AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯ 2022ರ ಆದೇಶ ಹಿಂಪಡೆದ ಸರ್ಕಾರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ

ರಾಜ್ಯದ ಶಾಲಾ-ಕಾಲೇಜುಗಳ ಸಮವಸ್ತ್ರ ನಿಯಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ರಾಜ್ಯಾದ್ಯಂತ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಗ್ರಾಸವಾಗಿದ್ದ, 2022ರ ಫೆಬ್ರವರಿ 05ರಂದು ಹೊರಡಿಸಲಾಗಿದ್ದ ಸಮವಸ್ತ್ರ ಕುರಿತಾದ ಆದೇಶವನ್ನು ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದುಕೊಂಡಿದ್ದು, ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರದ ಜೊತೆಗೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ಗ್ರೀನ್ ಸಿಗ್ನಲ್ ನೀಡಿದೆ.

ಬಿಜೆಪಿಯ 2022ರ ಆದೇಶ ಹಿಂಪಡೆದ ಸರ್ಕಾರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ
Hijab
ರಮೇಶ್ ಬಿ. ಜವಳಗೇರಾ
|

Updated on:May 13, 2026 | 8:28 PM

Share

ಬೆಂಗಳೂರು, (ಮೇ 13): 2022ರಲ್ಲಿ ಅಂದಿನ  ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿಷೇಧಕ್ಕೆ ಪೂರಕವಾಗಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಹಿಂಪಡೆದುಕೊಂಡಿದೆ. ಇಂದು (ಮೇ 13) ಹೊಸ ವಸ್ತ್ರಸಂಹಿತೆ ಆದೇಶವನ್ನು ಹೊರಡಿಸಿದ್ದು, ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ‘ಹಿಜಾಬ್’ (ತಲೆವಸ್ತ್ರ) ಧರಿಸಲು ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೌದು.. ಕರ್ನಾಟಕದಲ್ಲಿ (Karnataka)  ಶಾಲೆ-ಕಾಲೇಜುಗಳಲ್ಲಿ (schools And colleges) ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಜನಿವಾರ ಮತ್ತು ಹಿಜಾಬ್ (Hijab) ಸೇರಿದಂತೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಹೊಸ ವಸ್ತ್ರಸಂಹಿತೆ ಒಂದನೇ ತರಗತಿ ಇಂದ 12 ನೇ ತರಗತಿ ವರೆಗೆ ಅನ್ವಯವಾಗಲಿದ್ದು, ಈ ಶೈಕ್ಷಣಿಕ ವರ್ಷದಿಂದ ಜಾರಿ ಬರಲಿದೆ.

  • ಸಮವಸ್ತ್ರ ವಿಚಾರವಾಗಿ 2022ರ ಆದೇಶ ಹಿಂಪಡೆದು ಹೊಸ ಆದೇಶ.
  • ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳ ವಸ್ತ್ರಗಳಿಗೆ ಅವಕಾಶ ನೀಡಿ ಆದೇಶದಲ್ಲಿ ಉಲ್ಲೇಖ.
  • ಬಿಜೆಪಿ ಸರಕಾರ ಹೊರಡಿಸಿದ್ದ ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆದುಕೊಂಡ ಸಿದ್ದರಾಮಯ್ಯ ಸರ್ಕಾರ.

ಹಿಜಾಬ್, ಜನಿವಾರ, ರುದ್ರಾಕ್ಷಿಗೂ ಅವಕಾಶ

ಸರ್ಕಾರದ ಹೊಸ ಆದೇಶದ ಪ್ರಕಾರ, ಶಾಲಾ-ಕಾಲೇಜುಗಳು ನಿಗದಿಪಡಿಸಿದ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅನುಮತಿ ನೀಡಲಾಗಿದೆ. ಹಿಜಾಬ್ (Headscarf/ತಲೆವಸ್ತ್ರ), ಪೇಟ ಅಥವಾ ಟರ್ಬನ್ (Turban), ಜನಿವಾರ ಅಥವಾ ಪವಿತ್ರ ದಾರ, ಶಿವದಾರ ಮತ್ತು ರುದ್ರಾಕ್ಷಿ ಧರಿಸುವುದರಿಂದ ಶಾಲೆಯ ಶಿಸ್ತು ಅಥವಾ ಬೋಧನಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಸಾಂಪ್ರದಾಯಿಕ ಮತ್ತು ಪದ್ಧತಿ ಆಧಾರಿತ ಸಂಕೇತ ಸಮವಸ್ತ್ರಕ್ಕೆ ಪೂರಕವಾಗಿರಬೇಕು  ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೇಸರಿ ಶಾಲು ಬಗ್ಗೆ ಸ್ಪಷ್ಟತೆ ಇಲ್ಲ

2022ರಲ್ಲಿ ಉಡುಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಇಡೀ ದೇಶದಲ್ಲೇ ಹಿಜಾಬ್ ವಿಚಾರ ದೊಡ್ಡ ಸುದ್ದಿಯಾಗಿತ್ತು. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದಕ್ಕೆ ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು. ಹೀಗಾಗಿ ಇದು ಧರ್ಮದಂಗಲ್​ಗೆ ಕಾರಣವಾಗಿತ್ತು.  ಇದೀಗ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳ ವಸ್ತ್ರಗಳಿಗೆ ಅವಕಾಶ ಎಂದು ಹೊಸ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಆದ್ರೆ, ಸಿಂಧೂರ, ಕುಂಕುಮ, ವಿಭೂತಿ, ಕೇಸರಿ ಶಾಲು ಮುಂತಾದವುಗಳ ಧರಿಸುವಿಕೆ ಬಗ್ಗೆ ಈ ಹೊಸ ಆದೇಶದಲ್ಲಿ ಉಲ್ಲೇಖವಾಗಿಲ್ಲ. ಕೇಸರಿ ಶಾಲು ಧರಿಸಲು ಅವಕಾಶ ಇದೆಯೋ, ಇಲ್ಲವೋ ಎಂದು ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಮತ್ತೆ ಗೊಂದಲಗಳು ಶುರುವಾಗುವ ಸಾಧ್ಯತೆಗಳಿವೆ.

ಬಿಜೆಪಿ ಅವಧಿಯ ಆದೇಶ ಹಿಂಪಡೆದ ಸಿದ್ದರಾಮಯ್ಯ ಸರ್ಕಾರ

ಉಡುಪಿಯಲ್ಲಿ ಶುರುವಾದ ವಿದ್ಯಾರ್ಥಿಗಳ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ 2022ರಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಹೊರಡಿಸಿದ್ದ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವ ಕುರಿತ ಆದೇಶವನ್ನು ಇಂದು(ಮೇ 13) ಸಿದ್ದರಾಮಯ್ಯ ಸರಕಾರ ಹಿಂಪಡೆದಿದೆ.

ಸಮವಸ್ತ್ರ ಮತ್ತು ಶಿಸ್ತನ್ನು ಕಾಪಾಡುವ ಜೊತೆಗೆ, ತಾರತಮ್ಯವಿಲ್ಲದ ಮತ್ತು ಸಾಂವಿಧಾನಿಕವಾಗಿ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸಲು ಅನುಮತಿಸುವ ಉದ್ದೇಶದಿಂದ 2022ರ ಆದೇಶವನ್ನು ಹಿಂಪಡೆದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹೊಸ ನಿರ್ದೇಶನಗಳನ್ನು ನೀಡುವುದು ಅಗತ್ಯವೆಂದು ಸರ್ಕಾರವು ತೀರ್ಮಾನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದೇಶದ ಮುಖ್ಯಾಂಶಗಳು

  • ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ನಿಯಮಾನುಸಾರ ಸಮವಸ್ತ್ರವನ್ನು ನಿಗದಿಪಡಿಸಿ ಕಡ್ಡಾಯಗೊಳಿಸುವುದನ್ನು ಮುಂದುವರಿಸತಕ್ಕದ್ದು.
  • *ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕು.
  •  ನಿಗದಿತ ಸಮವಸ್ತ್ರವನ್ನು ಬದಲಿಸುವ, ಮಾರ್ಪಡಿಸುವ ಅಥವಾ ಅದರ ವಿಫಲಗೊಳಿಸುವಂತಿರಬಾರದು.
  •  ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ. ರುದ್ರಾಕ್ಷಿ, ತಲೆವಸ್ತ್ರ/ಹಿಜಾಬ್ (Headscarf) ಅಥವಾ ಇತರೆ ಯಾವುದೇ ಸಮಾನ ಸ್ವರೂಪದ ಸಾಂಪ್ರದಾಯಿಕ ಹಾಗೂ ಪದ್ಮತಿ ಆಧಾರಿತವಾದ ಸಂಕೇತಗಳು ಸೇರಿರಬಹುದು. ಆದರೆ, ಇವು ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಅಡ್ಡಿಯಾಗಬಾರದು.
  •  ನಿಗದಿತ ಸಮವಸ್ತ್ರದೊಂದಿಗೆ ಇಂತಹ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಧರಿಸಿರುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ, ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ.
  •  ಸರ್ಕಾರವು ಅನುಮತಿಸಿರುವ ಸೀಮಿತ ಸಾಂಪುದಾಯಿಕ ಹಾಗೂ ಪದ್ಮತಿ ಆಧಾರಿತವಾದ ಸಂಕೇತಗಳನ್ನು ಬಲವಂತವಾಗಿ ತೆಗೆಯುವಂತೆಯೂ ಒತ್ತಾಯಿಸುವಂತಿಲ್ಲ.
  •  ಪರೀಕ್ಷಾ ಸಂದರ್ಭಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಸ್ತ್ರ, ಸಂಹಿತೆಯ ನಿಯಮಗಳನ್ನು ಸಂದರ್ಭೋಚಿತವಾಗಿ ಸಂಬಂಧಿಸಿದ ಪ್ರಾಧಿಕಾರಗಳು ಅಳವಡಿಸಿಕೊಳ್ಳತಕ್ಕದ್ದು.
  •  ಈ ಆದೇಶದ ಅನುಷ್ಠಾನವು ಏಕರೂಪವಾಗಿರಬೇಕು. ಧಾರ್ಮಿಕ, ಸಾಂಪ್ರದಾಯಿಕ ನಿಷ್ಪಕ್ಷಪಾತತೆಯಿಂದ ಕೂಡಿರಬೇಕು ಮತ್ತು ತಾರತಮ್ಯರಹಿತವಾಗಿರಬೇಕು.
  •  ಈ ಆದೇಶಕ್ಕೆ ವಿರುದ್ಧವಾಗಿರುವ ಯಾವುದೇ ಸುತ್ತೋಲೆ, ನಿರ್ಣಯ, ಸೂಚನೆ, ರೂಢಿ ಅಥವಾ ಸಂಸ್ಥೆಯ ನಿರ್ದೇಶನಗಳು ಅನೂರ್ಜಿತವಾಗತಕ್ಕದ್ದು.
  • ಎಲ್ಲಾ ಅಧಿಕಾರಿಗಳು ಯಾವುದೇ ವಿದ್ಯಾರ್ಥಿಯನ್ನು ತಾರತಮ್ಮ ಧೋರಣೆಯಿಂದ ಅವಮಾನಕಾರಿ ವರ್ತನೆಯ ಮೂಲಕ ಬಳಲುವಂತೆ ಮಾಡಬಾರದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Wed, 13 May 26

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More