ್ಕಿ ನೀಡಲಾಗಲ್ಲ ಎಂದು ತಿಳಿಸಿದೆ. ಬಡವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಯಾಕೆ? ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯ ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ಅಕ್ಕಿ ಕೊಡಿಸಲಿ ಎಂದರು.
ಧಾರವಾಡ: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಬೆಳಗಾವಿ ಜಿಲ್ಲೆ ಸವದತ್ತಿ ಸೇರಿದಂತೆ ಉಳವಿ ಚೆನ್ನಬಸವೇಶ್ವರ ದರ್ಶನಕ್ಕೆ ಭಕ್ತರು ಹೊರಟಿದ್ದಾರೆ. ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾದು ನಿಂತಿದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾದು ನಿಂತಿದ್ದಾರೆ. ಪ್ರತಿ ಬಸ್ ಮಹಿಳೆಯರಿಂದಲೇ ಫುಲ್ ರಶ್ ಆಗಿದೆ. ಪುರುಷರ ಸಂಖ್ಯೆ ಕಡಿಮೆಯಾಗಿದೆ. ಮಹಿಳೆಯರನ್ನು ನಿಯಂತ್ರಣ ಮಾಡಲು ಹೋಂ ಗಾರ್ಡ್ಗಳು ಹರಸಾಹಸ ಪಡುತ್ತಿದ್ದು, ಕಂಡಕ್ಟರ್ ಜೊತೆ ಪ್ರಯಾಣಿಕರು ವಾಗ್ವಾದವೂ ನಡೆಸುತ್ತಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಒಳ ಜಗಳ ಹೊರ ಬರುತ್ತಿದೆ. ಗ್ಯಾರಂಟಿಯಾಗಿ ಹೇಳ್ತೇನೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ. ಕರ್ನಾಟಕದಲ್ಲಿ ಅವರಿಬ್ಬರಿಗಿಂತ ಸಿದ್ದರಾಮಯ್ಯ ಪವರ್ ಫುಲ್. ಅಧಿಕಾರ ಹಂಚಿಕೆ ಒಂದು ನಾಟಕ ಅಷ್ಟೇ. ಅದಕ್ಕಾಗಿ ರಾಜಕೀಯ ನಿವೃತ್ತಿ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ. ಡಿ.ಕೆ.ಸುರೇಶ್ಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲವೆಂದು ಗೊತ್ತಾಗಿದೆ. ಕಾಂಗ್ರೆಸ್ ಒಂದು ರೀತಿ ಒಡೆದ ಮನೆ ಆಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ದಾವಣಗೆರೆ: ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ವಿಚಾರವಾಗಿ ಪರಿಶಿಷ್ಟ ಪಂಗಡ ವ್ಯವಹಾರಗಳ ಸಚಿವ ಬಿ.ನಾಗೇಂದ್ರ ಮಾತನಾಡಿ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಅಥವಾ ಮೈಸೂರು ಭಾಗದ ಹೆಚ್.ಡಿ.ಕೋಟೆಯಲ್ಲಿ ವಿವಿ ಸ್ಥಾಪನೆಗೆ ಚಿಂತನೆ ನಡೆದಿದೆ. ಬಹುದಿನಗಳಿಂದ ಬುಡಕಟ್ಟು ವಿವಿ ಸ್ಥಾಪನೆ ಬಗ್ಗೆ ಬೇಡಿಕೆ ಇತ್ತು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೂ ತರಲಾಗಿದೆ ಎಂದರು.
ಬೆಳಗಾವಿ: ನನ್ನ ಕ್ಷೇತ್ರದ ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆ ತಲುಪಬೇಕು. ನಮ್ಮ ಪಕ್ಷದ ನಾಯಕರು ನನಗೆ ಸಚಿವ ಸ್ಥಾನ ನೀಡಿದ್ದಾರೆ. ಕಷ್ಟ ಬರಲಿ, ಸುಖ ಬರಲಿ ಮನೆ ಮಗಳಂತೆ ಕೆಲಸ ಮಾಡಿದ್ದೇನೆ. ಗ್ರಾಮೀಣ ಕ್ಷೇತ್ರದ ಮನೆ ಮಗಳಾಗಿ ಜವಾಬ್ದಾರಿ ನಿಭಾಯಿಸುವೆ. ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಮನೆ ಯಜಮಾನಿಗೆ ಹಣ ನೀಡುವ ಯೋಜನೆ ನನ್ನ ಇಲಾಖೆಯಲ್ಲಿದೆ. ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಣ ಹಾಕುವುದು ನನ್ನ ಜವಾಬ್ದಾರಿ. ಮಹಿಳೆಯರು ಮುಖ್ಯವಾಹಿನಿಗೆ ಬರಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸು ಎಂದು ಅಭಿನಂದನಾ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಶಿವಮೊಗ್ಗ: ಸದನ ಆರಂಭವಾಗುವುದರೊಳಗೆ ವಿಪಕ್ಷ ನಾಯಕನ ಆಯ್ಕೆ ಮಾಡುತ್ತೇವೆ. ಅದರಲ್ಲಿ ಏನು ವಿಶೇಷ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗ: ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಗೊಂದಲ ಉಂಟು ಮಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ. ಹೆಚ್ಚುವರಿಯಾಗಿ ಅಕ್ಕಿ ಕೊಡಲಿಕ್ಕೆ ಕೇಂದ್ರ ಒಪ್ಪಿರಲಿಲ್ಲ. ಅದು ರಾಜ್ಯ ಸರ್ಕಾರದ ಜವಾಬ್ದಾರಿ. ಎಲ್ಲಿಯಾದರೂ ಖರೀದಿ ಮಾಡಿ ಕೊಡಲಿ. ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ವಿತರಣೆ ಮಾಡ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅದರಂತೆ ಅಕ್ಕಿ ವಿತರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಾಗಲಕೋಟೆ: ಹೃದಯಾಘಾತದಿಂದ ಸಾವನ್ನಪ್ಪಿದ್ದ ಯೋಧ ಯಲ್ಲನಗೌಡ ಪಾಟೀಲ್(47) ಅವರ ಪಾರ್ಥಿವ ಶರೀರ ಗುಳೇದಗುಡ್ಡ ಪಟ್ಟಣಕ್ಕೆ ಆಗಮಿಸಿದೆ. ಶುಕ್ರವಾರ ಹೃದಯಾಘಾತದಿಂದ ಯೋಧ ಯಲ್ಲನಗೌಡ ಮೃತಪಟ್ಟಿದ್ದರು. ಇಂದು ಬೆಳಗ್ಗೆ ಕಾಶ್ಮೀರದಿಂದ ಯೋಧನ ಪಾರ್ಥಿವ ಶರೀರ ಆಗಮಿಸಿದೆ.
ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಹೊರನಾಡಿನಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಫುಲ್ ರಶ್ ಆಗಿವೆ. ಈ ಹಿನ್ನೆಲೆ ಮಹಿಳೆಯರು ಖಾಸಗಿ ಬಸ್ಗಳ ಮೊರೆ ಹೋಗಿದ್ದಾರೆ.
ಬೆಂಗಳೂರು: ಇಂದಿನಿಂದ ಗೃಹಜ್ಯೋತಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ಹಿನ್ನೆಲೆ ಭಾನುವಾರವೂ ನಾಡಕಚೇರಿ ಹಾಗೂ ಬೆಸ್ಕಾಂಗಳಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಮೈಸೂರು: ಖೋ ಖೋ ಆಡುತ್ತಿದ್ದಾಗ ಕುಸಿದು ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಶಶಾಂಕ್(13) ಮೃತ ದುರ್ದೈವಿ. ಶಾಲಾ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳು ಖೋಖೋ ಆಡುತ್ತಿದ್ದರು.
ಕೊಪ್ಪಳ: ಮರಳು ಅಡ್ಡೆಗಳ ಮೇಲೆ ಮಹಿಳೆಯರು ದಾಳಿ ಮಾಡಿರುವ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಯತ್ನಟ್ಟಿ ಗ್ರಾಮದಲ್ಲಿ ನಡೆದಿದೆ. ನಂತರ ಮಹಿಳೆಯರು ಟಿಪ್ಪರ್, ಜೆಸಿಬಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಅಧಿಕಾರಿಗಳಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಯತ್ನಟ್ಟಿ ಸುತ್ತಮುತ್ತ ನಿತ್ಯ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಆದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಳು ದಂಧೆಯಲ್ಲಿ ಕೆಲ ಅಧಿಕಾರಿಗಳೇ ಶಾಮೀಲಾಗಿದ್ದಾರೆಂದು ಆರೋಪ ಕೇಳಿಬಂದಿದೆ.
ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ಇಂದಿನಿಂದಲೇ (ಜೂನ್ 19) ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಇಲ್ಲಿ ನೋಂದಣಿ ಮಾಡಿಕೊಂಡ್ರೆ ಮಾತ್ರ ಮುಂದಿನ ತಿಂಗಳಿನಿಂದಲೇ ಉಚಿತ ವಿದ್ಯುತ್ ಸಿಗಲಿದೆ.
‘ಗೃಹಜ್ಯೋತಿ’ ಅರ್ಜಿ ಸಲ್ಲಿಕೆ ಹೇಗೆ?
ಇಂದಿನಿಂದ ‘ಗೃಹಜ್ಯೋತಿ’ ಅರ್ಜಿ ಸಲ್ಲಿಕೆ ಆರಂಭ ಆಗಲಿದ್ದು, ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸೇವಾ ಸಿಂಧು ವೆಬ್‌ಸೈಟ್ ಬಳಸಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ನಲ್ಲೂ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂಚಾಯ್ತಿಕಚೇರಿ, ವಿದ್ಯುತ್ ಕಚೇರಿಯಲ್ಲೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಇನ್ನು ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಆರ್ಆರ್ ನಂಬರ್, ಮೊಬೈಲ್ ಸಂಖ್ಯೆ ಅವಶ್ಯಕತೆ ಇದೆ. ಇನ್ನು ಇನ್ನು ಬಾಡಿಗೆದಾರರಾಗಿದ್ರೆ, ಮನೆ ಬಾಡಿಗೆ ಕರಾರು ಪತ್ರ ನೀಡಿ ಅರ್ಜಿ ಸಲ್ಲಿಸಬಹುದು. ಡೌಟ್ ಇದ್ರೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1912 ಕಾಲ್ ಮಾಡಿ ಮಾಹಿತಿ ಪಡೆಯಬಹುದು.
Published On - 8:21 am, Sun, 18 June 23