ಹಳಿಯಾಳ: ಜಮೀನು ವಿವಾದ, ಫಾರೆಸ್ಟ್ ವಾಚ್ಮ್ಯಾನ್ನ ಕಾಲು ಕತ್ತರಿಸಿ ಭೀಕರ ಕೊಲೆ
ಆತ ಫಾರೆಸ್ಟ್ ವಾಚ್ಮ್ಯಾನ್ ಕೆಲಸ ಮಾಡುತ್ತಿದ್ದ ವ್ಯಕ್ತಿ. ಇತ್ತೀಚೆಗಷ್ಟೇ ತೋಟವನ್ನ ಖರೀದಿ ಮಾಡಿದ್ದ. ಖರೀದಿ ಮಾಡಿದ ತೋಟದಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿ ಜೀವನ ಸಾಗಿಸಬೇಕೆಂದು ಯೋಚನೆ ಕೂಡ ಮಾಡಿದ್ದ. ಆದರೆ, ದುರ್ದೈವ ನೋಡಿ ಆತ ಖರೀದಿ ಮಾಡಿದ ತೋಟದಲ್ಲಿ ಹೆಣವಾಗಿ ಬಿದ್ದಿದ್ದಾನೆ. ಯಾರು ಹತ್ಯೆ ಮಾಡಿದ್ದು, ಕಾರಣವೇನು? ಇಲ್ಲಿದೆ ನೋಡಿ.
ಉತ್ತರ ಕನ್ನಡ: ದಟ್ಟ ಕಾಡಿನ ಮದ್ಯೆ ಹಚ್ಚ ಹಸಿರಾಗಿ ಬೆಳೆದು ನಿಂತಿರುವ ಮಾವಿನ ತೋಟ, ಆ ಮಾವಿನ ತೋಟದ ಮಧ್ಯೆ, ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿರುವ ವ್ಯಕ್ತಿ. ಈ ದೃಶ್ಯ ಕಂಡು ಬಂದಿದ್ದು ಜಿಲ್ಲೆಯ ಹಳಿಯಾಳ(Haliyal) ತಾಲೂಕಿನ ಕರ್ಲಕಟ್ಟ ಗ್ರಾಮದ ಬಳಿ. ಹೌದು ಪರಶುರಾಮ ತೋರಸ್ಕರ (52) ಎಂಬ ಕೊಲೆಯಾದ ವ್ಯಕ್ತಿ ವರ್ಷದ ಹಿಂದಷ್ಟೇ ಯಡೋಗಾದ ಯಮುನಾ ಎಂಬ ರೈತರಿಂದ 3.5 ಎಕರೆ ಜಮೀನನ್ನು ಖರೀದಿ ಮಾಡಿದ್ದ. ಖರೀದಿ ಮಾಡಿದ ಜಮೀನಿನ ಪತ್ರಗಳು ಸಹ ಪರಶುರಾಮನ ಪತ್ನಿ ಮಹೇಶ್ವರಿ ಹೆಸರಿಗೆ ಆಗಿತ್ತು. ಇನ್ನೇನು ಜಮೀನು ಖರೀದಿ ಆಯಿತು ಅಂತಾ. ತಾನು ಕೊಂಡ ಜಮೀನಿಗೆ ಕುಟುಂಬ ಸಮೇತವಾಗಿ ಹೋಗಿದ್ದ. ಆದರೆ, ಕಳೆದ 20 ವರ್ಷಗಳಿಂದ ಆ ಜಮೀನನ್ನು ಮತ್ತೊಬ್ಬ ವ್ಯಕ್ತಿ ಸಹದೇವ ದಡ್ಡೇಕರ್ ಎಂಬುವವನು ಗೇಣಿ (ಬಾಡಿಗೆ) ಮಾಡುತ್ತಿದ್ದ. ಯಾವಾಗ ಈ ಜಮೀನು ಖರೀದಿಯಾಗಿದೆ ಎಂದು ಗೊತ್ತಾಯಿತು ಆಗ ಸಹದೇವ ದಡ್ಡೇಕರ್ ಪರಶುರಾಮನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ನಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.
ರಾಜಿ ಸಂಧಾನ ಮಾಡಿ ಕಳುಹಿಸಿದ್ದ ಪೊಲೀಸರು
ಪ್ರಕರಣ ದಾಖಲಾಗುತ್ತಿದ್ದಂತೆ ಹಳಿಯಾಳ ಪೊಲೀಸರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆ ಹರಿಸಿದ್ದರು. ಅಷ್ಟಾದರೂ ಸಹದೇವ ದಡ್ಡೇಕರ್ ಜಮೀನು ನಂದು, ಕಳೆದ 20 ವರ್ಷಗಳಿಂದ ನಾನು ಸಾಗುವಳಿ ಮಾಡಿಕೊಂಡು ಬಂದಿದ್ದೆನೆ. ನೀ ಏನಾದರು ಈ ಜಮೀನಿನ ಕಡೆ ಕಾಲು ಹಾಕಿದ್ರೆ, ಕಾಲು ಕತ್ತರಿಸಿ ಕೊಲೆ ಮಾಡುತ್ತೆನೆ ಎಂದು ಪರಶುರಾಮನಿಗೆ ಬೇದರಿಕೆ ಹಾಕಿರುತ್ತಾನೆ. ಬೇದರಿಕೆಗೆ ಹೆದರಿ ಪರಶುರಾಮ ತನ್ನೊಟ್ಟಿಗೆ ಜನ ಇಲ್ಲದೆ, ಪೋಲಿಸರು ಇಲ್ಲದೆ ಜಮೀನಿಗೆ ಹೋಗುತ್ತಿರಲಿಲ್ಲ. ಆದರೆ, ಮೇ 11 ಮಧ್ಯಾಹ್ನ 12:30 ರ ಸುಮಾರಿಗೆ ತೋಟದ ಕೆಲಸದ ನಿಮಿತ್ತ ಟ್ರ್ಯಾಕ್ಟರ್ ಮತ್ತು ಜೆ.ಸಿ.ಬಿ ತೆಗೆದುಕೊಂಡು ಜಮೀನು ಬಳಿ ಹೋಗಿದ್ದ, ಜಮೀನನಲ್ಲಿದ್ದ ಬದುಗಳನ್ನ, ಅನುಪಯುಕ್ತ ಮಾವಿನ ಮರಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದ. ಆಗ ತೋಟದಲ್ಲಿ ಪರಶುರಾಮ ಕೆಲಸ ಮಾಡುತ್ತಿರುವ ವಿಷಯ ಸಹದೇವ ದಡ್ಡೇಕರ್ ಅವನಿಗೆ ಗೊತ್ತಾಗಿದೆ. ತಕ್ಷಣ ತನ್ನ ಮಗ ಮತ್ತು ಅಳಿಯನೊಂದಿಗೆ ಜಮೀನಿಗೆ ಬಂದವನೆ ಪರಶುರಾಮ ಜೊತೆ ಜಗಳಕ್ಕೆ ಇಳಿದಿದ್ದಾನೆ.
ಇದನ್ನೂ ಓದಿ:ದಾವಣಗೆರೆ: ಆಸ್ತಿ ಕಲಹ; ಆಸ್ಪತ್ರೆಗೆ ನುಗ್ಗಿ ಮಲ ಸಹೋದರನ ಕೊಲೆ
ಜಗಳಕ್ಕೆ ಇಳಿಯುತ್ತಿದ್ದಂತೆ ಮಾತಿಗೆ ಮಾತು ಬೆಳೆದಿವೆ. ಮಾತುಗಳು ವಿಕೋಪಕ್ಕೆ ಹೋಗುತ್ತಿದ್ದಂತೆ ಕೈ ಕೈ ಮಿಲಾಯಿಸೆ ಬಿಟ್ಟಿದ್ದಾರೆ. ದುಡ್ಡು ಕೊಟ್ಟು ನಾನು ಈ ಜಮೀನನ್ನು ಖರೀದಿ ಮಾಡಿದ್ದೆನೆ. ನನ್ನ ಪರವಾಗಿ ಜಮೀನಿನ ಕಾಗದ ಪತ್ರಗಳು ಸೃಷ್ಟಿಯಾಗಿವೆ. ಕಾನೂನು ಪ್ರಕಾರ ಏನ್ಬೇಕು ಅದೆಲ್ಲೆವೂ ಆಗಿದೆ. ಇಷ್ಟಿದ್ದರು ಜಮೀನನ್ನ ಬಿಟ್ಟು ಕೊಡುತ್ತಿಲ್ಲ, ಅದೇನಾದ್ರು ಆಗ್ಲಿ, ನಾನು ಜಮೀನು ಬಿಟ್ಟು ಹೋಗಲ್ಲವೆಂದು ಕೆಲಸ ಮುಂದುವರೆಸುತ್ತಾನೆ. ಅಷ್ಟಾದರೂ ಇವರು ಅವನ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ತಕ್ಷಣವೇ ವಕೀಲರಿಗೆ ಪೋನ್ ಮಾಡಿ ನಡೆಯುತ್ತಿರುವ ವಿಷಯವನ್ನ ವಿವರಿಸಿದ್ದಾನೆ. ಆಗ ವಕೀಲರು ಅದನ್ನ ವಿಡಿಯೋ ಮಾಡಿಕೋ ಅಂದಿದ್ದಾರೆ.. ಆಗ ತನ್ನ ಮೊಬೈಲ್ ತೆಗೆದು ವಿಡಿಯೋ ಮಾಡಲಿಕ್ಕೆ ಪ್ರಾರಂಭಿಸಿದ್ದಾನೆ. ಅಷ್ಟೋತ್ತಿಗೆ ಸಹದೇವ ದಡ್ಡೇಕರ್ ಕೈಯಲ್ಲಿ ಹಿಡಿದಿದ್ದ ಮಚ್ಚಿ (ಮರ ಕತ್ತರಿಸುವ ಆಯುಧ) ನಿಂದ ಪರಶುರಾಮನ ಬಲಗಾಲಿಗೆ ಜೋರಾಗಿ ಹೊಡದೆ ಬಿಟ್ಟಿದ್ದಾನೆ.
ನಂತರ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪರಶುರಾಮ ತನ್ನ ಎಡಗಾಲಿನಿಂದ ಮೂವರಿಗೆ ಒದೆಯಲು ಮುಂದಾಗಿದ್ದಾನೆ. ಆಗಲೇ ಆ ಕಾಲಿಗೂ ಸಹದೇವ ದಡ್ಡೇಕರ್ ಮಚ್ಚಿನ ಏಟನ್ನು ಕೊಟ್ಟೆ ಬಿಟ್ಟಿದ್ದಾನೆ. ಎರಡು ಕಾಲು ಶೇಕಡಾ 75 % ಕತ್ತರಿಸಿ ಬಿಟ್ಟಿವೆ. ನಿಲ್ಲಲು ಆಗದೆ ಜಮೀನನಲ್ಲಿ ಬಿದ್ದು ಒದ್ದಾಡಿ ನರಳಾಡಿ ಪರಶುರಾಮ ಸತ್ತೆ ಹೋಗಿದ್ದಾನೆ. ಪರಶುರಾಮನ ನರಳಾಟ ಕಂಡರು ಪಾಪಿಗಳ ಹೃದಯ ಕರಗಿಲ್ಲ. ಆತನ ಬಳಿ ಇದ್ದ ವಿಡಿಯೋ ರಿಕಾಡ್೯ ಮಾಡಿದ್ದ ಮೊಬೈಲ್ ಅನ್ನು ಕಸೆದು ಸ್ಥಳದಲ್ಲಿ ಒಡೆದು ಹಾಕಿ, ಸಾಕ್ಷಿ ನಾಶ ಮಾಡಲು ಯತ್ನಿಸಿದ್ದಾರೆ ನಂತರ ಅಲ್ಲಿಂದ ಪರಾರಿಯಾಗಿದ್ದಾರೆ.
ಆರೋಪಿಗಳು ಅರೆಸ್ಟ್
ಇನ್ನು ಎರಡು ಕಾಲು ಕತ್ತರಿಸುತ್ತಿದ್ದಂತೆ ನೆಲಕ್ಕೆ ಉರುಳಿದ ಪರಶುರಾಮ ತನ್ನೊಟ್ಟಿಗೆ ಬಂದಿದ್ದ ಇಬ್ಬರು ಟ್ರ್ಯಾಕ್ಟ್‌ರ ಡ್ರೈವರ್ ಮತ್ತು ಓರ್ವ ಜೆಸಿಬಿ ಡ್ರೈವರ್ ನನ್ನ ನರಳುತ್ತಾ ಕೂಗಿದ್ದಾನೆ. ಆದರೆ, ಗಾಬರಿಗೊಂಡ ಮೂವರು ಚಾಲಕರು ಅಲ್ಲಿಂದ ಓಡಿ ಹೋಗಿದ್ದಾರೆ. ಒಂದು ಗಂಟೆಗಳ ಕಾಲ ತೀವ್ರ ರಕ್ತ ಸ್ರಾವವಾಗಿರುವ ಪರಿಣಾಮ ನರಳಾಡಿ, ನರಳಾಡಿ ಫಾರೆಸ್ಟ್ ಪರಶುರಾಮ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾನೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹಳಿಯಾಳ ಪೊಲೀಸರು ಪರಿಶೀಲನೆ ಕೈಕೊಂಡರು. ಜಮೀನಿನ ಸುತ್ತ ಹುಡುಕಾಟ ನಡೆಸಿ ಅಲ್ಲಿ ಬಿದ್ದ ಮಾರಕಾಸ್ತ್ರವನ್ನ ತನಿಖೆಗಾಗಿ ಕೊಂಡೊಯ್ಯದಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಹದೇವ ದಡ್ಡೇಕರ್ನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಮಂಡ್ಯದಲ್ಲಿ ಭೀಕರ ಹತ್ಯೆ; ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಶಂಕೆ
ಪರಶುರಾಮ ತೋರಸ್ಕರ ಯಾರು?
ಪರಶುರಾಮ ತೋರಸ್ಕರನ ಬಗ್ಗೆ ಹೇಳಬೇಕಾದ್ರೆ ಆತ ಹಳಿಯಾಳದಲ್ಲಿ ಫಾರೆಸ್ಟ್ ವಾಚ್‌ಮ್ಯಾನ ಆಗಿ ಕೆಲಸ ಮಾಡುತ್ತಿದ್ದ, ಅದರ ಜೊತೆಗೆ ಉರಗ ಪ್ರೇಮಿ ಕೂಡ ಆಗಿದ್ದ. ಎಲ್ಲಿಯಾದರೂ ಹಾವುಗಳು ಕಂಡು ಬಂದರೆ ಅವುಗಳನ್ನು ಹಿಡಿದು ರಕ್ಷಣೆ ಮಾಡುತ್ತಿದ್ದ. ಇವನ ಸೇವೆಯನ್ನು ಮೆಚ್ಚಿ ರಾಜ್ಯ ಸರ್ಕಾರ 2021 ರಲ್ಲಿ ಬೆಳ್ಳಿ ಪದಕ ನೀಡಿ ಗೌರವಿಸಿತ್ತು. ಹೀಗಾಗಿ ಹಳಿಯಾಳ ಭಾಗದಲ್ಲಿ ಈತ ಎಲ್ಲರಿಗೂ ಚಿರ ಪರಿಚಿತನಾಗಿದ್ದ. ಇನ್ನು ಪರಶುರಾಮನಿಗೆ ಒಟ್ಟು ನಾಲ್ಕು ಜನ ಅಣ್ಣ ತಮ್ಮಂದಿರು ಕುಟುಂಬದಿಂದ ಅನುಕೂಲಸ್ಥನೆ ಆಗಿದ್ದ. ಈಗತಾನೆ ಹೊಸ ಮನೆ ಕಟ್ಟಲು ಪ್ರಾರಂಭಿಸಿದ್ದ. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಮಾವಿನ ತೋಟ ಇತನನ್ನ ಬಲಿ ಪಡೆದು ಕೊಂಡಿದೆ.
ಇನ್ನು ಕೊಲೆಗೂ ಮುನ್ನ ತನ್ನ ಹೆಂಡತಿ ಮಾಡಿದ ಅಡುಗೆ ಸವಿದು ಎಲ್ಲರೊಂದಿಗೆ ಚೆನ್ನಾಗಿ ಮಾತನಾಡಿ ಫಾರೆಸ್ಟ್ ಇಲಾಖೆಗೆ ತೆರಳಿದ್ದ. ಬಳಿಕ ಜಮೀನಿನ ಕೆಲಸದ ನಿಮಿತ್ತ ಹೋಗಿ ಬಂದರಾಯಿತು ಅಂತಾ ಹೋಗಿದ್ದವನು ಹೆಣವಾಗಿದ್ದಾನೆ. ಈ ವಿಷಯ ಇಡೀ ಕುಟುಂಬಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಜನರಿಗೆ ಬೇಕಾದ ವ್ಯಕ್ತಿ, ಕುಟುಂಬಕ್ಕೆ ಆದಾರವಾಗಿದ್ದ ಪರಶುರಾಮನನ್ನು ಕಳೆದುಕೊಂಡ ಅವನ ಇಡೀ ಕುಟುಂಬ ಅನಾಥವಾಗಿದೆ. ಒಟ್ಟಿನಲ್ಲಿ ಖರೀದಿ ಮಾಡಿದ್ದ ತನ್ನ ಮಾವಿನ ತೋಟದಲ್ಲಿ ಕೆಲಸ ಮಾಡುತಿದ್ದ ಪರಶುರಾಮ ಹೆಣವಾಗಿದ್ದಾನೆ. ಇಡೀ ಕುಟುಂಬಕ್ಕೆ ಆಧಾರವಾಗಿದ್ದವನು ಈಗ ಮಣ್ಣು ಸೇರಿದ್ದು, ಕೊಲೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕಿದೆ ಎನ್ನುವುದು ಕುಟುಂಬವಸ್ಥರ ಆಗ್ರಹವಾಗಿದೆ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ