ರಾಜ್ಯದ ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡು, ಕರಾವಳಿಯಲ್ಲಿ ಒಣಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದೆ, ಎಚ್ಎಎಲ್ನಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 34.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ, ಕಲಬುರಗಿಯಲ್ಲಿ 40.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಕೇರಳ ಕರಾವಳಿ ತೀರಕ್ಕೆ ಜೂನ್ 1ರ ವೇಳೆಗೆ ಮುಂಗಾರು ಪ್ರವೇಶವಾಗುತ್ತದೆ. ಆದರೆ ಈ ಬಾರಿ ನಾಲ್ಕು ದಿನ ತಡವಾಗಿ ಮುಂಗಾರು ಮಾರುತಗಳು ಕೇರಳ ಕರಾವಳಿಗೆ ಪ್ರವೇಶಿಸಲಿವೆ. ಇದರಿಂದ ಮುಂಗಾರು ಮಳೆಯ ಆರಂಭ ಒಂದು ವಾರ ವಿಳಂಬವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮತ್ತಷ್ಟು ಓದಿ: Cyclone Mocha: ಕರ್ನಾಟಕದಲ್ಲಿ ಮೋಕಾ ಚಂಡಮಾರುತ ಎಫೆಕ್ಟ್, ಇನ್ನೂ ಮೂರು ದಿನ ಭಾರೀ ಮಳೆ
ಹವಾಮಾನ ಇಲಾಖೆ ಪ್ರಕಾರ ಮುಂಗಾರು ಮಳೆ ಜೂನ್ 4ರಿಂದ ಆರಂಭವಾಗಲಿದ್ದು, ಉತ್ತರಾಭಿಮುಖವಾಗಿ ಮಾರುತಗಳು ಸಂಚರಿಸಲಿವೆ. ನಂತರ ಹಂತ ಹಂತವಾಗಿ ಮಾರುತಗಳು ದೇಶವ್ಯಾಪಿ ಆವರಿಸಿಕೊಂಡು ಮಳೆ ಸುರಿಸಲಿವೆ. ಮುಂಗಾರು ಮಾರುತಗಳ ಆರಂಭದೊಂದಿಗೆ ದೇಶದಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ. ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಕೇರಳ ಪ್ರವೇಶಿಸಿದ ಒಂದು ವಾರದ ಬಳಿಕ ರಾಜ್ಯದಲ್ಲಿ ಪೂರ್ಣವಾಗಿ ಮುಂಗಾರು ಆವರಿಸುವ ಸಾಧ್ಯತೆಯಿದೆ. ಜೂನ್ 10ರ ಬಳಿಕ ಹಂತಹಂತವಾಗಿ ಮಳೆಯ ಸಿಂಚನವು ಕರ್ನಾಟಕದ ವಿವಿಧ ಜಿಲ್ಲೆಗಳನ್ನು ವ್ಯಾಪಿಸುವ ನಿರೀಕ್ಷೆಯಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ